ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಐಗೆ ಸಮರ್ಥನೆ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ: `ಬಹು ಬ್ರಾಂಡ್ ಚಿಲ್ಲರೆ ವಹಿವಾಟು ರಂಗದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿಕೊಡುವುದು  ರಾಜ್ಯಗಳ ವಿವೇಚನೆಗೆ ಬಿಟ್ಟ ವಿಚಾರ~ ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು ಸೋಮವಾರ ಇಲ್ಲಿ ಕೇಂದ್ರ ಸರ್ಕಾರದ ನಿಲುವು ಪುನರುಚ್ಚರಿಸಿದರು.

ಇಲ್ಲಿ ನಡೆಯುತ್ತಿರುವ `ಆರ್ಥಿಕ ಸಂಪಾದಕರ~ ಎರಡು ದಿನಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಚಿಲ್ಲರೆ ವಹಿವಾಟು  ರಂಗದಲ್ಲಿ `ಎಫ್‌ಡಿಐ~ಗೆ ಅವಕಾಶ ಮಾಡಿಕೊಡಲು ಮುಂದೆ ಬರುವ ರಾಜ್ಯಗಳು ತಮ್ಮ, ತಮ್ಮ ರಾಜ್ಯಗಳಲ್ಲಿ ಜಾರಿಯಲ್ಲಿ ಇರುವ  `ಎಪಿಎಂಸಿ~ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಬೇಕಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದರು.
 
ಸದ್ಯಕ್ಕೆ ಜಾರಿಯಲ್ಲಿ ಇರುವ `ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆ  ಪ್ರಕಾರ, ಬಹುರಾಷ್ಟ್ರೀಯ ಸಂಸ್ಥೆಗಳು ಬೆಳೆಗಾರರಿಂದ ಕೃಷಿ ಉತ್ಪನ್ನಗಳನ್ನು ನೇರವಾಗಿ ಖರೀದಿಸಲು ಅವಕಾಶ ಇಲ್ಲ. ಚಿಲ್ಲರೆ ವಹಿವಾಟಿನಲ್ಲಿ ಬಹುರಾಷ್ಟ್ರೀಯ ದೈತ್ಯ ಸಂಸ್ಥೆಗಳು ವಹಿವಾಟು ಆರಂಭಿಸಲು ಅನುಮತಿ ನೀಡುವ ರಾಜ್ಯ ಸರ್ಕಾರಗಳು, ಕೃಷಿಕರಿಗೆ ನ್ಯಾಯಯುತ ಬೆಲೆ ಒದಗಿಸಲು ಅವರಿಂದ ಸರಕುಗಳನ್ನು ನೇರವಾಗಿ ಖರೀದಿಸಲು ಈ ದೈತ್ಯ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ~ ಎಂದರು.

ಪ್ರತಿಪಕ್ಷ ಬಿಜೆಪಿ, `ಎಫ್‌ಡಿಐ~ಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಅನಗತ್ಯ ಮತ್ತು ಅನುಚಿತವಾಗಿದೆ. 2002ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ `ಎನ್‌ಡಿಎ~ ಸರ್ಕಾರದ ಸಚಿವ ಸಂಪುಟವೇ `ಎಫ್‌ಡಿಐ~ಗೆ ಅನುಮತಿ ನೀಡುವ ಟಿಪ್ಪಣಿ ಸಿದ್ಧಪಡಿಸಿತ್ತು ಎಂದರು.

ವಿಮೆ ರಂಗದಲ್ಲಿ ಎಫ್‌ಡಿಐ:  ದೇಶದಲ್ಲಿ, ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ವಿಮೆ ವಹಿವಾಟು ತುಂಬ ಕಡಿಮೆ  ಪ್ರಮಾಣದಲ್ಲಿ ಇದೆ. ಜೀವ ವಿಮೆ ಮತ್ತು ಸಾಮಾನ್ಯ ವಿವೆು ರಂಗದಲ್ಲಿ ಸದ್ಯಕ್ಕೆ ಸರ್ಕಾರಿ ಮತ್ತು ಖಾಸಗಿ ವಲಯದ 50 ಸಂಸ್ಥೆಗಳೂ ಕಾರ್ಯನಿರ್ವಹಿಸುತ್ತಿದ್ದರೂ ವಿಮೆ ಸೌಲಭ್ಯಕ್ಕೆ ಒಳಗಾದ ಜನಸಂಖ್ಯೆ ಪ್ರಮಾಣ ಕ್ರಮವಾಗಿ ಕೇವಲ ಶೇ 4.4 ಮತ್ತು 6.6ರಷ್ಟು ಮಾತ್ರ ಇದೆ.
 
ಗ್ರಾಮೀಣ ಪ್ರದೇಶದ ಜನರಿಗೆ ವ್ಯಾಪಕ ಪ್ರಮಾಣದಲ್ಲಿ ಜೀವ, ಗೃಹ, ಕಳ್ಳತನ, ಸಾಮಾನ್ಯ ಮತ್ತಿತರ ವಿಮೆ ಸೌಲಭ್ಯ ಒದಗಿಸಲು ಭಾರಿ ಪ್ರಮಾಣದ ಬಂಡವಾಳದ ಅಗತ್ಯ ಇದೆ. `ಎಫ್‌ಡಿಐ~ನಿಂದ ಮಾತ್ರ ಇದು ಸಾಧ್ಯವಾಗಲಿದೆ ಎಂದು ಸಮರ್ಥಿಸಿಕೊಂಡರು.

ಬ್ಯಾಂಕಿಂಗ್ ವಲಯದಲ್ಲಿ `ಎಫ್‌ಡಿಐ~ ಮಿತಿ ಹೆಚ್ಚಿಸುವ ಪ್ರಸ್ತಾವ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲ. ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಈಗಲೂ ಅನಿಶ್ಚಿತತೆ ಮುಂದುವರೆದಿದ್ದು, ಆರ್ಥಿಕ ವೃದ್ಧಿ ದರ ಶೇ 3.5ರಷ್ಟು ಮಾತ್ರ ಇದೆ.

ಇದು ದೇಶದ ಆರ್ಥಿಕ ವೃದ್ಧಿ ದರದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದ್ದರೂ ನಮ್ಮ ಆರ್ಥಿಕ ಬೆಳವಣಿಗೆ ಸಾಕಷ್ಟು ಸದೃಢವಾಗಿಯೇ ಇದೆ. 12ನೇ ಪಂಚವಾರ್ಷಿಕ ಯೋಜನಾ ಅವಧಿಯಲ್ಲಿ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೆಚ್ಚಳವು ಸರಾಸರಿ ಶೇ 8.2ರಷ್ಟು ಇರಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT