ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಟಿಎ: ದೇಶವ್ಯಾಪಿ ಮಾಹಿತಿ ಅಭಿಯಾನ

Last Updated 21 ಫೆಬ್ರುವರಿ 2011, 16:40 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇತ್ತೀಚೆಗೆ ಮಲೇಷ್ಯಾ ಮತ್ತು ಜಪಾನ್ ಜತೆ ಸರ್ಕಾರ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಪರಿಣಾಮಗಳ ಕುರಿತು ಹೂಡಿಕೆದಾರರಿಗೆ ಸರಿಯಾದ ಮಾಹಿತಿ ನೀಡಲು ವಾಣಿಜ್ಯ ಸಚಿವಾಲಯದ ತಂಡವೊಂದು ದೇಶದಾದ್ಯಂತ ಸಂಚರಿಸಲಿದೆ.

ಮುಕ್ತ ವ್ಯಾಪಾರ ಒಪ್ಪಂದದಿಂದ ಆಮದು ಸರಕುಗಳ ಮೇಲಿನ ತೆರಿಗೆ ಗಣನೀಯವಾಗಿ ತಗ್ಗಲಿದೆ. ಇದಕ್ಕೆ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಒಟ್ಟಾರೆ ಆಗ್ನೇಯ ಏಷ್ಯಾ ದೇಶಗಳ ಸಂಘಟನೆ (ಆಸಿಯಾನ್) ಜತೆಗಿನ ‘ಎಫ್‌ಟಿಎ’ ಒಪ್ಪಂದದಿಂದ ದೇಶಕ್ಕೆ ಆಗಲಿರುವ  ಬೃಹತ್ ಆರ್ಥಿಕ ಪ್ರಯೋಜನಗಳ ಕುರಿತು ಈ ತಂಡ ಮನವರಿಕೆ ಮಾಡಿಕೊಡಲಿದೆ.

ಮುಕ್ತ ವ್ಯಾಪಾರ ಒಪ್ಪಂದದಿಂದ ದೊಡ್ಡ ಪ್ರಮಾಣದಲ್ಲಿ ಆಮದು ಸರಕುಗಳ ಮೇಲಿನ ತೆರಿಗೆ ರದ್ದಾಗಲಿದೆ. ಇದರಿಂದ ದೇಶೀಯ ಮಾರುಕಟ್ಟೆಗೆ ಸರಕುಗಳ ಪೂರೈಕೆ ಹೆಚ್ಚುವ ಭೀತಿಯಲ್ಲಿ ಕೇರಳ ಸೇರಿದಂತೆ ಹಲವು ರಾಜ್ಯಗಳ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.

‘ನನ್ನ ಸಹೋದ್ಯೋಗಿಗಳ ತಂಡವೊಂದು ‘ಎಫ್‌ಟಿಎ’ ವಿನಾಯತಿ, ತೆರಿಗೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ನೀಡಲು ಎಲ್ಲ ರಾಜ್ಯಗಳಿಗೆ ತೆರಳಲಿದೆ’ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಇಲ್ಲಿ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ)  ಆಯೋಜಿಸಿದ್ದ ‘ಎಫ್‌ಟಿಎ’ ಚರ್ಚೆಯಲ್ಲಿ ಅಭಿಪ್ರಾಯಪಟ್ಟರು.

ಜಪಾನ್‌ನೊಂದಿಗೆ ಇತ್ತೀಚೆಗೆ ಮಾಡಿಕೊಳ್ಳಲಾದ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದಡಿ (ಸಿಇಪಿಎ)   ಎರಡು ದೇಶಗಳ ನಡುವೆ ನಡೆಯುವ ಸರಕು ವಹಿವಾಟಿನ ಮೇಲಿನ ಆಮದು ತೆರಿಗೆಯನ್ನು ಶೇ 94ರಷ್ಟು ತೆಗೆದು ಹಾಕಲು ಭಾರತ ಒಪ್ಪಿಕೊಂಡಿದೆ. ಇದು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT