ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂ ವಂಚನೆ ತಡೆಗೆ ಕ್ರಮಗಳು

Last Updated 22 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ದೇಶದಲ್ಲಿಂದು ಬ್ಯಾಂಕಿಂಗ್ ಕ್ರಾಂತಿಯೇ ನಡೆದು ಹೋಗಿದೆ. ಒಂದು ಎಟಿಎಂ ಹತ್ತಾರು ಬ್ಯಾಂಕಿಂಗ್ ಸೇವೆ ಒದಗಿಸಿ ಗ್ರಾಹಕರಿಗೆ  ಅನುಕೂಲ ಮಾಡಿಕೊಡುತ್ತಿದೆ. ಡೆಬಿಟ್ ಕಾರ್ಡ್  (ಎಟಿಎಂ ಕಾರ್ಡ್) ಬಳಸಿ ಗ್ರಾಹಕರು ಹಲವಾರು ಸೌಲಭ್ಯ  ಪಡೆದುಕೊಳ್ಳುತ್ತಿದ್ದಾರೆ. ಎಟಿಎಂ ಕಾರ್ಡ್‌ಗಳನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಹಣ ಗಳಿಸುವ ದಂಧೆಯೂ ನಡೆಯುತ್ತಿದೆ.

ಈ ಬಗ್ಗೆ ಸಾಕಷ್ಟು ದೂರುಗಳೂ ಬರುತ್ತಿವೆ. ಈ ಕಾರಣಕ್ಕೆ ಈಗ ಬ್ಯಾಂಕ್‌ಗಳು ಎಟಿಎಂ ತಂತ್ರಜ್ಞಾನವನ್ನು ಇನ್ನಷ್ಟು ಬಲಪಡಿಸಿಕೊಂಡು ಅದರ ದುರ್ಬಳಕೆ ಆಗದಂತೆ ಕ್ರಮ ಕೈಗೊಳ್ಳುತ್ತಿವೆ. ಉದಾಹರಣೆಗೆ ಹೇಳುವುದಾದರೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ) ಮತ್ತು ಕಾರ್ಪೊರೇಷನ್ ಬ್ಯಾಂಕ್‌ಗಳು ಎಟಿಎಂ ಕೇಂದ್ರಗಳಲ್ಲಿ ವಂಚನೆ  ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಂಡಿವೆ.

ಎಸ್‌ಬಿಎಂ ಎಟಿಎಂಗಳಲ್ಲಿ ಇನ್ನು ಮುಂದೆ ಕೇವಲ 5 ಸೆಕೆಂಡ್‌ಗಳ ಒಳಗೆಯೇ ಗ್ರಾಹಕರು ತಮ್ಮ ಎಟಿಎಂ ಕಾರ್ಡ್ ಬಳಕೆಯ ಪ್ರಕ್ರಿಯೆ ಕೊನೆಗೊಳಿಸಬೇಕಾದ ವ್ಯವಸ್ಥೆ ಬರಲಿದೆ. (ಇಲ್ಲಿಯ ತನಕ ಆಯ್ಕೆಯ ವಿವರ ಕಂಪ್ಯೂಟರ್ ಪರದೆಯಲ್ಲಿ ಮೂಡಿದ ಬಳಿಕ 60 ಸೆಕೆಂಡ್‌ಗಳ ಅವಕಾಶ ಇತ್ತು). ಇನ್ನು ಮುಂದೆ ಕೇವಲ 5 ಸೆಕೆಂಡ್‌ಗಳ ಒಳಗೆ ಹಣ ಹಿಂದಕ್ಕೆ ಪಡೆಯುವುದು, ಖಾತೆಯಲ್ಲಿ ಹಣ ಎಷ್ಟು ಇದೆ ಎಂದು ವಿಚಾರಿಸುವುದು, ಕಿರು ಲೆಕ್ಕಪತ್ರ ಮಾಹಿತಿ, ಪಿನ್ ಬದಲಾವಣೆ ಮೊದಲಾದ ಕಾರ್ಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಹಾಗೆ ಮಾಡದಿದ್ದರೆ ಆ ಆಯ್ಕೆ ಅವಕಾಶ ಕೈತಪ್ಪುತ್ತದೆ. ಮತ್ತೆ ಎಟಿಎಂ ಕಾರ್ಡ್ ಉಜ್ಜಿ, ಮತ್ತೆ ಪಿನ್ ನಂಬರ್ ಒತ್ತಿ ಕಾರ್ಯಾಚರಣೆ ಮಾಡಬೇಕಾಗುತ್ತದೆ.  ‘ಕೆಲವು ವಂಚಕರು ಗ್ರಾಹಕರಿಗೆ ನೆರವು ನೀಡುವ ನೆಪದಲ್ಲಿ ಅವರ ಖಾತೆಯ ದುಡ್ಡು ಲಪಟಾಯಿಸುತ್ತಾರೆ. ಕೇವಲ 5 ಸೆಕೆಂಡ್‌ಗಳ ಕಾಲಾವಕಾಶ ಇದ್ದಾಗ ಈ ಸಾಧ್ಯತೆ ಕಡಿಮೆಯಾಗುತ್ತದೆ.

ಆರಂಭದಲ್ಲಿ ಸ್ವಲ್ಪ ಅನಾನುಕೂಲವಾದರೂ ಕ್ರಮೇಣ ಗ್ರಾಹಕರು ಇದಕ್ಕೆ ಒಗ್ಗಿಕೊಳ್ಳುವ ವಿಶ್ವಾಸ ಇದೆ’ ಎಂದು ಎಸ್‌ಬಿಎಂನ ಮುಖ್ಯ ವ್ಯವಸ್ಥಾಪಕ (ತಾಂತ್ರಿಕ) ಮತ್ತು ಮುಖ್ಯ ಅಪಾಯ ನಿರ್ವಹಣಾ ಅಧಿಕಾರಿ ಎ. ಕೆ. ಬಸು ಅಭಿಪ್ರಾಯಪಡುತ್ತಾರೆ. 

ಎಸ್‌ಬಿಎಂ ಮತ್ತು ಕಾರ್ಪೊರೇಷನ್ ಬ್ಯಾಂಕ್‌ಗಳು ಮತ್ತೊಂದು ಕ್ರಮವನ್ನೂ ಅನುಷ್ಠಾನಕ್ಕೆ ತಂದಿವೆ. ಎಟಿಎಂ ಕೇಂದ್ರದಲ್ಲಿ ಪ್ರತಿಯೊಂದು ವ್ಯವಹಾರ ನಡೆಸುವಾಗಲೂ ಪ್ರತ್ಯೇಕವಾಗಿ ಎಟಿಎಂ ಕಾರ್ಡ್ ಬಳಸುವುದನ್ನು ಜಾರಿಗೆ ತಂದಿವೆ.

ಉದಾಹರಣೆಗೆ ವ್ಯಕ್ತಿಯೊಬ್ಬನಿಗೆ ಹಣ ಹಿಂದಕ್ಕೆ ಪಡೆಯಬೇಕೆಂದಿದ್ದರೆ ಆತ ಕಾರ್ಡ್ ತೂರಿಸಿ ಹೊರ ತೆಗೆದು (ಸ್ವೈಪ್ ಮಾಡಿ)  ರಹಸ್ಯ ಸಂಖ್ಯೆ ನಮೂದಿಸಿ ಹಣ ಪಡೆಯಬೇಕು. ಮತ್ತೊಮ್ಮೆ ಹಣ ಹಿಂದಕ್ಕೆ ಪಡೆಯಬೇಕು ಅಥವಾ ಖಾತೆ ಬಗ್ಗೆ ಮಾಹಿತಿ ಪಡೆಯಬೇಕು ಎಂದರೆ ಆತ ಮತ್ತೊಮ್ಮೆ ಎಟಿಎಂ ಕಾರ್ಡ್ ಉಜ್ಜಿ, ಪಿನ್ ಒತ್ತಿ   ಪಡೆದುಕೊಳ್ಳಬೇಕು. ಈ ಮೊದಲಾಗಿದ್ದರೆ ಒಂದೇ ಬಾರಿಗೆ ಹಲವು ಕಾರ್ಯಗಳನ್ನು ನಡೆಸಬಹುದಿತ್ತು.

‘ಇನ್ನೊಬ್ಬರ ಸಹಾಯ ಪಡೆಯುವ ಗ್ರಾಹಕರು ಅವರಿಂದಲೇ ವಂಚನೆಗೆ ಒಳಗಾದ ಹಲವು ದೂರುಗಳು ನಮಗೆ ಬಂದಿವೆ. ದೀರ್ಘ ಅವಧಿಗೆ ಆಯ್ಕೆ ಅವಕಾಶ ಇರುವುದೇ ಅದಕ್ಕೆ ಕಾರಣವಾಗಿತ್ತು. ಪ್ರತಿ ಬಾರಿಯೂ ಕಾರ್ಡ್ ತೂರಿಸುವ ಅಥವಾ ಉಜ್ಜುವ ವ್ಯವಸ್ಥೆಯಿಂದ ಇಂತಹ ವಂಚನೆ ತಪ್ಪಿಸಬಹುದು’ ಎಂದು   ಕಾರ್ಪೊರೇಷನ್ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ (ಐಟಿ) ಬಿ. ಆರ್. ಭಟ್ ಹೇಳುತ್ತಾರೆ.

ಎರಡೂ ಬ್ಯಾಂಕ್‌ಗಳು ಎಟಿಎಂ ಯಂತ್ರಗಳನ್ನು ಮೇಲ್ದರ್ಜೆಗೆ ಏರಿಸುತ್ತಿವೆ. ಎಸ್‌ಬಿಎಂ ಎಟಿಎಂನಲ್ಲಿ ಒಂದು ಬಾರಿ ತೂರಿಸಿ ಹೊರತೆಗೆದರೆ ಮುಗಿಯಿತು, ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಇನ್ನು ಮುಂದೆ ಕಾರ್ಡ್ ಅನ್ನು ಉಜ್ಜಿದರೆ ಮುಗಿಯಿತು. ಈ ವ್ಯವಸ್ಥೆಯಿಂದ ಕೆಲವೊಂದು ಬಾರಿ ಕಾರ್ಡ್ ಮರೆತು ಹೋಗಿ ಅದು ಬೇರೊಬ್ಬರ ಕೈಸೇರುವುದು ತಪ್ಪುತ್ತದೆ ಹಾಗೂ ಕೆಲವೊಮ್ಮೆ ಹಲವು ಬಾರಿ ತಪ್ಪು ಸಂಕೇತ ನೀಡಿದಾಗ ಕಾರ್ಡ್ ಯಂತ್ರದ ಒಳಗೆ ಸೇರಿಕೊಳ್ಳುವ ಪ್ರಸಂಗವೂ ತಪ್ಪುತ್ತದೆ ಎಂದು ವಿವರಿಸುತ್ತಾರೆ ಭಟ್.

ಮತ್ತಷ್ಟು ಸುರಕ್ಷತಾ ಕ್ರಮವಾಗಿ ಎಸ್‌ಬಿಎಂ ಎಟಿಎಂಗಳು ನಿಮ್ಮ ಆಯ್ಕೆಯ ಎರಡು ಅಂಕಿಯ ಸಂಖ್ಯೆಯನ್ನು ಮೊದಲಾಗಿ ನಮೂದಿಸಲು ತಿಳಿಸುತ್ತವೆ. ಇದರಿಂದ ಎಟಿಎಂ ಯಂತ್ರದ ಕೀಬೋರ್ಡ್‌ನಲ್ಲಿ ತೊಂದರೆ ಏನೂ ಇಲ್ಲ ಮತ್ತು ಯಾರೂ ಅದರ ದುರ್ಬಳಕೆ ಮಾಡಿಕೊಂಡಿಲ್ಲ ಎಂಬುದು ಸಾಬೀತಾಗುತ್ತದೆ. ಜೊತೆಗೆ ಮುಂದಿನ ಕಾರ್ಯಾಚರಣೆಯನ್ನು ಯಾವುದೇ ಆತಂಕ ಇಲ್ಲದೇ ನಡೆಸಬಹುದು ಎಂದು ಮನವರಿಕೆ ಮಾಡಿಕೊಡುತ್ತದೆ.

ಎಸ್‌ಬಿಎಂ ಎಟಿಎಂನಲ್ಲಿ ಮತ್ತೊಂದು ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಬಾರಿ ಗ್ರಾಹಕ ಒಂದು ಬಾರಿಗೆ ಕೇವಲ ರೂ. 10 ಸಾವಿರ ಮಾತ್ರ ಹಿಂದಕ್ಕೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಹೆಚ್ಚುವರಿ ಹಣ ಬೇಕಿದ್ದರೆ ಮತ್ತೆ ಕಾರ್ಡ್ ಉಜ್ಜಿ/ ತೂರಿಸಿ ಪಿನ್ ಒತ್ತಿ ಮತ್ತೆ ಹಣ ಹಿಂದಕ್ಕೆ ಪಡೆಯಬೇಕು. ‘ಈ ಮೊದಲು ಒಮ್ಮೆಲೇ ರೂ. 40 ಸಾವಿರ ತನಕ ಹಣ ಹಿಂದಕ್ಕೆ ಪಡೆಯುವುದು ಸಾಧ್ಯವಿತ್ತು. ಈ ಕ್ರಮ ಅನುಸರಿಸುವುದರಿಂದ ದೊಡ್ಡ ಮೊತ್ತ ವಂಚಕರ ಕೈಸೇರುವುದು ತಪ್ಪುತ್ತದೆ’ ಎಂದು ಹೇಳುತ್ತಾರೆ ಬಸು.

ಮೊದ ಮೊದಲು ಗ್ರಾಹಕರಿಗೆ ಗೊಂದಲ ಮೂಡುವುದು ಸಹಜವಾಗಿದ್ದು, ಬ್ಯಾಂಕ್‌ಗಳು ಅದಕ್ಕಾಗಿ ಅರಿವು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಬ್ಯಾಂಕ್ ಶಾಖೆಗಳಲ್ಲಿ ಮತ್ತು ಎಟಿಎಂ ಕೇಂದ್ರಗಳಲ್ಲಿ ಹೊಸ ತಂತ್ರಜ್ಞಾನ, ಎಟಿಎಂ ಕಾರ್ಡ್ ಬಳಸುವ ವಿಧಾನ ಸಹಿತ ಇತರ ಮಾಹಿತಿಗಳನ್ನು ಬರೆದು ಛಾಪಿಸಲಾಗಿರುತ್ತದೆ.       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT