ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎ ಅಧಿಕಾರಕ್ಕೆ: ರಾಜನಾಥಸಿಂಗ್ ವಿಶ್ವಾಸ

Last Updated 23 ಏಪ್ರಿಲ್ 2013, 8:44 IST
ಅಕ್ಷರ ಗಾತ್ರ

ಬಳ್ಳಾರಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆಯಲಿದ್ದು, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥಸಿಂಗ್ ತಿಳಿಸಿದರು.

ಜಿಲ್ಲೆಯ ಹೊಸಪೇಟೆಯಲ್ಲಿ ಸೋಮವಾರ ಪಕ್ಷದ ಅಭ್ಯರ್ಥಿ ಆನಂದಸಿಂಗ್ ಪರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸ್ವಾತಂತ್ರ್ಯಾನಂತರ ಅನೇಕ ಪಕ್ಷಗಳು ಹುಟ್ಟಿಕೊಂಡಷ್ಟೇ ವೇಗದಲ್ಲಿ ಸತ್ತೂ ಹೋದವು. ಆದರೆ, ಕಾಂಗ್ರೆಸ್‌ಗೆ ಸರಿಸಾಟಿಯಾಗಿ ಕೇವಲ ಬಿಜೆಪಿ ಮಾತ್ರ ಉಳಿದುಕೊಂಡಿದೆ ಎಂದರು.

ಬಿಜೆಪಿ ಸದಾ ನ್ಯಾಯಸಮ್ಮತ ಹಾಗೂ ಜನಪರ ಆಡಳಿತ ನೀಡಿದೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿತ್ತು. ಆದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕದೆ, ಜನಸಾಮಾನ್ಯರ ಜೀವನ ದುಸ್ತರವಾಗುವಂತೆ ಮಾಡಿದೆ ಎಂದು ಅವರು ದೂರಿದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದ ರೈತರಿಗೆ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯವನ್ನೂ ನೀಡಿರುವ ಹೆಗ್ಗಳಿಕೆ ಬಿಜೆಪಿಯದ್ದಾಗಿದೆ. ಭ್ರಷ್ಟಾ ಚಾರವನ್ನು ವಿರೋಧಿಸುತ್ತಲೇ ಬಂದಿ ರುವ ಬಿಜೆಪಿ ಆ ಕಾರಣದಿಂದಲೇ ಅನೇಕರನ್ನು ಪ್ರಮುಖ ಸ್ಥಾನಗಳಿಂದ ಕೆಳಗಿಳಿಸಿತು ಎಂದು ಅವರು ಹೇಳಿದರು.

`ಹೊಸಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಯಾರೂ ಸತತವಾಗಿ ಎರಡು ಬಾರಿ ಜಯಿಸಿ ಶಾಸಕರಾಗಿರುವ ಉದಾಹರಣೆಗಳೇ ಇಲ್ಲ. ಆದರೆ, ಮತದಾರರು ವಿಜಯನಗರ ಕ್ಷೇತ್ರದಲ್ಲಿ ಎರಡನೇ ಬಾರಿಗೆ ನನ್ನನ್ನು ಆಯ್ಕೆ ಮಾಡುವ ಮೂಲಕ ಆ ಕೊರತೆಯನ್ನು ನೀಗಿಸಲಿದ್ದಾರೆ' ಎಂದು ಅಭ್ಯರ್ಥಿ ಆನಂದಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ನಾರಾಣಸಾ ಭಾಂಡಗೆ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಜನಾಬ ಹಂಡೇ ವಾಲಾ, ಆರ್.ಕೊಟ್ರೇಶ, ಜೆ.ಎನ್. ವೆಂಕೋಬಣ್ಣ, ಬಾಬುಲಾಲ್ ಜೈನ್, ಅಶೋಕ ಜೀರೆ ಮತ್ತಿತರರು ಉಪಸ್ಥಿತರಿದ್ದರು.

`ಅಡ್ವಾಣಿ ವಿರುದ್ಧ ಆರೋಪ ನಿರಾಧಾರ'
ಬಳ್ಳಾರಿ: ಮಾಜಿ ಉಪಪ್ರಧಾನಿ, ಬಿಜೆಪಿಯ ಹಿರಿಯ ಮುಖಂಡ ಲಾಲಕೃಷ್ಣ ಅಡ್ವಾಣಿ ಅವರ ವಿರುದ್ಧ ಮಾಜಿ ಸಂಸದ, ಕೆಜೆಪಿಯ ಧನಂಜಯ ಕುಮಾರ್ ಮಾಡಿರುವ ಲಂಚ ಸ್ವೀಕಾರ ಆರೋಪ ನಿರಾಧಾರ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಹೇಳಿದರು.

ಜಿಲ್ಲೆಯ ಹೊಸಪೇಟೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡ್ವಾಣಿ ಅವರು ಯಡಿಯೂರಪ್ಪ ಹಾಗೂ ಅವರ ಪುತ್ರರಿಂದ ಆಗಾಗ ಲಂಚ ಸ್ವೀಕರಿಸಿದ್ದಾರೆ ಎಂಬ ಧನಂಜಯಕುಮಾರ್ ಆರೋಪದಲ್ಲಿ ಹುರುಳಿಲ್ಲ. ಈ ಕುರಿತು ಸಾಕ್ಷಾಧಾರಗಳಿದ್ದರೆ ಪ್ರಸ್ತುತಪಡಿಸಲಿ ಎಂದು ಸವಾಲೆಸೆದರು.

ಹವಾಲಾ ಹಗರಣದಲ್ಲಿ ತಮ್ಮ ಹೆಸರು ಸೇರಿದೆ ಎಂಬ ಕಾರಣದಿಂದ ಈ ಹಿಂದೆ ಲೋಕಸಭೆ ಸದಸ್ಯತ್ವಕ್ಕೆ ರಾಜೀ ನಾಮೆ ಸಲ್ಲಿಸಿದ್ದ ಅಡ್ವಾಣಿ, ಆರೋಪ ಸುಳ್ಳು ಎಂದು ಸಾಬೀತಾದ ನಂತರವೇ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವವರು ಸೂಕ್ತ ಸಾಕ್ಷಾಧಾರಗಳನ್ನು ಇಟ್ಟುಕೊಂಡು ಮಾತನಾಡಬೇಕು ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಬಿ.ಎಸ್. ಯಡಿಯೂರಪ್ಪ ಹಾಗೂ ರೆಡ್ಡಿ ಸಹೋದರರು ಬಿಜೆಪಿಗೆ ಅನಿವಾರ್ಯವಲ್ಲ. ಅವರಿಲ್ಲದಿದ್ದರೂ ಪಕ್ಷ ಜಯಿಸಬಲ್ಲದು ಎಂದ ಅವರು, ಪಕ್ಷವು  ಭ್ರಷ್ಟಾಚಾರವನ್ನು ಸಹಿಸಿ ಕೊಳ್ಳುವ ಪ್ರಶ್ನೆಯೇ ಇಲ್ಲ. ಯಡಿಯೂ ರಪ್ಪ ಹಾಗೂ ರೆಡ್ಡಿ ಸಹೋದರರನ್ನು ಅಧಿಕಾರ ಸ್ಥಾನದಿಂದ ಕೆಳಗಿಳಿಸಿದ್ದೇ ಇದಕ್ಕೆ ಉತ್ತಮ ನಿದರ್ಶನ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT