ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಟಿಸಿ: ಮನವೊಲಿಕೆಗೆ ಕಸರತ್ತು

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ ಸ್ಥಾಪನೆಗೆ (ಎನ್‌ಸಿಟಿಸಿ) ವಿರೋಧ ಹೆಚ್ಚುತ್ತಿದ್ದು, ಇದೀಗ ಈ ಸಾಲಿಗೆ ಕರ್ನಾಟಕ, ಜಮ್ಮು-ಕಾಶ್ಮೀರ ಹಾಗೂ ತ್ರಿಪುರ ಕೂಡ ಸೇರಿಕೊಂಡಿವೆ.

ವಿವಾದವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದನ್ನು ಅರಿತ ಕೇಂದ್ರವು, ಬಂಡೆದ್ದ ಮುಖ್ಯಮಂತ್ರಿಗಳ ಮನವೊಲಿಸುವ ಕಸರತ್ತು ನಡೆಸುತ್ತಿದ್ದು, ಈ ವಿಷಯದಲ್ಲಿ ರಾಜ್ಯಗಳ ಆತಂಕವನ್ನು ನಿವಾರಿಸುವುದಾಗಿ ಅಭಯ ನೀಡಿದೆ. ಈ ನಡುವೆ, ಎನ್‌ಸಿಟಿಸಿಯನ್ನು ಸಮರ್ಥಿಸಿಕೊಂಡಿರುವ ಗೃಹ ಕಾರ್ಯದರ್ಶಿ ವಿ.ಕೆ.ಸಿಂಗ್, `ರಾಜ್ಯಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಮುಂದಾದರೆ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗುತ್ತದೆ~ ಎಂದಿದ್ದಾರೆ.

ಕರ್ನಾಟಕವೂ ವಿರೋಧ
ಶಿವಮೊಗ್ಗ: ಕೇಂದ್ರ ಸರ್ಕಾರದ ಉದ್ದೇಶಿತ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ ಸ್ಥಾಪನೆಗೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಪ್ರಸ್ತಾಪವಾಗಿದೆ. ಈ ಮೂಲಕ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಲ್ಲಿ ನೇರ ಹಸ್ತಕ್ಷೇಪ ಮಾಡುವ ಕ್ರಮ ಸಲ್ಲದು ಎಂದು ಅವರು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಗಳ ಮೇಲೆ ಇದೊಂದು ಪರೋಕ್ಷ ಗದಾಪ್ರಹಾರ. ಈ ಕುರಿತು ನಮ್ಮಂತೆ ವಿರೋಧ ವ್ಯಕ್ತಪಡಿಸಿದ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು. ಸಾಧ್ಯವಾದರೆ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದು ಅವರು ಪ್ರತಿಕ್ರಿಯಿಸಿದರು.



`ಉಗ್ರರನ್ನು ದಮನ ಮಾಡುವುದು ಹಾಗೂ ಈ ವಿಷಯದಲ್ಲಿ ರಾಜ್ಯಗಳೊಂದಿಗೆ ಸಹಕರಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಪರಸ್ಪರ ಸಹಕಾರ ಇಲ್ಲದಿದ್ದರೆ ಇದರಲ್ಲಿ ನಾವು ಯಶ ಕಾಣುವುದಾರೂ ಹೇಗೆ~ ಎಂದು ಪ್ರಶ್ನಿಸಿದ್ದಾರೆ.

ಹರಿಯಾಣದ ಕರ್ನಾಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಗೃಹ ಸಚಿವಾಲಯ ಪ್ರಸ್ತಾಪಿಸಿರುವ ಈ ಕಾಯ್ದೆಯು 1967ರಿಂದ ಕಾನೂನು ಪುಸ್ತಕದಲ್ಲಿ ಇದೆ. 2004ರಲ್ಲಿ ಹಾಗೂ 2008ರಲ್ಲಿ ಕೆಲವು ತಿದ್ದುಪಡಿಗಳು ಆಗಿದ್ದವು. ಕಾಯ್ದೆಯು ಸಾಕಷ್ಟು ಚರ್ಚೆಗೆ ಒಳಪಟ್ಟಿದೆ~ ಎಂದು ವಿವರಿಸಿದರು.

ಮತ್ತೊಂದೆಡೆ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಭದ್ರತಾ ಸಂರಕ್ಷಣಾ ಕೇಂದ್ರದ (ಎನ್‌ಎಸ್‌ಜಿ) ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಪಿ.ಚಿದಂಬರಂ, `ದೇಶದ ಸಂವಿಧಾನವು ಕಾನೂನು ಹಾಗೂ ಸುವ್ಯವಸ್ಥೆ ನಿರ್ವಹಣೆಯನ್ನು ರಾಜ್ಯಗಳಿಗೆ ವಹಿಸಿಕೊಟ್ಟಿದೆ. ಇದೇ ವೇಳೆ ಬಾಹ್ಯ ಅಥವಾ ಆಂತರಿಕ ಆಕ್ರಮಣಗಳಿಂದ ದೇಶವನ್ನು ರಕ್ಷಿಸುವ ಕೆಲಸವನ್ನು ಕೇಂದ್ರಕ್ಕೆ ನೀಡಿದೆ. ಸಂವಿಧಾನದ 355ನೇ ಪರಿಚ್ಛೇದದ ಪ್ರಕಾರ ರಾಷ್ಟ್ರೀಯ ಹಾಗೂ ಆಂತರಿಕ ಭದ್ರತೆಯು ಸಮಾನ ಹೊಣೆಗಾರಿಕೆಯಾಗಿದೆ~ ಎಂದು ಹೇಳಿದ್ದಾರೆ.

`ಭಯೋತ್ಪಾದನೆಯನ್ನು ನಿಯಂತ್ರಿಸಲು ರಾಜ್ಯಗಳೊಂದಿಗೆ ಕೆಲಸ ಮಾಡುವುದು ನನ್ನ ಜವಾಬ್ದಾರಿಯಾಗಿದೆ~ ಎಂದೂ ಸಚಿವರು ಈ ಸಂದರ್ಭದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಗೈರುಹಾಜರಿ ಎದ್ದು ಕಾಣುತ್ತಿತ್ತು.

ಚಿದಂಬರಂ ಅವರು ತಮ್ಮ ಚುಟುಕು ಭಾಷಣದಲ್ಲಿ ಎಲ್ಲಿಯೂ ಎನ್‌ಸಿಟಿಸಿ ವಿವಾದವನ್ನು ಪ್ರಸ್ತಾಪಿಸಲಿಲ್ಲ. ಅಲ್ಲದೇ ಇದಕ್ಕೆ ಮುಖ್ಯಮಂತ್ರಿಗಳಿಂದ ವ್ಯಕ್ತವಾದ ವಿರೋಧದ ಬಗ್ಗೆಯೂ ಚಕಾರ ಎತ್ತಲಿಲ್ಲ.

`ಅನುಮಾನ ಪರಿಹರಿಸಿ~: ಯುಪಿಎ ಮತ್ತೊಂದು ಅಂಗಪಕ್ಷ ನ್ಯಾಶನಲ್ ಕಾನ್ಫರೆನ್ಸ್ ಕೂಡ ಎನ್‌ಸಿಟಿಸಿಗೆ ವಿರೋಧ ವ್ಯಕ್ತಪಡಿಸುತ್ತಿರುವಂತಿದೆ.

ಈ ವಿಷಯದಲ್ಲಿ ಹಲವಾರು ಮುಖ್ಯಮಂತ್ರಿಗಳು ಎತ್ತಿರುವ ಆತಂಕಕ್ಕೆ ದನಿಗೂಡಿಸಿರುವ ನ್ಯಾಶನಲ್ ಕಾನ್ಫರೆನ್ಸ್ ಮುಖಂಡ, ನವೀನ ಹಾಗೂ ಪುನರ್ ಬಳಕೆ ಇಂಧನ ಸಚಿವ ಫಾರೂಕ್ ಅಬ್ದುಲ್ಲ, ಎನ್‌ಸಿಟಿಸಿ ವಿಷಯದಲ್ಲಿ ಗೃಹ ಸಚಿವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾಗುತ್ತದೆ ಎಂದಿದ್ದಾರೆ.

ಅಪಸ್ವರ: ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಕೂಡ ಎನ್‌ಸಿಟಿಸಿಗೆ ಅಪಸ್ವರ ಎತ್ತಿದ್ದಾರೆ. ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಇಂಥ ಕೇಂದ್ರವನ್ನು ಸ್ಥಾಪಿಸುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು ಎಂದಿದ್ದಾರೆ.
 
ಸಭೆಗೆ ಆಗ್ರಹ: ಎನ್‌ಸಿಟಿಸಿ ವಿಷಯ ಚರ್ಚಿಸಲು ಅಂತರ್ ರಾಜ್ಯ ಮಂಡಳಿ ಸಭೆ ಕರೆಯುವಂತೆ ಕೇಂದ್ರವನ್ನು ಬಿಜೆಪಿ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT