ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತ ಸಾಗಿದೆ ಏತ ನೀರಾವರಿ ಯೋಜನೆ?

Last Updated 16 ಜನವರಿ 2011, 19:30 IST
ಅಕ್ಷರ ಗಾತ್ರ

ಲಿಂಗಸಗೂರು (ರಾಯಚೂರು ಜಿಲ್ಲೆ):  ಕೃಷ್ಣಾ ಬಿ ಸ್ಕೀಂ ಯೋಜನೆಯಡಿ ಕೈಗೊಳ್ಳಲು ಉದ್ದೇಶಿಸಿರುವ ಬಹುತೇಕ ಯೋಜನೆಗಳು ಏತ ನೀರಾವರಿ ಯೋಜನೆಗಳು. ಈ ಪೈಕಿ ರಾಯಚೂರು ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳ ರಾಂಪುರ, ರಾಯಚೂರು, ನಿಲುವಂಜಿ ಮತ್ತು ನಂದವಾಡಗಿ ಏತ ನೀರಾವರಿ ಯೋಜನೆಗಳು ಪ್ರಮುಖ.

ದೇವರಾಜ ಅರಸು ಸರಕಾರದಲ್ಲಿ ನೀರಾವರಿ ಸಚಿವರಾಗಿದ್ದ ನಂಜೇಗೌಡರು ಮುಖ್ಯ ಎಂಜಿನಿಯರ್ ಬಾಳೆಕುಂದ್ರಿಯವರ ಸಲಹೆಯಂತೆ ಸದಾ ಬರಗಾಲ ಪೀಡಿತ ಪ್ರದೇಶಗಳಿಗೆ ನೆರವಾಗುವಂತೆ ಬೃಹತ್ ಏತ ನೀರಾವರಿ ಯೋಜನೆಗಳಿಗೆ ಅನುಮತಿ ಪಡೆದಿದ್ದರು. ಇದರಿಂದ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ನೀರಾವರಿಯಾಗುವ ಪ್ರದೇಶ 8 ಲಕ್ಷ ಎಕರೆಯಿಂದ 16.5 ಲಕ್ಷ ಎಕರೆಗೆ ಹೆಚ್ಚುತ್ತದೆ ಎನ್ನುವುದು ಏತ ನೀರಾವರಿ ಯೋಜನೆ ಅನುಷ್ಠಾನದ ಹಿಂದಿದ್ದ ಸದಾಶಯವಾಗಿತ್ತು.

ನಾರಾಯಣಪುರ ಅಣೆಕಟ್ಟು ಹಾಗೂ ಎನ್‌ಆರ್‌ಬಿಸಿ ಯೋಜನೆಗೆ ಭೂಮಿ ಕಳೆದುಕೊಂಡವರಲ್ಲಿ ಬಹುತೇಕ ಮಂದಿ ಲಿಂಗಸಗೂರಿನ ರೈತರು. ತಮ್ಮ ಹೊಲಗಳ ಪಕ್ಕದಲ್ಲೇ ನೀರು ಹರಿದರೂ ಜಮೀನು ಒಣಭೂಮಿಯಾಗಿಯೇ ಉಳಿಯುವ ದುಃಸ್ಥಿತಿ. ಈ ಕೊರಗು ನೀಗಿಸಲು ರೂಪುಗೊಂಡದ್ದೇ ರಾಂಪುರ ಏತ ನೀರಾವರಿ ಯೋಜನೆ. ಮೊದಲ ಹಂತದಲ್ಲಿ 238ಕೋಟಿ ರೂಪಾಯಿ ವೆಚ್ಚ ಮಾಡಿ 20235 ಹೆಕ್ಟೇರ್‌ಗೆ ನೀರಾವರಿ ಕಲ್ಪಿಸಲಾಗಿದೆ. ಇದಕ್ಕಾಗಿ 5.6 ಟಿಎಂಸಿ ನೀರು ಬಳಸಿಕೊಳ್ಳಲಾಗುತ್ತಿದ್ದು, 1280 ಅಶ್ವಶಕ್ತಿಯ ನಾಲ್ಕು ಹಾಗೂ 2215 ಅಶ್ವಶಕ್ತಿ ಸಾಮರ್ಥ್ಯದ ನಾಲ್ಕು ಪಂಪ್‌ಗಳ ಮೂಲಕ ಕಾಲುವೆಯಿಂದ ನೀರೆತ್ತಿ ರೈತರ ಹೊಲಗಳಿಗೆ ಹರಿಸಲಾಗುತ್ತಿದೆ. ಬಿಸ್ಕೀಂ ಯೋಜನೆಯಡಿ 150 ಕೋಟಿ ವೆಚ್ಚದಲ್ಲಿ ಹೆಚ್ಚುವರಿಯಾಗಿ 12765 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಗುರಿ ಇದೆ.

ಇದೇ ತಾಲ್ಲೂಕಿನ 40 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ನಂದವಾಡಗಿ ಏತ ನೀರಾವರಿ ಯೋಜನೆಗೂ ಸಮೀಕ್ಷೆ ಪೂರ್ಣಗೊಂಡಿದ್ದು, ಅಂದಾಜುಪಟ್ಟಿ ಸಿದ್ಧವಾಗಿದೆ. ಇದಕ್ಕೆ ಸುಮಾರು 600 ಕೋಟಿ ವೆಚ್ಚವಾಗುವ ಅಂದಾಜು ಇದೆ.

ನಾರಾಯಣಪುರ ಬಲದಂಡೆ ಕಾಲುವೆಯ 154ನೇ ಕಿ.ಮೀ.ನ ಗದ್ವಾಲ್ ರಸ್ತೆ ಬಳಿ ರಾಯಚೂರು ಏತ ನೀರಾವರಿ ಯೋಜನೆಯ ಸ್ಥಾವರ ಆರಂಭಿಸಲು    ಉದ್ದೇಶಿಸಲಾಗಿದೆ. ರಾಯಚೂರು ತಾಲ್ಲೂಕಿನಲ್ಲಿ ತುಂಗಭದ್ರಾ ಮತ್ತು ಎನ್‌ಆರ್‌ಬಿಸಿ ಯೋಜನೆಯ ಅಚ್ಚುಕಟ್ಟು ಪ್ರದೇಶದ ಮಧ್ಯದಲ್ಲಿ ಬರುವ ಜಮೀನುಗಳಿಗೆ ನೀರಾವರಿ ಕಲ್ಪಿಸುವ ಯೋಜನೆ ಇದಾಗಿದೆ.

ಅಂದಾಜು ವೆಚ್ಚ ಸುಮಾರು 400 ಕೋಟಿ. ಸುರಪುರ ತಾಲ್ಲೂಕಿನ 1250 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ರಾಜನಕೋಳೂರು ಏತ ನೀರಾವರಿ ಯೋಜನೆ ಹಾಗೂ ಸುರಪುರ, ಸಿಂದಗಿ ಹಾಗೂ ಇಂಡಿ ತಾಲ್ಲೂಕುಗಳ 42 ಸಾವಿರ ಹೆಕ್ಟೇರ್ ಹೊಲಗಳಿಗೆ ನೀರು ಹರಿಸುವ ಇಂಡಿ ಏತ ನೀರಾವರಿ ಯೋಜನೆಯೂ ಸೇರಿದೆ. ಸಣ್ಣ ಯೋಜನೆಗಳಾದ ರಾಜನಕೋಳೂರು, ಬೋನಾಳ  ಏತ ನೀರಾವರಿ ಯೋಜನೆಗಳಿಂದ ಕ್ರಮವಾಗಿ 1295 ಮತ್ತು 2500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಯಾಗಲಿವೆ.

ನಿರ್ವಹಣೆಯೇ ಸಮಸ್ಯೆ: ಆದರೆ ಏತ ನೀರಾವರಿ ಯೋಜನೆಗಳ ಯಶಸ್ವಿಯಾಗುವುದು ಕಷ್ಟ ಎನ್ನುವುದು ನೀರಾವರಿ ತಜ್ಞರ ಅಭಿಮತ. ಎರಡು ಸಾವಿರ ಅಶ್ವಶಕ್ತಿ ಸಾಮರ್ಥ್ಯದ 8-10 ಪಂಪುಗಳನ್ನು ಒಂದು ಯೋಜನೆಗೆ ಬಳಸಬೇಕಾಗುತ್ತದೆ. ಜತೆಗೆ ಇದಕ್ಕೆ ತಗಲುವ ವಿದ್ಯುತ್ ವೆಚ್ಚವೂ ಅಪಾರ. ಇಂಥ ಯೋಜನೆಗಳ ನಿರ್ವಹಣಾ ವೆಚ್ಚವನ್ನು ಫಲಾನುಭವಿ ರೈತರು ಭರಿಸಬೇಕೇ ಅಥವಾ ಶಾಶ್ವತವಾಗಿ ಸರ್ಕಾರವೇ ಭರಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡು ಮುಂದುವರಿಯುವುದು ಸೂಕ್ತ ಎಂದು ಭಾರತ ಕಿಸಾನ್ ಸಂಘದ ಮುಖಂಡ ಭಾಸ್ಕರರಾವ್ ಮುಡಬೂಳ ಅಭಿಪ್ರಾಯಪಡುತ್ತಾರೆ.

ಕರ್ನಾಟಕದಲ್ಲಿ ಮಾತ್ರವಲ್ಲ; ಇಡೀ ಭಾರತದಲ್ಲಿ ಬೃಹತ್ ಏತ ನೀರಾವರಿ ಯೋಜನೆಗಳು ದೀರ್ಘಾವಧಿಯಲ್ಲಿ ಯಶಸ್ವಿಯಾದ ನಿದರ್ಶನಗಳಿಲ್ಲ.  ನೈಸರ್ಗಿಕವಾಗಿ ಹರಿಯುವ ನೀರನ್ನೇ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲೂ ಹಲವೆಡೆ ನಿರ್ವಹಣಾ ವೆಚ್ಚ ಭರಿಸಲಾಗದೇ ಇಂಥ ಯೋಜನೆಗಳು ಕಣ್ಣುಮುಚ್ಚಿವೆ. ಸಣ್ಣ ನೀರಾವರಿ ಇಲಾಖೆ ವತಿಯಿಂದ ಶಹಾಪುರ ತಾಲ್ಲೂಕಿನಲ್ಲಿ ಕೈಗೊಂಡ ಏಳು ಏತ ನೀರಾವರಿ ಯೋಜನೆಗಳಿಂದ ಒಂದು ಎಕರೆಗೂ ನೀರಾವರಿ ಕಲ್ಪಿಸುವುದು ಸಾಧ್ಯವಾಗಿಲ್ಲ ಎಂದು ವಿವರಿಸುತ್ತಾರೆ. ಒಟ್ಟಿನಲ್ಲಿ ಏತ ನೀರಾವರಿ ಯೋಜನೆಗಳ ಯಶಸ್ಸು ಸರ್ಕಾರದ ಇಚ್ಛಾಶಕ್ತಿಯನ್ನು ಅವಲಂಬಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT