ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆ: ಕೊಳವೆ ಮಾರ್ಗಕ್ಕೆ ವಿರೋಧ

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ತುಮಕೂರು: ಬಯಲು ಸೀಮೆ ಜಿಲ್ಲೆಗಳಿಗೆ ನೀರು ಕೊಡುವ ಪರಮಶಿವಯ್ಯ ವರದಿ ಜಾರಿ ಸಂಬಂಧ ಸರ್ಕಾರದ ನಿರ್ಧಾರಕ್ಕೆ ಸ್ವಾಗತ ವ್ಯಕ್ತವಾಗಿದ್ದರೂ ಎತ್ತಿನ ಹೊಳೆ ಯೋಜನೆ ನೀರನ್ನು ಕೊಳವೆ ಮಾರ್ಗದ ಮೂಲಕ ತೆಗೆದುಕೊಂಡು ಹೋಗುವುದಕ್ಕೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಬರಪೀಡಿತ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಮೊದಲ ಹಂತದಲ್ಲಿ ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಳ್ಳಲು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಕರೆದಿದ್ದ ಈ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಂಬಂಧ ಎರಡು ತಿಂಗಳೊಳಗೆ ಡಿಪಿಆರ್‌ಗೆ ರೂಪುರೇಷೆ ನಿರ್ಧರಿಸಿ ಯೋಜನೆ ಜಾರಿ ಮಾಡುವ ಜವಾಬ್ದಾರಿಯನ್ನು ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ವಹಿಸಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಸ್ವಾಗತ. ಆದರೆ  ಕೊಳವೆ ಮೂಲಕ ನೀರು ಹರಿಸಲು ಬಿಡುವುದಿಲ್ಲ. ಸರ್ವೀಸ್ ಕಾಲುವೆ ಅಥವಾ `ಜಲ ಜಾಲ~ದ ಮೂಲಕವೇ ನೀರು ಹರಿಸಬೇಕು ಎಂದು ಬಿಜೆಪಿ ಸಂಸದ ಜಿ.ಎಸ್.ಬಸವರಾಜ್ ಶನಿವಾರ ಇಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಜನರ ವಿರೋಧದ ನಡುವೆಯೂ ಎತ್ತಿನಹೊಳೆ ನೀರನ್ನು ಕೊಳವೆ ಮೂಲಕ ತೆಗೆದುಕೊಂಡು ಹೋಗಲು ಸರ್ಕಾರ ಯತ್ನಿಸಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಹಾಗೇನಾದರೂ ಆದ್ದಲ್ಲಿ ಒಂದಿಚಿನಷ್ಟೂ ಪೈಪು ಅಳವಡಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಈ ಯೋಜನೆ ರೂಪಿಸಲಾಗುತ್ತಿದೆ. ಈ ಭಾಗದಲ್ಲಿ ಬರುವ ಎಲ್ಲಾ ಕೆರೆಗಳಿಗೂ ನೀರು ಉಣಿಸಬೇಕು ಎಂದು ಒತ್ತಾಯಿಸಿದರು.
ಏನಿದು `ಜಲ ಜಾಲ~?:  ಪಶ್ವಿಮಘಟ್ಟದಲ್ಲಿ  ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ನದಿಗಳ ನೀರನ್ನು ಬೆಂಗಳೂರು ಸೇರಿದಂತೆ ಬಯಲು ಸೀಮೆ, ಮಧ್ಯ ಕರ್ನಾಟಕದ ಜಿಲ್ಲೆಗಳ ಶಾಶ್ವತ ಕುಡಿಯುವ ನೀರಿಗಾಗಿ ತರುವುದು ನೀರಾವರಿ ತಜ್ಞ ಪರಮಶಿವಯ್ಯ ಅವರ ವರದಿಯ ಮೂಲವಾಗಿದೆ.

ಇದಕ್ಕಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ಹಳ್ಳಗಳ ಯೋಜನೆ, ಎತ್ತಿನಹೊಳೆ, ಹೇಮಾವತಿ ಫ್ಲಡ್ ಕೆನಾಲ್ ಎಂದು ಮೂರು ಯೋಜನೆಗಳಾಗಿ ವಿಂಗಡಿಸಲಾಗಿದೆ.  ಇದರಲ್ಲಿ ಮೊದಲ ಹಂತವಾಗಿ, ಜನರ ವಿರೋಧದ ನಡುವೆಯೂ ಕೇಂದ್ರ ಸಚಿವ ಎಂ. ವೀರಪ್ಪ ಮೊಯಿಲಿ ಹೆಚ್ಚು ಆಸಕ್ತಿ ತೋರಿರುವ ಎತ್ತಿನಹೊಳೆ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಸದ್ಯಕ್ಕೆ ಪೈಪ್‌ಲೈನ್ ಮೂಲಕ ನೀರು ಹರಿಸುವುದು ಸರ್ಕಾರ ಮುಂದಿರಿಸಿರುವ ಪ್ರಸ್ತಾವ.

ನೀರಾವರಿ ತಜ್ಞ ಪರಮಶಿವಯ್ಯ, ಸಂಸದ ಬಸವರಾಜ್, ನೀರಾವರಿ ಹೋರಾಟಗಾರರು ಸರ್ಕಾರದ ಸಲಹೆ ತಿರಸ್ಕರಿಸಿದ್ದು, ಪರಮಶಿವಯ್ಯ ವರದಿಯಲ್ಲಿರುವಂತೆ ಸರ್ವೀಸ್ ಕಾಲುವೆ ಮೂಲಕವೇ ಎತ್ತಿನಹೊಳೆ ನೀರನ್ನು ತರಬೇಕು ಎಂದು ಹೇಳುತ್ತಿದ್ದಾರೆ.

ಎತ್ತಿನಹೊಳೆಯಿಂದ ಏತ ನೀರಾವರಿ ಮೂಲಕ ಸಕಲೇಶಪುರಕ್ಕೆ ಬರುವ ನೀರನ್ನು ಅಲ್ಲಿಂದ `ಸರ್ವೀಸ್ ಕಾಲುವೆ ಅಥವಾ ಜಲ ಜಾಲ~ (ವಾಟರ್ ಗ್ರಿಡ್) ಮೂಲಕ ಕೋಲಾರ ಜಿಲ್ಲೆ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯದವರೆಗೂ ಗುರುತ್ವಾಕರ್ಷಣೆ ಮೂಲಕ ಹರಿಸಬಹುದು ಎಂಬುದು ನೀರಾವರಿ ಹೋರಾಟಗಾರರ ವಾದವಾಗಿದೆ.

ಗುರುತ್ವಾಕರ್ಷಣೆ ಮೂಲಕ ನೀರು ಹರಿಸಿದ್ದಲ್ಲಿ ನೀರು ಲಿಫ್ಟ್ ಮಾಡುವುದು ತಪ್ಪಲಿದೆ. ಅರಣ್ಯ, ವ್ಯವಸಾಯ ಭೂಮಿ ಬಳಕೆಯೂ ತಪ್ಪಲಿದೆ. ಅಲ್ಲದೇ ಈ ಭಾಗದಲ್ಲಿ ಬರುವ ಎಲ್ಲ ಕೆರೆಗಳಿಗೂ ಸುಲಭವಾಗಿ ನೀರುಣಿಸಬಹುದಾಗಿದೆ ಎಂದೂ ಹೇಳುತ್ತಿದ್ದಾರೆ.

ಎತ್ತಿನಹೊಳೆ ಯೋಜನೆಗಾಗಿ ನಿರ್ಮಿಸುವ ಸರ್ವೀಸ್ ಕಾಲುವೆ ಮೂಲಕವೇ ಮುಂದೆ ಜಾರಿ ಮಾಡಬೇಕಾದ ಪಶ್ವಿಮಾಭಿಮುಖವಾಗಿ ಹರಿಯುವ ಹಳ್ಳಗಳ ಯೋಜನೆ ಹಾಗೂ ಹೇಮಾವತಿ `ಫ್ಲಡ್ ಕೆನಾಲ್~ ಯೋಜನೆ ಮೂಲಕ ನೀರನ್ನು ಹರಿಸಬಹುದು.  ಅಂದರೆ ಒಂದೇ ಕಾಲುವೆ ಮೂಲಕ ಮೂರು ಯೋಜನೆಗಳ ನೀರನ್ನೂ ತೆಗೆದುಕೊಂಡು ಹೋಗಬಹುದು. ಇದರಿಂದಾಗಿ ನೀರಾವರಿ ಯೋಜನೆಯ ವೆಚ್ಚ ತಗ್ಗುವುದಲ್ಲದೇ ಹೆಚ್ಚುವರಿ ಭೂಮಿ ಬಳಕೆಯೂ ತಪ್ಪಲಿದೆ ಎಂಬುದು ಸಂಸದರೂ ಸೇರಿದಂತೆ ಈ ಭಾಗದ ಹೋರಾಟಗಾರರ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT