ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿಗೆ ಏರಿದ ಬೆಲೆ: ರೈತ ಕಂಗಾಲು

Last Updated 13 ಜೂನ್ 2011, 5:30 IST
ಅಕ್ಷರ ಗಾತ್ರ

ಗದಗ: `ಎತ್ತಿನ್ ಬೆಲೆ ದುಪ್ಪಟ್ ಆಗೈತ್ರಿ. ಬೆಲೆ ಕೇಳಿದ್ರ ಕೊಂಡುಕೊಳ್ಳೋಕ ರೊಕ್ಕ ಸಾಲಂಗಿಲ್ಲ ಅನ್ನಿಸ್ತೈ ತಿ~ ಹಾಗಂತ ಬಂದ ದಾರಿಗೆ ಸುಂಕವಿಲ್ಲ ಎನ್ನುವ ಹಾಗೆ ರೈತರು ಮರಳಿ ಊರುಗಳತ್ತ ಹೆಜ್ಜೆ ಹಾಕುತ್ತಿದ್ದರು.

ಇಲ್ಲಿನ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ಜಾನುವಾರು ಮಾರುಕಟ್ಟೆಯಲ್ಲಿ ಎಂದಿನಂತೆ ಈ ಶನಿವಾರವೂ ಜಾನುವಾರುಗಳ ಮಾರಾಟ ನಡೆಯಿತು. ಬಿತ್ತನೆಯ ಸಂಭ್ರಮದಲ್ಲಿ ಎತ್ತುಗಳ ಖರೀದಿಗೆಂದು ಮಳೆಯ ನಡುವೆ ಬಂದಿದ್ದ ಕೃಷಿಕರು ಬೆಲೆ ಕೇಳಿ ಹೌಹಾರುವಂತಾಯಿತು.

ಇದೀಗ ತಾನೇ ಮಳೆ ಆರಂಭವಾಗಿ ಕೃಷಿ ಚಟುವಟಿಕೆಗಳಿಗೆ ಚಾಲನೆ ದೊರೆತಿದೆ. ಇಂತಹ ಹೊತ್ತಲ್ಲಿ ರೈತರು ಉಳುವ ಗೆಳೆಯನನ್ನು ಅರಸುತ್ತ ಬರುವುದು ಸಹಜ. ಹೀಗೆಂದೇ ಇಲ್ಲಿನ ಜಾನುವಾರು ಮಾರುಕಟ್ಟೆಯಲ್ಲಿ ಶನಿವಾರ ಎತ್ತುಗಳಿಗೆ ಇನ್ನಿಲ್ಲದ ಬೇಡಿಕೆ ಬಂದಿತ್ತು. ಪರಿಣಾಮ ಅವುಗಳ ಬೆಲೆ ಅಟ್ಟಕ್ಕೆ ಏರುವಂತಿತ್ತು.

ಪ್ರತಿ ಶನಿವಾರದಂದು ನಡೆಯುವ ಈ ಜಾನುವಾರು ಮಾರುಕಟ್ಟೆಗೆ ನೆರೆಯ ಅಡವಿಸೋಮಾಪುರ, ಕುರ್ತಕೋಟಿ, ಹರ್ತಿ, ನರಸಾಪುರ, ಲಕ್ಕುಂಡಿ, ಪಾಪನಾಶಿ, ಡಂಬಳ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಎತ್ತುಗಳು ಮಾರಾಟಕ್ಕೆಂದು ಬರುತ್ತವೆ.
 
ಅಲ್ಲದೆ, ನೆರೆಯ ಹಾವೇರಿ, ಧಾರವಾಡ, ಕೊಪ್ಪಳ ಜಿಲ್ಲೆಗಳಿಂದಲೂ ರೈತರು ತಮ್ಮ ಎತ್ತುಗಳನ್ನು ಮಾರಾಟಕ್ಕೆಂದು ತರುತ್ತಾರೆ. ಒಮ್ಮಮ್ಮೆ ಹಳೇ ಮೈಸೂರು ಭಾಗದ ಭಾರೀ ಎತ್ತುಗಳೂ ಲಾರಿಯಲ್ಲಿ ಇಲ್ಲಿಗೆ ಬಂದಿಳಿಯುವುದು ಉಂಟು. ಸಾಮಾನ್ಯವಾಗಿ ಜವಾರಿ ಹಾಗೂ ಮೂಡಲ ತಳಿಯ ಎತ್ತುಗಳು ಈ ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ.  

ಶನಿವಾರ ಕೂಡ ಮಾರಾಟಕ್ಕೆಂದು ನೂರಾರು ಜೊತೆ ಎತ್ತುಗಳು ಕಂಡುಬಂದವು. 10ರಿಂದ 70 ಸಾವಿರದವರೆಗೂ ಬೆಲೆ ಬಾಳುವ ಎತ್ತುಗಳ ಖರೀದಿಗಾಗಿ ಚೌಕಾಸಿ ನಡೆದಿತ್ತು.

ಆದರೆ ರೈತರ ಪ್ರಕಾರ ಕಳೆದ ಬಾರಿ 10-20 ಸಾವಿರ ಬೆಲೆ ಇದ್ದ ಎತ್ತುಗಳಿಗೆ ಈ ಬಾರಿ 30 ಸಾವಿರದ ಮೇಲೆ ಬೆಲೆ ಕಟ್ಟಲಾಗುತ್ತಿದೆ. `ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎತ್ತಿನ ಬೆಲೆ ಅರ್ಧದಷ್ಟು ಜಾಸ್ತಿಯಾಗಿದೆ. ಬೇಡಿಕೆ ಗಮನಿಸಿಯೇ ಬೆಲೆ ಏರಿದೆ~ ಎಂದು ಕುರ್ತಕೋಟಿಯ ಪ್ರಭು ಬಂತೂರ ಆಕ್ಷೇಪಿಸಿದರು.

`ಈಗೀಗ ಎತ್ತುಗಳ ಸಂಖ್ಯೆಯೇ ಕಡಿಮೆ ಆಗುತ್ತಿದೆ. ಹೀಗಾಗಿ ಸಹಜವಾಗಿಯೇ ಅವುಗಳ ಬೆಲೆ ಹೆಚ್ಚುತ್ತಿದೆ.  ಒಂದು ಜೋಡಿ ಎತ್ತು ಕೊಳ್ಳುವ ರೊಕ್ಕದಲ್ಲಿ ಒಂದು ಹಳೆಯ ಟ್ರಾಕ್ಟರ್ ಖರೀದಿಸಬಹುದು~ ಎಂದು ಹುಲಕೋಟಿಯ ಫಕ್ಕೀರಪ್ಪ ದೊಡ್ಡಮನಿ ಹೇಳಿದರು.

ಇದಕ್ಕೆ ಎತ್ತುಗಳ ಮಾರಾಟಗಾರರು ಕೊಡುವ ಕಾರಣಗಳು ಹಲವು. `ಪಶುಗಳ ಹುಲ್ಲಿನಿಂದ ಹಿಡಿದು ಎಲ್ಲವೂ ದುಬಾರಿಯಾಗಿದೆ. ಉತ್ತಮ ಮಳೆಯಾಗುವ ಲಕ್ಷಣಗಳಿದ್ದು, ಬೇಡಿಕೆ ಹೆಚ್ಚಿರುವುದರಿಂದ ಸಹಜವಾಗಿಯೇ ಬೆಲೆ ಕೊಂಚ ಏರಿದೆ~ ಎನ್ನುವುದು ಅವರ ಸಮಜಾಯಿಷಿ.

ಈ ಬಾರಿ ಭೂಮಿ ಲಾವಣಿಯ ಬೆಲೆಯೂ ಹೆಚ್ಚಿದೆ. ಎತ್ತುಗಳ ಬೆಲೆಯೂ ಹೆಚ್ಚಾದರೆ ಗತಿ ಏನು ಎನ್ನುವುದು ಇಲ್ಲಿಗೆ ಬಂದಿದ್ದ ರೈತರ ಆತಂಕವಾಗಿತ್ತು. ಹೀಗಾಗಿ ಮಾರುಕಟ್ಟೆ ತುಂಬ ಜನ ತುಂಬಿದ್ದರೂ, ಮಾತುಕತೆ ಜೋರು ನಡೆದಿದ್ದರೂ ಖರೀದಿ ಯಶಸ್ವಿಯಾಗಿದ್ದು ಕಡಿಮೆ. ದುಬಾರಿ ಬೆಲೆಯ ಎತ್ತುಗಳತ್ತ ಮಂದಿ ಮುಖಮಾಡಲಿಲ್ಲ, ದಾಖಲೆ ಅಧಿಕಾರಿಗಳ ಪ್ರಕಾರ ಮಧ್ಯಾಹ್ನದ ವರೆಗೆ ಕೇವಲ 6 ಜೋಡಿ ಎತ್ತುಗಳಷ್ಟೇ ಮಾರಾಟ ವಾದವು. ಡಂಬಳದ ಎತ್ತು ಜೋಡಿಯೊಂದು 54 ಸಾವಿರ ರೂಪಾ ಯಿಗಳಿಗೆ ಮಾರಾಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT