ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಮ್ಮೆಗಳಿಗೆ ಮೀಸಲು!

Last Updated 7 ಅಕ್ಟೋಬರ್ 2011, 8:20 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಕಾಲಿಟ್ಟ ಕಡೆ ಜಾರಿ ಬೀಳುವ ಭಯ, ಕಲುಷಿತ ಚರಂಡಿ ನೀರು ನಿಂತಲ್ಲಿ ನಿಂತು ವಾಸನೆ. ಕುಡಿಯುವ ನೀರಿಲ್ಲ, ಅಗತ್ಯ ಮೂಲಸೌಕರ್ಯ ಇಲ್ಲ. ಪ್ರಾಂಗಣದಲ್ಲಿ ಎಮ್ಮೆಗಳ ತ್ಯಾಜ್ಯ ಮತ್ತು ಚರಂಡಿ ನೀರು. ಗಲೀಜಲ್ಲೇ ಹಣ್ಣು- ತರಕಾರಿ ಮತ್ತು ಇತರ ವಸ್ತುಗಳ ಮಾರಾಟ. ಇದು ಪಟ್ಟಣದ ಸಂತೆ ಮೈದಾನ ರಸ್ತೆಯಲ್ಲಿರುವ ಮಾರುಕಟ್ಟೆ ಚಿತ್ರಣ. ಗ್ರಾಹಕರಿಗೂ ಇಲ್ಲಿ ಕಾಲಿಡಲಾಗದಂತಹ ಮತ್ತು ವ್ಯಾಪರಸ್ಥರು ನೆಮ್ಮದಿಯಿಂದ ವ್ಯಾಪಾರ ಮಾಡಲಾಗದಂತಹ ಪರಿಸ್ಥಿತಿ ಇದೆ.

ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ತರಕಾರಿ ಮತ್ತು ಹಣ್ಣು ಮಾರಾಟಗಾರರು ಒಂದೆಡೆ ಸೇರಿ ಹಣ್ಣು, ತರಕಾರಿಗಳನ್ನು ಮಾರುತ್ತಿದ್ದರು. ಮಾರುಕಟ್ಟೆ ಸ್ಥಳ ಮತ್ತು ಪ್ರಾಂಗಣದಲ್ಲಿ ಮೂಲಸೌಕರ್ಯ ಕೊರತೆ ಕಾರಣ ಇತ್ತೀಚಿನ ದಿನಗಳಲ್ಲಿ ವ್ಯಾಪಾರ ಮಾಡುವುದು ಕಷ್ಟವಾಗಿದೆ. ದೂರದ ಗ್ರಾಮಗಳಿಂದ ಬರುವ ರೈತರು, ವ್ಯಾಪಾರಿಗಳು ಕಷ್ಟನಷ್ಟ ಎದುರಿಸಿಕೊಂಡೇ ವ್ಯಾಪಾರ ಮಾಡುತ್ತಾರೆ. ಲಾಭ ಬರದಿದ್ದರೂ ಚಿಂತೆಯಿಲ್ಲ, ಆಯಾ ದಿನದ ದುಡಿಮೆಗೆ ಸಾಕು ಎಂಬಂತೆ ವ್ಯಾಪಾರ ಮಾಡುತ್ತಾರೆ.

ಪಟ್ಟಣದ ಸಂತೇ ಮೈದಾನದ ರಸ್ತೆಯಲ್ಲಿರುವ ಮಾರುಕಟ್ಟೆ ಪ್ರಾಂಗಣಕ್ಕೆ ತಡೆಗೋಡೆಯಿಲ್ಲ. ಅಚ್ಚುಕಟ್ಟಾದ ವ್ಯವಸ್ಥೆಯಿಲ್ಲ. ಇದನ್ನೇ ನೆಪವಾಸಗಿಸಿಕೊಂಡ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ನಿವಾಸಿಗಳು ಇಲ್ಲಿ ಜಾನುವಾರು ಕಟ್ಟುತ್ತಾರೆ. ವ್ಯಾಪಾರಸ್ಥರು ಕೂತುಕೊಳ್ಳಬೇಕಾದ ಸ್ಥಳವನ್ನು ಎಮ್ಮೆ ಮತ್ತು ಜಾನುವಾರಗಳು ಆಕ್ರಮಿಸಿಕೊಂಡಿರುತ್ತವೆ. ಸ್ಥಳದಲ್ಲಿ ಭಾರಿ ಪ್ರಮಾಣದ ತ್ಯಾಜ್ಯವಾದರೂ ಅದನ್ನು ಯಾರೂ ಶುಚಿಗೊಳಿಸುವುದಿಲ್ಲ. ನೀರು ನಿಂತಲ್ಲೇ ನಿಂತು ಗಬ್ಬುನಾರಿದರೂ ಅದರ ತೆರವಿಗೆ ಯಾರೂ ಮುಂದಾಗುವುದಿಲ್ಲ.

`ನಮಗೆ ಉತ್ತಮ ಸೌಕರ್ಯ ಕಲ್ಪಿಸಿಕೊಡಿ. ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಿ ಎಂದು ಬೇಡಿಕೊಂಡರೂ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಮಲಮೂತ್ರ ವಿಸರ್ಜನೆ ಮತ್ತು ಚರಂಡಿ ಮಾಲಿನ್ಯದಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ರೋಗರುಜಿನ ಸಹ ಕಾಡುವ ಆತಂಕವಿದೆ. ಇಂತಹ ಕೊಳಚೆ ಪ್ರದೇಶದಲ್ಲಿ ನಾವು ಹಣ್ಣುತರಕಾರಿ ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡುವುದಾದರೂ ಹೇಗೆ? ನಮ್ಮ ಬೇಡಿಕೆಗಳಿಗೆ ಮಾನ್ಯತೆ ಇಲ್ಲವೇ~ ಎಂದು ತರಕಾರಿ ವ್ಯಾಪಾರಸ್ಥ ನಾರಾಯಣಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

`ಹೆಸರಿಗೆ ಮಾತ್ರವೇ ಶೆಡ್ ನಿರ್ಮಿಸಲಾಗಿದೆ. ಅಲ್ಲಿ ಕೂರಲು ಆಗುವುದಿಲ್ಲ. ವ್ಯಾಪಾರ ಮಾಡಲು ಆಗುವುದಿಲ್ಲ. ಅಲ್ಲಿ ಜಾನುವಾರು ಕಟ್ಟಿದರೆ, ನಾವು ವ್ಯಾಪಾರ ಮಾಡುವುದು ಹೇಗೆ? ಗ್ರಾಹಕರು ನಮ್ಮ ಕಡೆ ಬರುವುದಾದರೂ ಹೇಗೆ? ಶೆಡ್‌ಗಳನ್ನು ಗುಂಡಿಯಲ್ಲಿ ನಿರ್ಮಿಸಲಾಗಿದೆ. ಭಾರಿ ಮಳೆಯಾದರೆ, ಸುತ್ತಲೂ ನೀರು ಶೇಖರಣೆಯಾಗಿ, ಕೆಸರಾಗುತ್ತದೆ. ಹೆಜ್ಜೆ ಕೂಡ ಇಡಲು ಆಗುವುದಿಲ್ಲ. ಈ ಎಲ್ಲ ಅವ್ಯವಸ್ಥೆಗೆ ಪುರಸಭೆ  ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ~ ಎಂದು ದಿನಸಿ ತಿಂಡಿ ಮಾರಾಟಗಾರ ಆದಿನಾರಾಯಣಪ್ಪ ಆರೋಪಿಸಿದರು. 

ಶೀಘ್ರ ಕ್ರಮ: `ಪಟ್ಟಣದ ಸಂತೆಮೈದಾನದ ರಸ್ತೆಯಲ್ಲಿ ಮಾರುಕಟ್ಟೆ ಪ್ರಾಂಗಣಕ್ಕೆ ಪುರಸಭೆ ವತಿಯಿಂದ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಸಣ್ಣ ಪಟ್ಟಣಗಳ ಅಭಿವೃದ್ಧಿಯಡಿ ಸುಮಾರು 12ರಿಂದ 13 ಲಕ್ಷ ರೂಪಾಯಿ ವೆಚ್ಚದಲ್ಲಿ ಶೆಡ್ ನಿರ್ಮಿಸಲಾಗಿದೆ. ಸುತ್ತಮುತ್ತಲಿನ ನಿವಾಸಿಗಳು ಅಲ್ಲಿ ಎಮ್ಮೆ ಕಟ್ಟುತ್ತಾರೆ. ಇದರಿಂದ ತರಕಾರಿ ಮಾರಾಟ ಹಾಗೂ ಗ್ರಾಹಕರಿಗೆ ತೊಂದರೆಯಾಗಿದೆ. ಪಟ್ಟಣದ ಮುಖ್ಯರಸ್ತೆಯಲ್ಲಿ ತರಕಾರಿ ಅಂಗಡಿಗಳನ್ನು ಮಾರುಕಟ್ಟೆ ಪ್ರಾಂಗಣಕ್ಕೆ ಶೀಘ್ರವೇ ಸ್ಥಳಾಂತರಿಸಲಾಗುವುದು. ಮೂಲಸೌಕರ್ಯ ಕಲ್ಪಿಸಲಾಗುವುದು~ ಎಂದು ಪುರಸಭಾ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT