ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಸ್ಥಾನಕ್ಕೇರಿದ ವಿದಿತ್‌

ವಿಶ್ವ ಜೂನಿಯರ್‌ ಚೆಸ್‌ ಚಾಂಪಿಯನ್‌ಷಿಪ್‌
Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕೊಜಾಯೆಲಿ, ಟರ್ಕಿ (ಪಿಟಿಐ): ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿದಿತ್‌ ಗುಜರಾತಿ ಹಾಗೂ ಎಸ್‌.ಪಿ.ಸೇತುರಾಮನ್‌ ಇಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್‌ ಚೆಸ್‌ ಚಾಂಪಿಯನ್‌­ಷಿಪ್‌ನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

ನಾಲ್ಕ ನೇ ಸುತ್ತಿನ ಪಂದ್ಯದಲ್ಲಿ ಈ ಆಟಗಾರರು ಗೆಲುವು ಸಾಧಿಸಿ ಪೂರ್ಣ ಪಾಯಿಂಟ್‌ ಸಂಪಾದಿಸಿದರು. ಅತ್ಯುತ್ತಮ ಪ್ರದರ್ಶನ ತೋರಿದ ಗುಜರಾತಿ ಜಾರ್ಜಿಯಾದ ಜಾವಖಾಡ್ಜೆ ಎದುರು ಗೆದ್ದರು. ಅವರ ಬಳಿ ಈಗ ಒಟ್ಟು ಮೂರೂವರೆ ಪಾಯಿಂಟ್‌ಗಳಿವೆ.

ಕಪ್ಪು ಕಾಯಿಗಳಿಂದ ಆಡಿದರೂ ಈ ಪಂದ್ಯದಲ್ಲಿ ಚತುರತೆ ಮೆರೆದ ವಿದಿತ್‌ ಆರಂಭದಿಂದಲೇ ಎದುರಾಳಿ  ಮೇಲೆ ಒತ್ತಡ ಹೇರಿದರು. ಸೇತುರಾಮನ್‌ ಅರ್ಮೇನಿಯಾದ ವಾಹೆ ಬಾಗ್ದಾಸರಿಯಾನ್‌ ಎದುರು ಜಯ ಗಳಿಸಿದರು. ಸೆಮಿ ಸ್ಲಾವ್‌ ಡಿಫೆನ್ಸ್‌ ಮಾದರಿ ಆಟದ ಮೂಲಕ ಅವರು ಎದುರಾಳಿಯನ್ನು ಸಂಕಷ್ಟಕ್ಕೆ ಸಿಲುಕಿಸಿದರು.

ಮೂರನೇ ಸುತ್ತಿನ ಪಂದ್ಯದಲ್ಲಿ ಆಘಾತಕ್ಕೆ ಒಳಗಾಗಿದ್ದ ಗ್ರ್ಯಾಂಡ್‌ಮಾಸ್ಟರ್‌ ಸಹಜ್‌ ಗ್ರೋವರ್‌ ಕೂಡ ಮಂಗಳವಾರ ಗೆಲುವು ಸಾಧಿಸಿದರು. ಅವರು ನಾರ್ವೆಯ ಬೆಂಜಾಮಿನ್‌ ಅರ್ವೊಲಾ ಎದುರು ಜಯ ಗಳಿಸಿದರು.

ನಿಮ್ಜೊ ಇಂಡಿಯನ್‌ ಡಿಫೆನ್ಸ್‌ ಮಾದರಿ ಆಟಕ್ಕೆ ಮುಂದಾದ ಗ್ರೋವರ್‌ ಬಿಳಿಯ ಕಾಯಿಗಳ ಮೂಲಕ ಎದುರಾಳಿಯನ್ನು ಬಹುಬೇಗನೇ ನಿಯಂತ್ರಿಸಿದರು. ಈ ಪಂದ್ಯ ಕೇವಲ 25 ನಡೆಗಳಲ್ಲಿ ಮುಗಿದು ಹೋಯಿತು. ಸಹಜ್‌ ಬಳಿ ಈಗ ಒಟ್ಟು ಮೂರು ಪಾಯಿಂಟ್‌ಗಳಿವೆ.

ಭಾರತದ ಮತ್ತೊಬ್ಬ ಆಟಗಾರ ದೆಬಾಶಿಶ್‌ ದಾಸ್‌ ಬಳಿ ಕೂಡ ಇಷ್ಟೇ ಪಾಯಿಂಟ್‌ಗಳಿವೆ. ಎನ್‌.ಶ್ರೀನಾಥ್‌ ಟರ್ಕಿಯ ಉಯಿಸಲ್‌ ಬುಕಾರ್‌ ಎದುರು ಗೆದ್ದರು. ಅಗ್ರ ಶ್ರೇಯಾಂಕದ ಆಟಗಾರ ಚೀನಾದ ಯು ಯಾಂಗಿಯಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 
ಬಾಲಕಿಯರ ವಿಭಾಗದಲ್ಲಿ ಭಾರತದ ಜಿ.ಕೆ.ಮೋನಿಷಾ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT