ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಆರ್: ಅಶೋಕ್ ವಿರುದ್ಧ ಕ್ರಮಕ್ಕೆ ಹಿಂದೇಟು

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೆಐಎಡಿಬಿ ಭೂ ಹಗರಣದ ಸಂಬಂಧ ಲೋಕಾಯುಕ್ತ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ ಮರುದಿನವೇ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದಿದ್ದ ಬಿಜೆಪಿ, ಗೃಹ ಸಚಿವ ಆರ್.ಅಶೋಕ ಪ್ರಕರಣದಲ್ಲಿ ಅದೇ ಮಾದರಿ ಅನುಸರಿಸಲು ಹಿಂದೇಟು ಹಾಕಿದೆ.
ಕಟ್ಟಾ ಅವರಿಂದ ರಾಜೀನಾಮೆ ಪಡೆಯುವಾಗಲೂ ಅವರು ಆರೋಪಿಯಷ್ಟೇ.

ಆದರೆ, ಈಗ ಅಶೋಕ ರಾಜೀನಾಮೆ ಪಡೆಯುವ ವಿಷಯದಲ್ಲಿ ಬಿಜೆಪಿ ಮುಖಂಡರು, `ಅವರು ಆರೋಪಿಯಷ್ಟೇ. ಅಪರಾಧಿ ಎಂಬುದು ನ್ಯಾಯಾಲಯದಲ್ಲಿ ತೀರ್ಮಾನ ಆಗಿಲ್ಲ~ ಎಂಬ ವಾದ ಮುಂದಿಡುತ್ತಿದ್ದಾರೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ ) ಭೂ ಹಗರಣಕ್ಕೆ ಸಂಬಂಧಿಸಿದಂತೆ 2010ರ ಡಿಸೆಂಬರ್‌ನಲ್ಲಿ ಲೋಕಾಯುಕ್ತ ಪೊಲೀಸರು ಆಗ ಸಚಿವರಾಗಿದ್ದ ಕಟ್ಟಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಆಗ ಮೊದಲ ಬಾರಿಗೆ ಇಂತಹ ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಿದ್ದ ಬಿಜೆಪಿ ಅವರಿಂದ ರಾಜೀನಾಮೆ ಪಡೆದಿತ್ತು.

ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಬಿಜೆಪಿಯ ಮುಖಂಡರೇ ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಗೃಹ ಸಚಿವರೂ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುವಂತಾಗಿರುವುದು ಬಿಜೆಪಿಯ ಪಾಲಿಗೆ ನುಂಗಲಾರದ ತುತ್ತಾಗಿದೆ.

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಅಶೋಕ ಪ್ರಕರಣಗಳಲ್ಲಿ ತುಸು ಭಿನ್ನತೆ ಇದೆ. ಕಟ್ಟಾ ವಿರುದ್ಧದ ಪ್ರಕರಣದಲ್ಲಿ ತನಿಖೆಗೆ ಪ್ರಬಲ ಸಾಕ್ಷ್ಯಾಧಾರಗಳು ಲಭ್ಯವಾದ ಬಳಿಕ ಲೋಕಾಯುಕ್ತ ಪೊಲೀಸರೇ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿ, ತನಿಖೆ ಮುಂದುವರೆಸಿದ್ದರು.

ಆದರೆ, ಅಶೋಕ ಪ್ರಕರಣದಲ್ಲಿ ಖಾಸಗಿ ದೂರಿಗೆ ಸಂಬಂಧಿಸಿದ ತನಿಖೆಯನ್ನು ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಒಪ್ಪಿಸಿದೆ. ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತ ಪೊಲೀಸರು ಸಚಿವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ರಾಜ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಗೃಹ ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಆರ್.ಎಲ್.ಜಾಲಪ್ಪ ಅವರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ನಡೆದ ವಕೀಲ ರಶೀದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಗುಪ್ತಚರ ವಿಭಾಗವನ್ನು ಹೊರತುಪಡಿಸಿ ಪೊಲೀಸ್ ಇಲಾಖೆಯ ಎಲ್ಲ ವಿಭಾಗಗಳೂ ಗೃಹ ಸಚಿವರ ಅಧೀನದಲ್ಲೇ ಬರುತ್ತವೆ.

ಲೋಕಾಯುಕ್ತ ಪೊಲೀಸ್ ವಿಭಾಗವೂ ಅವರ ವ್ಯಾಪ್ತಿಯಲ್ಲೇ ಇದೆ. ಸದ್ಯ ಲೋಕಾಯುಕ್ತದ ಡಿವೈಎಸ್‌ಪಿಯೊಬ್ಬರು ತಮ್ಮದೇ ಇಲಾಖೆಯನ್ನು ನಿಯಂತ್ರಿಸುತ್ತಿರುವ ಸಚಿವರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸುವ ಜವಾಬ್ದಾರಿ ಹೆಗಲೇರಿದೆ.

ಮೂರನೇ ಬಾರಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಖಾಸಗಿ ದೂರು ಸಲ್ಲಿಸಿರುವ ಶಿವಮೊಗ್ಗ ಮೂಲದ ವಕೀಲ ಸಿರಾಜಿನ್ ಬಾಷಾ ಅವರು ಸಚಿವ ಅಶೋಕ ವಿರುದ್ಧವೂ ದೂರು ದಾಖಲಿಸಲು ರಾಜ್ಯಪಾಲರಿಂದ ಅನುಮತಿ ಕೋರಿದ್ದರು.

ಆದರೆ ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಲು ಮಾತ್ರ ಅನುಮತಿ ನೀಡಿದ್ದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ಅಶೋಕ ಅವರಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ನೀಡಿರಲಿಲ್ಲ.

ನಂತರ ವಿಜಯನಗರದ ಮಂಜುನಾಥ್ ಎಂಬುವರು ರಾಜ್ಯಪಾಲರ ಅನುಮತಿ ಇಲ್ಲದೇ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಕೆಲವೇ ದಿನಗಳಲ್ಲಿ ಹೈಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸುವ ಮೂಲಕ ದೂರನ್ನು ವಾಪಸ್ ಪಡೆದಿದ್ದರು.

ಈಗ ಅದೇ ಆರೋಪಗಳಿಗೆ ಸಂಬಂಧಿಸಿದಂತೆ ಜಯಕುಮಾರ್ ಹಿರೇಮಠ ಎಂಬುವರು ದೂರು ಸಲ್ಲಿಸಿದ್ದು, ಮೂರನೇ ಬಾರಿ ಪ್ರಕರಣ ಜೀವ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT