ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಅಧಿಕಾರ ಬಿಜೆಪಿ ತೆಕ್ಕೆಗೆ

Last Updated 2 ಜೂನ್ 2011, 6:15 IST
ಅಕ್ಷರ ಗಾತ್ರ

ದಾವಣಗೆರೆ: ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರ ಬಿಜೆಪಿ ಪಾಲಾಗಿದೆ. ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಬಾಡ ಕ್ಷೇತ್ರದ ಬಿಜೆಪಿ ಬೆಂಬಲಿತ ಬಸವರಾಜಯ್ಯ ಅವರು ಅಧ್ಯಕ್ಷರಾಗಿ, ದೊಡ್ಡಬಾತಿ ಕ್ಷೇತ್ರದ ಶಿವಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಬಸವರಾಜಯ್ಯ ಅವರ ವಿರುದ್ಧ ಕಾಂಗ್ರೆಸ್ ಬೆಂಬಲಿತ ಬಿ. ಪ್ರಭು ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಅಣಜಿ ಚಂದ್ರಶೇಖರ್ ಅವರು ಶಿವಕುಮಾರ್ ವಿರುದ್ಧ ಕಣಕ್ಕಿಳಿದಿದ್ದರು. ಬುಧವಾರ ಬೆಳಿಗ್ಗೆ 10ರಿಂದ ನಾಮಪತ್ರ ಸಲ್ಲಿಕೆ ನಡೆದು 2.30ರ ವೇಳೆಗೆ ಚುನಾವಣಾ ಪ್ರಕ್ರಿಯೆ ಮುಗಿದು ಅಧ್ಯಕ್ಷರ ಆಯ್ಕೆ ಬಗ್ಗೆ ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ಘೋಷಣೆ ಮಾಡಿದರು.

ಬಸವರಾಜಯ್ಯ ಹಾಗೂ ಶಿವಕುಮಾರ್ ಅವರು ತಲಾ 8 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಒಟ್ಟು 15 ಸದಸ್ಯ ಬಲದ ಎಪಿಎಂಸಿಯಲ್ಲಿ ಮೂವರು ನಾಮನಿರ್ದೇಶಿತ ಸದಸ್ಯರ ಸಹಿತ 8 ಬಿಜೆಪಿ ಬೆಂಬಲಿತ, 7 ಮಂದಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಸದಸ್ಯರು ಇದ್ದಾರೆ.

ರೈತರಿಗೆ ಎಪಿಎಂಸಿಯ ಸೌಲಭ್ಯಗಳನ್ನು ಗರಿಷ್ಠ ಪ್ರಮಾಣದಲ್ಲಿ ಒದಗಿಸಲು ಪ್ರಯತ್ನಿಸಲಾಗುವುದು. ಎಲ್ಲ ನಿರ್ದೇಶಕರ ಜತೆ ಚರ್ಚಿಸಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತೇನೆ.

ತಮ್ಮ ಕ್ಷೇತ್ರದ ರೈತರಿಗೆ ಸಹಕಾರಿಯಾಗುವ ರೀತಿ ಕಾರ್ಯ ನಿರ್ವಹಿಸುತ್ತೇನೆ ಎಂದು ನೂತನ ಅಧ್ಯಕ್ಷ ಬಸವರಾಜಯ್ಯ ತಿಳಿಸಿದರು.

ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಬಳಿಕ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ನೂತನ ಅಧ್ಯಕ್ಷರ ಅವಧಿ 10 ತಿಂಗಳ ಕಾಲ ಇರಲಿದೆ.

ಹೊನ್ನಾಳಿ ವರದಿ: ತಾಲ್ಲೂಕು ಎಪಿಎಂಸಿ ಅಧ್ಯಕ್ಷರಾಗಿ ಚೀಲೂರು ಕ್ಷೇತ್ರದ ಬಿಜೆಪಿ ಬೆಂಬಲಿತ ಡಿ.ಜಿ. ಸೋಮಶೇಖರಪ್ಪ ಮತ್ತು ಉಪಾಧ್ಯಕ್ಷೆಯಾಗಿ ಹಿರೇಗೋಣಿಗೆರೆ ಕ್ಷೇತ್ರದ ಬಿಜೆಪಿ ಬೆಂಬಲಿತ ರೇವಮ್ಮ ನಾಗಪ್ಪ ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಡಿ.ಜಿ. ಸೋಮಶೇಖರಪ್ಪ ವಿರುದ್ಧ ಕಾಂಗ್ರೆಸ್‌ನ ನುಚ್ಚಿನ ವಾಗೀಶ್ ಸ್ಪರ್ಧಿಸಿದ್ದರು. ಸೋಮಶೇಖರಪ್ಪ 9 ಮತಗಳನ್ನು ಪಡೆದು ವಿಜಯಿಯಾದರು. ವಾಗೀಶ್ ಅವರು 2 ಮತಗಳನ್ನು ಪಡೆದು ಪರಾಭವಗೊಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ರೇವಮ್ಮ ನಾಗಪ್ಪ ವಿರುದ್ಧ ಕಾಂಗ್ರೆಸ್‌ನ ಲಕ್ಷ್ಮಣ್ ನಾಯ್ಕ ಸ್ಪರ್ಧಿಸಿದ್ದರು. ರೇವಮ್ಮ ನಾಗಪ್ಪ 9 ಮತಗಳನ್ನು ಪಡೆದು ವಿಜಯಿಯಾದರು. ಲಕ್ಷ್ಮಣ್ ನಾಯ್ಕ ಅವರು 2 ಮತಗಳನ್ನು ಪಡೆದು ಪರಾಭವಗೊಂಡರು.

ತಹಶೀಲ್ದಾರ್ ಎ.ಎಂ. ಶೈಲಜಾ ಪ್ರಿಯದರ್ಶಿನಿ ಚುನಾವಣಾಧಿಕಾರಿಯಾಗಿ ಪಾಲ್ಗೊಂಡಿದ್ದರು. 
ಚನ್ನಗಿರಿ ವರದಿ: ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಬುಧವಾರ ಎಪಿಎಂಸಿ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಚನ್ನಗಿರಿ ಕ್ಷೇತ್ರದಿಂದ ಆಯ್ಕೆಯಾದ ಎಂ.ಎನ್. ಮರುಳಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವಡ್ನಾಳ್ ಕ್ಷೇತ್ರದ ಎನ್.ಎಸ್. ಗಂಗಾಧರಪ್ಪ ಇಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಎಚ್.ಎಂ. ರೇವಣಸಿದ್ದಪ್ಪ ಘೋಷಿಸಿದರು.

13 ಚುನಾಯಿತ ಸದಸ್ಯರು ಹಾಗೂ 3 ನಾಮ ನಿರ್ದೇಶಿತ ಸದಸ್ಯರು ಸೇರಿ ಒಟ್ಟು 16 ಸದಸ್ಯ ಬಲವುಳ್ಳ ಎಪಿಎಂಸಿ ಯಲ್ಲಿ ಬಿಜೆಪಿ ಬಲ 14. ಕಾಂಗ್ರೆಸ್ ಕೇವಲ 2 ಸದಸ್ಯರನ್ನು ಮಾತ್ರ ಹೊಂದಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲಾ 16 ಸದಸ್ಯರು ಹಾಜರಿದ್ದರು. ಮೊಟ್ಟ ಮೊದಲ ಬಾರಿಗೆ ಬಿಜೆಪಿ ಎಪಿಎಂಸಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

ಅಭಿನಂದನೆ: ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಲ್.ಪಿ. ಚಿದಾನಂದಮೂರ್ತಿ, ತಾಲ್ಲೂಕು ಅಧ್ಯಕ್ಷ ವಡ್ನಾಳ್ ರುದ್ರಸ್ವಾಮಿ, ಸಿದ್ದೇಶ್, ಮುದಿಗೆರೆ ಲೋಕೇಶಪ್ಪ, ತುಮ್ಕೊಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಸಿದ್ದೇಶ್, ರಾಮಚಂದ್ರಪ್ಪ, ಬಳ್ಳಾರಿ ರುದ್ರಪ್ಪ ಸೇರಿದಂತೆ ಅನೇಕ ಮುಖಂಡರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT