ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ: ದಿಢೀರ್ ವ್ಯಾಪಾರ ಸ್ಥಗಿತ- ರೈತರ ಪರದಾಟ

Last Updated 18 ಫೆಬ್ರುವರಿ 2011, 7:15 IST
ಅಕ್ಷರ ಗಾತ್ರ

ಹರಪನಹಳ್ಳಿ: ಹಮಾಲರು ಲಭ್ಯವಿಲ್ಲದ ನೆಪವೊಡ್ಡಿ ವರ್ತಕರು ದಿಢೀರ್ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ ಪರಿಣಾಮ ಉತ್ಪನ್ನಗಳ ಮಾರಾಟಕ್ಕೆಂದು ಪ್ರಾಂಗಣಕ್ಕೆ ಬಂದಿದ್ದ ರೈತರು ಪರದಾಟ ನಡೆಸಿ, ವರ್ತಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ಪಟ್ಟಣದಲ್ಲಿ ನಡೆದಿದೆ.ಟ್ರ್ಯಾಕ್ಟರ್, ಗೂಡ್ಸ್ ಆಟೋಗಳನ್ನು ಬಾಡಿಗೆ ಮಾಡಿಕೊಂಡು ಉತ್ಪನ್ನಗಳನ್ನು ಮಾರಾಟಕ್ಕೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತಂದಿದ್ದಾರೆ. ಆದರೆ, ಮಧ್ಯಾಹ್ನ 12ಗಂಟೆಯಾದರೂ ಯಾರೊಬ್ಬರ ಅಂಗಡಿಯೂ ಬಾಗಿಲು ತೆರೆಯದ ಕಾರಣ, ಸಿಟ್ಟಿಗೆದ್ದ ರೈತರು ವರ್ತಕರ ಧೋರಣೆ ಖಂಡಿಸಿದ್ದಾರೆ.

ಆಗ ವರ್ತಕರು, ಹಮಾಲರು ಕೆಲಸಕ್ಕೆ ಬಂದಿಲ್ಲ. ಹಾಗಾಗಿ, ವಹಿವಾಟು ನಿಲ್ಲಿಸಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ. ಇದರಿಂದ ಕೋಪಗೊಂಡ ರೈತರು ನೀವು ಮೊದಲೇ ಪ್ರಕಟಿಸಬೇಕಿತ್ತು. ಈಗ ನಾವು ಟ್ರ್ಯಾಕ್ಟರ್, ಆಟೋಗಳನ್ನು ಬಾಡಿಗೆ ಮಾಡಿಕೊಂಡು ಎಪಿಎಂಸಿಗೆ ಬಂದಿದ್ದೇವೆ. ಹೀಗಾದರೆ ನಮ್ಮ ಗತಿ ಏನು?, ಬಾಡಿಗೆದಾರರಿಗೆ ಏನು ಹೇಳಬೇಕು?, ಹಮಾಲರು ಕೆಲಸಕ್ಕೆ ಬರುವವರೆಗೂ ನಾವು ಇಲ್ಲಿಯೇ ಕೊಳೆಯಬೇಕಾ? ಇತ್ಯಾದಿಯಾಗಿ ವರ್ತಕರ ವಿರುದ್ಧ ಸಿಡಿದೆದಿದ್ದಾರೆ. ಇದರಿಂದ ಕೆಲಕಾಲ ಎಪಿಎಂಸಿ ಪ್ರಾಂಗಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ನಂತರ ಪೊಲೀಸರು ಮತ್ತು ಆಡಳಿತ ಮಂಡಳಿಯ ಮಧ್ಯಪ್ರವೇಶದಿಂದ ವಾತಾವರಣ ತಿಳಿಯಾಯಿತು. ವ್ಯಾಪಾರ ಆರಂಭಿಸುವಂತೆ ಸೂಚಿಸಿ, ಸಂಜೆ ಆಡಳಿತ ಮಂಡಳಿ ಮತ್ತು ವರ್ತಕರ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಆದು ಬಿಟ್ಟು ಈ ರೀತಿಯಾಗಿ ವರ್ತಿಸುವುದು ಸರಿಯಲ್ಲ ಎಂದು ತಿಳಿಸಿದ ಹಿನ್ನೆಲೆಯಲ್ಲಿ ವ್ಯಾಪಾರ ಆರಂಭವಾಯಿತು.ನಂತರ ಸಾಯಂಕಾಲ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎಂ. ಬಸವರಾಜಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಈಗ ಅನ್ ಸೀಜೆನ್ ಇರುವ ಕಾರಣ ಟೆಂಡರ್ ಪದ್ಧತಿಯನ್ನು ಕೈಬಿಟ್ಟು, ಬರುವ ಆಗಸ್ಟ್ ನಂತರ ಪದ್ಧತಿಯನ್ನು ಜಾರಿಮಾಡುವಂತೆ ವರ್ತಕರ ಸಂಘದ ಪ್ರತಿನಿಧಿ ಹೇಳಿದರು.ಎಪಿಎಂಸಿ ಕಾಯ್ದೆಯ ಅನ್ವಯ ಪದ್ಧತಿಯನ್ನು ಜಾರಿಗೊಳಿಸಲಾಗಿದೆ. ವಾರದಲ್ಲಿ ಕೆಲಸದ ಎಲ್ಲಾ ದಿನಗಳಲ್ಲಿಯೂ ಪದ್ಧತಿ ಅನ್ವಯವಾಗುತ್ತಿದೆ. ಆದರೆ, ವರ್ತಕರ ವಿಲೇವಾರಿ ಪ್ರಕ್ರಿಯೆಗೆ ಅನುಕೂಲ ಒದಗಿಸುವ ದೃಷ್ಟಿಯಿಂದ ಮೂರು ದಿನಗಳು ಮಾತ್ರ ಟೆಂಡರ್ ಪದ್ಧತಿಗೆ ಅವಕಾಶ ನೀಡಲಾಗಿತ್ತು ಎಂದು ಅಧ್ಯಕ್ಷ ಬಸವರಾಜಯ್ಯ ತಿಳಿಸಿದರು.

ಅಲ್ಲದೇ, ರೈತರು ಮಾರಾಟಕ್ಕೆ ಬಂದಾಗ ಅವರು ಖುಷಿಯಿಂದ ಬಿಟ್ಟುಕೊಟ್ಟಷ್ಟು ದವಸ-ಧಾನ್ಯಗಳನ್ನು ಹಮಾಲರು ತೆಗೆದುಕೊಳ್ಳಬೇಕೇ ಹೊರತು, ಬಲವಂತವಾಗಿ ಅವರಿಗೆ ಹಿಂಸೆ ಮಾಡಬಾರದು ಎಂದು ಸೂಚಿಸಿದರು.ಮಧ್ಯ ಪ್ರವೇಶಿಸಿದ ಜಿಲ್ಲಾ ಕೃಷಿ ಮಾರುಕಟ್ಟೆ ಉಪ ನಿರ್ದೇಶಕ ಹೊಳೆಬಸಪ್ಪ ಬಳಿಗಾರ್, ಎಪಿಎಂಸಿ ಕಾಯ್ದೆಯ ಅನ್ವಯ ಕಾರ್ಯದ ಎಲ್ಲಾ ದಿನಗಳಲ್ಲಿಯೂ ಟೆಂಡರ್ ಪದ್ಧತಿಯನ್ನು ಜಾರಿತರಲಾಗುವುದು. ಇದರಲ್ಲಿ ಯಾವುದೇ ರಾಜೀ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರಿಂದ, ಅನಿವಾರ್ಯವಾಗಿ ವರ್ತಕರು ಸುಮ್ಮನಾದರು.

ಎಪಿಎಂಸಿ ಕಾರ್ಯದರ್ಶಿ ರಹಮತ್‌ಉಲ್ಲಾ, ಉಪಾಧ್ಯಕ್ಷ ಸಣ್ಣಹಾಲಪ್ಪ, ನಿರ್ದೇಶಕರಾದ ಕಾನಹಳ್ಳಿ ರುದ್ರಪ್ಪ, ಪೂಜಾರ್ ಕೊಟ್ರಪ್ಪ, ಜಿ. ಮಂಜುನಾಥ, ಎಚ್. ನಾಗರಾಜ, ವರ್ತಕರ ಸಂಘದ ಪ್ರತಿನಿಧಿ ಗೌತಮಚಂದ್, ಹಾಗೂ ವರ್ತಕರ ಸಂಘದ ಪದಾಧಿಕಾರಿಗಳು ಹಾಗೂ ಹಮಾಲರ ಸಂಘದ ಅಧ್ಯಕ್ಷ ಉಚ್ಚೆಂಗೆಪ್ಪ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT