ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎ ಷರತ್ತು ಸಡಿಲಿಸಲು ಆಗ್ರಹಿಸಿ ಪ್ರತಿಭಟನೆ

Last Updated 9 ಜನವರಿ 2014, 6:50 IST
ಅಕ್ಷರ ಗಾತ್ರ

ಕಾರವಾರ: ಸರ್ಕಾರದ ವಿವಿಧ ವಸತಿ ಯೋಜನೆಯಲ್ಲಿ ವ್ಯವಸಾಯೇತರ (ಎನ್.ಎ.) ಆದ ಜಮೀನು ಇರಲೇ­ಬೇಕೆಂಬ ಷರತ್ತು ಸಡಿಲಿಸಬೇಕು ಎಂದು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಹಿತರಕ್ಷಣಾ ಹೋರಾಟಗಾರರ ವೇದಿಕೆ ನೇತೃತ್ವದಲ್ಲಿ ನೂರಾರು ಮಂದಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗೆ ಸಿಐಟಿಯು, ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮುಂತಾದ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ­ದವು. ನಗರದ ಮಾಲಾದೇವಿ ಮೈದಾನದಲ್ಲಿ ಸಮಾವೇಶಗೊಂಡ ನೂರಾರು ಮಂದಿ, ಪ್ರಮುಖ ರಸ್ತೆ­ಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ದಾರಿಯುದ್ದಕ್ಕೂ ರಾಜ್ಯ ಸರ್ಕಾರದ ಅವೈಜ್ಞಾನಿಕ ನಿಯಮದ ವಿರುದ್ಧ ಘೋಷಣೆ ಕೂಗಿದರು.

ಉತ್ತರ ಕನ್ನಡ ಜಿಲ್ಲಾ ಹಿತರಕ್ಷಣಾ ಹೋರಾಟಗಾರರ ವೇದಿಕೆ ಅಧ್ಯಕ್ಷ ಜಿ.ಟಿ. ನಾಯ್ಕ ಮಾತನಾಡಿ, ‘ಬಡವರಿಗಾಗಿ, ಹಿಂದುಳಿದವರಿಗಾಗಿ, ಪರಿಶಿಷ್ಟ ಜಾತಿ ಪಂಗಡದವರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಮನೆ ಇಲ್ಲದವರಿಗೆ ನೀಡುತ್ತಿರುವ ಆಶ್ರಯ ಮನೆ ಯೋಜನೆ, ಬಸವ ಕಲ್ಯಾಣ ಯೋಜನೆ, ಅಂಬೇಡ್ಕರ್‌ ಆವಾಸ ಯೋಜನೆಗಳಲ್ಲಿ ಮನೆಗಳನ್ನು ಪಡೆಯಬೇಕಾದಲ್ಲಿ ರಾಜ್ಯ ಸರ್ಕಾರ ಹಲವಾರು ಷರತ್ತುಗಳನ್ನು ವಿಧಿಸಿದೆ.

ಅದರಲ್ಲಿ ಮುಖ್ಯವಾಗಿ ವ್ಯವಸಾಯೇತರ ಅಂದರೆ ಎನ್.ಎ. ಮಾಡಿಸಿದ ಜಾಗವು ಅವರಿಗೆ ಇರಲೇಬೇಕೆಂಬ ಷರತ್ತು ಇದೆ. ಈ ಅವೈಜ್ಞಾನಿಕ ನಿಯಮದಿಂದ ಅರ್ಹ ಫಲಾನುಭವಿಗಳಿಗೆ ವಸತಿ ಯೋಜನೆ ಕೈತಪ್ಪುತ್ತಿದೆ’ ಎಂದು ಆರೋಪಿಸಿದ ಅವರು, ಸರ್ಕಾರಿ ಯೋಜನೆಗಳಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ವಸತಿ ಯೋಜನೆಯಲ್ಲಿ ಎನ್‌.ಎ ಷರತ್ತು ವಿಧಿಸಿರುವುದು ಗ್ರಾಮೀಣ ಭಾಗದ ಜನರಿಗೆ ತೊಂದರೆಯಾಗಿದೆ. ಅವರಿಗೆ ಎನ್‌.ಎ ಬಗ್ಗೆ ಯಾವುದೇ ಅರಿವಿಲ್ಲ ಹಾಗೂ ಅದನ್ನು ಮಾಡಿಸಲು ಹಣ ಖರ್ಚು ಮಾಡಿಕೊಂಡು ಜಿಲ್ಲಾಕೇಂದ್ರಕ್ಕೆ ಅಲೆಯಬೇಕು. ಆದ್ದರಿಂದ ಎನ್‌ಎ ನಿಯಮವನ್ನು ಸಡಿಲಿಸಬೇಕು ಎಂದು ಆಗ್ರಹಿಸಿದರು. 

ಸಿಐಟಿಯುನ ಯಮುನಾ ಗಾಂವ­ಕರ್‌, ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಲಿಷಾ ಎಲಕಪಾಟಿ ಮಾತನಾಡಿದರು.

ಮನವಿ: ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್‌ ಅವರಿಗೆ ಪ್ರತಿ­ಭಟ­ನಾಕಾರರು ಮನವಿ ಸಲ್ಲಿಸಿದರು.
ವಕೀಲರಾದ ಎಂ.ಎಲ್‌. ನಾಯ್ಕ, ಗಿರೀಶ್‌ ಪಟಗಾರ್‌, ಮಾರುತಿ ಮಾರಜ್ಜ, ಅಣ್ಣಪ್ಪ ನಾಯ್ಕ, ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಗುಲಾಬಿ ಎಚ್‌. ನಾಯ್ಕ, ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ್‌ ಆರ್‌. ದನಗರ್‌, ಸತೀಶ್‌, ಯಲ್ಲಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT