ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಿಎ ರಂಗಮಂದಿರದಲ್ಲಿ ಕೀಚಕ

Last Updated 3 ಜುಲೈ 2012, 19:30 IST
ಅಕ್ಷರ ಗಾತ್ರ

`ನೈವೇದ್ಯ ಯಾರಿಗೆ~, `ದೇವಲೋಕದಲ್ಲಿ ಒಮ್ಮೆ~ ಮೊದಲಾದ ನೃತ್ಯರೂಪಕಗಳ ಧ್ವನಿಸುರುಳಿಯನ್ನು ಸಾಂಸ್ಕೃತಿಕ ಜಗತ್ತಿಗೆ ನೀಡಿರುವ `ಕಲಾಕುಂಜ~ದ ಅಧ್ಯಕ್ಷ ಎಸ್. ನಾಗಭೂಷಣ್ ಅವರಿಂದ ಮತ್ತೊಂದು ಧ್ವನಿಸುರುಳಿ `ಕೀಚಕ~ ಬಿಡುಗಡೆ ಸಮಾರಂಭ ಹಾಗೂ `ಕೀಚಕ~ ನೃತ್ಯ ರೂಪಕ ಬುಧವಾರ ಪ್ರದರ್ಶನಗೊಳ್ಳಲಿದೆ.

`ಕೀಚಕ~ ಇದು ಟಿ.ಪಿ.ಕೈಲಾಸಂ ಅವರ ಕಲ್ಪನೆಯಲ್ಲಿ ಮೂಡಿಬಂದ ಕಥಾವಸ್ತು. ಜಿ.ಪಿ. ರಾಜರತ್ನಂ ಅದಕ್ಕೆ ನಾಟಕ ರೂಪ ಕೊಟ್ಟರು. ವಿನೂತನ ಮಾದರಿಯ ಈ ನಾಟಕವನ್ನು ಎಸ್. ನಾಗಭೂಷಣ್ ಅವರು ನೃತ್ಯರೂಪಕಕ್ಕೆ ತಂದಿದ್ದಾರೆ.

ಮಹಾಭಾರತದ ವಿರಾಟಪರ್ವದಲ್ಲಿ ಬರುವ ಒಂದು ದೃಶ್ಯವೇ ಈ ನೃತ್ಯ ರೂಪಕದ ಕಥಾವಸ್ತು. ಪಾಂಡವರ ವನವಾಸದ ಕೊನೆಯ ಒಂದು ವರ್ಷದ ಅಜ್ಞಾತವಾಸದ ಅವಧಿಯಲ್ಲಿ ಪಾಂಡವರು ವಿರಾಟನಗರದಲ್ಲಿ ವಿರಾಟರಾಜನ ಆಶ್ರಯ ಪಡೆದಿರುತ್ತಾರೆ.

ಕವಿ ಕೈಲಾಸಂ ಅವರ ಕಲ್ಪನಾ ಲೋಕದಲ್ಲಿ ಮೂಡಿಬಂದ ಕೀಚಕನು ಒಬ್ಬ ಪರಾಕ್ರಮಿ, ಭಾವುಕ, ನರ್ತನ ಚತುರ, ಸ್ತ್ರೀಯರ ಬಗ್ಗೆ ಅಪಾರ ಗೌರವ ಹೊಂದಿರುವ ವ್ಯಕ್ತಿ. ಇಡೀ ವಿರಾಟನಗರ ಅವನ ರಕ್ಷಾಕವಚದಲ್ಲಿ ಸುರಕ್ಷಿತವಾಗಿತ್ತು.

ಅವಿವಾಹಿತನಾದ ಅವನು ದ್ರೌಪದಿಯ ಸ್ವಯಂವರ ಸಮಯದಲ್ಲಿ ಅಪ್ರತಿಮ ಸುಂದರಿಯಾದ ಪಾಂಚಾಲಿಯನ್ನು ಕಂಡು ಮೋಹಿತನಾಗಿ, ಸ್ವಯಂವರದಲ್ಲಿ ಅವಳು ದಕ್ಕದೇ ಹೋದಾಗ, ಅವಳ ಸೌಂದರ್ಯವನ್ನೇ ಮನದಲ್ಲಿ ನೆನೆಯುತ್ತಾ, ಅವಳನ್ನೇ ಆರಾಧಿಸುತ್ತಾ, ಇನ್ನಾವ ಸ್ತ್ರೀಯನ್ನೂ ಒಪ್ಪದೇ ಅವಿವಾಹಿತನಾಗಿಯೇ ಉಳಿದವ.

ವಿರಾಟನಗರದಲ್ಲಿ ಅವನು ತಂಗಿ ಸುಧೇಷ್ಣೆಯ ಸೇವಕಿಯಾದ ಸೈರಂಧ್ರಿಯನ್ನು ನೋಡಿದಾಗ, ಅವಳನ್ನು ದ್ರೌಪದಿಯೆಂದೇ ಭ್ರಮಿಸಿ, ಅವಳ ರೂಪ ಲಾವಣ್ಯಕ್ಕೆ ಮಾರು ಹೋಗಿ, ಆರಾಧಿಸತೊಡಗುತ್ತಾನೆ.

ಒಮ್ಮೆ ಸೈರಂಧ್ರಿಯು ಉದ್ಯಾನದಲ್ಲಿ ರಾತ್ರಿಯ ವೇಳೆ ಪತಿ ವಲಲನೊಡನೆ ಸಂಭಾಷಿಸುತ್ತಿರುವುದನ್ನು ನೋಡಿದ ಕೀಚಕನು, ಸೈರಂಧ್ರಿಯನ್ನು ಯಾರೋ ಪರ ಪುರುಷನು ಪೀಡಿಸುತ್ತಿದ್ದಾನೆ ಎಂದು ಭಾವಿಸಿ, ಅವಳನ್ನು ರಕ್ಷಿಸಲು ವಲಲನೊಂದಿಗೆ ಹೋರಾಡಿ ಸಾವನ್ನಪ್ಪುತ್ತಾನೆ. ಇದು ಕೈಲಾಸಂ ಅವರ ಕಲ್ಪನೆಯ, ವಿಭಿನ್ನ ನೋಟದ ಕೀಚಕ.

ಇಂದು ಸಂಜೆ 6ಕ್ಕೆ ಪ್ರಸ್ತುತಗೊಳ್ಳಲಿರುವ ಈ ನೃತ್ಯರೂಪಕದ ಸಾಹಿತ್ಯ ಮತ್ತು ಪರಿಕಲ್ಪನೆ ಎಸ್. ನಾಗಭೂಷಣ ರಾವ್ ಅವರದ್ದು. ಇಸ್ಮಾಯಿಲ್ ಗೋನಾಳ್ ಸಂಗೀತ ಸಂಯೊಜನೆ ಮಾಡಿದ್ದಾರೆ.

ಸ್ಥಳ: ಎ ಡಿ ಎ ರಂಗಮಂದಿರ, ಜೆ.ಸಿ. ರಸ್ತೆ,
ಮುಖ್ಯ ಅತಿಥಿಗಳು:  ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ ಭಾರ್ಗವಿ ನಾರಾಯಣ್, ಖ್ಯಾತ ಕುಚಿಪುಡಿ ನೃತ್ಯ ಕಲಾವಿದೆ ವೀಣಾಮೂರ್ತಿ ವಿಜಯ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT