ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆಗೆ ಅಸಮಾಧಾನದ ಸ್ವಾಗತ

Last Updated 19 ಅಕ್ಟೋಬರ್ 2012, 5:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಜೆಡಿಎಸ್ ಬಲವರ್ಧನೆಯ ಚಟುವಟಿಕೆಗಳು ಗರಿಗೆದರಿರುವ ನಡುವೆಯೇ ಪಕ್ಷದ ಜಿಲ್ಲಾ ಘಟಕದಲ್ಲಿ ಗುಂಪುಗಾರಿಕೆ ತಲೆ ಎತ್ತಿದೆ.  ಇದಕ್ಕೆ ಪೂರಕವಾಗಿ ನಗರದಲ್ಲಿ ಶುಕ್ರವಾರ  ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಜಮೀರ್ ಅಹಮದ್ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಆ ಬಗ್ಗೆ ಸ್ವತಃ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಮಾಹಿತಿಯೇ ಇಲ್ಲ!.

ಪಕ್ಷದ ಹಿರಿಯ ಮುಖಂಡರನ್ನು ಗಣನೆಗೆ ತೆಗೆದುಕೊಳ್ಳದೇ ಮಾಜಿ ಸಚಿವ ಅಲ್ಕೋಡ್ ಹನುಮಂತಪ್ಪ ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಭುಗಿಲೆದ್ದಿದೆ. ಇದರಿಂದ ಕಾರ್ಯಕ್ರಮದ ಸಂಘಟನೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಯಾವುದೇ ಪದಾಧಿಕಾರಿಗಳು, ಹಿರಿಯ ನಾಯಕರು ಕೈ ಜೋಡಿಸಿಲ್ಲ ಎನ್ನಲಾಗುತ್ತಿದೆ.

ಅಲ್ಕೋಡ್ ಅವರ ವರ್ತನೆಯ ಬಗ್ಗೆ ಜೆಡಿಎಸ್ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣಾ ಕೊರವಿ ನೇತೃತ್ವದಲ್ಲಿ ಪಕ್ಷದ ಪದಾಧಿಕಾರಿಗಳ ಗುಂಪು ಕುಮಾರಸ್ವಾಮಿ ಅವರಿಗೆ ದೂರು ಸಲ್ಲಿಸಲು ಮುಂದಾಗಿದೆ.
ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ರಾಜಣ್ಣಾ ಕೊರವಿ, ಕುಮಾರಸ್ವಾಮಿ ಕಾರ್ಯಕ್ರಮ ಆಯೋಜನೆಯ ಬಗ್ಗೆ ಜಿಲ್ಲಾ ಘಟಕಕ್ಕೆ ಯಾವುದೇ ಮಾಹಿತಿ ಇಲ್ಲ.
 
ಅಲ್ಕೋಡ್ ಹನುಮಂತಪ್ಪ ಅವರೇ ನಿಂತು ಸಂಘಟಿಸಿದ್ದಾರೆ. ಕಾರ್ಯಕ್ರಮದ ಸಿದ್ಧತೆಯ ಬಗ್ಗೆ ಪಕ್ಷದ ವತಿಯಿಂದ ಪೂರ್ವಭಾವಿ ಸಭೆಯನ್ನೂ ನಡೆಸಿಲ್ಲ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
`ಜಿಲ್ಲಾ ಘಟಕದ ಅಧ್ಯಕ್ಷನಾಗಿ ಪಕ್ಷದ ನಾಯಕರು ಬಂದಾಗ ಆಹ್ವಾನಿಸುವುದು ಕರ್ತವ್ಯ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಇಲ್ಲಿನ ವಾಸ್ತವ ವಿಚಾರಗಳನ್ನು ಅವರ ಗಮನಕ್ಕೆ ತರಲಾಗುವುದು~ ಎಂದರು.

ಕಾರ್ಯಕರ್ತರು ಸಂಘಟಿಸಿದ ಕಾರ್ಯಕ್ರಮ ಪಕ್ಷದ ಜಿಲ್ಲಾ ಘಟಕದ ಆರೋಪಗಳನ್ನು ನಿರಾಕರಿಸುವ ಮಾಜಿ ಸಚಿವ ಅಲ್ಕೋಡ್ ಹನುಮಂತಪ್ಪ, ಕುಮಾರಸ್ವಾಮಿ ಅವರ ಪ್ರವಾಸವನ್ನು ಕಾರ್ಯಕರ್ತರು ಆಯೋಜಿಸಿದ್ದಾರೆ ಹೊರತು ಪಕ್ಷದಿಂದ ಅಲ್ಲ. ಆದ್ದರಿಂದ ಯಾವುದೇ ಪೂರ್ವಭಾವಿ ಸಭೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

`ಪಕ್ಷದಿಂದ ಹಣ ಖರ್ಚು ಮಾಡಿದ್ದರೆ ಎಲ್ಲರನ್ನೂ ಕರೆಯಬಹುದಿತ್ತು. ಪಕ್ಷದಿಂದ ಬಂಟಿಂಗ್ ಕೂಡಾ ಕಟ್ಟಿಲ್ಲ. ಎಲ್ಲಾ ಕಾರ್ಯರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ನಾನು ಅವರೊಂದಿಗೆ ಓಡಾಡುತ್ತಿದ್ದೇನೆ~ ಎಂದರು.
`ಪಕ್ಷದ ಸಂಘಟನೆಯ ನಿಟ್ಟಿನಲ್ಲಿ ಹುಬ್ಬಳ್ಳಿ ಪೂರ್ವವಿಧಾನ ಸಭಾ ಕ್ಷೇತ್ರದಲ್ಲಿ ನಾನು ಮಾಡುತ್ತಿರುವ ಕೆಲಸಗಳನ್ನು ಸಾಧ್ಯವಾದರೆ ಜಿಲ್ಲಾ ಘಟಕದ ಅಧ್ಯಕ್ಷರು, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರತಿನಿಧಿಸುವ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಲ್ಲಿ ಮಾಡಿ ತೋರಿಸಲಿ~ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT