ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಎರಡು ಕಡೆ ಹೆಸರಿದ್ದರೆ ಮೊಕದ್ದಮೆ'

ಅನಿವಾಸಿ ಮತದಾರರ ಪಟ್ಟಿ ಸಿದ್ಧತೆ
Last Updated 14 ಏಪ್ರಿಲ್ 2013, 8:52 IST
ಅಕ್ಷರ ಗಾತ್ರ

ಕೋಲಾರ: ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕೋರಿ ಅರ್ಜಿ ಸಲ್ಲಿಸಿದವರು, ವಿಳಾಸದಲ್ಲಿ ಇಲ್ಲದೇ ಇದ್ದರೆ ಅಂಥವರ ಪಟ್ಟಿಯನ್ನೂ ಸಿದ್ಧಪಡಿಸಲಾಗುವುದು. ಮತದಾನದ ದಿನ ಅವರು ಮತದಾನಕ್ಕೆ ಬಂದಾಗ ದಾಖಲೆ ಪರಿಶೀಲಿಸಲಾಗುವುದು. ಅವುಗಳಿಲ್ಲದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ತಿಳಿಸಿದ್ದಾರೆ.

ಕ್ಷೇತ್ರದ ನಿವಾಸಿಗಳಲ್ಲದಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದವರ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ವಾಸವಿದ್ದೂ ಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ದೊರಕದಿದ್ದರೆ ಪಟ್ಟಿಯಲ್ಲಿ ಹೆಸರು ಸೇರಿಸಲಾಗುವುದು. ಅಂಥ ಪಟ್ಟಿಯನ್ನೂ ಮತಗಟ್ಟೆ ಏಜೆಂಟರಿಗೆ ನೀಡಲಾಗುವುದು. ಏಜೆಂಟರು ಗುರುತಿಸಿದರೆ ಮತದಾನಕ್ಕೆ ಅವಕಾಶ ನೀಡಲಾಗುವುದು. ಗುರುತಿಸದಿದ್ದರೆ ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎರಡು ಮತಪಟ್ಟಿಯಲ್ಲಿ ಹೆಸರು ಇರುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಇತ್ತೀಚಿನವರೆಗೂ ಜಿಲ್ಲೆಯ  ಮತದಾರರ ಪಟ್ಟಿಯಿಂದ ಅಂಥ 2400 ಹೆಸರುಗಳನ್ನು ತೆಗೆಯಲಾಗಿದೆ. ಎರಡು ಪಟ್ಟಿಯಲ್ಲಿ ಹೆಸರು ಕಂಡುಬಂದಲ್ಲಿ ಮತದಾರರು ಕೂಡಲೇ ಯಾವುದಾದರೂ ಒಂದು ಪಟ್ಟಿಯಲ್ಲಿ ಹೆಸರು ತೆಗೆಸಬೇಕು. ಇಲ್ಲದಿದ್ದರೆ ಅವರೂ ಶಿಕ್ಷೆಗೆ ಅರ್ಹರಾಗುತ್ತಾರೆ ಎಂದು ಎಚ್ಚರಿಸಿದರು.

ಮತದಾರರ ಸ್ಲಿಪ್: ಮತಗಟ್ಟೆಗಳ ಬಳಿ ಮತದಾರರಿಗೆ ಚೀಟಿ ನೀಡಲು ಯಾವುದೇ ಪಕ್ಷಕ್ಕೆ ಅವಕಾಶವಿಲ್ಲ. ಚುನಾವಣೆ ಸಿಬ್ಬಂದಿಯಾದ ಬ್ಲಾಕ್ ಹಂತರ ಮತಗಟ್ಟೆ ಅಧಿಕಾರಿಗಳೇ ಮತದಾರರ ಮನೆಬಾಗಿಲಿಗೆ ಮಾಹಿತಿ ಚೀಟಿಯನ್ನು ಮತದಾನಕ್ಕೆ ಎರಡು ದಿನ ಮುಂಚೆ ತಲುಪಿಸುತ್ತಾರೆ ಎಂದರು.

ಮತಗಟ್ಟೆಗೆ 200 ಮೀಟರ್ ದೂರದಲ್ಲಿ ಪಕ್ಷಗಳ ಮಂದಿ ಒಂದು ಟೇಬಲ್‌ಮತ್ತು ಎರಡು ಕುರ್ಚಿಗಳನ್ನು ಹಾಕಿ ಉಪಸ್ಥಿತರರಬಹುದು. ಕುಡಿಯುವ ನೀರೊಂದನ್ನು ಬಿಟ್ಟರೆ ಬೇರೇನನ್ನೂ ಮತದಾರರಿಗೆ ಕೊಡಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಶೇ 99.41 ಮಂದಿಯಲ್ಲಿ ಎಪಿಕ್ ಕಾರ್ಡ್ ಇದೆ. ಚುನಾವಣೆ ಹೊತ್ತಿಗೆ ಶೇ 100ರಷ್ಟು ಗುರಿ ಮುಟ್ಟಲು ಯತ್ನಿಸಲಾಗುವುದು ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ಕೊಡ್ಲಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಝಲ್ಫಿಕರ್ ಉಲ್ಲಾ ಉಪಸ್ಥಿತರಿದ್ದರು.

69,900 ಅರ್ಜಿ: ಜಿಲ್ಲೆಯಲ್ಲಿ ಜ.16ರ ವೇಳೆಗೆ 10,24,211 ಮತದಾರರಿದ್ದು, ಮತದಾರರ ಪಟ್ಟಿ ಸೇರ್ಪಡೆಗಾಗಿ ಇದುವರೆಗೆ 69,900 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದರು. ಎಲ್ಲ ಅರ್ಜಿಗಳ ದಾಖಲೀಕರಣ ನಡೆದಿದೆ. ಇನ್ನೆರಡು ದಿನದೊಳಗೆ ಅರ್ಜಿದಾರರ ವಿಳಾಸ ಪರಿಶೀಲನೆಯೂ ನಡೆಯಲಿದೆ. ಸೆಕ್ಟರಲ್ ಅಧಿಕಾರಿಗಳು ಈ ಕಾರ್ಯವನ್ನು ನಿರ್ವಹಿಸಲಿದ್ದಾರೆ ಎಂದರು.

7300 ಸಿಬ್ಬಂದಿ: ಮತದಾನ ಕಾರ್ಯನಿರ್ವಹಿಸಲು ಒಟ್ಟಾರೆ 7330 ಸಿಬ್ಬಂದಿಯನ್ನು ನೇಮಿಸಲಾಗುವುದು. ಅವರಲ್ಲಿ 1825 ಅಧಿಕಾರಿಗಳು, 1825 ಮೊದಲನೇ ಮತಗಟ್ಟೆ ಅಧಿಕಾರಿಗಳು, 3650 ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗುವುದು.
ಮತಗಟ್ಟೆ ಅಧಿಕಾರಿಗಳಿಗೆ ಆಯಾ ಕ್ಷೇತ್ರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏ.22ರಂದು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಿಬ್ಬಂದಿಯ ಜೊತೆಗ 1600 ಪೊಲೀಸರು ಮತ್ತು 1600 ಅರೆಸೇನಾಪಡೆಯ ಸಿಬ್ಬಂದಿಯೂ ಕಾರ್ಯನಿರ್ವಹಿಸಲಿದ್ದಾರೆ.

101 ಸೆಕ್ಟರ್ ಅಧಿಕಾರಿ
ಮತದಾನದ ದಿನ ಸಮಗ್ರ ಮೇಲ್ವಿಚಾರಣೆ ಸೇರಿದಂತೆ 10 ಪ್ರಮುಖ ಜವಾಬ್ದಾರಿಗಳ ನಿರ್ವಹಣೆ ಸಲುವಾಗಿ 101 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಶ್ರೀನಿವಾಸಪುರ-20, ಮುಳಬಾಗಲು-15, ಕೆಜಿಎಫ್-14, ಬಂಗಾರಪೇಟೆ -14, ಕೋಲಾರ 19 ಮತ್ತು ಮಾಲೂರು 19-ಸೆಕ್ಟರ್ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.

ಚುನಾವಣಾ ಆಯೋಗದ ಮಾರ್ಗ ಸೂಚಿ ಅನ್ವಯ ಮತದಾನದ ಕಾರ್ಯಚಟುವಟಿಕೆಗಳನ್ನು ಗಮನಿಸಿ ವರದಿ ನೀಡಲು 1400 ಮೈಕ್ರೋ ವೀಕ್ಷಕರ ನೇಮಕ ಮಾಡಲಾಗುವುದು. ಚುನಾವಣಾಧಿಕಾರಿಗಳು ಮತ್ತು ಚುನಾವಣಾ ವೀಕ್ಷಕರು ಇವರಿಗೆ ತರಬೇತಿಯನ್ನು ನೀಡಲಿದ್ದಾರೆ.
37 ದೂರು ಸ್ವೀಕಾರ: ನೀತಿ ಸಂಹಿತೆ ಉಲ್ಲಂಘನೆ ಸೇರಿದಂತೆ ಇದುವರೆಗೆ 39 ದೂರುಗಳನ್ನು ಸ್ವೀಕರಿಸಲಾಗಿದೆ. ಆನ್‌ಲೈನ್‌ಮೂಲಕ 8, ಕಂಟ್ರೋಲ್ ರೂಂನಲ್ಲಿ 21, ಲಿಖಿತವಾಗಿ 10 ದೂರುಗಳನ್ನು ಸ್ವೀಕರಿಸಲಾಗಿದೆ. 6 ಪ್ರಕರಣಗಳಿಗೆ ಸಂಬಂಧಿಸಿದಂತೆ  ನೀತಿ ಸಂಹಿತೆ ಉಲ್ಲಂಘನೆ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಅಬಕಾರಿ ಇಲಾಖೆಯ ತಂಡಗಳು ಇದುವರೆಗೆ 341 ತಪಾಸಣೆಗಳನ್ನು ನಡೆಸಿದ್ದು, 63 ಪ್ರಕರಣಗಳು ದಾಖಲಾಗಿವೆ.

ಮತದಾನ ಮಾಡದ ಹಕ್ಕು: ಮತದಾನ ಮಾಡುವ ಹಕ್ಕಿರುವಂತೆ ಮಾಡದಿರುವ ಹಕ್ಕೂ ಮತದಾರರಿಗೆ ಇದೆ. ಮತಗಟ್ಟೆವರೆಗೂ ಬಂದು ನಂತರ ಮತದಾನ ಮಾಡಲು ಒಪ್ಪದ ಮತದಾರರನ್ನು ಬಲವಂತ ಮಾಡಬಾರದು ಎಂದು ಚುನಾವಣೆ ಸಿಬ್ಬಂದಿಗೆ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

25 ಸೂಕ್ಷ್ಮ ಮತಗಟ್ಟೆ: ಈ ಹಿಂದಿನ ಚುನಾವಣೆಗಳಲ್ಲಿ ಶೇ 75ಕ್ಕಿಂತ ಹೆಚ್ಚು ಮತಗಳು ಒಬ್ಬರೇ ಅಭ್ಯರ್ಥಿ ಪಡೆದಿರುವುದು, ನಿಷ್ಪಕ್ಷಪಾತ ಮತದಾನಕ್ಕೆ ಅವಕಾಶವಿಲ್ಲದಿರುವುದು ಮತ್ತು  ಮತದಾನ ಮಾಡುವ ಸ್ಥಳಕ್ಕೆ ಬರಲು ಸೌಕರ್ಯವಿಲ್ಲದಿರುವ ಅಂಶಗಳ ಹಿನ್ನೆಲೆಯಲ್ಲಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗುವುದು. ಮಾಲೂರು, ಕೋಲಾರ ಮತ್ತು ಶ್ರೀನಿವಾಸಪುರದಲ್ಲಿ ಒಟ್ಟು 25 ಅಂಥ ಮತಗಟ್ಟೆಗಳಿವೆ. ಅವುಗಳ ಮೇಲೆ ಹೆಚ್ಚು ನಿಗಾ ವಹಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT