ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡವಟ್ಟು ಆಗಿದ್ದು ನಿಜ: ವೊಡಾಫೋನ್

Last Updated 27 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಫೈನಲ್‌ಗೆ ಅರ್ಹತೆ ಪಡೆಯಲು ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಆಡುವ ಕೆಲವು ತಾಸು ಮುನ್ನವೇ `ಸೂಪರ್ ಕಿಂಗ್ಸ್-ನೈಟ್‌ರೈಡರ್ಸ್~ ನಡುವೆ ಹಣಾಹಣಿ ಎನ್ನುವ ಸಂದೇಶ ಕಳುಹಿಸಿದ್ದು ಅಜಾಗರೂಕತೆಯಿಂದಾದ `ಎಡವಟ್ಟು~ ಎಂದು ವೊಡಾಫೋನ್ ಕಂಪೆನಿ ಒಪ್ಪಿಕೊಂಡಿದೆ.

ಮೊಬೈಲ್ ಸೇವೆ ಕಲ್ಪಿಸುವ ವೊಡಾಫೋನ್ ತನ್ನ ಗ್ರಾಹಕರಿಗೆ ಶುಕ್ರವಾರ ಬೆಳಿಗ್ಗೆ ಕಳುಹಿಸಿದ್ದ ಪ್ರಚಾರ ಸಂದೇಶದಲ್ಲಿ `ಈ ಭಾನುವಾರ ಐಪಿಎಲ್ ಫೈನಲ್‌ನಲ್ಲಿ ಕೆಕೆಆರ್ ಹಾಗೂ ಸಿಎಸ್‌ಕೆ ನಡುವೆ ಹಣಾಹಣಿ ವೀಕ್ಷಿಸಿ~ ಎಂದು ತಿಳಿಸಿತ್ತು.

ಈ ಸಂದೇಶ ಕಳುಹಿಸುವ ಹೊತ್ತಿಗೆ ಕೋಲ್ಕತ್ತ ನೈಟ್ ರೈಡರ್ಸ್ ಫೈನಲ್‌ನಲ್ಲಿ ಆಡುವುದು ಖಚಿತವಾಗಿತ್ತು. ಆದರೆ ಅಂತಿಮ ಹಣಾಹಣಿಯಲ್ಲಿ ರೈಡರ್ಸ್ ವಿರುದ್ಧ ಆಡುವ ತಂಡ ಯಾವುದೆನ್ನುವುದು ಮಾತ್ರ ನಿರ್ಧಾರ ಆಗಿರಲಿಲ್ಲ. ಗಮನಿಸಬೇಕಾದ ಅಂಶವೆಂದರೆ ಸಂದೇಶ ಗ್ರಾಹಕರನ್ನು ತಲುಪಿದಾಗ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೇರ್‌ಡೆವಿಲ್ಸ್ ಎದುರು ಇನ್ನೂ ಪಂದ್ಯವೇ ಆರಂಭವಾಗಿರಲಿಲ್ಲ. ಪಂದ್ಯ ಶುರುವಾಗಲು ಇನ್ನೂ ಕೆಲವು ತಾಸುಗಳು ಬಾಕಿ ಇದ್ದವು.

`ಐಪಿಎಲ್ ಪ್ರೋತ್ಸಾಹ ಉದ್ದೇಶದಿಂದ ಕಳುಹಿಸಿದ ಸಂದೇಶವು ಪ್ರಮಾದ ಎನ್ನುವುದನ್ನು ಖಂಡಿತ ಒಪ್ಪಿಕೊಳ್ಳುತ್ತೇವೆ. ಅಜಾಗರೂಕತೆಯಿಂದಾಗಿ ಫೈನಲ್ ಪಂದ್ಯವು ಕೆಕೆಆರ್ ಹಾಗೂ ಸಿಎಸ್‌ಕೆ ನಡುವೆ ನಡೆಯುತ್ತದೆಂದು ಶುಕ್ರವಾರ ಮುಂಜಾನೆಯೇ ತಿಳಿಸಲಾಗಿತ್ತು~ ಎಂದಿರುವ ಕಂಪೆನಿ ವಕ್ತಾರ `ಈ ತಪ್ಪು ನಡೆದಿದ್ದು ಕೇವಲ ಹೈದರಾಬಾದ್‌ನಲ್ಲಿ ಬೇರೆ ನಗರಗಳಲ್ಲಿ ಈ ಸಂದೇಶವನ್ನು ಗ್ರಾಹಕರಿಗೆ ರವಾನಿಸಲಾಗಿಲ್ಲ. ಅಷ್ಟೇ ಅಲ್ಲ ಹೈದರಾಬಾದ್ ಕೇಂದ್ರದಲ್ಲಿ ಆದ ತಪ್ಪಿನ ಬಗ್ಗೆ ತಿಳಿಯುತ್ತಿದ್ದಂತೆಯೇ ತಕ್ಷಣ ಅದನ್ನು ತಿದ್ದಿಕೊಳ್ಳುವ ಪ್ರಯತ್ನವನ್ನು ಕೂಡ ಮಾಡಲಾಗಿತ್ತು~ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಮಿಫೈನಲ್ ಪಂದ್ಯಗಳಲ್ಲಿ ಗೆದ್ದವರು ಫೈನಲ್ ತಲುಪುತ್ತಾರೆ ಎನ್ನುವ ಸಾಮಾನ್ಯ ಗ್ರಹಿಕೆಯಿಂದಾಗಿ ಸಿಎಸ್‌ಕೆ ಹಾಗೂ ಕೆಕೆಆರ್ ಅಂತಿಮ ಪಂದ್ಯದಲ್ಲಿ ಆಡುತ್ತವೆಂದು ಭಾವಿಸಿ ಇಂಥ ಪ್ರಮಾದ ನಡೆದಿದೆ. ಇದನ್ನು ಅರಿಯದೆಯೇ ಆಗಿರುವ ತಪ್ಪು ಎಂದು ನಾವು ಭಾವಿಸುತ್ತೇವೆ ಎಂದು ಕೂಡ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT