ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಶಕಗಳ ಕ್ರಾಂತಿಯ ಜಾಡು ಹಿಡಿದು...

Last Updated 6 ಜನವರಿ 2014, 9:24 IST
ಅಕ್ಷರ ಗಾತ್ರ

2013 ವಿದಾಯ ಹೇಳುವ ಹೊತ್ತಿಗೆ ಸಂವಿಧಾನದ 73ನೇ ತಿದ್ದುಪಡಿಯನ್ವಯ ಕರ್ನಾಟಕದಲ್ಲಿ ಗ್ರಾಮಪಂಚಾಯಿತಿ ಚುನಾವಣೆಗಳು ನಡೆದು ಎರಡು ದಶಕಗಳು ಮುಗಿದಿದ್ದವು. ಪ್ರಜಾಸತ್ತಾತ್ಮ­ಕವಾಗಿ ಸ್ಥಳೀಯ ಸರ್ಕಾರವೊಂದು ನಿರಂತರವಾಗಿ ಎರಡು ದಶಕಗಳ ಕಾಲ ಅಸ್ತಿತ್ವದಲ್ಲಿ ಇದ್ದದ್ದು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇದೇ ಮೊದಲು. ಅಧಿಕಾರ ಮತ್ತು ಆಡಳಿತ ವಿಕೇಂದ್ರೀಕರಣದ ಪರಿಕಲ್ಪನೆಗೆ ಸಂವಿಧಾನ ನೀಡಿದ ಸಾಂಸ್ಥಿಕ ಅಭಿವ್ಯಕ್ತಿಯಾದ ಪಂಚಾಯತ್ ರಾಜ್ ಸಂಸ್ಥೆಗಳ ಎರಡು ದಶಕಗಳ ಯಾತ್ರೆ ಸುಲಭದ್ದಾಗಿರಲಿಲ್ಲ. ಇವು ಹೊರಗಿನ ಸವಾಲುಗಳನ್ನೂ ಒಳಗಿನ ಸವಾಲುಗಳನ್ನೂ ಏಕಕಾಲಕ್ಕೆ ಎದುರಿಸಿವೆ. ಇಲ್ಲಿ ಸಂಘರ್ಷಗಳಿರುವಂತೆಯೇ ರಾಜೀ ಸೂತ್ರಗಳಿವೆ. ಯಶಸ್ಸಿನ ಕಥೆಗಳಿರುವಂತೆಯೇ ಸೋಲಿನ ದುರಂತಗಳಿವೆ. ಭ್ರಷ್ಟಾಚಾರದ ವಿಕೇಂದ್ರೀಕರಣ­ವಿರುವಂತೆಯೇ ಉತ್ತರದಾಯಿತ್ವ­ವನ್ನು ಖಾತರಿ­ಪಡಿಸಿದ ಉದಾಹರಣೆಗಳಿವೆ.

ಈ ಎರಡು ದಶಕಗಳ ಅವಧಿಯಲ್ಲಿ ದಾಖಲಿಸಬೇಕಾದ, ಗುರುತಿಸಬೇಕಾದ, ಚರ್ಚಿಸಬೇಕಾದ ಮತ್ತು ವಿಶ್ಲೇಷಣೆಗೆ ಒಳಪಡಿಸ­ಬೇಕಾದ ಅನೇಕ ವಿದ್ಯಮಾನ­ಗಳಿವೆ. ಆದರೆ ಈತನಕ ಇಂಥದ್ದೊಂದು ಪ್ರಯತ್ನ ನಡೆದಿಲ್ಲ. ನಡೆದಿದ್ದರೂ ಅವು ಒಂದೋ ಸರ್ಕಾರವೇ ನಡೆಸಿದ ಆಡಳಿತಾತ್ಮಕ ಅಗತ್ಯದ ವಿಶ್ಲೇಷಣೆಗಳು. ಇಲ್ಲವಾದರೆ ಆಸಕ್ತ ವಿದ್ವಾಂಸರು ಮತ್ತು ಸಂಶೋಧನಾ ಸಂಸ್ಥೆ­ಗಳಿಂದ ನಡೆದ ಬಿಡಿ ಪ್ರಯತ್ನಗಳು. ಪಂಚಾಯತ್ ರಾಜ್ ವ್ಯವಸ್ಥೆ­ಯ ಎಲ್ಲಾ ಪಾಲುದಾರರನ್ನೂ ಒಳಗೊಂಡ ಸಾರ್ವಜನಿಕ ಚರ್ಚೆಯೊಂದು ಈತನಕ ಆಗಿಲ್ಲ. ಅಂಥದ್ದೊಂದು ಪ್ರಯತ್ನಕ್ಕೆ ಈಗ ‘ಪ್ರಜಾವಾಣಿ’ ಮುಂದಾಗಿದೆ.

ತೊಂಬತ್ತರ ದಶಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಸಾಂವಿಧಾನಿಕ ಮಾನ್ಯತೆ ದೊರೆತದ್ದು ಒಂದರ್ಥದಲ್ಲಿ ಕಾಲದ ಉತ್ಪನ್ನ. ಭಾರತ, ಜಾಗತೀಕರಣಕ್ಕೆ ತೆರೆದುಕೊಂಡ ಕಾಲಘಟ್ಟದಲ್ಲಿಯೇ ಸ್ಥಳೀಯ ಸರ್ಕಾರದ ಪರಿಕಲ್ಪನೆಗೆ ಸಾಂವಿಧಾನಿಕ ಒಪ್ಪಿಗೆ ದೊರೆತ ವೈರುಧ್ಯ ನಮ್ಮ ಮುಂದಿದೆ. ಇದನ್ನು ಐತಿಹಾಸಿಕವಾಗಿ ಪರಿಶೀಲಿಸಿದರೆ ಇನ್ನೂ ಕೆಲವು ಕುತೂಹಲಕಾರಿ ಆಯಾಮಗಳು ತೆರೆದುಕೊ­ಳ್ಳುತ್ತವೆ. ಗಾಂಧೀಜಿ ದೃಷ್ಟಿಯಲ್ಲಿ ಹಳ್ಳಿಗಳು ಆಡಳಿತದ ಪ್ರಾಥಮಿಕ ಘಟಕಗಳಾಗಬೇಕಿತ್ತು. ಅದಕ್ಕಾಗಿ ಗ್ರಾಮ ಸ್ವರಾಜ್ಯದ ಕನಸು ಕಂಡರು. ಆದರೆ ಅಂಬೇಡ್ಕರ್ ಅವರ ಮಟ್ಟಿಗೆ ಹಳ್ಳಿಗಳೆಂದರೆ ಅಸಮಾನತೆ ಮತ್ತು ಶೋಷಣೆಯ ಕೂಪಗಳು. ಇಂಥ ಹಳ್ಳಿಗಳ ಮೂಲಕ ‘ಸ್ವರಾಜ್ಯ’ ನಿರ್ಮಿಸುವುದು ಅವರ ಮಟ್ಟಿಗೆ ಒಂದು ಅಸಂಗತ.

ಗಾಂಧೀಜಿಗೆ ಗ್ರಾಮ ಸ್ವರಾಜ್ಯದ ಕುರಿತಂತೆ ಇದ್ದ ನಂಬಿಕೆ ಅಂಬೇಡ್ಕರ್ ಅವರಿಗೆ ಪ್ರಬಲ ರಾಜಕೀಯ ಅಧಿಕಾರವಿರುವ ಪ್ರಜಾತಂತ್ರ ಮತ್ತು ಸರ್ಕಾರದ ಬಗ್ಗೆ ಇತ್ತು. ಅಸಮಾನತೆಯ ಕೂಪಗಳಿಂದ ಜನರನ್ನು ಮೇಲೆತ್ತುವ ಶಕ್ತಿ ಈ ಸರ್ಕಾರಗಳಿಗಿರುತ್ತದೆ ಎಂದು ಅವರು ನಂಬಿದ್ದರು. ಜಾತಿ ಆಧಾರಿತ ವ್ಯವಸ್ಥೆಯೊಂದು ಶೋಷಿಸುವಂತೆಯೇ ಬಹುಮತ ಹೊಂದಿದ ಪ್ರಜಾತಾಂತ್ರಿಕ ವ್ಯವಸ್ಥೆಯೂ ಶೋಷಣೆಯನ್ನು ನಡೆಸಬಹುದಾದ ಸಾಧ್ಯತೆಯನ್ನು ಅವರು ಪರಿಗಣಿಸಿರಲಿಲ್ಲ. ಈ ಭಿನ್ನಧ್ರುವದ ಚಿಂತನೆಗಳಿಗೆ ನಲವತ್ತು ವರ್ಷಗಳಾಗುವ ಹೊತ್ತಿಗೆ ಮಹಾತ್ಮಾ ಗಾಂಧಿಯ ಕನಸಿನ ಸಾಕ್ಷಾತ್ಕಾರಕ್ಕೆ ಎಲ್ಲಾ ಬಗೆಯಲ್ಲೂ ಆಧುನಿಕನಾಗಿದ್ದ, ತನಗಿದ್ದ ಬಹುಮತದ ಕಾರಣದಿಂದ ಎಲ್ಲಾ ಅಧಿಕಾರಗಳನ್ನು ತನ್ನಲ್ಲಿ ಕೇಂದ್ರೀಕರಿಸಿಕೊಂಡಿದ್ದ ರಾಜೀವ್ ಗಾಂಧಿ ಮುಂದಾದರು. ಅವರ ಪ್ರಯತ್ನ ಸಂವಿಧಾನ 73ನೇ ಚಾರಿತ್ರಿಕ ತಿದ್ದುಪಡಿಯ ಮೂಲಕ ಫಲ ಕೊಟ್ಟಾಗ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರ ಕನಸುಗಳ ಸಾಕ್ಷಾತ್ಕಾರವೂ ಸಂಭವಿಸಿತು. ಆದರೆ ಇದನ್ನು ಕಾಣಲು ರಾಜೀವ್  ಬದುಕಿರಲಿಲ್ಲ!

ಪಂಚಾಯತ್ ರಾಜ್ ವ್ಯವಸ್ಥೆ ಸ್ವಲ್ಪ ಮಟ್ಟಿಗಾದರೂ ಹಳ್ಳಿಗಳನ್ನು ಆಡಳಿತದ ಪ್ರಾಥಮಿಕ ಘಟಕವಾಗುವಂತೆ ಮಾಡಿ ಗಾಂಧೀಜಿಯ ಕನಸನ್ನು ನನಸಾಗಿಸಿತು. ಶೋಷಣೆಯ ಕೂಪಗಳಾಗಿದ್ದ ಹಳ್ಳಿಗಳ ವಿಮೋಚನೆಗೆ ಅಂಬೇಡ್ಕರ್ ಅವರ ಪರಿಹಾರವಾಗಿದ್ದ ಸರ್ಕಾರವೂ ತಲುಪಿತು.

ಗಾಂಧೀ ಮತ್ತು ಅಂಬೇಡ್ಕರ್ ಕನಸುಗಳು ಸಾಕ್ಷಾತ್ಕಾರಗೊಂಡವು ಎಂಬ ಸರಳ ತೀರ್ಮಾನದಲ್ಲಿ ನಿಂತುಬಿಟ್ಟರೆ ಅದು ಮತ್ತೊಂದು ಅಸಂಗತವಾಗಿ­ಬಿಡುತ್ತದೆ. ಇಬ್ಬರ ದುಃಸ್ವಪ್ನಗಳೂ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಿಜವಾಗಿವೆ. ‘ಅಧಿಕಾರ ಮತ್ತು ಅಧಿಕಾರಿ’ ಕೂಟದ ಕುರಿತಂತೆ ಗಾಂಧೀಜಿಗಿದ್ದ ಅನುಮಾನಗಳನ್ನು ನಿಜವಾಗಿಸುವ ಅನೇಕ ಉದಾಹರಣೆ­ಗಳನ್ನೂ ಪಂಚಾಯತ್ ರಾಜ್ ಸಂಸ್ಥೆಗಳ ಎರಡು ದಶಕಗಳ ಅನುಭವದಲ್ಲಿ ನಮಗೆ ಕಾಣಲು ಸಾಧ್ಯವಿದೆ. ಹಾಗೆಯೇ ಜಾತಿ ಎಂಬುದು ಒಂದು ರಾಜಕೀಯ ಅನನ್ಯತೆಯೂ ಆಗಿಬಿಟ್ಟ ದುರಂತವೂ ಈ ಸ್ಥಳೀಯ ಸರ್ಕಾರಗಳ ತನಕವೂ ವಿಸ್ತರಿಸಿಕೊಂಡಿದೆ.

ಈ ಮಿತಿಗಳನ್ನು ಗುರುತಿಸು­ವಾಗಲೇ ಪಂಚಾಯತ್ ರಾಜ್ ವ್ಯವಸ್ಥೆಯ ಸಾಧನೆಗಳು ಮತ್ತು ಸಾಧ್ಯತೆಗಳನ್ನೂ ಗುರುತಿಸುವ ಅಗತ್ಯವಿದೆ. ನಮ್ಮ ಹಳ್ಳಿಗಳ ಜಾತಿ ಮತ್ತು ಲಿಂಗ ಆಧಾರಿತ ಸಾಮಾಜಿಕ ಸ್ತರೀಕರಣಕ್ಕೆ ಪಂಚಾಯತ್ ರಾಜ್ ವ್ಯವಸ್ಥೆ ನೀಡಿದ ಪೆಟ್ಟು ಸಣ್ಣದೇನೂ ಅಲ್ಲ. ನಾಯಕತ್ವ ಮತ್ತು ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿದ್ದ ಜಾತಿ ಮತ್ತು ಲಿಂಗ ಅಸಮಾನತೆ­ಯನ್ನು ಇದು ಬಹುಮಟ್ಟಿಗೆ ತೊಡೆದು ಹಾಕಿದೆ. ಪರಿಣಾಮವಾಗಿ ಗ್ರಾಮೀಣ ಕರ್ನಾಟಕದ ರಾಜಕೀಯ ಭೂಪಟದ ಚಿತ್ರಣವೂ ಬದಲಾಗಿದೆ.

ಭಾರೀ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೇರಿದ ರಾಜೀವ್ ಗಾಂಧಿ ತಕ್ಷಣವೇ ದೇಶಕ್ಕೊಂದು ಸುತ್ತು ಬಂದರು. ಸ್ಥಳೀಯ ಅಭಿವೃದ್ಧಿಯ ಚುಕ್ಕಾಣಿ ಜಿಲ್ಲಾಧಿಕಾರಿಯ ಕೈಯಲ್ಲಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಅವರಿಗನ್ನಿಸಿದ್ದು ಈ ಪ್ರವಾಸದಲ್ಲಿಯೇ. ಈ ಹೊತ್ತಿಗಾಗಲೇ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ನ ಏಕಸ್ವಾಮ್ಯ­ವನ್ನು ಬೇರೆ ಬೇರೆ ಬಗೆಯಲ್ಲಿ ಮುರಿದಿ­ದ್ದವು. ಆ ದಿನಗಳಲ್ಲಿ ಕರ್ನಾಟಕದ ಮುಖ್ಯ­ಮಂತ್ರಿ­ಯಾಗಿದ್ದ ರಾಮಕೃಷ್ಣ ಹೆಗಡೆ, ಕೇಂದ್ರ ರಾಜ್ಯಗಳ ನಡುವಣ ಸಂಬಂಧದ ಕುರಿತಂತೆ ಚರ್ಚೆಯನ್ನು ಆರಂಭಿಸಿದ್ದರು. ಈ ಚರ್ಚೆಗಳನ್ನು ಮತ್ತಷ್ಟು ಸೂಕ್ಷ್ಮದ ಮಟ್ಟಕ್ಕೆ ಕೊಂಡೊಯ್ಯುವ ಒಂದು ದೂರದ ರಾಜಕೀಯ ಉದ್ದೇಶವೂ ರಾಜೀವ್ ಗಾಂಧಿಯವರ ವಿಕೇಂದ್ರೀಕರಣದ ಉತ್ಸಾಹದಲ್ಲಿ ಕೆಲಸ ಮಾಡಿರಬಹುದಾದ ಸಾಧ್ಯತೆ ಇದೆ. ಈಗಲೂ ಪಂಚಾಯತ್ ರಾಜ್ ಸಂಸ್ಥೆಗಳ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಲುವು ಭಿನ್ನವಾಗಿರುತ್ತವೆ. ಕೇಂದ್ರ ಸರ್ಕಾರ ಪಂಚಾಯಿತಿಗಳಿಗೆ ಅನುದಾನ ನೀಡುವಾಗ ರಾಜ್ಯ ಸರ್ಕಾರಗಳ ಮಧ್ಯಸ್ಥಿಕೆಯನ್ನು ಆದಷ್ಟು ಮಿತಿಗೊಳಿಸಿ ನೇರವಾಗಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಪನ್ಮೂಲ ಒದಗಿಸಲು ಹೊರಡುತ್ತದೆ. ಹಾಗೆಯೇ ಸ್ಥಳೀಯ ಸರ್ಕಾರಗಳಿಗೆ ಅಧಿಕಾರ ನೀಡುವ ವಿಚಾರದಲ್ಲಿ ಕೇಂದ್ರ ಯಾವತ್ತೂ ರಾಜ್ಯಗಳಿಗಿಂತ ಉದಾರವಾಗಿ ವರ್ತಿಸುತ್ತದೆ.

ಎಂಬತ್ತರ ದಶಕದಲ್ಲಿ ಕೇಂದ್ರ ರಾಜ್ಯಗಳ ನಡುವಣ ಸಂಬಂಧದ ಕುರಿತು ತೀವ್ರ ಸ್ವರೂಪದಲ್ಲಿ  ನಡೆಯುತ್ತಿದ್ದ ಚರ್ಚೆಯಂತೆ  ಈಗ ಶಾಸಕರು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ನಡುವಣ ಸಂಬಂಧದ ಕುರಿತು ನಡೆಯುತ್ತಿದೆ. ಗ್ರಾಮ ಸಭೆಗಳನ್ನು, ವಾರ್ಡ್ ಸಭೆಗಳನ್ನು ಪರಿಣಾಮಕಾರಿ­ಯಾಗಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರದ ಪಂಚಾಯತ್ ರಾಜ್ ಸಚಿವರು ಮಾತನಾಡುವಷ್ಟು ಉತ್ಸಾಹದಲ್ಲಿ ರಾಜ್ಯಗಳಲ್ಲಿ ಪಂಚಾಯತ್ ರಾಜ್ ಖಾತೆಗಳನ್ನು ಹೊಂದಿರುವ ಸಚಿವರು ಮಾತನಾಡು­ವುದಿಲ್ಲ. ಗ್ರಾಮ ಮಟ್ಟದಿಂದಲೇ ವಿವಿಧ ಯೋಜನೆಗಳಿಗೆ ಗ್ರಾಮ ಸಭೆಗಳಲ್ಲಿ ಫಲಾನುಭವಿ­ಗಳನ್ನು ಆರಿಸುವ ಪ್ರಕ್ರಿಯೆ ಈತನಕವೂ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿಲ್ಲ.

ಜಿಲ್ಲಾ ಮಟ್ಟದಲ್ಲಿರುವ ಯೋಜನಾ ಸಮಿತಿಗಳು ಕೇವಲ ಶಿಫಾರಸು ಮಾಡುವ ಸಮಿತಿಗಳಾಗಿ ಉಳಿದಿವೆ. ಅಭಿವೃದ್ಧಿ ಎಂಬುದು ಈಗಲೂ ಶಾಸಕನ ಅಧಿಕಾರದ ವ್ಯಾಪ್ತಿಯೊಳಗಿನಿಂದಲೇ ಪಂಚಾಯತ್ ರಾಜ್ ಸಂಸ್ಥೆಯೊಳಕ್ಕೆ ಹರಿದು ಬರಬೇಕಾದ ಸ್ಥಿತಿ ಉಳಿದುಕೊಂಡಿದೆ. ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರೇ ಮತದಾರರಾಗಿರುವ ವಿಧಾನ ಪರಿಷತ್ ಸ್ಥಾನದ ಕ್ಷೇತ್ರಗಳಿವೆ. ಕರ್ನಾಟಕ ವಿಧಾನ ಪರಿಷತ್ತಿಗೆ ಈ ಕ್ಷೇತ್ರಗಳಿಂದ ಇಲ್ಲಿಯ ತನಕವೂ ಪಂಚಾಯತ್ ರಾಜ್ ಸಂಸ್ಥೆಗಳ ಹಿನ್ನೆಲೆಯಿಂದ ಆಯ್ಕೆಯಾದವರ ಸಂಖ್ಯೆ ನಗಣ್ಯ ಎನ್ನುವಷ್ಟು ಕಡಿಮೆ.

ಅಧಿಕಾರ ವಿಕೇಂದ್ರೀಕರಣದ ವಿಷಯ ಬಂದಾಗ ಅದನ್ನು ರಮ್ಯವಾಗಿ ಚಿತ್ರಿಸುವಂಥ ಮಾತುಗಳಂತೆ ಅದಕ್ಕೆ ವಿರುದ್ಧವಾಗಿ  ಕೇಳಿಬರುವ ಮತ್ತೊಂದು ಮಾತು ‘ಭ್ರಷ್ಟಾಚಾರದ ವಿಕೇಂದ್ರೀಕ­ರಣ’. ಇದಕ್ಕೆ ಕೇಂದ್ರೀಕೃತ ಭ್ರಷ್ಟಾಚಾರಕ್ಕಿಂತ ವಿಕೇಂದ್ರೀಕೃತ ಭ್ರಷ್ಟಾಚಾರ ಉತ್ತಮ ಎಂಬಂಥ ಮಾತುಗಳು ಪರಿಹಾರವಲ್ಲ. ಇಲ್ಲಿರುವುದು ಅಧಿಕಾರದ ಪ್ರಶ್ನೆ. ಗಾಂಧೀಜಿ ಕನಸಿನಂತೆ ಅಧಿಕಾರ ಗ್ರಾಮಗಳಿಗೆ ತಲುಪಿದೆ.

ಅಂಬೇಡ್ಕರ್ ಕನಸಿನಂತೆ ಎಲ್ಲಾ ವರ್ಗದವರೂ ಈ ಅಧಿಕಾರದ ಫಲಾನುಭವಿ­ಗಳಾದರು. ಆದರೆ ‘ಅಧಿಕಾರ’ಕ್ಕೆ ಅದರದ್ದೇ ಆದ ಸಂಸ್ಕೃತಿಯೊಂದಿದೆ. ಅದಕ್ಕೆ ಕೇಂದ್ರ, ರಾಜ್ಯ, ಜಿಲ್ಲೆ ಮತ್ತು ಗ್ರಾಮವೆಂಬ ಭಿನ್ನತೆಯಿಲ್ಲ. ಬಹುಶಃ ನಮ್ಮ ವಿಕೇಂದ್ರೀಕರಣದ ಪ್ರಕ್ರಿಯೆ ಮೇಲಿನಿಂದ ಕೆಳಕ್ಕೆ ಇಳಿದು ಬಂದದ್ದು ಈ ಸಮಸ್ಯೆಗೆ ಒಂದು ಕಾರಣವಿರಬಹುದು. ಈಗಲೂ ನಮ್ಮ ಸಚಿವರು, ಸಂಸದರು, ಶಾಸಕರು ಮಾತನಾಡುವ ಭಾಷೆಯನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ-. ಅವರು ಜನರಿಗೆ ಅಧಿಕಾರ ಕೊಡುತ್ತಿದ್ದಾರೆ; ಅರ್ಥಾತ್ ಅಧಿಕಾರವನ್ನು ಅವರು ಜನರಿಗೆ ದಾನ ಮಾಡುತ್ತಿದ್ದಾರೆ. ಇದೆಂಥಾ ವಿರೋಧಾಭಾಸ. ಜನರಿಂದ ಆಯ್ಕೆಯಾಗಿ ಅಧಿಕಾರ ಪಡೆದವರು ಜನರಿಗೆ ಅಧಿಕಾರವನ್ನು ಕೊಡುವುದು! ಹೀಗೆ ಯಾರೋ ಕೊಟ್ಟ ಅಧಿಕಾರವನ್ನು ಬಳಸುವಾಗ ‘ಕೊಟ್ಟವರ ಸಂಸ್ಕೃತಿ’ಯೇ ಮುಂದುವರಿಯುತ್ತದೆ.

ಸಂವಿಧಾನ ತಜ್ಞ ಮೋಹನ್‌ಗೋಪಾಲ್ ‘ಸ್ವರಾಜ್’ ಪರಿಕಲ್ಪನೆಯನ್ನು ಜನರಿಗೆ ಅಧಿಕಾರವನ್ನು ಪ್ರಶ್ನಿಸಲು ಇರುವ ಸ್ವಾತಂತ್ರ್ಯ ಎಂದು ವಿವರಿಸಿದ್ದರು. ‘ಗ್ರಾಮ ಸ್ವರಾಜ್’ ಎಂದರೆ ಗ್ರಾಮ ಮಟ್ಟದಲ್ಲಿಯೂ ಅಧಿಕಾರವನ್ನು ಪ್ರಶ್ನಿಸುವ ಮತ್ತು ಅದನ್ನು ಪಳಗಿಸುವ ಧೈರ್ಯ ಜನರಿಗೆ ಬರಬೇಕು. ಜನರು ತಮ್ಮನ್ನು ಪ್ರಶ್ನಿಸುತ್ತಾರೆಂಬ ಭಯ ಜನಪ್ರತಿನಿಧಿಗಳಿಗೆ ಬರಬೇಕು. ಇದೊಂದು ಸಾಂಸ್ಕೃತಿಕವಾದ ಬದಲಾವಣೆ. ಈ ಎರಡು ದಶಕಗಳ ಅವಧಿ ಇಂಥದ್ದೊಂದು ಸಾಂಸ್ಕೃತಿಕ ಬದಲಾವಣೆಯನ್ನು ಸ್ವಲ್ಪ ಮಟ್ಟಿಗಾದರೂ ಆರಂಭಿಸಿದೆಯೇ? ಬಹುಶಃ ಇದು ಸೂಕ್ಷ್ಮದ ಮಟ್ಟದಲ್ಲಿ ಈ ಪ್ರಶ್ನೆಗೆ ಕೆಲವು ಉತ್ತರಗಳು ದೊರೆಯಬಹುದು. ಹಾಗೆಯೇ ಸ್ಥೂಲದ ಮಟ್ಟದಲ್ಲಿಯೂ ಉತ್ತರ ಕಂಡುಕೊಳ್ಳ­ಬೇಕಾದ ಹಲವು ಪ್ರಶ್ನೆಗಳಿವೆ. ಇದರ ಮಧ್ಯೆ ಹಲವು ಆಸಕ್ತ ವಿದ್ವಾಂಸರು ಕರ್ನಾಟಕದ ಪಂಚಾಯತ್ ರಾಜ್ ಮಾದರಿ ಜಾಗತಿಕ ಮಟ್ಟದಲ್ಲಿ ಚರ್ಚೆ­ಯಾಗುವಂಥ ಸಂಶೋಧನೆಗಳನ್ನು ನಡೆಸಿದ್ದಾರೆ. ಹಲವು ಅಧಿಕಾರಿಗಳು ಈ ಸಂಸ್ಥೆಗಳನ್ನು ಪರಿಣಾಮಕಾರಿ­ಯಾಗಿಸಿದ ಉದಾಹರಣೆಗಳು ನಮ್ಮ ಮುಂದಿವೆ. ತಮ್ಮ ಎಲ್ಲಾ ಮಿತಿಗಳ ಮಧ್ಯೆಯೂ ಆವಿಷ್ಕಾರಗಳನ್ನು ನಡೆಸಿದ ಜನಪ್ರತಿನಿಧಿ­ಗಳಿದ್ದಾರೆ. ಇವೆಲ್ಲವೂ ಮುಂದಿನ ಹಲವು ವಾರಗಳ ಕಾಲ ನಿಮ್ಮ ಮುಂದೆ ಇದೇ ಪುಟದಲ್ಲಿ ಅನಾವರಣಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT