ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದೋಣಿ ಪಯಣಿಗರಲ್ಲಿ ತಳಮಳ

ಪ್ರಜಾವಾಣಿ ವಾರ್ತೆ/ ಎನ್.ಉದಯಕುಮಾರ್
Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ತಾಂತ್ರಿಕವಾಗಿ ಆಡಳಿತ ಪಕ್ಷದ ಸದಸ್ಯರಾಗಿದ್ದುಕೊಂಡು ಸರ್ಕಾರದಿಂದ `ಲಾಭ'ವನ್ನೂ ಪಡೆಯಬೇಕು, ಬಿ.ಎಸ್.ಯಡಿಯೂರಪ್ಪ ಅವರ ಕೃಪಾಕಟಾಕ್ಷಕ್ಕೂ ಒಳಗಾಗಬೇಕು ಎಂದು ಎರಡು ದೋಣಿಗಳಲ್ಲಿ ಪಯಣಿಸುವ ಸಾಹಸ ಮಾಡಿದ ಶಾಸಕರಲ್ಲಿ ಕೆಲವರು ಈಗ ತಳಮಳಕ್ಕೆ ಒಳಗಾಗಿದ್ದಾರೆ.

ಚುನಾವಣೆಗೆ ಬರಿ ನಾಲ್ಕು ತಿಂಗಳು ಉಳಿದಿದೆ. ಪಕ್ಷ, ಶಿಸ್ತು ಕ್ರಮಕ್ಕೆ ಮುಂದಾಗಲಾರದು ಎಂಬ ಧೈರ್ಯದಲ್ಲಿ ಕೆಲವರು ಕರ್ನಾಟಕ ಜನತಾ ಪಕ್ಷದ ಸಮಾವೇಶದಲ್ಲಿ ವೇದಿಕೆ ಹತ್ತಿದ್ದರು. ಅವರ ನಂಬಿಕೆ ಹುಸಿಯಾಗುವ ಸೂಚನೆ ಹೊರಬೀಳುತ್ತಲೇ ಗಲಿಬಿಲಿಗೊಂಡಿದ್ದಾರೆ.

ಪಕ್ಷದಿಂದ ಅಮಾನತುಗೊಳಿಸುವ, ಉಚ್ಚಾಟನೆ ಮಾಡುವಂತಹ ಕ್ರಮಗಳ ಕುರಿತು ಹೆಚ್ಚು ತಲೆಕೆಡಿಸಿಕೊಂಡಂತೆ ಅನಿಸುವುದಿಲ್ಲ. ಸದಸ್ಯತ್ವದಿಂದ ಅನೂರ್ಜಿತಗೊಂಡರೆ ತಾಪತ್ರಯ ಎಂಬ ಭೀತಿ ಆವರಿಸಿದಂತಿದೆ. ವಿಧಾನಸಭಾಧ್ಯಕ್ಷರು ಪಕ್ಷದ ಕೋರಿಕೆಯನ್ನು ಮನ್ನಿಸಿ ಅನೂರ್ಜಿತಗೊಳಿಸಿದರೆ ಚುನಾವಣೆ ಹಿನ್ನೆಲೆಯಲ್ಲಿ ಸ್ವಲ್ಪಮಟ್ಟಿಗೆ ಹಿನ್ನಡೆ ಆಗಲಿದೆ. ಯುದ್ಧ ಕಾಲದಲ್ಲಿ `ಶಸ್ತ್ರ' ಕಸಿದುಕೊಂಡಂತೆ ಆಗುತ್ತದೆ ಎಂದು ಕೆಜೆಪಿ ಸಮಾವೇಶದಲ್ಲಿ ವೇದಿಕೆ ಏರಿದ್ದ ಶಾಸಕರೊಬ್ಬರು ಅಳಲು ತೋಡಿಕೊಂಡರು.

ಅನೂರ್ಜಿತಗೊಳಿಸಲು ನಿಯಮಗಳಲ್ಲಿ ಅವಕಾಶ ಇದೆಯೇ, ಒಂದು ವೇಳೆ ಅನೂರ್ಜಿತಗೊಳಿಸಿದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಏನಾದರೂ ತೊಡಕಾಗಬಹುದೇ ಎಂಬ ಆತಂಕ ಒಂದಿಬ್ಬರನ್ನು ಕಾಡತೊಡಗಿದೆ. ಈ ಕುರಿತು ಸ್ಪಷ್ಟತೆಯ ಕೊರತೆ ಅವರ ಮಾತುಗಳಲ್ಲೇ ವ್ಯಕ್ತವಾಯಿತು.

`ಹಾಗೇನಾದರೂ ಆದರೆ, ನಮ್ಮ ಮನೆಯವರನ್ನು ನಿಲ್ಲಿಸಿತೀನಿ...' ಎಂದು ಮೀಸಲು ಕ್ಷೇತ್ರವೊಂದನ್ನು ಪ್ರತಿನಿಧಿಸುತ್ತಿರುವ ಶಾಸಕರೊಬ್ಬರು ಹೇಳಿದರು. ಬೆಳಗಾದರೆ ಬಿಜೆಪಿಯ `ಕೋರ್ ಕಮಿಟಿ' ಸಭೆ ಸೇರಲಿದೆ. `ಭಿನ್ನರನ್ನೆಲ್ಲ ಬಾಣಲೆಯಲ್ಲಿ ಹಾಕಿ ಹುರಿಯುತ್ತೇವೆ' ಎಂದು ಡಿ.ವಿ.ಸದಾನಂದ ಗೌಡರು ಬೆಂಕಿ ಉಗುಳಿದ್ದಾರೆ. `ಲಕ್ಷ್ಮಣ ಗೆರೆ' ದಾಟಿದವರಲ್ಲಿ ಏನೋ ಎತ್ತೋ ಎಂಬ ಆತಂಕ ಶುರುವಾಗಿದೆ.

ಕೆಜೆಪಿ ಜೊತೆ ಗುರುತಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ವಿಜಯ ಸಂಕೇಶ್ವರ ಅವರು ಸದಸ್ಯತ್ವಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ವಿಧಾನಸಭಾ ಸದಸ್ಯ ನೆಹರೂ ಓಲೇಕಾರ ಅವರೂ ರಾಜೀನಾಮೆ ಮಾತುಗಳನ್ನು ಆಡಿದ್ದಾರೆ.

ನೈತಿಕ ಕಾರಣಕ್ಕೆ ರಾಜೀನಾಮೆ ನೀಡುವುದಾಗಿದ್ದರೆ ಕೆಜೆಪಿ ಸಮಾವೇಶದಲ್ಲಿ ಭಾಗವಹಿಸುವ ಮೊದಲೇ ನೀಡಬೇಕಾಗಿತ್ತು. ಈಗ ರಾಜೀನಾಮೆ ನೀಡಿದರೆ, ಅದಕ್ಕೆ ಬೇರೆಯೇ ಅರ್ಥ ಬರುತ್ತದೆ. ಅನೂರ್ಜಿತಗೊಳ್ಳಬಹುದು ಎಂಬ ಭಯದಿಂದ ರಾಜೀನಾಮೆ ನೀಡಿದರು ಎಂದೇ ಜನರು ಭಾವಿಸುತ್ತಾರೆ.

ರಾಜೀನಾಮೆ ವಿಷಯದಲ್ಲಿ ಶಾಸಕರಲ್ಲಿ ಒಮ್ಮತವಿಲ್ಲ. ಪಾರಾಗುವ `ಆಟ'ಗಳಲ್ಲಿ ಕೆಲವರು ತೊಡಗಿದ್ದಾರೆ. ಯಡಿಯೂರಪ್ಪ ಪದೇ ಪದೇ ಒತ್ತಾಯಿಸಿದ ಕಾರಣ ಸಮಾವೇಶದಲ್ಲಿ ಭಾಗವಹಿಸಿದ್ದಾಗಿ ಬಿಜೆಪಿ ಮುಖಂಡರ ಬಳಿ ಒಂದಿಬ್ಬರು ಶಾಸಕರು ಗೋಗರೆದಿದ್ದಾರೆ. ಇದು, ಬೀಸೊ ದೊಣ್ಣೆಯಿಂದ ಪಾರಾಗುವ ತಂತ್ರ ಆಗಿರಬಹುದು. `ಎಲ್ಲರೂ ಸಭೆ ನಡೆಸ್ತೀವಿ. ರಾಜೀನಾಮೆ ನೀಡಲೇಬೇಕು ಎಂಬ ನಿರ್ಧಾರಕ್ಕೆ ಬಂದರೆ, ಆಗ ನೋಡೋಣ...' ಎಂದು ಸದಸ್ಯರೊಬ್ಬರು ಪ್ರತಿಕ್ರಿಯಿಸಿದರು.

`ಹೀಗಾಗುತ್ತದೆ ಎಂದು ಗೊತ್ತಿದ್ದಿದ್ದರೆ, ಉಪಾಹಾರ ಕೂಟದಲ್ಲಿ ಭಾಗವಹಿಸಿಯೂ ಬಚಾವಾಗಿರುವ ಸಚಿವರಂತೆ ಜಾಣತನ ತೋರಿ, ಅವಧಿ ಕೊನೆಗೆ ಕೆಜೆಪಿ ಸೇರಬಹುದಿತ್ತು' ಎಂದು ಮತ್ತೊಬ್ಬ ಶಾಸಕರು ಗೋಳಾಡಿದರು.   

ಶಾಸಕರ ರಾಜೀನಾಮೆ ಪ್ರಸ್ತಾವಕ್ಕೆ ಯಡಿಯೂರಪ್ಪ ಜೊತೆ ಗುರುತಿಸಿಕೊಂಡಿರುವ ಸಚಿವರ ವಿರೋಧ ಇದೆಯಂತೆ. ಸರ್ಕಾರ ಕುಸಿದರೆ ಶಾಸಕರಿಗಿಂತ ಸಚಿವರಿಗೇ ಹೆಚ್ಚು ನಷ್ಟ. ಸರ್ಕಾರದ ಸಂಪನ್ಮೂಲ ಬಳಸಿಕೊಂಡು ಕೆಜೆಪಿ ಕಟ್ಟಲು ನೆರವಾಗುತ್ತಿದ್ದಾರೆ ಎಂಬ ಆರೋಪ ಈ ಸಚಿವರ ಮೇಲೆ ಇದೆ. ಹೀಗಾಗಿ ರಾಜೀನಾಮೆ ಪ್ರಸ್ತಾವ ಅಪಥ್ಯ ಎನಿಸಿರಲೂಬಹುದು.

ವೇದಿಕೆ ಹಂಚಿಕೊಂಡ ಶಾಸಕರ ವಿರುದ್ಧ ಗುಡುಗುವ ಬಿಜೆಪಿ ಮುಖಂಡರು, ಅರ್ಧ ಡಜನ್‌ಗೂ ಹೆಚ್ಚು ಸಚಿವರ ಇಬ್ಬಗೆಯ ನಿಲುವಿನ ಕುರಿತು ಗೊತ್ತಿದ್ದೂ ಗೊತ್ತಿಲ್ಲದವರಂತೆ ನಡೆದುಕೊಳ್ಳುತ್ತಿರುವುದರ ಹಿಂದಿನ ಮರ್ಮ ಏನಿರಬಹುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT