ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಚ್ 7ರಲ್ಲಿ ಟೋಲ್ ಸಂಗ್ರಹ

Last Updated 8 ಫೆಬ್ರುವರಿ 2012, 19:40 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಶುಕ್ರವಾರ (ಫೆ.10) ಮಧ್ಯ ರಾತ್ರಿಯಿಂದ ಜಾರಿಗೆ ಬರುವಂತೆ ಟೋಲ್ ಸಂಗ್ರಹಿಸಲು ನವಯುಗ ದೇವನಹಳ್ಳಿ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ (ಎನ್‌ಡಿಟಿಪಿಎಲ್) ನಿರ್ಧರಿಸಿದೆ.

ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಏಳರ ಸಾದಹಳ್ಳಿ ಬಳಿ ನಿರ್ಮಿಸಿರುವ ಟೋಲ್ ಸಂಗ್ರಹ ಕೇಂದ್ರಗಳನ್ನು ಸ್ಥಳಾಂತರಿಸದಿರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಪ್ರವೇಶದ್ವಾರದಿಂದ 500 ಮೀಟರ್ ದೂರದಲ್ಲಿರುವ ಟೋಲ್ ಕೇಂದ್ರದಲ್ಲೇ ಟೋಲ್ ಸಂಗ್ರಹ ಪ್ರಕ್ರಿಯೆ ಆರಂಭವಾಗಲಿದೆ.

`ನಗರದಿಂದ ಬಿಐಎಎಲ್‌ಗೆ ಹೋಗುವ ಸಂದರ್ಭದಲ್ಲಿ ವಾಹನಗಳ ಮಾಲೀಕರು ಟೋಲ್ ನೀಡುವ ಅಗತ್ಯವಿಲ್ಲ. ಆದರೆ, ಬಿಐಎಎಲ್‌ನಿಂದ ನಗರಕ್ಕೆ ವಾಪಸ್ ಬರುವಾಗ ಅವರು ಟೋಲ್ ಕೊಡಬೇಕು. ಟೋಲ್ ಸಂಗ್ರಹಣೆ ಪ್ರಕ್ರಿಯೆಯಿಂದ ಪ್ರಯಾಣಿಕರಿಗೆ ತೊಂದರೆಯಾಗುವುದನ್ನು ತಪ್ಪಿಸುವ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ~ ಎಂದು ಎನ್‌ಎಚ್‌ಎಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೇವನಹಳ್ಳಿ- ಹೈದರಾಬಾದ್ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ನಿಗದಿಪಡಿಸಿರುವ ಟೋಲ್‌ನ ಪ್ರಮಾಣಕ್ಕೆ ಹೋಲಿಸಿದರೆ, ಬಿಐಎಎಲ್‌ನಿಂದ ಬರುವ ವಾಹನಗಳಿಗೆ ನಿಗದಿಪಡಿಸಿರುವ ಟೋಲ್ ಪ್ರಮಾಣ ಕಡಿಮೆ ಇದೆ. ಹೈದರಾಬಾದ್ ಕಡೆಗೆ ಹೋಗುವ ವಾಹನಗಳಿಗೆ 20 ರೂಪಾಯಿ ಟೋಲ್ ನಿಗದಿಪಡಿಸಲಾಗಿದೆ. ಆದರೆ, ಬಿಐಎಎಲ್‌ಗೆ ಹೋಗಿ ವಾಪಸ್ ಬರುವ ವಾಹನಗಳಿಂದ 25 ರೂಪಾಯಿ ಟೋಲ್ ಪಡೆಯಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಷಟ್ಪಥ ರಸ್ತೆಯ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಟೋಲ್ ಸಂಗ್ರಹಿಸಲು ಎನ್‌ಡಿಟಿಪಿಎಲ್‌ಗೆ ಅನುಮತಿ ನೀಡಿರುವ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಅಧಿಕಾರಿ, `ಇದು ಕೇಂದ್ರ ಸರ್ಕಾರದ ನಿಯಮ. ದೇಶದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇದೇ ನಿಯಮವನ್ನು ಪಾಲಿಸಲಾಗುತ್ತಿದೆ~ ಎಂದರು.

`ಷಟ್ಪಥ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಟೋಲ್ ಸಂಗ್ರಹಿಸಲು ಮುಂದಾಗಿರುವುದು ಸರಿಯಲ್ಲ. ಅಲ್ಲದೇ ಟೋಲ್‌ನ ಪ್ರಮಾಣವು ಅಧಿಕವಾಗಿದೆ~ ಎಂದು ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್‌ಗಳ ಒಕ್ಕೂಟದ ಸದಸ್ಯ ಕೆ.ಜಿ.ರವೀಂದ್ರ ಹೇಳಿದ್ದಾರೆ.

ಮುಷ್ಕರ: `ಟೋಲ್ ಸಂಗ್ರಹ ಪ್ರಕ್ರಿಯೆ ಆರಂಭವಾದ ದಿನದಿಂದಲೇ ಬಿಐಎಎಲ್‌ಗೆ ವಾಹನ ಸೇವೆಯನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ. ಈ ಸಂಬಂಧ ಟ್ಯಾಕ್ಸಿ ಚಾಲಕರು ಹಾಗೂ ಇತರೆ ವಾಹನಗಳ ಚಾಲಕರೊಂದಿಗೆ ಶುಕ್ರವಾರ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ~ ಎಂದು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT