ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ ವಿರುದ್ಧ ಹೆಚ್ಚುವರಿ ಆರೋಪಪಟ್ಟಿ

Last Updated 21 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಥಣಿಸಂದ್ರದಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ 3.08 ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ಸೋಮವಾರ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿಯ ಮಹದೇವಸ್ವಾಮಿ ಎಂಬುವರು ಸಲ್ಲಿಸಿದ್ದ ಖಾಸಗಿ ದೂರಿನಲ್ಲಿರುವ ಆರೋಪಗಳ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಕುಮಾರಸ್ವಾಮಿ, ಮಾಜಿ ಸಚಿವ ಸಿ.ಚನ್ನಿಗಪ್ಪ, ಭೂ ಮಾಲೀಕರಾದ ಡಾ.ಎ.ವಿ.ರವಿಪ್ರಕಾಶ್ ಮತ್ತು ಎ.ವಿ.ಶ್ರೀರಾಮ್ ವಿರುದ್ಧ ಏಪ್ರಿಲ್ 16ರಂದು ಆರೋಪಪಟ್ಟಿ ಸಲ್ಲಿಸಿದ್ದರು. ಮತ್ತಷ್ಟು ದಾಖಲೆ ಕಲೆಹಾಕಿದ ತನಿಖಾಧಿಕಾರಿ, ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಹೆಚ್ಚುವರಿ ಆರೋಪಟ್ಟಿ ಸಲ್ಲಿಸಿದರು.

ಥಣಿಸಂದ್ರದ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಸಲ್ಲಿಸಿದ ಅರ್ಜಿಯಲ್ಲಿ `ನಾವು ಬಡವರಾಗಿದ್ದು, ಬೇರೆ ಯಾವುದೇ ಆಸ್ತಿಗಳಿಲ್ಲ~ ಎಂದು ಉಲ್ಲೇಖಿಸಿದ್ದರು. ಆದರೆ, ರವಿಪ್ರಕಾಶ್ ಮತ್ತು ಶ್ರೀರಾಮ್ ಬೆಂಗಳೂರಿನ ಬನಶಂಕರಿ, ಜಯನಗರ ಮತ್ತು ಬಿಟಿಎಂ ಬಡಾವಣೆಗಳಲ್ಲಿ ಹಲವು ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ. ಶಿಡ್ಲಘಟ್ಟದಲ್ಲಿ ಎಸ್ಟೇಟ್ ಕೂಡ ಇದೆ ಎಂಬುದನ್ನು ಹೆಚ್ಚುವರಿ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

`ಬಡವರು~ ಎಂಬ ಉಲ್ಲೇಖಕ್ಕೆ ಸಂಬಂಧಿಸಿದಂತೆ ಬೇರೊಂದು ವ್ಯಾಖ್ಯಾನವನ್ನೂ ಚನ್ನಿಗಪ್ಪ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಮಂಡಿಸಿದ್ದರು. 1991ರಲ್ಲೇ ಥಣಿಸಂದ್ರದ 3.08 ಎಕರೆಯಲ್ಲಿ ಸುಂದರರಾಜನ್ ಮತ್ತಿತರರು ನಿವೇಶನ ಖರೀದಿಸಿದ್ದರು. ಅವರು ಬಡವರು ಎಂಬುದು ತಮ್ಮ ಶಿಫಾರಸು ಪತ್ರದಲ್ಲಿನ ವ್ಯಾಖ್ಯಾನವಾಗಿತ್ತು ಎಂದು ವಾದಿಸಿದ್ದರು.

ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸುತ್ತಿದ್ದಂತೆ ಖರೀದಿದಾರರು ಮತ್ತು ಭೂಮಾಲೀಕರು `ಜನರಲ್ ಪವರ್ ಆಫ್ ಅಟಾರ್ನಿ~ಯನ್ನು (ಜಿಪಿಎ) ವಾಪಸು ಪಡೆದುಕೊಂಡಿದ್ದರು. ಖರೀದಿದಾರರಿಗೆ ಭೂಮಾಲೀಕರು ಹಣವನ್ನೂ ಮರಳಿಸಿದ್ದರು. ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಸಂದರ್ಭದಲ್ಲಿ ಸುಂದರರಾಜನ್ ಮತ್ತಿತರರು ಪ್ರಕರಣದ ವ್ಯಾಪ್ತಿಯಲ್ಲಿ ಇರಲೇ ಇಲ್ಲ ಎಂದು ಲೋಕಾಯುಕ್ತ ಪೊಲೀಸರು ಹೆಚ್ಚುವರಿ ಆರೋಪಪಟ್ಟಿಯಲ್ಲಿ ದಾಖಲೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಚಾರಣೆ ಮುಂದೂಡಿಕೆ: ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಸೋಮವಾರ ಪ್ರಕರಣದ ವಿಚಾರಣೆ ನಡೆಯಿತು. ನ್ಯಾಯಾಲಯಕ್ಕೆ ಹಾಜರಾದ ಚನ್ನಿಗಪ್ಪ, ನಿರೀಕ್ಷಣಾ ಜಾಮೀನು ಕೋರಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ವಾಪಸು ಪಡೆದರು. ಜಾಮೀನು ಕೋರಿ ಹೊಸ ಅರ್ಜಿ ಸಲ್ಲಿಸಿದರು. ರವಿಪ್ರಕಾಶ್ ಮತ್ತು ಶ್ರೀರಾಮ್ ಕೂಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ನ್ಯಾಯಾಧೀಶ ಎನ್. ಕೆ.ಸುಧೀಂದ್ರ ರಾವ್ ಅವರು, ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT