ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ ದಂಪತಿ ನಿಟ್ಟುಸಿರು

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಕೀಲರಾದ ವಿನೋದ್‌ಕುಮಾರ್ ಸಲ್ಲಿಸಿರುವ ಖಾಸಗಿ ದೂರಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೆ ಹೈಕೋರ್ಟ್ ಗುರುವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆದರೆ, ವಿಚಾರಣೆ ಸಂದರ್ಭದಲ್ಲಿ ವಿಶೇಷ ನ್ಯಾಯಾಲಯಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಹೈಕೋರ್ಟ್ ಆದೇಶಿಸಿದೆ.

ಖುದ್ದು ಹಾಜರಿಗೆ ಸಮನ್ಸ್ ಜಾರಿಗೊಳಿಸಿರುವ ವಿಶೇಷ ನ್ಯಾಯಾಲಯ ತಮ್ಮನ್ನು ಬಂಧಿಸಬಹುದು ಎಂಬ ಆತಂಕದಲ್ಲೇ ಕುಮಾರಸ್ವಾಮಿ ದಂಪತಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಕಾರಣದಿಂದಾಗಿಯೇ ಈವರೆಗೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ದಂಪತಿ ಶುಕ್ರವಾರ ಲೋಕಾಯುಕ್ತ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಹೆಚ್ಚಿದೆ.

ನಿರೀಕ್ಷಣಾ ಜಾಮೀನು ಕೋರಿ ಕುಮಾರಸ್ವಾಮಿ ದಂಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಬುಧವಾರ ಒಂದು ದಿನಕ್ಕೆ ಖುದ್ದು ಹಾಜರಿಯಿಂದ ವಿನಾಯಿತಿ ನೀಡಿ, ಗುರುವಾರ ತೀರ್ಪು ಪ್ರಕಟಿಸುವುದಾಗಿ ತಿಳಿಸಿದರು. ಗುರುವಾರ ಮಧ್ಯಾಹ್ನ ತೀರ್ಪು ಪ್ರಕಟಿಸಿದ ಅವರು, ಇಬ್ಬರೂ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿಸಿದರು.

ಕುಮಾರಸ್ವಾಮಿ ದಂಪತಿಯ ಬಂಧನದ ಪ್ರಶ್ನೆ ಎದುರಾದ ಸಂದರ್ಭದಲ್ಲಿ ವೈಯಕ್ತಿಕವಾಗಿ ರೂ 50 ಸಾವಿರ ಬಾಂಡ್‌ನ ಭದ್ರತೆ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಅರ್ಜಿದಾರರು ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸುವ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಕೆಲಸ ಮಾಡಬಾರದು ಎಂದು ತೀರ್ಪಿನಲ್ಲಿ ಷರತ್ತು ವಿಧಿಸಲಾಗಿದೆ.

`ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ವಿವಿಧ ನ್ಯಾಯಾಲಯಗಳ ಆದೇಶಗಳ ಪ್ರತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ. ಕುಮಾರಸ್ವಾಮಿ ಅವರು ಒಮ್ಮೆ ತಾವೇ ತಿರಸ್ಕರಿಸಿರುವ ಪ್ರಸ್ತಾವವನ್ನು ಕೆಲವೇ ದಿನಗಳ ಅಂತರದಲ್ಲಿ ಮತ್ತೆ ಜಾರಿಗೊಳಿಸಿದ್ದಾರೆ ಎಂಬ ಆರೋಪವಿದೆ.

ಇಂತಹ ಸಮಯದಲ್ಲಿ ಸಂಪೂರ್ಣ ಪ್ರಕರಣವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸದ್ಯದ ಸಂದರ್ಭದಲ್ಲಿ ಪ್ರಕರಣಕ್ಕೆ ಹೆಚ್ಚಿನ ದಾಖಲೆಗಳ ಆಧಾರವಿಲ್ಲದೇ ಇದ್ದರೂ ಆರೋಪಿಗಳು ತಮ್ಮ ವಿರುದ್ಧದ ಆರೋಪಗಳ ಬಗ್ಗೆ ನ್ಯಾಯಾಲಯದಲ್ಲಿ ಉತ್ತರ ನೀಡಲೇಬೇಕಾಗುತ್ತದೆ~ ಎಂದು ನ್ಯಾ. ನಾರಾಯಣಸ್ವಾಮಿ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

`ಪ್ರಕರಣಕ್ಕೆ ಸಂಬಂಧಿಸಿದ ಬಹುತೇಕ ದಾಖಲೆಗಳು ಈಗಾಗಲೇ ಬಹಿರಂಗವಾಗಿ ಲಭ್ಯವಾಗುತ್ತಿವೆ. ಅವುಗಳನ್ನು ತಿರುಚುವುದಕ್ಕೆ ಅಥವಾ ನಾಶಪಡಿಸುವುದಕ್ಕೆ ಆರೋಪಿಗಳಿಗೆ ಹೆಚ್ಚಿನ ಅವಕಾಶ ಇಲ್ಲ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ~ ಎಂದು ತಿಳಿಸಿದ್ದಾರೆ.

ಖುದ್ದು ಹಾಜರಿ ಕಡ್ಡಾಯ: ಪ್ರಕರಣದ ವಿಚಾರಣೆ ನಡೆಸುತ್ತಿರುವ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಿಯಿಂದ ವಿನಾಯಿತಿ ಕೋರಿರುವುದಕ್ಕೆ ತೀರ್ಪಿನಲ್ಲಿ ಪ್ರತಿಕ್ರಿಯಿಸಿರುವ ನ್ಯಾಯಾಲಯ, ವಿಚಾರಣೆಯ ಎಲ್ಲ ದಿನಗಳಲ್ಲೂ ಆರೋಪಿಗಳು ಕಡ್ಡಾಯವಾಗಿ ಸಂಬಂಧಿಸಿದ ನ್ಯಾಯಾಲಯದ ಎದುರು ಹಾಜರಾಗಬೇಕು ಎಂದು ಆದೇಶಿಸಿದೆ.

`ನ್ಯಾಯಾಲಯ ನಿಗದಿಪಡಿಸುವ ದಿನಾಂಕಗಳಂದು ಆರೋಪಿಗಳು ವಿಚಾರಣೆಗೆ ಹಾಜರಾಗಲೇಬೇಕು. ಖುದ್ದು ಹಾಜರಿಯಿಂದ ವಿನಾಯಿತಿ ನೀಡುವುದು ಸಂಬಂಧಿಸಿದ ನ್ಯಾಯಾಲಯದ ವಿವೇಚನೆ ಬಿಟ್ಟ ವಿಷಯ~ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಶುಕ್ರವಾರ ವಿಚಾರಣೆ: ಜಂತಕಲ್ ಗಣಿ ಕಂಪೆನಿಗೆ ಕಾನೂನು ಬಾಹಿರವಾಗಿ ಗಣಿ ಗುತ್ತಿಗೆ ನವೀಕರಣಕ್ಕೆ ಶಿಫಾರಸು ಮಾಡಿರುವುದು ಮತ್ತು ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಗಟು ನಿವೇಶನ ಮಂಜೂರು ಮಾಡಿರುವ ಆರೋಪದ ಮೇಲೆ ವಿನೋದ್‌ಕುಮಾರ್ ಅವರು ಕುಮಾರಸ್ವಾಮಿ, ಅನಿತಾ ಮತ್ತು ಜಂತಕಲ್ ಗಣಿ ಕಂಪೆನಿ ಮಾಲೀಕ ವಿನೋದ್ ಗೋಯಲ್ ವಿರುದ್ಧ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ಶುಕ್ರವಾರ ನಡೆಯಲಿದೆ.

ಹಿಂದಿನ ಎರಡು ವಿಚಾರಣೆಗಳಿಗೆ ಕುಮಾರಸ್ವಾಮಿ ದಂಪತಿ ಖುದ್ದು ಹಾಜರಿಯಿಂದ ವಿನಾಯಿತಿ ಪಡೆದಿದ್ದರು. ಬುಧವಾರ ಹೈಕೋರ್ಟ್‌ನಿಂದ ವಿನಾಯಿತಿ ದೊರಕಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳಿಗೂ ಶುಕ್ರವಾರ ಕಡ್ಡಾಯವಾಗಿ ಖುದ್ದು ಹಾಜರಾಗುವಂತೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರರಾವ್ ಆದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT