ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದೆತುಂಬಿ ಹಾಡಿದ ಜಿಎಸ್‌ಎಸ್‌

Last Updated 24 ಡಿಸೆಂಬರ್ 2013, 7:48 IST
ಅಕ್ಷರ ಗಾತ್ರ

ಗದಗ: ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ನಿಧನಕ್ಕೆ ತೋಂಟದ ಸಿದ್ದಲಿಂಗ ಸ್ವಾಮೀಜಿ  ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶೋಕ ಸಂದೇಶ ನೀಡಿರುವ ಸ್ವಾಮೀಜಿ ರಾಷ್ಟ್ರಕವಿ ವಿಶ್ವಮಾನವೀಯ ಮೌಲ್ಯಗಳ ಪ್ರತಿಪಾದಕ ಕುವೆಂಪು  ಅವರ ನೆಚ್ಚಿನ ಶಿಷ್ಯರಾಗಿದ್ದ ಜಿ.ಎಸ್.­ಶಿವರುದ್ರಪ್ಪ ಮಾನವೀಯ ಅನುಕಂಪದ ಕವಿಯಾಗಿದ್ದರು. ದೇವರು ದಿಂಡಿರ ಹೆಸರಿನ ಶೋಷಣೆ ಹಾಗೂ ಧ್ವಂಧ್ವಗಳನ್ನು ಖಂಡಿಸಿ ಅವರು ಬರೆದಿದ್ದ “ಎಲ್ಲೋ ಹುಡುಕುವೆ ಇಲ್ಲದ ದೇವರ ಕಲ್ಲು ಮಣ್ಣಿನ ಗುಡಿಯೊಳಗೆ” ಗೀತೆ ಹಾಗೂ “ಭಾವದುಂಬಿ ಬರೆದ  ಎದೆ ತುಂಬಿ ಹಾಡುವೆನು.” ಗೀತೆಗಳು ಇಂದಿಗೂ ಎಂದಿಗೂ ಸ್ಮರಣೀಯವಾಗಿವೆ ಎಂದು ಸ್ವಾಮೀಜಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಜಿಎಸ್‌ಎಸ್‌ರಿಂದ ಸಾಹಿತ್ಯ ಸಮೃದ್ಧ
ಮುಂಡರಗಿ:
‘ಸೌಂದರ್ಯ ಸಮೀಕ್ಷೆ’ಯಂತಹ ಅದ್ಭುತ ವಿಮರ್ಶಾ ಗ್ರಂಥವನ್ನು ಕನ್ನಡ ಸಾಹಿತ್ಯಕ್ಕೆ ನೀಡಿ ಸೊಗಸಾದ ಕವಿತೆ ಹಾಗೂ ಗ್ರಂಥಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಈ ಶತಮಾನದ ಒಬ್ಬ ಶ್ರೇಷ್ಠ ಸಾಹಿತಿಗಳಾಗಿದ್ದರು. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಬಡವಾದಂತಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಭಾಗ್ಯಲಕ್ಷ್ಮಿ ಇನಾಮತಿ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ಶಿಂಗಟಾಲೂರ ವೀರಭದ್ರೇಶ್ವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕನ್ನಡದ ಖ್ಯಾತ ಕವಿ ಹಾಗೂ ವಿಮರ್ಶಕ ಜಿ.ಎಸ್.ಶಿವರುದ್ರಪ್ಪನವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಷ್ಟ್ರಕವಿ ಕುವೆಂಪು ಅವರ ಗರಡಿ ಹಾಗೂ ಪರಂಪರೆಯಲ್ಲಿ ಬೆಳೆದು ಕುವೆಂಪು ಅವರಂತೆಯೆ ಶಿವರುದ್ರಪ್ಪನವರು ರಾಜಪ್ರಭುತ್ವ, ರಾಜಕಾರಣ, ಅಧಿಕಾರ ಮೊದಲಾದವುಗಳಿಂದ ಸದಾ ಅಂತರವನ್ನು ಕಾಯ್ದುಕೊಂಡ ಶುದ್ಧ ಮನಸ್ಸಿನ ಸಾಹಿತಿಗಳಾಗಿದ್ದರು. ‘ಎದೆ ತುಂಬಿ ಹಾಡುವ’ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ಶಿವರುದ್ರಪ್ಪನವರು ಎಲ್ಲ ವರ್ಗದ ಹಾಗೂ ಎಲ್ಲ ಕಾಲಕ್ಕೂ ಸಲ್ಲುವ ಸಾಹಿತಿಗಳಾಗಿದ್ದಾರೆ. ಅಂತಹ ಸಾಹಿತಿ ಕನ್ನಡ ನೆಲದಲ್ಲಿ ಮತ್ತೆ ಹುಟ್ಟಿಬರಲಿ’ ಎಂದು ಅವರು ಆಶಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಶಿಕ್ಷಕ ಉಮೇಶ ಬೂದಿಹಾಳ ಮಾತನಾಡಿ, ‘ನವೋದಯ ಸಾಹಿತ್ಯಕ್ಕೆ ಒಂದು ಗಟ್ಟಿತನವನ್ನು ತಂದು ಕೊಟ್ಟ ಕೀರ್ತಿ ಜಿ.ಎಸ್.ಶಿವರುದ್ರಪ್ಪನವರಿಗೆ ಸಲ್ಲುತ್ತದೆ. ಅವರ ನೂರಾರು ಕವಿತೆಗಳು ಇಂಗ್ಲಿಷ್ ಸೇರಿದಂತೆ ಹಲವಾರು ಭಾಷೆಗಳಿಗೆ ಭಾಷಾಂತರಗೊಂಡಿರುವುದೆ ಅದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯ ಪರಿಷತ್ತು ಶತಮಾನದ ಹೊಸ್ತಿಲಲ್ಲಿರುವಾಗ ನಾವು ಜಿ.ಎಸ್.ಶಿವರುದ್ರಪ್ಪನಂತಹ ಸಾಹಿತಿಗಳನ್ನು ಕಳೆದುಕೊಂಡಿರುವುದು ತುಂಬಾ ನೋವಿನ ಸಂಗತಿ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಗಂಗಾಧರ ಅಣ್ಣಿಗೇರಿ ಮಾತನಾಡಿದರು. ನಂದಾ ಪೈಲ್ಸ್, ಬಿ.ಜೆ.ಲಮಾಣಿ, ಯು.ಆರ್.ಶಿರಸಗಿ ಇದ್ದರು.

ರಾಷ್ಟ್ರಕವಿಗೆ ನಮನ
ಶಿರಹಟ್ಟಿ:
ರಾಷ್ಟ್ರಕವಿ ಡಾ. ಜಿ.ಎಸ್‌ ಶಿವರುದ್ರಪ್ಪ ಅವರ ನಿಧನದಿಂದ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.

ಸೋಮವಾರ ಪಟ್ಟಣದಲ್ಲಿ ಶ್ರದ್ಧಾಂಜಲಿ ಅರ್ಪಿಸಿ ಅವರು ಮಾತನಾಡಿದರು.

ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಅ.ಓಂ. ಪಾಟೀಲ, ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ಎಫ್‌. ಅಕ್ಕಿ, ವಿಶ್ಚಚೇತನ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎನ್‌.ಆರ್‌. ಕುಲಕರ್ಣಿ, ಎಚ್‌.ಎಂ. ದೇವಗಿರಿ, ಪ್ರಾಚಾರ್ಯ ನಟರಾಜ ಕಲಾವಂತ, ಎಂ.ಕೆ. ಲಮಾಣಿ ಮತ್ತಿತರರು ಉಪಸ್ಥಿತರಿದ್ದರು.

ಶ್ರದ್ಧಾಂಜಲಿ
ಗದಗ:
ನಾಡಿನ ಶ್ರೇಷ್ಠ ಸಾಹಿತ್ಯಕಾರರಲ್ಲಿ ಒಬ್ಬರಾಗಿದ್ದ ಹಾಗೂ ರಾಷ್ಟ್ರಕವಿ ಗೌರವ ಪಡೆದಿದ್ದ ಜಿ.ಎಸ್. ಶಿವರುದ್ರಪ್ಪ ಅವರ ಅಗಲುವಿಕೆ  ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಸಂತಾಪ ಸೂಚಿಸಿದ್ದಾರೆ. 

ಕಸಾಪ : ಕನ್ನಡ ಭಾಷೆಯನ್ನು ಕಾವ್ಯಾತ್ಮಕವಾಗಿ ಶ್ರೀಮಂತಗೊಳಿಸಿದ ರಾಷ್ಟ್ರಕವಿ ಜಿ.ಎಸ್.ಎಸ್ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಶಿವಪ್ಪ. ಎಂ. ಕುರಿ ಹೇಳಿದ್ದಾರೆ.

ಪ್ರಾ. ಕೆ.ಎಚ್.ಬೇಲೂರ, ಪ್ರಾ. ಕೆ. ಬಿ ತಳಗೇರಿ, ಶರಣು ಗೋಗೇರಿ, ಡಾ. ಸಂಗಮೇಶ ತಮ್ಮನಗೌಡರ,   ಮಲ್ಲೇಶ ಡಿ.ಎಚ್, ಮಲ್ಲಿಕಾರ್ಜುನ ಪೂಜಾರ,   ಡಿ.ಎಸ್.ತಳವಾರ, ಪ್ರಾ ಬಿ.ಜಿ ಹಿರೇಮಠ, ಕಿಶೋರಬಾಬು ನಾಗರಕಟ್ಟಿ ಭಾಗವಹಿಸಿದ್ದರು.  
 
ಜಿಲ್ಲಾ ಚೇಂಬರ್‌:   ಜಿ.ಎಸ್.ಶಿವರುದ್ರಪ್ಪನವರ ನಿಧನದಿಂದ ಸಾಂಸ್ಕೃತಿಕ ಲೋಕಕ್ಕೆ  ತುಂಬಲಾರದ ನಷ್ಟವಾಗಿದೆ ಎಂದು  ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ, ಕಾರ್ಯದರ್ಶಿ ವೀರಣ್ಣ ಬೇವಿನಮರದ ಇವರು ಸಂಸ್ಥೆಯ ಪರವಾಗಿ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.   

ಜಿಲ್ಲಾ ಕನ್ನಡ ಜಾಗೃತಿ ವೇದಿಕೆ: ಸಾಹಿತಿ ರಾಷ್ಟ್ರಕವಿ ಡಾ. ಜಿ ಎಸ್ ಶಿವರುದ್ರಪ್ಪನವರ  ನಿಧನದಿಂದ  ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲಾ ಕನ್ನಡ ಜಾಗೃತಿ ವೇದಿಕೆ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

ಸಭೆ ಮುಂದೂಡಿಕೆ: ಇದೇ 24 ರಂದು ಗದಗದಲ್ಲಿ ಏರ್ಪಡಿಸಲಾಗಿದ್ದ  ಜಿಲ್ಲಾ ಮಟ್ಟದ ಜಾಗೃತ ಮತ್ತು ಮೇಲ್ವಿಚರಣಾ ಸಮಿತಿ ಸಭೆಯನ್ನು  ಜ.7 ರಂದು  ಮುಂದೂಡಲಾಗಿದೆ  ಎಂದು ಜಿಲ್ಲಾ ಪಂಚಾಯತ್ ಪ್ರಕಟಣೆ ತಿಳಿಸಿದೆ. 

‘ನಾಡು ಕಂಡ ಅಪರೂಪದ ಕವಿ ಜಿಎಸ್‌ಎಸ್‌’
ನರಗುಂದ:
ರಾಷ್ಟ್ರಕವಿ ದಿ. ಜಿ.ಎಸ್‌.ಶಿವರುದ್ರಪ್ಪ­ನವರು ನಿಧನರಾದ ನಿಮಿತ್ತ ಅವರಿಗೆ ಸೋಮವಾರ ಸಂಜೆ ಪಟ್ಟಣದ ಬಸವೇಶ್ವರ ಸಮುದಾಯಭವನದಲ್ಲಿ  ಕನ್ನಡ ಪರ ವಿವಿಧ ಸಂಘ ಸಂಸ್ಥೆಗಳು ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ನೇತೃತ್ವದಲ್ಲಿ   ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

ದಿ.ಜಿ.ಎಸ್‌.ಶಿವರುದ್ರಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ  ಮಾಡಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ  ಶಾಂತಲಿಂಗಸ್ವಾಮೀಜಿ  ಜಿಎಸ್‌ಎಸ್‌ರವರು ಕನ್ನಡ ನಾಡು ಕಂಡು ಅಪರೂಪದ ಕವಿಯಾಗಿದ್ದು. ಅವರ ಅಗಲಿಕೆ ಇಡಿ ಕನ್ನಡ ಸಾರಸ್ವತ ಲೋಕಕ್ಕೆ  ಅಪಾರ ಹಾನಿ ಉಂಟು ಮಾಡಿದೆ. ಆದ್ದರಿಂದ ರಾಜ್ಯ ಸರಕಾರ ಬರುವ ದಿನಗಳಲ್ಲಿ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಿ  ಉನ್ನತವಾದ ಪ್ರಶಸ್ತಿಯನ್ನು ನೀಡುವಲ್ಲಿ ಮುಂದಾಗುವಂತೆ ಆಗ್ರಹಿಸಿದರು.

ಸಭೆಯಲ್ಲಿ ಭಾಗವಹಿಸಿ ಕಸಾಪ ತಾಲ್ಲೂಕ ಘಟಕದ  ಮಾಜಿ ಅಧ್ಯಕ್ಷ ಚನ್ನಬಸಪ್ಪ ಕಂಠಿ ಮಾತನಾಡಿ ದಿ.ಶಿವರುದ್ರಪ್ಪನವರು ನವೋದಯ ಸಾಹಿತ್ಯ ಘಟ್ಟಕ್ಕೆ ಹೊಸ ಕೊಡುಗೆ  ನೀಡುವ ಮೂಲಕ ಭಾವಗೀತೆಗಳಿಗೆ  ಹೊಸ ರೂಪ ನೀಡಿದವರಾಗಿದ್ದಾರೆ. ಇವರ ನಿಧನ ನಾಡಿಗೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದರು.  ಕಸಾಪ ತಾಲ್ಲೂಕು ಅಧ್ಯಕ್ಷ ಪಿ.ಸಿ.ಕಲಹಾಳ ಜಿಎಸ್‌ಎಸ್‌ರವರ ಗೀತೆಗಳನ್ನು  ಹಾಡುವ ಮೂಲಕ  ಶ್ರದ್ಧಾಂಜಲಿ ಅರ್ಪಿಸಿದರು. ಸಭೆಯಲ್ಲಿ  ವರ್ತಕ ಸಿ.ಎಚ್‌.ಕೋರಿ, ಬೆಳವಲನಾಡು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶಾಂತಕುಮಾರ ಭಜಂತ್ರಿ, ಕಸಾಪ ಕಾರ್ಯದರ್ಶಿ ಆರ್‌.ಬಿ.ಚಿನಿವಲಾರ, ಚನ್ನು ನಂದಿ, ಚಿದಂಬರ ನಿಂಬರಗಿ, ಡಾ.ನಾಗರಾಜ ಕಾಜಗಾರ, ಕೆ.ಬಿ.ಹುಲಗೂರು, ಶಂಕರ ಕಲ್ಲಿಗನೂರು, ಎ.ಬಿ.ಗೂಳನ್ನವರ, ಮಹಾಂತೇಶ ಸುರಪೂರ, ಎಸ್‌.ಎಸ್‌.ಉಳ್ಳೇಗಡ್ಡಿ, ಎಂ.ಡಿ,ಮಾದರ ಸೇರಿದಂತೆ ಮೊದಲಾದವರು ಭಾಗವಹಿಸಿ ಕಂಬನಿ ಮಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT