ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಪಿಗೆ ವೈಟ್‌ಮನ್ ಸಾರಥ್ಯ..!

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೆಗ್ ವೈಟ್‌ಮನ್ ಅವರು ಹ್ಯೂಲೆಟ್ ಪಕಾರ್ಡ್‌ನಿಂದ (ಎಚ್‌ಪಿ) ಇತ್ತೀಚೆಗೆ ವಜಾಗೊಂಡಿದ್ದ ಕಾರ್ಯನಿರ್ವಾಹಕ ಅಧಿಕಾರಿ ಲಿಯೊ ಅಪೋತೆಕರ್ ಅವರ ಸ್ಥಾನ ತುಂಬಿದ್ದಾರೆ.
 
ಲಿಯೊ ಅವರ ಕಾರ್ಯವೈಖರಿಯ ಕುರಿತು ತೀವ್ರ ಅಸಮಾಧಾನಗೊಂಡಿದ್ದ ನಿರ್ದೇಶಕ ಮಂಡಳಿ 11 ತಿಂಗಳ ಸೇವಾ ಅವಧಿಯ ಬಳಿಕ ಅವರನ್ನು ವಜಾಗೊಳಿಸಿತ್ತು.

ತನ್ನ ವಿಫಲ ಕಾರ್ಯತಂತ್ರಗಳಿಂದಾಗಿ ಎಚ್‌ಪಿ, ವ್ಯಾಪಕ ಟೀಕೆಗೆ ಗುರಿಯಾಗಿರುವ ಹಿನ್ನೆಲೆಯಲ್ಲೇ ವೈಟ್‌ಮನ್ ಅವರು ಅಧಿಕಾರ ವಹಿಸಿಕೊಂಡ್ದ್ದಿದು, ಹಲವು ಗುರುತರ ಜವಾಬ್ದಾರಿಗಳು  ಅವರ ಹೆಗಲ ಮೇಲಿದೆ.
 
`ಸಿಇಒ~ಗಳು ವಜಾಗೊಳ್ಳುವುದು,  ಒಂದು ವರ್ಷದ್ಲ್ಲಲೇ ಒಂದಕ್ಕಿಂತಲೂ ಹೆಚ್ಚು `ಸಿಇಒ~ಗಳು ಅಧಿಕಾರಕ್ಕೆ ಬರುವುದು ದೈತ್ಯ ಕಂಪೆನಿಗಳಲ್ಲಿ ಸಾಮಾನ್ಯವಾದರೂ ಕೂಡ ಇಂಥ ಆಕಸ್ಮಿಕ ಬದಲಾವಣೆಗಳು ಆರ್ಥಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತದೆ.

ತೆರವಾದ ಸ್ಥಾನವನ್ನು ಯಾರು ವಹಿಸಿಕೊಳ್ಳುತ್ತಾರೆ? ಅವರ ಕಾರ್ಯವೈಖರಿ ಏನು? ಎಂಬಿತ್ಯಾದಿ ವಿಷಯಗಳತ್ತ ವಿಶ್ಲೇಷಕರು ಸೇರಿದಂತೆ ಎಲ್ಲರೂ ಕುತೂಹಲ ತಾಳುತ್ತಾರೆ.
ಪ್ರಿನ್ಸ್‌ಟನ್ ವಿವಿ ಮತ್ತು ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಿಂದ ಪದವಿ ಗಳಿಸಿರುವ 55ರ ವಯೋಮಾನದ ವೈಟ್‌ಮನ್, `ಇ-ಬೆ~ ಕಂಪೆನಿಯ `ಸಿಇಒ~ ಆಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದವರು.
 
ಕೇವಲ 30 ನೌಕರರೊಂದಿಗೆ 40 ಲಕ್ಷ ಡಾಲರ್ ವಾರ್ಷಿಕ ವರಮಾನವನ್ನು ಹೊಂದುವ ಮೂಲಕ ಶೈಶವಾವಸ್ಥೆಯಲ್ಲಿದ್ದ ಕಂಪನಿಯನ್ನು ಹತ್ತು ವರ್ಷಗಳಲ್ಲಿ 15,000 ನೌಕರರೊಂದಿಗೆ 80 ಶತಕೋಟಿ  ಡಾಲರ್ (4,00,000 ಕೋಟಿ) ವರಮಾನದ ಕಂಪನಿಯಾಗಿ ಉತ್ತುಂಗಕ್ಕೇರಿಸಿದ್ದ ಕೀರ್ತಿ ಅವರ ಹೆಸರಿಗಿದೆ.
 
ಅಷ್ಟೇ ಅಲ್ಲದೆ 1980ರ ದಶಕದಲ್ಲಿ ವಾಲ್ಟ್ ಡಿಸ್ನಿ, 1990ರ ದಶಕದಲ್ಲಿ ಡ್ರೀಮ್‌ವರ್ಕ್ಸ್, ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್ ಮತ್ತು ಹ್ಯಾಸ್‌ಬ್ರೊ ಕಂಪೆನಿಯಲ್ಲೂ ಸೇವೆ ಸಲ್ಲಿಸಿದ ಅನುಭವ ಅವರ ಪಾಲಿಗಿದೆ. ಮೆಗ್ ಅವರ  ಅಪಾರ ಅನುಭವ `ಎಚ್‌ಪಿ~ಗೆ ವರವಾಗಬಹುದು ಎಂದು ಕೆಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಫಾರ್ಚೂನ್ ನಿಯತಕಾಲಿಕ ಗುರುತಿಸಿರುವ ವಿಶ್ವದ ಐವರು ಪ್ರಭಾವಿ ಮಹಿಳೆಯರಲ್ಲಿ ಇವರು ಕೂಡ ಒಬ್ಬರು.  ಕಳೆದ ದಶಕದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಎಂಟು ಮಂದಿ `ಸಿಇಒ~ಗಳಲ್ಲಿ ವೈಟಮನ್ ಕೂಡ ಒಬ್ಬರು ಎಂದು ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಗುರುತಿಸಿದೆ. ಅಲ್ಲದೆ ಕಳೆದ ದಶಕದ ಚಹರೆಯನ್ನೇ ಬದಲಾಯಿಸಿದ ಐವತ್ತು ಮಂದಿಯಲ್ಲಿ ವೈಟ್‌ಮನ್ ಹೆಸರನ್ನೂ ಫೈನಾನ್ಶಿಯಲ್ ಟೈಮ್ಸ ಸೇರಿಸಿದೆ.

ಇವೆಲ್ಲವನ್ನು ಬೆನ್ನಿಗಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ ವೈಟ್‌ಮನ್, ಅಲ್ಲಿ ಮಾತ್ರ ಸೋಲನ್ನಪ್ಪಿದ್ದರು. 2010ರಲ್ಲಿ ಕ್ಯಾಲಿಫೋರ್ನಿಯಾದಿಂದ ರಿಪಬ್ಲಿಕನ್‌ಪಕ್ಷದ ಅಭ್ಯರ್ಥಿಯಾಗಿ ಗವರ್ನರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಅವರು ಜೆರ‌್ರಿ ಬ್ರೌನ್ ವಿರುದ್ಧ ಪರಾಭವಗೊಂಡಿದ್ದರು.

ತಮ್ಮದೇ ಸಂಪಾದನೆಯ ಕೋಟಿಗಟ್ಟಲೆ ಹಣವನ್ನು ಚುಣಾವಣಾ ಪ್ರಚಾರಕ್ಕಾಗಿ ಸುರಿದರೂ ಕೂಡ ಅವರ ಕಾರ್ಯತಂತ್ರ ಮಾತ್ರ ಫಲಿಸಲಿಲ್ಲ. ಆದರೆ, ಚುನಾವಣಾ ಕಾರ್ಯಕ್ಕಾಗಿ ತಮ್ಮದೇ ಹಣ ಖರ್ಚು ಮಾಡಿದ ಮೊದಲ ಅಭ್ಯರ್ಥಿ ಎಂಬ ಕೀರ್ತಿ ಇವರ ಪಾಲಿಗೆ ಸೇರಿತು.

ಟೀಕೆಗಳಿಗೆ ಗುರಿ: `ಇ-ಬೆ~ಯಂತಹ ಗ್ರಾಹಕ ಆಧಾರಿತ ಕಂಪನಿಯ ವ್ಯವಹಾರವೇ ಬೇರೆ. ಸಂಪೂರ್ಣ ತಂತ್ರಜ್ಞಾನ ಆಧಾರಿತ `ಎಚ್‌ಪಿ~ಯಂತಹ ಕಂಪನಿಯ ಆಡಳಿತ ನಿರ್ವಹಣೆಯೇ ಬೇರೆ. ಕಾರ್ಪೊರೇಟ್ ಗ್ರಾಹಕರ ಜತೆ ಕಾರ್ಯನಿರ್ವಹಿಸುವ `ಎಚ್‌ಪಿ~ಯಂತಹ ದೈತ್ಯ ಕಂಪನಿ ಮುನ್ನಡೆಸಲು ಮೆಗ್ ಅವರಿಗೆ ಅನುಭವದ ಕೊರತೆ ಇದೆ.

ಎಚ್‌ಪಿ, ಮೆಗ್ ಅವರನ್ನು ನೇಮಕ ಮಾಡುವ ಮೂಲಕ ಅವಸರದ ಅಕಾಲಿಕ ನಿರ್ಧಾರ ತೆಗೆದುಕೊಂಡಿದೆ ಎಂದೂ ಅನೇಕ ವಿಶ್ಲೇಷಕರು ಟೀಕೆಗಳನ್ನು ಹರಿಬಿಟ್ಟಿದ್ದಾರೆ.

ಗುರುತರ ಜವಾಬ್ದಾರಿ: ವೈಟ್‌ಮನ್ ಮೇಲೆ ಈಗ ಸಾಕಷ್ಟು ಗುರುತರ ಜವಾಬ್ದಾರಿಗಳಿವೆ. ಪ್ರಿಂಟರ್‌ಗಳ ಉತ್ಪಾದನೆಯಲ್ಲಿ ಖ್ಯಾತಿ ಹೊಂದಿರುವ ಎಚ್‌ಪಿ ವಿಶ್ವದ ಅತ್ಯಂತ ದೊಡ್ಡ ತಂತ್ರಜ್ಞಾನ ಕಂಪನಿಯಾಗಿದೆ. ಪರ್ಸನಲ್ ಕಂಪ್ಯೂಟರ್‌ಗಳ ನಿರ್ಮಾಣದಲ್ಲಿಯೂ ಕಂಪೆನಿ ಮೇರು ಸ್ಥಾನದಲ್ಲಿದೆ.
 
ಹೊಸ ಹೊಸ ಆವಿಷ್ಕಾರದಲ್ಲಿ ಬಂಡವಾಳ ತೊಡಗಿಸುವುದು, ಹಲವು ಸೇವೆಗಳಲ್ಲಿ ಹಂಚಿಹೋಗಿರುವ ಕಂಪೆನಿಯ ವ್ಯವಹಾರಗಳನ್ನು ಸಮಗ್ರಗೊಳಿಸುವುದು ಸೇರಿದಂತೆ 3,20,000ದಷ್ಟು ಉದ್ಯೋಗಿಗಳನ್ನು ಹೊಂದಿರುವ 125 ಶತಕೋಟಿ ಡಾಲರ್ ನಿವ್ವಳ ವರಮಾನ  ಹೊಂದಿರುವ ಎಚ್‌ಪಿಯಂತಹ ಮುನ್ನಡೆಸುವ ಗುರುತರ ಜವಾಬ್ದಾರಿ ಅವರ ಮೇಲಿದೆ.

ಹೊಸ ಮಾರುಕಟ್ಟೆ ತಂತ್ರಗಳನ್ನು ಅತ್ಯಲ್ಪ ಅವಧಿಯ್ಲ್ಲಲಿ ಹೆಣೆದರೂ ಕೂಡ ಕಂಪೆನಿಯ ಭವಿಷ್ಯ ನಿರ್ಧರಿಸುವ ಹಲವು ನಿರ್ಧಾರಗಳನ್ನು ಅವರೀಗ ತ್ವರಿತಗತಿಯಲ್ಲಿ ತೆಗೆದುಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT