ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಬಿಎಸ್ ಇದ್ದರೆ ಭಯವೇಕೆ?

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕಳೆದ ಅಂಕಣದಲ್ಲಿ ಬ್ರೇಕ್‌ಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ಆದರದು ಬ್ರೇಕಿಂಗ್‌ನ ಮೂಲಭೂತ ತಂತ್ರಜ್ಞಾನಗಳಷ್ಟೇ. ಈಗ ಬ್ರೇಕ್ ತಂತ್ರಜ್ಞಾನ ಸಾಕಷ್ಟು ಸುಧಾರಿಸಿದೆ.

 ಬ್ರೇಕ್ ಬಳಸುವ ಕ್ರಿಯೆ ಈಗ ಮ್ಯೋನುಯಲ್‌ನಿಂದ ಆಟೋಮ್ಯೋಟಿಕ್ ಕಡೆಗೆ ಸಾಗುತ್ತಿದೆ. ಬ್ರೇಕ್ ಬಳಸುವುದು ಎಂದರೆ ಈಗ ಕೇವಲ ಚಲನೆಯಲ್ಲಿರುವ ಚಕ್ರಗಳನ್ನು ನಿಲ್ಲಿಸುವುದಲ್ಲ. ವಿವೇಕಯುತವಾಗಿ, ಚಾಲಕನಿಗೂ, ವಾಹನಕ್ಕೂ, ಎದುರು ಬರುವ ವಾಹನಗಳಿಗೂ ತೊಂದರೆ ಆಗದಂತೆ ನೋಡಿಕೊಳ್ಳುವುದು. ಇದನ್ನು ಚಾಲಕನ ಸಂಜ್ಞೆಗಳಿಗೆ ತಕ್ಕಂತೆ, ಕಂಪ್ಯೂಟರ್ ಬ್ರೇಕಿಂಗ್‌ಅನ್ನು ನಿಯಂತ್ರಿಸುವ ಮಟ್ಟಕ್ಕೆ ತಂತ್ರಜ್ಞಾನ ಬೆಳೆದಿದೆ.ಈ ಬಗ್ಗೆ ಒಂದು ಕಿರುನೋಟ ಈ ಬಾರಿಯ ಆಟೋ ಟೆಕ್‌ನಲ್ಲಿ.

ಎಬಿಎಸ್ ಇದ್ದರೆ ಭಯವೇಕೆ?

ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಎಬಿಎಸ್‌ನ ವಿಸ್ತರಣೆ. ಸಾಮಾನ್ಯವಾಗಿ ಆರಂಭದ ಬ್ರೇಕಿಂಗ್ ತಂತ್ರಜ್ಞಾನದ ತತ್ವವೆಂದರೆ, ವಾಹನವನ್ನು ನಿಲ್ಲಿಸಲು, ಚಲಿಸುತ್ತಿರುವ ಚಕ್ರವನ್ನು ಬಂದ್ ಮಾಡುವುದು. ಅಂದರೆ ಬಿಗಿಯಾಗಿ ಹಿಡಿಯುವುದು. ಆಗ ಚಲನೆ ತಂತಾನೆ ನಿಲ್ಲುತ್ತದೆ. ಇದು ಪರಿಣಾಮಕಾರಿಯೇ ಆದರೂ ಸುರಕ್ಷಿತವಲ್ಲ.
 
ಇಲ್ಲೊಂದು ಪ್ರಮುಖ ಯಾಂತ್ರಿಕ ದೋಷವಿದೆ. ಯಾವುದೇ ವಾಹನದಲ್ಲಿ ಬ್ರೇಕ್ ಹಾಕಿದ ಕೂಡಲೆ ತಿರುಗುತ್ತಿರುವ ಚಕ್ರ ಹಠಾತ್ ನಿಲ್ಲುತ್ತದೆ. ಆದರೆ ಅದರ ಜೊತೆಗೆ ಸ್ಟೀರಿಂಗ್ ಅಥವಾ ಹ್ಯಾಂಡಲ್ ಸಹ ಲಾಕ್ ಆಗಿ, ವಾಹನದ ದಿಕ್ಕನ್ನು ಬದಲಿಸಲು ಸಾಧ್ಯವೇ ಆಗುವುದಿಲ್ಲ.
 
ಆಗ ಎದುರಿನ ವಾಹನ ಅಥವಾ ಅಡಚಣೆಯ ಜತೆ ಮುಖಾಮುಖಿಯಾಗಿ ಅಪಘಾತವಾಗುತ್ತದೆ. ಇದನ್ನು ತಪ್ಪಿಸಲು ಅನ್ವೇಷಿತಗೊಂಡದ್ದೇ ಎಬಿಎಸ್. ಕಂಪ್ಯೂಟರ್ ನಿಯಂತ್ರಿತ ಬ್ರೇಕ್ ಇಲ್ಲಿ, ಚಕ್ರವನ್ನು ಹಠಾತ್ ಬಂದ್ ಮಾಡುವುದಿಲ್ಲ. ಬದಲಿಗೆ ವೇಗವನ್ನು ಕಡಿತಗೊಳಿಸಿ, ತಿರುಗಿಸುತ್ತಲೇ ಇರುತ್ತದೆ. ಆಗ ವಾಹನದ ದಿಕ್ಕನ್ನು ಬದಲಿಸಲು ಅವಕಾಶ ದೊರೆತು, ಡಿಕ್ಕಿಯಾಗುವುದು ತಪ್ಪುತ್ತದೆ.
 

ಇಬಿಡಿ
ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ತಂತ್ರಜ್ಞಾನ ಎಬಿಎಸ್ ಇದ್ದ ಕಡೆ ಇದ್ದೇ ಇರುವ ಸೋದರ ತಂತ್ರಜ್ಞಾನ. ಎಬಿಎಸ್ ವಾಹನದ ಚಲನೆಯ ದಿಕ್ಕನ್ನು ನಿಯಂತ್ರಿಸಿದರೆ, ಎಬಿಡಿ, ಪ್ರತಿ ಚಕ್ರದ ಮೇಲೆ ಬೀಳುವ  ಬ್ರೇಕ್ ನ ಒತ್ತಡವನ್ನು  ಪರಿಸ್ಥಿತಿಗೆ ತಕ್ಕಂತೆ ನಿಯಂತ್ರಿಸುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ಸ್ಕಿಡ್ ಎಂಬ ಪದವನ್ನು ಕೇಳಿಯೇ ಇರುತ್ತೇವೆ ಅಲ್ಲವೆ.

ಸ್ಕಿಡ್ ಎಂದರೆ ಜಾರುವುದು ಎಂದಷ್ಟೇ. ವಾಹನದ ಸಮತೋಲನ ತಪ್ಪಿ, ರಸ್ತೆ ಮೇಲಿನ ಮರಳು ಇತ್ಯಾದಿ ಕೆಟ್ಟ ಪರಿಸ್ಥಿತಿಗಳಲ್ಲಿ ಸ್ಕಿಡ್ ಆಗುತ್ತದೆ. ಇದಕ್ಕೆ ತಾಂತ್ರಿಕ ಕಾರಣ, ಯಾವುದೇ ವಾಹನದಲ್ಲಿ ಬ್ರೇಕ್ ಬಳಕೆಯಾದಾಗ ಮುಂದಿನ ಚಕ್ರಕ್ಕೆ ಹೆಚ್ಚು ಬ್ರೇಕಿಂಗ್ ಒತ್ತಡ ಬೀಳಬಾರದು.

ಹೀಗಾದಾಗ ಹಿಂದಿನ ಚಕ್ರ ತನ್ನ ಸ್ಥಿರತೆ ಕಳೆದುಕೊಂಡು ಸ್ಕಿಡ್ ಆಗುತ್ತದೆ. ಇದನ್ನು ತಪ್ಪಿಸಿ, ವಾಹನದ ಎಲ್ಲ ಚಕ್ರಗಳಿಗೂ ಸಮಾನವಾಗಿ, ಅಥವಾ ಪರಿಸ್ಥಿಗೆ ತಕ್ಕಂತೆ ನಿಗದಿತ ಪ್ರಮಾಣದಲ್ಲಿ ಬ್ರೇಕ್ ಒತ್ತಡ ನೀಡುವುದೇ ಇದರ ಕೆಲಸ. ಜತೆಗೆ ಅತಿಯಾದ ಬ್ರೇಕ್‌ನಿಂದ ಟಯರ್ ಸವೆಯದಂತೆಯೂ ನೋಡಿಕೊಳ್ಳುವುದು ಇಬಿಡಿಯ ಜಾಣ್ಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT