ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಜಿಇಎಫ್ ಪುನಃಶ್ಚೇತನಕ್ಕೆ ರೂ 5 ಕೋಟಿ: ಗುರಿಕಾರ

Last Updated 29 ಮೇ 2012, 6:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಸರ್ಕಾರಿ ಸ್ವಾಮ್ಯದ ಕಾರ್ಖಾನೆಯಾದ ಹುಬ್ಬಳ್ಳಿಯ ಎನ್‌ಜಿಇಎಫ್‌ಗೆ ದುಡಿಯುವ ಬಂಡವಾಳದ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರ ರೂ 5 ಕೋಟಿ ನೆರವು ನೀಡಿದೆ~ ಎಂದು ಎನ್‌ಜಿಇಎಫ್ ಅಧ್ಯಕ್ಷ ಷಣ್ಮುಖಪ್ಪ ಗುರಿಕಾರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಎನ್‌ಜಿಇಎಫ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ರೂ 10 ಕೋಟಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಅದರ ಮೊದಲ ಕಂತಾಗಿ ರೂ 5 ಕೋಟಿ ಬಿಡುಗಡೆ ಮಾಡಿದ್ದಾರೆ. ಉಳಿದ ರೂ 5 ಕೋಟಿಯನ್ನು ಸದ್ಯದಲ್ಲೇ ಬಿಡುಗಡೆಗೊಳಿಸುವ ಭರವಸೆಯನ್ನು ನೀಡಿದ್ದಾರೆ~ ಎಂದು ಹೇಳಿದರು.

`ಹೆಸ್ಕಾಂ ಸಹಯೋಗದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿ ಘಟಕವನ್ನು ಎನ್‌ಜಿಇಎಫ್‌ನಲ್ಲಿ ಇನ್ನು ಒಂದೂವರೆ ತಿಂಗಳಲ್ಲಿ ಆರಂಭಿಸಲಾಗುತ್ತದೆ. ಇದಕ್ಕಾಗಿ ದುಡಿಯುವ ಬಂಡವಾಳ ಹಾಗೂ ಯಂತ್ರಗಳ ಖರೀದಿಗೆ ರೂ 2.57 ಕೋಟಿಯನ್ನು ಹೆಸ್ಕಾಂ ಒದಗಿಸಲಿದೆ.
 
ದುರಸ್ತಿ ಘಟಕದಲ್ಲಿ ಕಾರ್ಯ ನಿರ್ವಹಿಸಲು ಎನ್‌ಜಿಇಎಫ್‌ನಲ್ಲಿಯ 20 ಉದ್ಯೋಗಿಗಳು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ತರಬೇತಿ ಪಡೆದಿದ್ದಾರೆ. ಇನ್ನೂ 20 ಉದ್ಯೋಗಿಗಳು ತರಬೇತಿ ಪಡೆಯಲಿದ್ದಾರೆ. ಸದ್ಯ ದೊರಕಿರುವ ರೂ 5 ಕೋಟಿ ಬಂಡವಾಳದಲ್ಲಿ ಒಟ್ಟು ಇರುವ 146 ಉದ್ಯೋಗಿಗಳಿಗೆ ಕೆಲಸ ಸಿಗಲಿದೆ~ ಎಂದರು.

`ಮುಂದಿನ ದಿನಗಳಲ್ಲಿ ಟ್ರಾನ್ಸ್‌ಫಾರ್ಮರ್‌ಗಳ ಉತ್ಪಾದನೆಯ ಘಟಕವನ್ನು ಆರಂಭಿಸುವ ಯೋಜನೆ ಇದ್ದು, ಈ ಕುರಿತು ಈಗಾಗಲೇ ರೂ 100 ಕೋಟಿ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲದೇ ಸಬ್‌ಮರ್ಸಿಬಲ್ ಪಂಪ್‌ಗಳ ಉತ್ಪಾದನೆ ಹಾಗೂ ಜಿ-2 ಗುಂಪಿನ ಮೋಟಾರ್‌ಗಳ ಉತ್ಪಾದನೆ ಕುರಿತು ರೂ 40 ಕೋಟಿ ಯೋಜನೆಯ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಕಳೆದ ಎರಡು ವರ್ಷಗಳಿಂದ ಎನ್‌ಜಿಇಎಫ್‌ನಲ್ಲಿ ಒಂದೂವರೆ ಕೋಟಿ ರೂಪಾಯಿ ನಷ್ಟವಾಗಿದೆ. ಅಲ್ಲದೇ ಕಳೆದ ಆರು ತಿಂಗಳಿಂದ ಉತ್ಪಾದನೆ ಸ್ಥಗಿತಗೊಂಡಿದೆ. ಸರ್ಕಾರ ನೀಡಿದ ಆರ್ಥಿಕ ಉತ್ತೇಜನದಿಂದ ಮತ್ತೆ ನಷ್ಟ ಅನುಭವಿಸದಂತೆ ಕ್ರಮ ಕೈಗೊಳ್ಳುತ್ತೇವೆ~ ಎಂದು ಅವರು ಭರವಸೆ ನೀಡಿದರು.

ಎನ್‌ಜಿಇಎಫ್ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್. ವೀರಣ್ಣ, ಮ್ಯಾನೇಜರ್ ಶಿವಕುಮಾರ, ವೀರಣ್ಣ ಜಡಿ ಹಾಗೂ ಬಿಜೆಪಿ ವಕ್ತಾರ ವೀರೇಶ ಸಂಗಳದ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT