ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಿನ ಭೇಟಿ ‘ಸೂಚನೆ’ ರಾದ್ಧಾಂತ!

Last Updated 19 ಡಿಸೆಂಬರ್ 2013, 11:06 IST
ಅಕ್ಷರ ಗಾತ್ರ

ಕೊಪ್ಪಳ: ಸಾರ್ವಜನಿಕರು ಹಾಗೂ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಸೋಮವಾರ ಮತ್ತು ಶುಕ್ರವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಬೇಕು. ಅದೂ ಅವರು ಕೇಂದ್ರ ಸ್ಥಾನದಲ್ಲಿ ಇದ್ದಾಗ ಮಾತ್ರ ಭೇಟಿ ಮಾಡಬೇಕು ಎಂಬುದಾಗಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಹೊರಗೆ ಹಾಕಿರುವ ಸೂಚನಾ ಫಲಕ ಹೊಸ ವಿವಾದವನ್ನು ಹುಟ್ಟು ಹಾಕಿದೆ.

ಅಲ್ಲದೇ, ಜಿಲ್ಲೆಯಲ್ಲಿರುವ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಮನವಿ ಸಲ್ಲಿಸಲು ಕಚೇರಿಗೆ ಆಗಮಿಸಿದ್ದ ರಾಜ್ಯ ರೈತ ಸಂಘದ ಪದಾಧಿಕಾರಿಗಳನ್ನು ಇದೇ ಕಾರಣ ಮುಂದೊಡ್ಡಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಅವಕಾಶ ನೀಡದೇ ಇರುವ ಪ್ರಸಂಗ ಸಹ ಬುಧವಾರ ನಡೆಯಿತು.

ಆದರೆ, ಒಬ್ಬರು ಶಾಸಕ ಹಾಗೂ ಇಬ್ಬರು ಅವರ ಬೆಂಬಲಿಗರನ್ನು ಜಿಲ್ಲಾಧಿಕಾರಿಗಳ ಕೊಠಡಿಯೊಳಗೆ ಹೋಗಲು ಅನುಮತಿ ನೀಡಿದ್ದು ರೈತ ಮುಖಂಡರನ್ನು ಕೆರಳಿಸಿತಲ್ಲದೇ, ಜಿಲ್ಲಾಧಿಕಾರಿಗಳ ಈ ಧೋರಣೆಯನ್ನು ಖಂಡಿಸಿ ರೈತ ಮುಖಂಡರು ಧರಣಿ ನಡೆಸಿದ ಘಟನೆಯೂ ನಡೆಯಿತು.

ಘಟನೆ ವಿವರ: ಜಿಲ್ಲೆಯಲ್ಲಿರುವ ಮೂರು ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದೆ. ಅಲ್ಲದೇ, ಒಂದೇ ತೂಕದ ಯಂತ್ರ ಇರುವುದು ಸಹ ಸಮಸ್ಯೆಯನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಈ ಕೇಂದ್ರಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು. ಮೆಕ್ಕೆಜೋಳದ ಚೀಲಗಳನ್ನು ಹೊತ್ತ ಟ್ರ್ಯಾಕ್ಟರ್‌, ಲಾರಿಗಳ ತೂಕವನ್ನು ವೇಬಿ್ರಜ್‌ ಮೂಲಕ ದಾಖಲಿಸಿಕೊಳ್ಳಬೇಕು ಎಂಬ ಮನವಿ ಪತ್ರವನ್ನು ಸಲ್ಲಿಸಲು ರೈತ ಸಂಘದ ಮುಖಂಡರಾದ ಹನುಮಂತಪ್ಪ ಹೊಳೆಯಾಚೆ, ಭೀಮಸೇನ ಕಲಕೇರಿ ಹಾಗೂ ಇತರರು ಇಂದು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದರು.

ಆದರೆ, ಕಚೇರಿ ಹೊರಗಡೆ ಹಾಕಿದ್ದ ಸೂಚನಾ ಫಲಕದಲ್ಲಿ ಪ್ರಕಟಿಸಿರುವ ಸೂಚನೆ ಹಿನ್ನೆಲೆಯಲ್ಲಿ ಅಲ್ಲಿನ ಸಿಬ್ಬಂದಿ ರೈತ ಮುಖಂಡರನ್ನು ಜಿಲ್ಲಾಧಿಕಾರಿಗಳ ಕೊಠಡಿಯೊಳಗೆ ಬಿಡಲಿಲ್ಲ.

ಆದರೆ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಕುಷ್ಟಗಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶರಣು ತಳ್ಳಿಕೇರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀಬಾಯಿ ಹಳ್ಳೂರು ಪತಿ ಬಸವರಾಜ ಹಳ್ಳೂರ ಅವರನ್ನು ಜಿಲ್ಲಾಧಿಕಾರಿಗಳ ಕೊಠಡಿ ಒಳಗೆ ಬಿಟ್ಟಿದ್ದು ಎಷ್ಟು ಸರಿ ಎಂದು ರೈತರು ಆಕ್ಷೇಪಿಸಿದರು.

ಅಲ್ಲದೇ, ಕೇವಲ ವಾರದಲ್ಲಿ ಎರಡು ದಿನಗಳು ಮಾತ್ರ ಭೇಟಿ ಮಾಡಲು ಅವಕಾಶ ಎಂಬುದು ಎಷ್ಟು ಸರಿ. ನಾವೂ ಸಾರ್ವಜನಿಕರ (ರೈತರ) ಸಮಸ್ಯೆಗೆ ಪರಿಹಾರ ಕೋರಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಬಂದಿರುತ್ತೇವೆ ಎಂದ ರೈತ ಮುಖಂಡರು, ಅಲ್ಲಿದೇ ಧರಣಿ ಆರಂಭಿಸಿದರು.

ಕೊನೆಗೆ ಸುಮಾರು ಎರಡೂವರೆ ಗಂಟೆಗಳ ನಂತರ ಕೊಠಡಿಯಿಂದ ಹೊರಗೆ ಬಂದ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್‌, ರೈತ­ರಿಂದ ಮನವಿ ಪತ್ರ ಸ್ವೀಕರಿಸಿದರು. ಈ ಸಂದರ್ಭ­ದಲ್ಲಿ ಪ್ರತಿಭಟನಾಕಾರರು ಹಾಗೂ ಜಿಲ್ಲಾಧಿಕಾರಿ ನಡುವೆ ಮಾತಿನ ಚಕಮಕಿ ಸಹ ನಡೆಯಿತು.

ಕೊನೆಗೆ, ರೈತರ ಬೇಡಿಕೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಮೋಹನ್ ರಾಜ್‌, ಇದೇ 19ರಿಂದ ಜಿಲ್ಲೆಯ ಎಲ್ಲಾ ಮೂರು ಖರೀದಿ ಕೇಂದ್ರಗಳಲ್ಲಿ ತಲಾ ಇಬ್ಬರು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೇ, ಎಲ್ಲಾ ಕೇಂದ್ರಗಳಲ್ಲಿ ಹೆಚ್ಚುವರಿಯಾಗಿ ಒಂದು ತೂಕದ ಯಂತ್ರವನ್ನು ಸಹ ಅಳವಡಿಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT