ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆಗೆ ನೋಟಿಸ್

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಜಂತಕಲ್ ಕಂಪೆನಿ ಗಣಿ ಗುತ್ತಿಗೆ ನವೀಕರಣ ಮತ್ತು ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರಿ ಸಂಘಕ್ಕೆ ಭೂಮಿ ಮಂಜೂರು ಮಾಡಿದ ಆರೋಪ ಹೊತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹಾಗೂ ಅವರ ಪತ್ನಿ ಜೆಡಿಎಸ್ ಶಾಸಕಿ ಅನಿತಾ ಕುಮಾರ ಸ್ವಾಮಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದು ಮಾಡಿದ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿರುವ ಸುಪ್ರೀಂ ಕೋರ್ಟ್, ಈ ಇಬ್ಬರಿಗೂ ನೋಟಿಸ್ ಜಾರಿ ಮಾಡಲು ಸೋಮವಾರ ಸೂಚಿಸಿದೆ.

ಬೆಂಗಳೂರಿನ ನಿವಾಸಿ ಎಂ. ವಿನೋದ್ ಕುಮಾರ್ ಅವರು ಸಲ್ಲಿಸಿರುವ ಮೇಲ್ಮನವಿಗೆ ಪ್ರತಿಕ್ರಿಯಿಸುವಂತೆ ನ್ಯಾ. ಅಫ್ತಾಬ್ ಆಲಂ ಮತ್ತು ರಂಜನ ಪ್ರಕಾಶ್ ದೇಸಾಯಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರಿಗೆ ಹೇಳಿದೆ.

ಮಾಜಿ ಮುಖ್ಯಮಂತ್ರಿ ಮತ್ತು ಅವರ ಪತ್ನಿ ವಿರುದ್ಧ ಲೋಕಾಯುಕ್ತ ಕೋರ್ಟ್‌ನಲ್ಲಿ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಹೊರಡಿಸಿದ್ದ ಸಮನ್ಸ್ ಅನ್ನು ಹೈಕೋರ್ಟ್ ರದ್ದು ಮಾಡಿತ್ತು. ಈ  ಕ್ರಮವನ್ನು ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಎಲ್. ನಾಗೇಶ್ವರ ರಾವ್, ಮಾಜಿ ಮುಖ್ಯಮಂತ್ರಿ ದಂಪತಿ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದು ಪ್ರಕಟಿಸುವ ಮೂಲಕ ಹೈಕೋರ್ಟ್ ತಪ್ಪು ಮಾಡಿದೆ ಎಂದು ವಾದಿಸಿದರು.

ಮೇಲ್ಮನವಿ ಅರ್ಜಿ ಪ್ರಕಾರ ಕುಮಾರಸ್ವಾಮಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ `ಅನಗತ್ಯ ಒತ್ತಡ~ ಹಾಕಿ ಜಂತಕಲ್ ಗಣಿ ಕಂಪೆನಿ ಒಂದು ಲಕ್ಷ ಟನ್ ಅದಿರು ಎತ್ತುವಳಿ ಮಾಡಲು ನೆರವು ನೀಡಿದ್ದಾರೆ. ಈ ಕಂಪೆನಿ ಗಣಿ ಗುತ್ತಿಗೆಯನ್ನು ಪೂರ್ವಾನ್ವಯ ಆಗುವಂತೆ ನೋಡಿಕೊಂಡಿದ್ದಾರೆಂದು ದೂರಲಾಗಿದೆ. ಮುಖ್ಯಮಂತ್ರಿ ಕಚೇರಿ ತಮ್ಮ ಮೇಲೆ ಅನಗತ್ಯ ಒತ್ತಡ ತಂದಿತು ಕಮಿಷನರ್ ಟಿಪ್ಪಣಿ ಹಾಕಿದ್ದಾರೆ. ಪರಿಸರ ಇಲಾಖೆ ಅನುಮತಿ ಇಲ್ಲದಿದ್ದರೂ ಸ್ವತಃ ಮುಖ್ಯಮಂತ್ರಿಗಳೇ ಎರಡು ಗಂಟೆ ಒಳಗಾಗಿ ಗಣಿ ಕಂಪೆನಿಗೆ ಪರವಾನಗಿ ಕೊಡಬೇಕು ಎಂದು ಹೇಳಿದ್ದಾರೆ ಎಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.

ಮಾಜಿ ಮುಖ್ಯಮಂತ್ರಿ 2007ರ ಅಕ್ಟೋಬರ್ 4ರಂದು ಅಧಿಕಾರ ಬಿಡುವ ನಾಲ್ಕು ದಿನಗಳ ಮೊದಲು ತಮ್ಮ ಪತ್ನಿ ಜತೆ ಸೇರಿ ಪಿತೂರಿ ಮಾಡಿ ಲಾಭದ ಆಸೆಗಾಗಿ ವಿಶ್ವಭಾರತಿ ಗೃಹ ನಿರ್ಮಾಣ ಸಂಘಕ್ಕೆ ದೊಡ್ಡ ಪ್ರಮಾಣದಲ್ಲಿ ಭೂಮಿ ಮಂಜೂರು ಮಾಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಮಾಜಿ ಮುಖ್ಯಮಂತ್ರಿ ಮತ್ತು ಅವರ ಪತ್ನಿ ಮೇಲಿನ ಆರೋಪಗಳನ್ನು ಪರಿಗಣಿಸಿ ಲೋಕಾಯುಕ್ತ ಕೋರ್ಟ್ ಕಳೆದ ಆಗಸ್ಟ್ 8ರಂದು ಸಮನ್ಸ್ ಜಾರಿ ಮಾಡಿತ್ತು.

ಅಕ್ರಮವಾಗಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಹಾಗೂ ಇತರ ಐವರ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿತ್ತು.

ಕಾನೂನು ಉಲ್ಲಂಘಿಸಿಲ್ಲ:ಎಚ್‌ಡಿಕೆ
ಚಿಕ್ಕಮಗಳೂರು: ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಯಾವುದೇ ಕಾನೂನು ಉಲ್ಲಂಘಿಸಿಲ್ಲ. ನ್ಯಾಯಾಲಯದ ತೀರ್ಪಿಗೆ ತಲೆಬಾಗುವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ನಗರದಲ್ಲಿ ಸೋಮವಾರ ಜೆಡಿಎಸ್ ಜಿಲ್ಲಾ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಆಡಳಿತಕ್ಕೆ ಬಂದಾಗಿನಿಂದ ತಮ್ಮನ್ನು ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸುತ್ತಿದೆ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT