ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಪಿಆರ್‌ ಗೊಂದಲ: ಸಾರ್ವಜನಿಕರ ಆಕ್ರೋಶ

Last Updated 16 ಡಿಸೆಂಬರ್ 2013, 6:20 IST
ಅಕ್ಷರ ಗಾತ್ರ

ಕಾರವಾರ: ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (ಎನ್‌ಪಿಆರ್‌) ಬಯೋಮೆಟ್ರಿಕ್‌ ಸಲ್ಲಿಸಲು ಬಂದಿದ್ದ ಜನರು ಕೇಂದ್ರದಲ್ಲಿ ಯಾವ ಸಿಬ್ಬಂದಿ ಇಲ್ಲದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆ ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಯ ಕೊಠಡಿಯೊಂದರಲ್ಲಿ ಕಳೆದ ಎರಡು ಭಾನುವಾರ ಸಾರ್ವಜನಿಕರಿಂದ ಎನ್‌ಪಿಆರ್‌ಗೆ ಬಯೋಮೆಟ್ರಿಕ್‌ ಪಡೆಯಲಾಗಿತ್ತು. ಇದನ್ನು ತಿಳಿದ ಜನರು ಭಾನುವಾರ ಬೆಳಿಗ್ಗೆ 6 ಗಂಟೆಯಿಂದಲೇ ಜಿಲ್ಲಾಧಿಕಾರಿಗೆ ಕಚೇರಿಗೆ ಬಂದು ಸರದಿ ಸಾಲಿನಲ್ಲಿ ನಿಂತಿದ್ದರು. ಚಿಕ್ಕ ಮಕ್ಕಳು, ನಡೆಯಲಾಗದ ವೃದ್ಧೆಯೊಬ್ಬರೂ ಸೇರಿದಂತೆ ನೂರಾರು ಜನರು ಜಮಾಯಿಸಿದ್ದರು. ಆದರೆ, ಸಮಯ 11 ಗಂಟೆಯಾದರೂ ನೋಂದಣಿ ಏಜೆನ್ಸಿಯ ಯಾವ ಸಿಬ್ಬಂದಿ ಬಂದಿರಲಿಲ್ಲ. ಕಾದು ಬಸವಳಿದ ಜನರು ಏಜೆನ್ಸಿ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೂ ಎತ್ತಲಿಲ್ಲ. ಇದರಿಂದ ಆಕ್ರೋಶಗೊಂಡ ನಾಗರಿಕರು ಇಲ್ಲಿನ ಅವ್ಯವಸ್ಥೆ ಬಗ್ಗೆ ಕಿಡಿಕಾರಿದರು.

‘ಈವರೆಗೆ ಆಧಾರ್‌ ಕಾರ್ಡ್‌ ಪಡೆಯದೇ ಇದ್ದವರು ಎನ್‌ಪಿಆರ್‌ಗೆ ಬಯೋಮೆಟ್ರಿಕ್ ಸಲ್ಲಿಸಿ ಸ್ವೀಕೃತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಹೇಳಿಕೆ ನೀಡಿರುವ ಸುದ್ದಿಯೊಂದು ಮೂರು ದಿನಗಳ ಹಿಂದೆ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿತ್ತು. ಅದರಂತೆ ನಾವು ಬೆಳಿಗ್ಗೆಯಿಂದಲೇ ನಾವು ಕೆಲಸ ಕಾರ್ಯಗಳನ್ನು ಬದಿಗೊತ್ತಿ ಕಾದು ಕುಳಿತ್ತಿದ್ದೇವೆ. ಆದರೆ, ಇಲ್ಲಿ ನೋಡಿದರೆ ಯಾವು ಸಿಬ್ಬಂದಿಯೂ ಇಲ್ಲ’ ಎಂದು ಸ್ಥಳೀಯರಾದ ಬಾಬು ಆಕ್ರೋಶ ವ್ಯಕ್ತಪಡಿಸಿದರು.

‘ಬಯೋಮೆಟ್ರಿಕ್‌ ನೋಂದಣಿ ಮಾಡಲಾಗುತ್ತಿದೆ ಎಂದು ತಿಳಿದು ಇಲ್ಲಿಗೆ ಬಂದಿದ್ದೇವೆ. ಇದಕ್ಕಾಗಿ ಮುಂಬೈನಲ್ಲಿರುವ ಮಗಳನ್ನು ಸಹ ಬರಮಾಡಿಕೊಂಡಿದ್ದೇನೆ. ಎಲ್‌ಪಿಜಿ ಹಾಗೂ ಸರ್ಕಾರದ ಯಾವುದೇ ಸೌಲಭ್ಯ ಪಡೆಯಬೇಕಾದರೂ ಆಧಾರ್‌ ಸಂಖ್ಯೆ ಕೇಳುತ್ತಾರೆ. ಆದರೆ ಇಲ್ಲಿ ಬೆಳಿಗ್ಗೆಯಿಂದ ಕಾದು ಕುಳಿತರೂ ಯಾವುದೇ ಪ್ರಯೋಜನವಾಗಲಿಲ್ಲ’ ಎಂದು ನೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೂಕ್ತ ಮಾಹಿತಿ’
ಆಧಾರ ಕಾರ್ಡ್‌ಗೆ ಈವರೆಗೆ ನೋಂದಣಿ ಮಾಡಿಕೊಳ್ಳದಿರುವ ಎಲ್‌ಪಿಜಿ ಗ್ರಾಹಕರು ಸಂಬಂಧಿಸಿದ ಗ್ಯಾಸ್ ಏಜೆನ್ಸಿಗೆ ಭೇಟಿಯಾಗಿ ಅಲ್ಲಿ ತೆರೆಯಲಾದ ನೋಂದಣಿ ಕೇಂದ್ರದಲ್ಲಿ ಎನ್‌ಪಿಆರ್‌ಗೆ ಬಯೋಮೆಟ್ರಿಕ್‌ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ನೀಡಲಾಗಿತ್ತು. ಆದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇನ್ನೂ ಯಾವುದೆ ನೋಂದಣಿ ಕೇಂದ್ರ ತೆರೆದಿಲ್ಲ. ಈ ಬಗ್ಗೆ ಗ್ಯಾಸ್‌ ಏಜೆನ್ಸಿಯೊಂದಿಗೆ ಚರ್ಚಿಸಿ ಜನರಿಗೆ ಸೂಕ್ತ ಮಾಹಿತಿ ನೀಡಲಾಗುವುದು.
ವಿಜಯ ಮಹಾಂತೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT