ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಐಗೆ ತಡೆ: ಸುಪ್ರೀಂ ನಕಾರ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಎರಡು ವಾರದೊಳಗೆ `ಫೆಮಾ~ ಗೆ ತಿದ್ದುಪಡಿ ಮಾಡಿ

ನವದೆಹಲಿ (ಪಿಟಿಐ): ದೇಶದ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ)ಯ ಕೇಂದ್ರದ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಆರ್.ಎಂ. ಲೋಧಾ ಹಾಗೂ ಎ.ಆರ್. ದವೆ ಅವರನ್ನೊಳಗೊಂಡ ಪೀಠ ಈ ಸಂಬಂಧ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಸರ್ಕಾರದ ನೀತಿಯನ್ನು ಜಾರಿಗೆ ತರಲು ಅನುಕೂಲವಾಗುವಂತೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ನಿಬಂಧನೆಗಳಿಗೆ ತಿದ್ದುಪಡಿ ತರಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಸೂಚನೆ ನೀಡಿದೆ. ಆರ್‌ಬಿಐ ಎರಡು ವಾರದೊಳಗಡೆ ಇಂತಹ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದೂ ಪೀಠ ತಿಳಿಸಿದೆ.

ಸರ್ಕಾರ `ಎಫ್‌ಡಿಐ~ ನೀತಿಯನ್ನು ಅನುಷ್ಠಾನಕ್ಕೆ ತರುವ ಮುನ್ನ, ಆರ್‌ಬಿಐ `ಫೆಮಾ~ ನಿಬಂಧನೆಗಳಿಗೆ ತಿದ್ದುಪಡಿ ತರುವುದು ಅಗತ್ಯ, ನೀತಿಗೆ ಅಂತಿಮ ರೂಪುರೇಷೆ ನೀಡಲು ಅಡ್ಡಿಯಾಗಿರುವ ಸಂಗತಿಗಳನ್ನು ಪತ್ತೆಹಚ್ಚಿ ಈ ಬಗ್ಗೆ ಕ್ರಮ ಜರುಗಿಸಬೇಕು. ಇವೆಲ್ಲ ನೀತಿಯ ಘೋಷಣೆಯ ಅಧಿಸೂಚನೆಗೆ ಮುನ್ನ ನಡೆಯಬೇಕಾಗಿದೆ ಎಂದು ತಿಳಿಸಲಾಗಿದೆ.

ಎಫ್‌ಡಿಐನಿಂದ ಉಂಟಾಗಬಹುದಾದ ಅವ್ಯವಸ್ಥೆಯ ಗೊಂದಲವನ್ನು `ಫೆಮಾ~ ನಿಬಂಧನೆಗಳಿಗೆ ತಿದ್ದುಪಡಿ ಮಾಡುವ ಮೂಲಕ ದೂರಮಾಡಬಹುದಾಗಿದೆ. ಆದರೆ, ಇದೇ ಕಾರ ಣವನ್ನು ಮುಂದಿಟ್ಟುಕೊಂಡು ಇಡೀ ನೀತಿಯಿಂದಲೇ ಹಿಂದೆ ಸರಿಯಲಾಗದು ಎಂದೂ ಪೀಠ ಅಭಿಪ್ರಾಯಪಟ್ಟಿದೆ. 

ಅಟಾರ್ನಿ ಜನರಲ್ ಜಿ.ಇ. ವಹನ್ವತಿ, `ಫೆಮಾ~ ನಿಬಂಧನೆಗಳಿಗೆ ಕೂಡಲೇ ತಿದ್ದುಪಡಿ ತರಲು ತಾವು ಆರ್‌ಬಿಐ ಗವರ್ನರ್ ಜತೆ ಸಮಾಲೋಚನೆ ನಡೆಸುವುದಾಗಿ ಪೀಠಕ್ಕೆ ತಿಳಿಸಿದರು. ಕೋರ್ಟ್ ಈ ಸಂಬಂಧದ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿದೆ. 

ಪಿಐಎಲ್ ವಿಚಾರಣೆ
ಎಫ್‌ಡಿಐ  ಸಂಬಂಧ ವಕೀಲ ಎಂ.ಎಲ್. ಶರ್ಮಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ಅಭಿಪ್ರಾಯ ನೀಡಿದೆ. ಆರ್‌ಬಿಐ ಅನ್ನು ಕತ್ತಲಲ್ಲಿ ಇಟ್ಟು ಕೇಂದ್ರ ಸರ್ಕಾರ ಎಫ್‌ಡಿಐ ನೀತಿ ಜಾರಿಗೆ ಹೊರಟಿದೆ. ಸಂಸತ್ತಿನ ಇಲ್ಲವೆ ರಾಷ್ಟ್ರಪತಿ ಅನುಮತಿ ಪಡೆಯದೆ ಕಾನೂನಿಗೆ ವಿರುದ್ಧವಾಗಿ ಸರ್ಕಾರ ಎಫ್‌ಡಿಐ ನೀತಿ ಜಾರಿಗೆ ಹೊರಟಿದೆ ಎಂದು ಶರ್ಮಾ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.

`ಸರ್ಕಾರ ತಾನು ಪ್ರಕಟಿಸಬೇಕೆಂದಿರುವ ನೀತಿಯನ್ನು ಸಂಸತ್ತಿನ ಮುಂದೆ ಹಾಜರುಪಡಿಸಬೇಕು ಎಂದೇನಿಲ್ಲ, ಮೇಲಾಗಿ ನೀತಿಗಳೆಲ್ಲ ರಾಷ್ಟ್ರಪತಿಯ ಹೆಸರಿನಲ್ಲಿ ಇರಬೇಕು ಎಂಬುದಕ್ಕೆ ಸಂವಿಧಾನದಲ್ಲಿ ಅವಕಾಶವೂ ಇಲ್ಲ~ ಎಂದೂ ಪೀಠ ಸ್ಪಷ್ಟಪಡಿಸಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT