ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿಯಲ್ಲಿ ರೈತರಿಗೆ ಕುಡಿಯಲು ನೀರೇ ಇಲ್ಲ!

Last Updated 11 ಏಪ್ರಿಲ್ 2011, 9:20 IST
ಅಕ್ಷರ ಗಾತ್ರ

ಯಾದಗಿರಿ: “ಏನಪಾ ಎಣ್ಣಾ ಎತ್ತ ಯಾದಗಿರಿಗೆ ಹೊಂಟಿ ಏನೋ? ಶೇಂಗಾ ಹಚ್ಚಾಗ ಹೊಂಟಂಗ ಐತಿ. ಯಾದಗಿರಿ ಎಪಿಎಂಸಿಗೆ ಒಯ್ಯಾಕತ್ತಿ ಏನು? ಯಾದಗಿರಿ ಎಪಿಎಂಸಿಗೆ ಹೋಗೂದಾದ್ರ, ಏನ ಮರತರೂ ನೀರಿನ ಬಾಟಲಿ ಮಾತ್ರ ಮರಿಬ್ಯಾಡ ನೋಡ”

ಯಾದಗಿರಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೋಗುವ ರೈತರಿಗೆ ಗ್ರಾಮಸ್ಥರು ನೀಡುವ ಸಲಹೆ ಇದು. ಎಪಿಎಂಸಿ ಆವರಣದಲ್ಲಿ ಇರುವ ನೀರಿನ ವ್ಯವಸ್ಥೆಯನ್ನು ವಿವರಿಸಲು ಈ ಮಾತೊಂದೆ ಸಾಕಾಗುತ್ತದೆ. ನಿತ್ಯವೂ ಇಲ್ಲಿಗೆ ಬರುವ ರೈತರು ಕುಡಿಯುವ ನೀರಿಗಾಗಿ ಪರದಾಡುವುದು ಮಾತ್ರ ತಪ್ಪುತ್ತಿಲ್ಲ. ದವಸ ಧಾನ್ಯಗಳನ್ನು ತರುವುದರ ಜೊತೆಗೆ ಕುಡಿಯುವ ನೀರಿಗೂ ವ್ಯವಸ್ಥೆ ಮಾಡಿಕೊಂಡೇ ಬರಬೇಕಾದ ಅನಿವಾರ್ಯತೆ ರೈತರದ್ದು.

ಬೆಳಿಗ್ಗೆ ಟಂಟಂ, ಚಕ್ಕಡಿಗಳಲ್ಲಿ ಕಾಳುಗಳನ್ನು ಹಾಕಿಕೊಂಡು ಎಪಿ ಎಂಸಿಗೆ ಬರುವ ರೈತರು, ರೇಟು ಸಿಗುವವರೆಗೂ ಇಲ್ಲಿ ಕಾಯಬೇಕು. ಅದಕ್ಕಾಗಿಯೇ ಬಹುತೇಕ ರೈತರು ರೊಟ್ಟಿ ಗಂಟನ್ನು ಜೊತೆಗೆ ತೆಗೆದು ಕೊಂಡು ಬರುತ್ತಾರೆ. ಕುಳಿತುಕೊಂಡು ಊಟ ಮಾಡಲು ಸಾಕಷ್ಟು ಜಾಗ ವಿದೆ. ನೆರಳೂ ಇದೆ. ಆದರೆ ಬಾಯಾ ರಿಕೆ ನೀಗಿಸಲು ನೀರಿನ ವ್ಯವಸ್ಥೆಯೇ ಇಲ್ಲದಿರುವುದು ತೊಂದರೆಗೆ ಕಾರಣವಾಗಿದೆ.

ಇದೀಗ ಬಿರು ಬೇಸಿಗೆ ಆರಂಭ ವಾಗಿದೆ. ದಾಹವೂ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿಯೂ ನೀರಿನ ಸೌಕರ್ಯ ಕೊಡದಿದ್ದರೆ ಹೇಗೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ರೂ.1.60 ಲಕ್ಷ ಖರ್ಚು ಮಾಡಿ, ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿದೆ. ಮೇಲೆ ಟ್ಯಾಂಕ್ ಕೂಡ್ರಿಸಲಾಗಿದೆ. ಕೆಳಗೆ ನಳವನ್ನು ಜೋಡಣೆ ಮಾಡಿ, ರೈತರಿಗೆ ನೀರು ಕುಡಿಯಲು ಅನುಕೂಲ ಕಲ್ಪಿಸ ಲಾಗಿದೆ. ಆದರೆ ಇದೀಗ ಅದಾವುದೂ ಕೆಲಸ ಮಾಡುತ್ತಲೇ ಇಲ್ಲ. ಹಾಕಿದ ರೂ.1.60 ಲಕ್ಷ ಕೂಡ ವ್ಯರ್ಥವಾಗಿ ನಿಂತಿದೆ.

ಇನ್ನೊಂದೆಡೆ ಖಾಸಗಿ ಸಂಘ-ಸಂಸ್ಥೆ ಯವರು ನಿರ್ಮಿಸಿಕೊಟ್ಟಿದ್ದ ಅರವಟ್ಟಿಗೆಯೂ ನಿರ್ವಹಣೆ ಇಲ್ಲದೇ ವ್ಯರ್ಥವಾಗಿ ನಿಂತಿದೆ. ಈ ಅರವಟ್ಟಿಗೆ ಯನ್ನು ನಿರ್ಮಿಸಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಹಸ್ತಾಂತರಿ ಸಲಾಗಿತ್ತು. ಆದರೆ ವಿದ್ಯುತ್ ಬಿಲ್ ತುಂಬದ್ದರಿಂದ, ಸಂಪರ್ಕ ಕಡಿತ ಗೊಂಡಿದೆ. ಹೀಗಾಗಿ ಈ ಅರವಟ್ಟಿಗೆ ಯನ್ನು ನೀರು ಬರದಂತಾಗಿದೆ.

“ಈಗ ಬಿಸಲ ಬ್ಯಾರೆ ಜಾಸ್ತಿ ಆಗೇತಿ. ಮಧ್ಯಾಹ್ನ ಆತು ಅಂದ್ರ, ನೀರಡಿಕೆ ಚಾಲೂ ಆಗ್ತೈತಿ. ನಾವ ಮುಂಜಾನೆ ಮನಿ ಬಿಟ್ಟ ಇಲ್ಲಿಗೆ ಬಂದಿರ್ತೇವ್ರ. ರೊಟ್ಟಿ ಗಂಟೂ ತಂದಿರ್ತೇವಿ. ಊಟ ಮಾಡಬೇಕಂದ್ರ, ಅಲ್ಲೆ, ಇಲ್ಲೇ ಕೇಳಿ ನೀರ ತೊಗೊಬೇಕ ನೋಡ್ರಿ. ಅಡತಿ ಅಂಗಡ್ಯಾಗ ಎಷ್ಟಂತ ಮಂದಿಗೆ ನೀರ ಕೊಟ್ಟಾರರಿ. ಎಲ್ಲೂ ಸಿಗಲಿಲ್ಲ ಅಂದ್ರ, ಹೊರಗ ಹೋಗಿ ಒಂದ ಕಪ್ ಚಾ ಕುಡದ್ಹಂಗ ಮಾಡಿ, ಒಂದ ಜಗ್ ನೀರ ತೊಗೊಂಡ ಬರಬೇಕು. ಇಂಥಾ ಪರಿಸ್ಥಿತಿ ಐತಿ ನೋಡ್ರಿ” ಎನ್ನುವುದು ಚಾಮನಾಳದ ರೈತ ಸೋಮಪ್ಪ ಹೇಳುವ ಮಾತು.
ಜಿಲ್ಲಾ ಮಟ್ಟದ ಇಲಾಖೆಗಳು ಇರುವ ನಗರದಲ್ಲಿಯೇ ಇರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದು ಸೋಜಿಗ ಎನಿಸುತ್ತದೆ.

ಅಧಿಕಾರಿಗಳು ಕೊಟ್ಟ ಕೆಲಸ ಮುಗಿಸಿ ಹೋಗುವ ತರಾತುರಿ ತೋರುತ್ತಾರೆಯೇ ಹೊರತು, ಶಾಶ್ವತ ವಾಗಿ ನೀರಿನ ವ್ಯವಸ್ಥೆ ಮಾಡುತ್ತಿಲ್ಲ. ಎಪಿಎಂಸಿಯವರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT