ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಿನ ಕ್ಷೇತ್ರ ಪ್ರವಾಸ ಕಡ್ಡಾಯ

ಅಧಿಕಾರಿಗಳಿಗೆ ಶಂಭು ದಯಾಳ್ ಮೀನಾ ಸೂಚನೆ
Last Updated 24 ಡಿಸೆಂಬರ್ 2013, 7:49 IST
ಅಕ್ಷರ ಗಾತ್ರ

ಚಾಮರಾಜನಗರ: ‘ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳೀಯವಾಗಿ ಅರಿಯಲು ಕ್ಷೇತ್ರ ಪ್ರವಾಸ ಸಹಕಾರಿ ಯಾಗಿದೆ. ಈ ಹಿನ್ನೆಲೆಯಲ್ಲಿ ವಾರದ ಎರಡು ದಿನಗಳಲ್ಲಿ ಅಧಿಕಾರಿಗಳು ಕ್ಷೇತ್ರ ಪ್ರವಾಸ ಕೈಗೊಳ್ಳ ಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಂಭು ದಯಾಳ್ ಮೀನಾ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕಚೇರಿಗಳಲ್ಲಿ ಕುಳಿತು ಅಧಿಕಾರಿಗಳು ಕೇವಲ ಪತ್ರ ವ್ಯವಹಾರ ಮಾಡುವುದರಿಂದ ಜನರ ಸಮಸ್ಯೆ ಬಗೆಹರಿಯುವುದಿಲ್ಲ. ಕ್ಷೇತ್ರ ಪ್ರವಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಇದಕ್ಕಾಗಿ ವಾರದಲ್ಲಿ ಎರಡು ದಿನಗಳನ್ನು ಮೀಸಲಿಟ್ಟು ಜನರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದರು.

ಕ್ಷೇತ್ರ ಪ್ರವಾಸದ ವೇಳೆ ಕಂಡುಬರುವ ಸಮಸ್ಯೆ ಕುರಿತು ಕೈಗೊಂಡಿರುವ ಕ್ರಮದ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ವರದಿ ನೀಡಬೇಕು ಎಂದರು.

ಜಿಲ್ಲಾಮಟ್ಟದ ಅಧಿಕಾರಿಗಳು ತಮ್ಮ ಅಧೀನ ಕಚೇರಿಗಳಿಗೆ ಭೇಟಿ ನೀಡುವ ವೇಳೆ ಅಲ್ಲಿನ ಅಧಿಕಾರಿಗಳು, ಸಿಬ್ಬಂದಿಗೆ ಕೆಲಸ ಮಾಡಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಗಂಗಾ ಕಲ್ಯಾಣ
ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಿಸಿರುವ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡುವು ದರಲ್ಲಿ ಸಾಕಷ್ಟು ಪ್ರಗತಿ ಸಾಧಿಸಿಲ್ಲ. ಶೀಘ್ರವೇ ಅಂಬೇಡ್ಕರ್, ವಾಲ್ಮೀಕಿ, ಹಿಂದುಳಿದ ಮತ್ತು ದೇವರಾಜ ಅರಸು ಅಭಿವೃದ್ಧಿ ನಿಗಮಗಳ ಅಧಿಕಾರಿ ಗಳು ತಾಲ್ಲೂಕುಮಟ್ಟದಲ್ಲಿ ಸೆಸ್ಕ್‌ ಅಧಿಕಾರಿಗಳು ಮತ್ತು ಫಲಾನುಭಾವಿಗಳ ಸಭೆ ಕರೆಯಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಮುಂದಿನ ವರ್ಷಕ್ಕೆ ಸಂಬಂಧಿಸಿದ ಕ್ರಿಯಾಯೋಜನೆ ತಯಾರಿಕೆಗೆ ಪೂರ್ವಭಾವಿಯಾಗಿ ಸಿದ್ಧತೆ ಕೈಗೊಳ್ಳ ಬೇಕು. ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ, ಫೆಬ್ರರುವರಿ ಅಂತ್ಯದೊಳಗೆ ಪ್ರಸಕ್ತ ವರ್ಷದ ಕಾರ್ಯಕ್ರಮಗಳ ಭೌತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಿಬೇಕು. ಕಚೇರಿಗೆ ಸಂಬಂಧಿಸಿದ ಯಾವುದೇ ಪತ್ರ ವ್ಯವಹಾರಗಳ ಪ್ರಗತಿ ಬಗ್ಗೆ ಮಾಹಿತಿ ಹೊಂದಿರಬೇಕು ಎಂದರು.

ಸಕಾಲ ಯೋಜನೆಯ ಯಶಸ್ವಿ ಅನುಷ್ಠಾನದ ಬಗ್ಗೆ ಅಧಿಕಾರಿಗಳು ತಮ್ಮ ಕಚೇರಿಗೆ ಬರುವ ಅರ್ಜಿಯ ವಿಲೇವಾರಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಪ್ರತಿದಿನ ಎರಡು ಬಾರಿ ತಮ್ಮ ಇಲಾಖೆಯ ವೆಬ್‌ಸೈಟ್‌ನಲ್ಲಿ ಸಕಾಲ ಅರ್ಜಿಗಳ ಪ್ರಗತಿಯ ಬಗ್ಗೆ ವೀಕ್ಷಿಸಬೇಕು ಎಂದರು.   ಸಭೆಯ ನಂತರ ಯಳಂದೂರು ತಾಲ್ಲೂಕಿನಲ್ಲಿರುವ ಜೆಎಸ್ಎಸ್ ಸಂಸ್ಥೆಯ ಅಕ್ಷರ ದಾಸೋಹ ಕೇಂದ್ರಕ್ಕೆ ಭೇಟಿ ದಾಸೋಹ ತಯಾರಿಕೆ ಹಾಗೂ ಸರಬರಾಜಿನ ಬಗ್ಗೆ ಮಾಹಿತಿ ಪಡೆದುಕೊಂಡರು.

ಕೊಳ್ಳೇಗಾಲ ಪಟ್ಟಣದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಗಿರಿಜನ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಕುಂದುಕೊರತೆ ವಿಚಾರಿಸಿದರು.

ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎಚ್. ನರಸಿಂಹಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT