ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡರಂಗದ ವಿರುದ್ಧ ಸೋನಿಯಾ ವಾಗ್ದಾಳಿ

Last Updated 15 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಜಲ್‌ಪೈಗುರಿ  (ಪಶ್ಚಿಮ ಬಂಗಾಳ) (ಪಿಟಿಐ): ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರ ಬಿಡುಗಡೆಯಾಗಿರುವ ಅನುದಾನವನ್ನು ಎಡರಂಗದ ಸರ್ಕಾರ ಸಮಪರ್ಕವಾಗಿ ಬಳಕೆ ಮಾಡಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಟುವಾಗಿ ಟೀಕಿಸಿದ್ದಾರೆ.‘ಪಶ್ಚಿಮ ಬಂಗಾಳಕ್ಕೆ ಹಿಂದೆಂದೂ ನೀಡಿದಷ್ಟು ಅನುದಾನವನ್ನು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೀಡಿದ್ದಾರೆ. ಆದರೆ ಇದರ ಫಲ ಇಲ್ಲೆಲ್ಲಿಯೂ ಕಾಣುತ್ತಿಲ್ಲ. ಈ ಹಣ ಎಲ್ಲಿ ಹೋಯಿತು ಎಂದು ಜನರು ಆಡಳಿತಾರೂಢರನ್ನು ಪ್ರಶ್ನಿಸಬೇಕು’ ಎಂದು ಅವರು ಇಲ್ಲಿ ಶುಕ್ರವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಹೇಳಿದರು.
 

‘34 ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿರುವ ಎಡರಂಗದ ಸರ್ಕಾರ ಜನರ ಕನಸು, ಆಶೋತ್ತರಗಳನ್ನು ಮಾರಾಟ ಮಾಡಿದೆ. ಆದ್ದರಿಂದ ಜನರು ಈ ಸಾರಿ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಮೈತ್ರಿ ಕೂಟವನ್ನು ಅಧಿಕಾರಕ್ಕೆ ತರುವುದರ ಮೂಲಕ ರಾಜ್ಯದಲ್ಲಿ ಬದಲಾವಣೆ ತರಬೇಕು’ ಎಂದು ಮನವಿ ಮಾಡಿಕೊಂಡರು.
 

‘ದೇಶದಲ್ಲಿ ಹಿಂದುಳಿದಿರುವ ಜಿಲ್ಲೆಗಳ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಸಾಕಷ್ಟು ಜಿಲ್ಲೆಗಳಿವೆ. ಅನೇಕ ಜಿಲ್ಲೆಗಳಲ್ಲಿ ಈಗಲೂ ನೀರಾವರಿ ವ್ಯವಸ್ಥೆ ಇಲ್ಲ. ರಾಜ್ಯದ ಮೂರನೇ ಒಂದು ಭಾಗದಷ್ಟು ಜನರಿಗೆ ಸರಿಯಾಗಿ ಕುಡಿಯಲು ನೀರು ಸಿಗುತ್ತಿಲ್ಲ. ರಾಜ್ಯ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನ ಮಾಡುವುದರಲ್ಲಿ ತಾರತಮ್ಯ ಮಾಡುತ್ತಿದೆ. ಕಾಂಗ್ರೆಸ್ ಪ್ರಾಬಲ್ಯ ಇರುವ ಪ್ರದೇಶಗಳಿಗೆ ಯೋಜನೆಗಳು ತಲುಪುತ್ತಲೇ ಇಲ್ಲ’ ಎಂದು ಅವರು ದೂಷಿಸಿದರು.

‘ಕೇಂದ್ರ ಸರ್ಕಾರ ಬಡವರ ಪರವಾದ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ಅನೇಕ ಯೋಜನೆಗಳನ್ನು ಹೆಸರಿಸಿದ ಅವರು, ‘ಕಾಂಗ್ರೆಸ್- ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕು’ ಎಂದು ಕೋರಿದರು.

ಈ ಸಾರಿಯ ಚುನಾವಣೆಗೆ ಇದೇ ಮೊದಲ ಬಾರಿಗೆ ಪ್ರಚಾರ ಕಾರ್ಯ ನಡೆಸಲು ಆಗಮಿಸಿದ ಸೋನಿಯಾ ಗಾಂಧಿ ಅವರನ್ನು ಹೆಲಿಪ್ಯಾಡ್‌ನಲ್ಲಿ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಾನಸ್ ಭುಯಿನಿಯಾ  ಹಾಗೂ ಇತರ ನಾಯಕರು ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT