ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಬ್ಲ್ಯುಕೆಆರ್‌ಟಿಸಿ: 27 ಕೋಟಿ ವಹಿವಾಟು ಹೆಚ್ಚಳ

Last Updated 8 ಮೇ 2012, 9:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) 2011-12ನೇ ಸಾಲಿನಲ್ಲಿ 1020 ಕೋಟಿ ವಹಿವಾಟು ನಡೆಸಿದೆ. ಸಂಸ್ಥೆ ಆರಂಭಗೊಂಡ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಹಿವಾಟು ಪ್ರಮಾಣ ಸಾವಿರ ಕೋಟಿ ದಾಟಿದೆ.

ಆದಾಯ ಸೋರಿಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ 2010-11ರಲ್ಲಿ 903 ಕೋಟಿ ವಹಿವಾಟು ನಡೆಸಿದ್ದ  ಸಂಸ್ಥೆ ಈ ಬಾರಿ 27 ಕೋಟಿ ವಹಿವಾಟು ಹೆಚ್ಚಿಸಿಕೊಂಡು ಶೇ.12.4ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ವರ್ಷ ರೂ 30 ಕೋಟಿ ಇದ್ದ ನಷ್ಟದ ಪ್ರಮಾಣ ಈ ಬಾರಿ 16 ಕೋಟಿಗೆ ಇಳಿಕೆಯಾಗಿದೆ.

ಸಿಬ್ಬಂದಿ ಹಾಗೂ ಬಸ್‌ಗಳ ಸಂಖ್ಯೆಯಲ್ಲಿ ಹೆಚ್ಚಳ, ಇ-ಟಿಕೆಟ್ ವ್ಯವಸ್ಥೆ ಅಳವಡಿಕೆ, ಅಶಿಸ್ತು ತೋರಿದ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮ, ಇ-ಟೆಂಡರ್ ಮೂಲಕ ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತಂದ ಪರಿಣಾಮ ವಹಿವಾಟು ಹೆಚ್ಚಳ ಸಾಧ್ಯವಾಗಿದೆ ಎನ್ನುತ್ತಾರೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ.

ಪ್ರಜಾವಾಣಿಯೊಂದಿಗೆ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ 67 ಕೋಟಿ ಇದ್ದ ನಷ್ಟದ ಪ್ರಮಾಣ ವರ್ಷದಿಂದ ವರ್ಷಕ್ಕೆ  ತಗ್ಗುತ್ತಿದೆ. ಮುಂದಿನ ದಿನಗಳಲ್ಲಿ ಲಾಭದತ್ತ ಹೆಜ್ಜೆ ಇಡಲಾಗುವುದು ಎಂದು ಹೇಳುತ್ತಾರೆ.

ಆಡಳಿತದಲ್ಲಿ ಚುರುಕು: ಸಂಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಳೆಯ ಬಸ್‌ಗಳನ್ನು ಬದಲಾಯಿಸಿದ್ದರಿಂದ ಇಂಧನ ಮಿತವ್ಯಯ ಸಾಧ್ಯವಾಗಿದೆ. ಆಡಳಿತದಲ್ಲಿ ಚುರುಕು ಮೂಡಿಸಲು ಕಳೆದ ವರ್ಷ 6 ಮಂದಿ ಸಂಚಾರ ನಿಯಂತ್ರಕರನ್ನು ವರ್ಗಾಯಿಸಿ, ಬಸ್‌ಗಳಲ್ಲಿ ಸೋರಿಕೆ ತಡೆಗಟ್ಟಲು ವಿಶೇಷ ತಪಾಸಣಾ ತಂಡಗಳ ಹೆಚ್ಚಳಗೊಳಿಸಿದೆ. ಸಿಬ್ಬಂದಿಗೆ ಉತ್ತೇಜಕ ಕ್ರಮಗಳಿಂದಾಗಿ ಸಂಸ್ಥೆ ವ್ಯಾಪ್ತಿಯಲ್ಲಿ ಕಳೆದ ಸಾಲಿನಲ್ಲಿ ಸಾಧಿಸಿದ್ದ 48 ಕೋಟಿ ಕಿ.ಮೀ ಸಂಚಾರ ಪ್ರಮಾಣ ಈ ಬಾರಿ 51 ಕೋಟಿ ಕಿ.ಮೀಗೆ ಹೆಚ್ಚಳಗೊಂಡಿದೆ ಎನ್ನುತ್ತಾರೆ.

ವಾಯವ್ಯ ಸಾರಿಗೆ ಸಂಸ್ಥೆಗೆ ಹೊಸದಾಗಿ 1600 ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. 800 ಬಸ್‌ಗಳನ್ನು ಹೆಚ್ಚಳಗೊಳಿಸಲಾಗಿದೆ. ಖಾಸಗಿ ಬಸ್‌ಗಳ ಸ್ವಾಮ್ಯ ಇದ್ದ ಮಾರ್ಗಗಳಾದ ಹುಬ್ಬಳ್ಳಿ-ಬೆಳಗಾವಿ, ಬಾಗಲಕೋಟೆ-ವಿಜಾಪುರ ಮಾರ್ಗಗಳಲ್ಲಿ ಸಂಸ್ಥೆಯ ಬಸ್‌ಗಳನ್ನು ಹೆಚ್ಚಿಸಲಾಗಿದೆ.

ನಗರ ಪ್ರದೇಶಗಳ 20 ಕಿ.ಮೀ ವ್ಯಾಪ್ತಿಯಲ್ಲಿ ನಗರ ಸಾರಿಗೆ ಬಸ್‌ಗಳನ್ನು ಓಡಿಸಲಾಗುತ್ತಿದೆ.  ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿ 16 ಬಸ್‌ಗಳನ್ನು ಹೆಚ್ಚಿಸಲಾಗಿದ್ದು, ಹುಬ್ಬಳ್ಳಿ-ತಡಸ, ಬಾಗಲಕೋಟೆ-ಗದ್ದನಕೇರಿ, ಗುಳೇದಗುಡ್ಡ-ಬಾದಾಮಿ, ಹುಲಕೋಟಿ-ಗದಗ ನಡುವೆ ಬಸ್‌ಗಳ ಸಂಖ್ಯೆ ಹೆಚ್ಚಿಸಿದ್ದು ಆದಾಯ ಹೆಚ್ಚಳಕ್ಕೆ ಕಾರಣವಾಯಿತು ಎಂದು ಸಾವಕಾರ ಹೇಳುತ್ತಾರೆ.

ಸೇವೆಯಿಂದ ವಜಾ: ಪ್ರಸಕ್ತ ಸಾಲಿನಲ್ಲಿ ಅವ್ಯವಹಾರ ಹಾಗೂ ಅಶಿಸ್ತು ತೋರಿದ 498 ಮಂದಿ ಚಾಲಕರು ಹಾಗೂ ನಿರ್ವಾಹಕರು, ನಾಲ್ವರು ಭದ್ರತಾ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸ ಲಾಗಿದೆ. ಹುಬ್ಬಳ್ಳಿ ಪ್ರಾದೇಶಿಕ ಕಾರ್ಯಾ ಗಾರದ ಮೂವರು ಸಿಬ್ಬಂದಿ ಹಾಗೂ ಇಬ್ಬರು ಡಿಪೋ ವ್ಯವಸ್ಥಾಪಕರನ್ನು ಅಮಾನತ್ತುಗೊಳಿಸಿದೆ.

ಸೇವೆಯಿಂದ ವಜಾಗೊಂಡವರಲ್ಲಿ ಬೆಳಗಾವಿ ಡಿಪೋ ವ್ಯಾಪ್ತಿಯ 103 ಸಿಬ್ಬಂದಿ, ಹುಬ್ಬಳ್ಳಿಯಲ್ಲಿ 94, ಉತ್ತರ ಕನ್ನಡದಲ್ಲಿ 22, ಬಾಗಲಕೋಟೆಯಲ್ಲಿ 72, ಗದಗದಲ್ಲಿ 37, ಚಿಕ್ಕೋಡಿಯಲ್ಲಿ 70 ಹಾಗೂ ಹಾವೇರಿ ಡಿಪೋ ವ್ಯಾಪ್ತಿಯ 100 ಸಿಬ್ಬಂದಿ ಸೇರಿದ್ದಾರೆ.

ಗದಗ ಡಿಪೋದಲ್ಲಿ ಗುಜರಿ ಸಾಮಗ್ರಿಗಳ ಮಾರಾಟದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಾಲ್ವರು ಭದ್ರತಾ ಅಧಿಕಾರಿಗಳು ಶಿಕ್ಷೆಗೆ ಒಳಗಾಗಿದ್ದಾರೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಥಣಿ ಹಾಗೂ ಚಿಕ್ಕೋಡಿ ಡಿಪೊ ವ್ಯವಸ್ಥಾಪಕರನ್ನು ಅಮಾನತು ಮಾಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT