ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಮಹಾಯುದ್ಧ: ಮಾಜಿ ಸೈನಿಕರ ಗೌರವ ಧನ ಹೆಚ್ಚಳ...

Last Updated 25 ಸೆಪ್ಟೆಂಬರ್ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು: `ಎರಡನೆಯ ಮಹಾಯುದ್ಧದಲ್ಲಿ ಭಾಗವಹಿಸಿದ್ದ ರಾಜ್ಯದ ಮಾಜಿ ಸೈನಿಕರಿಗೆ ಪ್ರಸ್ತುತ ಲಭಿಸುತ್ತಿರುವ ಮಾಸಿಕ ಗೌರವ ಧನವನ್ನು ಎರಡು ಸಾವಿರ ರೂಪಾಯಿಗಳಿಂದ ಐದು ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡಲಾಗುವುದು. ಈ ಏರಿಕೆ ಇದೇ ಆಗಸ್ಟ್ 15ರಿಂದ ಜಾರಿಯಾಗುವಂತೆ ಮಾಡಲಾಗುವುದು...~

ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಇದೇ ಜುಲೈ 26ರಂದು ಆಚರಿಸಲಾದ `ಕಾರ್ಗಿಲ್ ವಿಜಯ ದಿವಸ್~ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಭಾಷಣದಲ್ಲಿ ಈ ಘೋಷಣೆ ಮಾಡಿದ್ದರು.

ಆದರೆ ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ಅವರು ಅಧಿಕಾರದಿಂದ ನಿರ್ಗಮಿಸಿದರು. ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿಯಾದರು.ಆಗಸ್ಟ್ 15 ಬಂತು, ಹೋಯಿತು. ಸ್ವಾತಂತ್ರ್ಯೋತ್ಸವ ಆಚರಿಸಿ ತಿಂಗಳು ಮಿಕ್ಕಿದೆ. ಆದರೆ ಇದುವರೆಗೂ ಘೋಷಣೆಯನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ.

ಏನಿದು ಗೌರವಧನ?: 1939ರಿಂದ 1945ರ ನಡುವಿನ ಅವಧಿಯಲ್ಲಿ ನಡೆದ ಎರಡನೆಯ ಮಹಾಯುದ್ಧದಲ್ಲಿ ಭಾರತೀಯರು ಬ್ರಿಟಿಷ್ ಸೇನೆಯ ಜೊತೆ ಸೇರಿ ಯುದ್ಧ ಮಾಡಿದ್ದರು.

ಈ ಯುದ್ಧದಲ್ಲಿ ಪಾಲ್ಗೊಂಡಿದ್ದ ರಾಜ್ಯದ ಸೈನಿಕರಿಗೆ ರಾಜ್ಯ ಸರ್ಕಾರದ ವತಿಯಿಂದ ಮಾಸಿಕ ಗೌರವ ಧನ ನೀಡಲಾಗುತ್ತಿದೆ. 300 ರೂಪಾಯಿ ಇದ್ದ ಗೌರವ ಧನದ ಮೊತ್ತವನ್ನು 1995ರಲ್ಲಿ 500 ರೂಪಾಯಿಗೆ ಹೆಚ್ಚಿಸಲಾಯಿತು. ನಂತರ 2004ರಲ್ಲಿ ಅದನ್ನು 1,000 ರೂಪಾಯಿಗೆ ಏರಿಸಲಾಯಿತು. ನಂತರ 2008ರಲ್ಲಿ 1,500 ರೂಪಾಯಿಗೆ ಮತ್ತು 2010ರಲ್ಲಿ 2,000 ರೂಪಾಯಿಗೆ ಹೆಚ್ಚಳ ಮಾಡಲಾಯಿತು.

ಭಾರತೀಯ ಸೇನೆಯಲ್ಲಿ ಕನಿಷ್ಠ 15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಸೇವೆ ಸಲ್ಲಿಸಿದವರಿಗೆ ಕೇಂದ್ರ ಸರ್ಕಾರದಿಂದ ಪಿಂಚಣಿ ದೊರೆಯುತ್ತದೆ. ಆದರೆ ಎರಡನೆಯ ಮಹಾಯುದ್ಧದಲ್ಲಿ ಭಾಗವಹಿಸಿದ್ದ ರಾಜ್ಯದ ಸೈನಿಕರಿಗೆ ಅಂಥ ಸೌಲಭ್ಯ ಇಲ್ಲ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎರಡನೆಯ ಮಹಾಯುದ್ಧದಲ್ಲಿ ಪಾಲ್ಗೊಂಡ ಸೈನಿಕರಿಗೆ ಗೌರವಧನದ ರೂಪದಲ್ಲಿ ಪ್ರತಿ ತಿಂಗಳೂ ಹಣಕಾಸಿನ ನೆರವು ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.ಎರಡನೆಯ ಮಹಾಯುದ್ಧದಲ್ಲಿ ಪಾಲ್ಗೊಂಡು, ಯುದ್ಧದಲ್ಲಿ ಭಾಗವಹಿಸಿದ ಬಗ್ಗೆ ದಾಖಲೆಯಾಗಿ ವಾರ್ ಮೆಡಲ್ ಹೊಂದಿರುವ ಸೈನಿಕರಿಗೆ ಮಾತ್ರ ಈ ಗೌರವಧನ ನೀಡಲಾಗುತ್ತಿದೆ.

ರಾಜ್ಯದಲ್ಲಿ ಸುಮಾರು 2,680 ಸೈನಿಕರಿಗೆ ಇದು ದೊರೆಯುತ್ತಿದೆ. ಈ ಪಟ್ಟಿಯನ್ನು ಪರಿಷ್ಕರಿಸುವ ಕಾರ್ಯ ಕೂಡ ಸಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಅಲ್ಲಿನ ಸೈನಿಕರ ಕುರಿತು ಮಾಹಿತಿ ತರಿಸಿಕೊಳ್ಳಲಾಗುತ್ತಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಈಗಿರುವ 2,000 ರೂಪಾಯಿ ಮಾಸಿಕ ಗೌರವಧನವನ್ನು 3,000 ರೂಪಾಯಿಗೆ ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿತ್ತು. ಮಾಸಿಕ ಗೌರವ ಧನವನ್ನು 5,000 ರೂಪಾಯಿಗೆ ಏರಿಸುವ ಘೋಷಣೆಯನ್ನು ಸರ್ಕಾರವೇ ಮಾಡಿದೆ. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT