ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಂಪಿಟಿ ವರ್ತನೆಗೆ ಆಕ್ರೋಶ

Last Updated 16 ಸೆಪ್ಟೆಂಬರ್ 2011, 9:55 IST
ಅಕ್ಷರ ಗಾತ್ರ

ಮಂಗಳೂರು:  ಅಳಿವೆ ಬಾಗಿಲಿನಲ್ಲಿ ಮತ್ತೊಮ್ಮೆ ದೋಣಿ ದುರಂತ ಸಂಭವಿಸಿರುವಂತೆಯೇ ಅಧಿಕಾರಿಗಳು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಹೇಳಿಕೆ ನೀಡತೊಡಗಿದ್ದು, ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ಮೀನುಗಾರರು ಮಾತ್ರ ತಮ್ಮ ಜೀವಕ್ಕೆ ಬೆಲೆ ನೀಡದೆ ಇರುವುದಕ್ಕಾಗಿ ತೀವ್ರವಾಗಿ ಆಕ್ರೋಶಗೊಂಡಿದ್ದಾರೆ, ಪ್ರತಿಭಟನೆಗೆ ಸಜ್ಜಾಗತೊಡಗಿದ್ದಾರೆ.

`ಎನ್‌ಎಂಪಿಟಿಯವರು ನಮ್ಮನ್ನು ಭಯೋತ್ಪಾದಕರಿಗಿಂತಲೂ ಕಠಿಣವಾಗಿ ನಡೆಸಿಕೊಂಡಿದ್ದಾರೆ. ಸ್ವತಃ ಮುಖ್ಯಮಂತ್ರಿ ಅವರಿಗೇ ಇವರ ವರ್ತನೆ ಬಗ್ಗೆ ನಾವು ಬುಧವಾರ ದೂರು ನೀಡಿದ್ದೆವು. ಆದರೂ ಪರಿಸ್ಥಿತಿ ಬದಲಾಗಿಯೇ ಇಲ್ಲ~ ಎಂದು ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ದೂರಿದರು.

`ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿರುವುದರಿಂದ ಈ ಎಲ್ಲ ತೊಂದರೆ ಎದುರಾಗಿದೆ. ಮೇಲಾಗಿ ಎನ್‌ಎಂಪಿಟಿಯವರೂ ನಮ್ಮನ್ನು ಪರಕೀಯರಂತೆ ಕಾಣುತ್ತಿದ್ದಾರೆ. ಅಧಿಕಾರಿಗಳ ವರ್ತನೆಯಲ್ಲಿ ಬದಲಾವಣೆ ಆಗಬೇಕು, ಇಲ್ಲವೇ ಶೀಘ್ರ ಅಳಿವೆ ಬಾಗಿಲಿನ ಹೂಳು ತೆಗೆಸುವ ಕ್ರಮ ಕೈಗೊಂಡು ಶಾಶ್ವತ ತಡೆಗೋಡೆ ನಿರ್ಮಿಸಬೇಕು. ಇಲ್ಲವಾದರೆ ಮೀನುಗಾರಿಕೆ ಬಂದ್ ಮಾಡಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ~ ಎಂದು ಅವರು ಎಚ್ಚರಿಸಿದರು.

ಡಿ.ಸಿ. ಹೇಳಿಕೆ:
ದೋಣಿ ಅಪಾಯದಲ್ಲಿದೆ ಎಂಬುದನ್ನು ದೋಣಿಯಲ್ಲಿದ್ದವರು ಯಾವೊಂದು ಇಲಾಖೆ ಅಥವಾ ಯಾವೊಬ್ಬ ಅಧಿಕಾರಿಗೂ ತಿಳಿಸಿಲ್ಲ. ತುರ್ತು ಸ್ಥಿತಿಯಲ್ಲಿ ಕರೆ ಮಾಡಬೇಕಾದ 1077 ಸಂಖ್ಯೆಗೂ ಯಾವುದೇ ಕರೆ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ ಹೇಳಿದ್ದಾರೆ.

ಆದರೆ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಸುರೇಶ್ ಕುಮಾರ್ ಅವರು ತಮಗೆ ಬೆಳಿಗ್ಗೆ 5 ಗಂಟೆಗೇ ದೋಣಿ ಸಂಕಷ್ಟದಲ್ಲಿ ಇರುವ ವಿಚಾರ ಗೊತ್ತಾಗಿದ್ದನ್ನು ಹಾಗೂ ತಾವು ಈ ಬಗ್ಗೆ ಹಲವು ಮೀನುಗಾರ ಮುಖಂಡರಿಗೆ ಮತ್ತು ಕರಾವಳಿ ರಕ್ಷಣಾ ಪಡೆಗೆ ತಿಳಿಸಿದ್ದನ್ನು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಕರಾವಳಿ ಭದ್ರತಾ ಪೊಲೀಸ್ ಪಡೆಯ ಇನ್ಸ್‌ಪೆಕ್ಟರ್ ಮುಕುಂದ ನಾಯಕ್ ಅವರು ಸಹ ಘಟನೆಯ ಬಗ್ಗೆ ತಮಗೆ ಬೆಳಿಗ್ಗೆ 5.15ರ ಹೊತ್ತಿಗೆ ಮಾಹಿತಿ ಸಿಕ್ಕಿದ್ದನ್ನು ಮತ್ತು ತಾವು ತಕ್ಷಣ ಈ ವಿಚಾರವನ್ನು ಕರಾವಳಿ ರಕ್ಷಣಾ ಪಡೆಗೆ ರವಾನಿಸಿದ್ದನ್ನು ತಿಳಿಸಿದ್ದಾರೆ. `ನಾವು 12 ನಾಟಿಕಲ್ ಮೈಲು ವರೆಗೆ ಶೋಧ ಕಾರ್ಯಾಚರಣೆ ನಡೆಸಿದೆವು. ಆದರೆ ಕಡಲು ಪ್ರಕ್ಷುಬ್ಧವಿದ್ದ ಕಾರಣ ಮತ್ತಷ್ಟು ಶೋಧ ಕಾರ್ಯಾಚರಣೆ ಸಾಧ್ಯವಾಗಲಿಲ್ಲ~ ಎಂದರು.

ಎನ್‌ಎಂಪಿಟಿ ಅಧಿಕಾರಿಗಳು ಬದುಕಿ ಉಳಿದ ವಿನ್ಸೆಂಟ್ ಅವರ ಆರೋಪಗಳನ್ನು ಅಲ್ಲಗಳೆದಿದ್ದು, ತಮ್ಮನ್ನು ಮೀನುಗಾರ ನಾಯಕರಾಗಲಿ, ಮೀನುಗಾರಿಕಾ ಉಪನಿರ್ದೇಶಕರಾಗಿಲಿ ಸಂಪರ್ಕಿಸಿಲ್ಲ ಎಂದಿದ್ದಾರೆ. `ಯಾವುದೇ ಅಪರಿಚಿತ ದೋಣಿಯನ್ನು ಸೂಕ್ತ ತಪಾಸಣೆ ಇಲ್ಲದೆ ನಾವು ಒಳಗೆ ಬಿಡುವುದಾದರೂ ಹೇಗೆ~ ಎಂಬುದು ಎನ್‌ಎಂಪಿಟಿ ಅಧಿಕಾರಿಗಳ ಪ್ರಶ್ನೆ.ಆದರೆ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿಯನ್ನು ಸಂಪರ್ಕಿಸುವುದು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT