ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂ ವಾಹನ ತಡೆದು ಹಣ ಲೂಟಿ

Last Updated 4 ಅಕ್ಟೋಬರ್ 2012, 18:50 IST
ಅಕ್ಷರ ಗಾತ್ರ

ಬೆಂಗಳೂರು: ಎಟಿಎಂ ಘಟಕಗಳಿಗೆ ಹಣ ತುಂಬಲು ಹೋಗುತ್ತಿದ್ದ ವಾಹನದಿಂದ ದುಷ್ಕರ್ಮಿಗಳು ಲಕ್ಷಾಂತರ ರೂಪಾಯಿ ಹಣ ದೋಚಿರುವ ಘಟನೆ ಹುಳಿಮಾವು ಸಮೀಪದ ನೈಸ್ ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಘಟನೆ ಸಂಬಂಧ ಹಣ ಕೊಂಡೊಯ್ಯುತ್ತಿದ್ದ ವಾಹನದಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಜಗದೀಶ್, ಯೂನಿಯನ್ ಬ್ಯಾಂಕ್ ಸಿಬ್ಬಂದಿಯಾದ ಅಜಿತ್, ಮಂಜುನಾಥ್, ಕೇಶವ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಎಟಿಎಂ ಘಟಕಗಳಿಗೆ ಹಣ ತುಂಬಲು ಆರು ಮಂದಿ ಸಿಬ್ಬಂದಿ ಯೂನಿಯನ್ ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಹೋಗಿದ್ದರು. `ಕೋಲ್ಸ್‌ಪಾರ್ಕ್, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಎಟಿಎಂ ಘಟಕಗಳಿಗೆ ಹಣ ತುಂಬಿಸಿ, ನೈಸ್ ರಸ್ತೆ ಮಾರ್ಗವಾಗಿ ಬನ್ನೇರುಘಟ್ಟಕ್ಕೆ ಹೋಗುವಾಗ ಬೈಕ್‌ನಲ್ಲಿ ಬಂದ ನಾಲ್ಕು ಮಂದಿ ಅಪರಿಚಿತರು ವಾಹನವನ್ನು ಅಡ್ಡಗಟ್ಟಿದರು. ನಂತರ ಮಾರಕಾಸ್ತ್ರಗಳಿಂದ ವಾಹನದ ಗಾಜುಗಳನ್ನು ಪುಡಿ ಮಾಡಿ, ನಮ್ಮ ಕಣ್ಣಿಗೆ ಖಾರದ ಪುಡಿ ಎರಚಿದರು. ಕ್ಷಣ ಮಾತ್ರದಲ್ಲಿ ಹಣದ ಪೆಟ್ಟಿಗೆಗೆಳನ್ನು ದರೋಡೆ ಮಾಡಿ ಬೈಕ್‌ನಲ್ಲಿ ಪರಾರಿಯಾದರು ಎಂದು ವಾಹನ ದಲ್ಲಿದ್ದ ಸಿಬ್ಬಂದಿ ಹೇಳಿದ್ದಾರೆ~ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಬ್ಬಂದಿ ಕೈವಾಡ?: ಹಣ ಕೊಂಡೊಯ್ಯುತ್ತಿದ್ದ ವಾಹನದಲ್ಲಿದ್ದ ಸಿಬ್ಬಂದಿಗಳಲ್ಲಿ ಇಬ್ಬರು ಪರಾರಿಯಾಗಿದ್ದಾರೆ. ಅಲ್ಲದೇ, ವಶಕ್ಕೆ ತೆಗೆದುಕೊಂಡಿರುವ ಸಿಬ್ಬಂದಿಗಳು ಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವಾಹನಕ್ಕೆ ಯಾವುದೇ ಹಾನಿಯಾಗಿಲ್ಲ. ಜತೆಗೆ, ಬ್ಯಾಂಕ್‌ನ ಮಹಿಳಾ ಅಧಿಕಾರಿಯೊಬ್ಬರು ಹೇಳುವಂತೆ ವಾಹನ ನೈಸ್ ರಸ್ತೆಗೆ ಹೋಗುವಂತಿಲ್ಲ. ಈ ಎಲ್ಲ ಅಂಶಗಳನ್ನು ಗಮನಿಸಿದರೆ, ದರೋಡೆ ಹಿಂದೆ ಸಿಬ್ಬಂದಿಯ ಕೈವಾಡವಿರುವ ಸಾಧ್ಯೆತೆ ಹೆಚ್ಚಿದೆ~ ಎಂದು ಪೊಲೀಸರು ಶಂಕಿಸಿದ್ದಾರೆ.

ಆರೋಪಿಗಳ ಬಂಧನ 
 ಕೋರಮಂಗಲದ ಪಾಸ್‌ಪೋರ್ಟ್ ಕಚೇರಿಯ ಬಳಿ ಸೆ.26 ರಂದು ನಡೆದಿದ್ದ ದಿನಕರ್ ಎಂಬುವರ ಕೊಲೆ ಪ್ರಕರಣವನ್ನು ಬೇಧಿಸಿರುವ ಕೋರಮಂಗಲ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅಶ್ವತ್ಥ (32), ಶಿವಕುಮಾರ್ (26), ಸಂತೋಷ್ (23), ಷೇಕ್ ಜಾಫರ್ (23), ಶಂಕರ (24) ಮತ್ತು ಚೇತನ್ (20) ಬಂಧಿತರು. ಪ್ರಕರಣದ ಮತ್ತೊಬ್ಬ ಆರೋಪಿ ಆನಂದ್ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಅಶ್ವತ್ಥ ಹಾಗೂ ಕೊಲೆಯಾದ ದಿನಕರ್ ದೂರದ ಸಂಬಂಧಿಗಳು. ಅಶ್ವತ್ಥ ಹಾಗೂ ದಿನಕರ್ ನಡುವೆ ಹಣ ಕಾಸಿನ ವ್ಯವಹಾರವಿತ್ತು. ತನ್ನ ಪತ್ನಿಯೊಂದಿಗೆ ದಿನಕರ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಅಶ್ವತ್ಥನಿಗಿತ್ತು. ಇದರಿಂದ ಕೋಪಗೊಂಡಿದ್ದ ಅಶ್ವತ್ಥ ತನ್ನ ಸಹಚರರೊಂದಿಗೆ ಸೇರಿ ಕೊಲೆ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳೆಲ್ಲರೂ ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಕೊಲೆ ನಡೆದ ನಂತರ ಆರೋಪಿಗಳು ಬೆಂಗಳೂರು, ಮೈಸೂರು ಹಾಗೂ ಕೋಲಾರದ ವಿವಿಧ ಕಡೆಗಳಲ್ಲಿ ಚದುರಿಹೋಗಿದ್ದರು. ಕೊಲೆಯಾದ ನಂತರ ದಿನಕರ್ ಅವರ ಮೊಬೈಲ್‌ಅನ್ನು ಆರೋಪಿಗಳು ಕದ್ದೊಯ್ದಿದ್ದರು. ದೂರವಾಣಿ ಕರೆ ವಿವರಗಳ ಬಗ್ಗೆ ಮಾಹಿತಿ ಕಲೆಹಾಕಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಸರ ಕಳವು: ಬೈಕ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬ ಗೀತಪ್ರಿಯಾ ಎಂಬುವರ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಹೆಣ್ಣೂರು ಕ್ರಾಸ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ.
ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೆಸಿಬಿಗೆ ಬಲಿಯಾದ ಮಗು
 ಜೆಸಿಬಿ ವಾಹನದ ಚಕ್ರ ಹರಿದು ಮೂರು ವರ್ಷದ ಅರ್ಜುನ್ ಗಂಡು ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ನಗರದ ಹೊರವಲಯದ ರಾಯಸಂದ್ರದಲ್ಲಿ ಗುರುವಾರ ನಡೆದಿದೆ.

ಮೂಲತಃ ರಾಯಚೂರಿನ ತಿಮ್ಮಣ್ಣ ಮತ್ತು ದೇವಮ್ಮ ದಂಪತಿಯ ಮಗ ಅರ್ಜುನ್ ಮೃತಪಟ್ಟಿದ್ದಾನೆ. ದಂಪತಿ ನಾಗಸಂದ್ರದ ಎಸ್.ವಿ.ಆರ್ ಬಡಾವಣೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಮಗುವಿಗೆ ಊಟ ಮಾಡಿಸಿದ ತಾಯಿ, ಗಿಡಗಳ ನೆರಳಿನಲ್ಲಿ ಮಲಗಿಸಿ ಕೆಲಸಕ್ಕೆ ತೆರಳಿದ್ದರು. ನೆಲವನ್ನು ಮಟ್ಟ ಮಾಡುತ್ತಿದ್ದ ಜೆಸಿಬಿ ಚಾಲಕ, ವಾಹನವನ್ನು ಹಿಮ್ಮುಖವಾಗಿ ಚಾಲನೆ ಮಾಡಿದ್ದಾನೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT