ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಎ,ಎಸ್‌ಡಿಎ ಹುದ್ದೆ ಭರ್ತಿಗೆ ಪ್ರಕ್ರಿಯೆ

Last Updated 20 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಸ ಚಿವಾಲಯ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 758 ಪ್ರಥಮ ಮತ್ತು 1134 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡುವ ಪ್ರಕ್ರಿಯೆಯನ್ನು ಕರ್ನಾಟಕ ಲೋಕಸೇವಾ ಆಯೋಗ ಆರಂಭಿಸಿದೆ.

ಮೂರು ವರ್ಷಗಳ ನಂತರ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಎಸ್ಸೆಸ್ಸೆಲ್ಸಿ ಮತ್ತು ಪದವಿ ಪಡೆದಿರುವ ಅಭ್ಯರ್ಥಿಗಳು ಕಠಿಣ ಪರಿಶ್ರಮದಿಂದ ಈಗಿನಿಂದಲೇ ಪರೀಕ್ಷೆಗೆ ಸಿದ್ಧತೆ ನಡೆಸಿದರೆ ಯಾವುದೇ ರೀತಿಯ ವಾಮ ಮಾರ್ಗ ಇಲ್ಲದೆ ಕೇವಲ ಅರ್ಹತೆ ಮತ್ತು ಮೀಸಲಾತಿ ಆಧಾರದ ಮೇಲೆ ಸರ್ಕಾರಿ ಉದ್ಯೋಗವನ್ನು ಗಿಟ್ಟಿಸಬಹುದಾಗಿದೆ.

ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಬಹಳ ಎಚ್ಚರಿಕೆಯಿಂದ ಅರ್ಜಿಗಳನ್ನು ಭರ್ತಿ ಮಾಡಿ ನಿಗದಿತ ಅವಧಿಯ ಒಳಗೆ ಸಲ್ಲಿಸಬೇಕು. ಸ್ವಲ್ಪ ವ್ಯತ್ಯಾಸವಾದರೂ ತಿರಸ್ಕೃತವಾಗುವ ಸಾಧ್ಯತೆಗಳಿವೆ. ಆದ್ದರಿಂದ ಆಯೋಗ ನೀಡಿರುವ ಸೂಚನೆಗಳನ್ನು ಸರಿಯಾಗಿ ಓದಿಕೊಂಡು ನಂತರ ಭರ್ತಿ ಮಾಡುವುದು ಒಳ್ಳೆಯದು. ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮಾರ್ಚ್ 8ರವರೆಗೆ ಅವಕಾಶವಿದೆ. ಆಯಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಆಯೋಗವು ನಿಗದಿಪಡಿಸಿರುವ ಪರೀಕ್ಷಾ ಶುಲ್ಕವನ್ನು ಮಾರ್ಚ್ 9ರ ಒಳಗೆ ಬ್ಯಾಂಕುಗಳಲ್ಲಿ ಪಾವತಿಸಬೇಕು.

ಅಭ್ಯರ್ಥಿಗಳು ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆ -ಎರಡೂ ಅರ್ಜಿ ಸಲ್ಲಿಸಲು ಬಯಸುವುದಾದರೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು. ಯಾವುದೇ ವಿಷಯದಲ್ಲಿ ಪದವಿ ಪಡೆದವರು ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಪದವಿ ಪಾಸಾಗಿರಬೇಕು. ಡಿಪ್ಲೊಮಾ, ಹಿಂದಿ ಪ್ರಚಾರ ಸಭಾದಿಂದ ಪಡೆದಿರುವ ಹಿಂದಿ ರತ್ನಾ, ವಿಶಾರದ, ಪಂಡಿತ್ ವಿದ್ಯಾರ್ಹತೆಯನ್ನು ಪದವಿಗೆ ಸಮಾನ ಎಂದು ಪರಿಗಣಿಸುವುದಿಲ್ಲ.

ಅಭ್ಯರ್ಥಿಗಳು ಅರ್ಜಿಯೊಂದಿಗೆ ಯಾವುದೇ ರೀತಿಯ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕಾಗಿಲ್ಲ. ಆದರೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೂ ಮುನ್ನ ಸಂಬಂಧಪಟ್ಟ ಎಲ್ಲ ದಾಖಲಾತಿಗಳನ್ನು ಪಡೆದು ಇಟ್ಟುಕೊಂಡಿರಬೇಕಾಗುತ್ತದೆ. ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟವಾದ ನಂತರ ಆಯೋಗವು ಅಂತಹ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಿದೆ.
 
ಜಾತಿ, ಆದಾಯ, ಕನ್ನಡ ಮಾಧ್ಯಮ, ಗ್ರಾಮೀಣ ಮೀಸಲಾತಿ, ಯೋಜನಾ ನಿರಾಶ್ರಿತರ ಕೋಟಾದ ಪ್ರಮಾಣ ಪತ್ರ...ಹೀಗೆ ಅಭ್ಯರ್ಥಿಗಳು ಯಾವ ರೀತಿಯ ಮೀಸಲಾತಿಯನ್ನು ಬಯಸುತ್ತಾರೊ, ಅದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ಪಡೆದಿರಬೇಕು. ಅಂಕಪಟ್ಟಿ ಸೇರಿದಂತೆ ಎಲ್ಲ ದಾಖಲಾತಿಗಳನ್ನು ಆಯೋಗವು ಕೇಳಿದಾಗ ಹಾಜರುಪಡಿಸಬೇಕು.

ಇನ್ನು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಆಗಿದ್ದು, ಈಗಾಗಲೇ ಪಾಸಾಗಿರಬೇಕು. ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿಯಾಗಿದೆ. ಮಾಜಿ ಸೈನಿಕರು, ಯೋಜನಾ ನಿರಾಶ್ರಿತರು ಮತ್ತಿತರರಿಗೆ ವಯೋಮಿತಿಯಲ್ಲಿ ಸಡಿಲಿಕೆಯುಂಟು.

ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ನಡೆಯಲಿದೆ. ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಸಂದರ್ಶನ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯು ಒಟ್ಟು 300 ಅಂಕಗಳ ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪತ್ರಿಕೆಗೆ ಎರಡು ಗಂಟೆ ಕಾಲಾವಕಾಶ ನೀಡಲಾಗುತ್ತದೆ.

ಪತ್ರಿಕೆ-1 ಸಾಮಾನ್ಯ ಜ್ಞಾನದ ವಿಷಯವಾಗಿದ್ದು, ಇದು ಎಲ್ಲರಿಗೂ ಕಡ್ಡಾಯವಾಗಿರುತ್ತದೆ. ಪತ್ರಿಕೆ- 2 ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲಿಷ್ ಆಗಿದೆ. ಅಭ್ಯರ್ಥಿಗಳು ಯಾವುದಾದರೂ ಇಂಗ್ಲಿಷ್ ಅಥವಾ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪ್ರತಿಯೊಂದು ಪತ್ರಿಕೆಯು ತಲಾ 150 ಅಂಕಗಳನ್ನು ಒಳಗೊಂಡಿರುತ್ತದೆ. ವಸ್ತುನಿಷ್ಠ ಮಾದರಿಯ ಬಹುಆಯ್ಕೆಯ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಪಠ್ಯಕ್ರಮ: ಪ್ರಥಮ ದರ್ಜೆ ಸಹಾಯಕ ಹುದ್ದೆಯ ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆಯು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗೆ ಇರಬೇಕಾದ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಿರುತ್ತದೆ. ಭಾರತದ ಸಂವಿಧಾನ, ಇತಿಹಾಸ ಮತ್ತು ಸಂಸ್ಕೃತಿ, ಆರ್ಥಿಕ ವಿಷಯಗಳು, ವಿಜ್ಞಾನ, ಭೂಗೋಳ, ಇತ್ತೀಚಿನ ಬೆಳವಣಿಗೆಗಳು, ದೈನಂದಿನ ಜೀವನದಲ್ಲಿ ಗಮನಿಸಬಹುದಾದ ವಿಷಯಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ಸಾಮಾನ್ಯ ಕನ್ನಡ ಅಥವಾ ಇಂಗ್ಲಿಷ್ ಪತ್ರಿಕೆಯು ಕನ್ನಡ.ಇಂಗ್ಲಿಷ್ ವ್ಯಾಕರಣ, ಶಬ್ದ ಸಂಪತ್ತು, ಕಾಗುಣಿತ, ಸಮಾನಾರ್ಥಕ ಮತ್ತು ವಿರುದ್ಧ ಪದಗಳು, ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಗ್ರಹಿಸುವ ಸಾಮರ್ಥ್ಯ, ಸರಿ, ತಪ್ಪುಗಳನ್ನು ಗುರುತಿಸುವ ಸಾಮರ್ಥ್ಯವನ್ನು ಅಳೆಯುವುದಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಹೊಂದಿರುತ್ತದೆ.

ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಪ್ರಶ್ನೆ ಪತ್ರಿಕೆಯು ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಇರಬೇಕಾದ ಸಾಮಾನ್ಯ ಮಟ್ಟವನ್ನು ಅಳೆಯುವಂತಹದ್ದಾಗಿರುತ್ತದೆ. ಇನ್ನು ಸಾಮಾನ್ಯ ಜ್ಞಾನ, ಕನ್ನಡ/ಇಂಗ್ಲಿಷ್ ಪ್ರಶ್ನೆ ಪತ್ರಿಕೆಯು ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ನಿಗದಿಪಡಿಸಿರುವ ಮಾದರಿಯಲ್ಲಿಯೇ ಇರುತ್ತದೆ. ಆದರೆ ಅಷ್ಟೊಂದು ಕಠಿಣವಾಗಿರುವುದಿಲ್ಲ.

ಪರೀಕ್ಷೆ: ಈಗಿನ ಪ್ರಕಾರ ಮೇ ತಿಂಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಬೇರೆ ಬೇರೆ ದಿನ ಪರೀಕ್ಷೆ ಇರುತ್ತದೆ. ಹೀಗಾಗಿ ಆಸಕ್ತಿವುಳ್ಳವರು ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆಯೋಗದ ವೆಬ್‌ಸೈಟ್‌ನಲ್ಲಿ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು, ಪರೀಕ್ಷೆಯ ಸ್ವರೂಪ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನೂ ನೀಡಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಏನಾದರೂ ತಾಂತ್ರಿಕ ಸಮಸ್ಯೆ ಉಂಟಾದರೆ ಸಹಾಯವಾಣಿ ಸಂಖ್ಯೆ: 90363553926/27 ಸಂಪರ್ಕಿಸಬಹುದು.

ಮೇನಲ್ಲಿ ಪರೀಕ್ಷೆ ನಡೆಸಿ ಈ ವರ್ಷದ ಅಂತ್ಯದ ವೇಳೆಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಉದ್ದೇಶವನ್ನು ಆಯೋಗ ಹೊಂದಿದ್ದು, ಸರ್ಕಾರಿ ಉದ್ಯೋಗವನ್ನೇ ಪಡೆಯಬೇಕು ಎಂದು ಬಯಸುವವರು ಮೂರು ತಿಂಗಳ ಕಾಲ ಕಷ್ಟುಪಟ್ಟು ಅಧ್ಯಯನ ನಡೆಸಿದರೆ ಖಂಡಿತಾ ಯಶಸ್ವಿಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT