ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಪ್ರತ್ಯೇಕ ಅಪಘಾತ: 7 ಜನರ ಸಾವು

Last Updated 15 ಫೆಬ್ರುವರಿ 2011, 17:15 IST
ಅಕ್ಷರ ಗಾತ್ರ

ಬಾಣಾವರ/ಉಡುಪಿ: ಹಾಸನ ಜಿಲ್ಲೆಯ ಬಾಣಾವರ ಬಳಿ ಸೋಮವಾರ ರಾತ್ರಿ ಮತ್ತು ಉಡುಪಿ ಜಿಲ್ಲೆಯ ಮೂಲ್ಕಿಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದ ಪ್ರಕರಣಗಳಲ್ಲಿ ಒಟ್ಟು 7 ಜನ ಮೃತಪಟ್ಟಿದ್ದಾರೆ. ಎರಡೂ ಕಡೆ ಮರಕ್ಕೆ ವಾಹನ ಡಿಕ್ಕಿ ದುರ್ಘಟನೆ ಸಂಭವಿಸಿದೆ.

ಬಾಣಾವರ ವರದಿ: ಧರ್ಮಸ್ಥಳ ತೀರ್ಥಯಾತ್ರೆ ಮುಗಿಸಿಕೊಂಡು ಬೆಂಗಳೂರಿಗೆ ಮರಳುತ್ತಿದ್ದ ಪ್ರವಾಸಿಗರ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಕಾರಣ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅರಸೀಕೆರೆ ತಾಲ್ಲೂಕು ಬಾಣಾವರದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ.

ಬೆಂಗಳೂರಿನ ದಾಸರಹಳ್ಳಿಯ ಏಳು ಮಂದಿ ಇನ್ನೋವಾ ಕಾರಿನಲ್ಲಿ ಧರ್ಮಸ್ಥಳಕ್ಕೆ ಬಂದಿದ್ದರು. ಅಲ್ಲಿ ದೇವರ ದರ್ಶನ ಪಡೆದು, ಕುಂದಾಪುರದಲ್ಲೂ ಒಂದು ದೇವಸ್ಥಾನಕ್ಕೆ ಭೇಟಿ ನೀಡಿ ಸೋಮವಾರ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಮಾರ್ಗಮಧ್ಯೆ ಬಾಣಾವರ ಪಟ್ಟಣದ ಪೆಟ್ರೋಲ್ ಬಂಕ್ ಬಳಿ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ ಚಿನ್ನಸ್ವಾಮಿ (42), ಮಧುಸೂದನ್ (22) ರಂಗಸ್ವಾಮಿ (41) ಹಾಗೂ ಶಿವಕುಮಾರ್ ಎಂಬುವವರು ಸ್ಥಳದಲ್ಲೇ ಮೃತಪಟ್ಟರೆ ವೆಂಕಟೇಶಮೂರ್ತಿ (32) ಹಾಗೂ ಮರಿಸ್ವಾಮಿ (33) ಎಂಬುವವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಸೋಮಶೇಖರ್ ಎಂಬುವವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನೆ ನಡೆದಾಗ ಚಿನ್ನಸ್ವಾಮಿ ಎಂಬುವವರು ವಾಹನ ಚಲಾಯಿಸುತ್ತಿದ್ದರು. ಗಾಯಗೊಂಡ ಮೂವರನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿವೈಎಸ್‌ಪಿ ರಶ್ಮಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ. ಬಾಣಾವರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಲ್ಕಿ ವರದಿ: ಈದ್ ಮಿಲಾದ್ ಆಚರಣೆಗಾಗಿ ಸುರತ್ಕಲ್‌ನ ಕೃಷ್ಣಾಪುರದಿಂದ ಭಟ್ಕಳಕ್ಕೆ ಟಾಟಾ ಸಿಯೆರಾ ವಾಹನದಲ್ಲಿ ತೆರಳುತ್ತಿದ್ದವರಲ್ಲಿ ಮೂವರು, ಮೂಲ್ಕಿ ಸಮೀಪ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಬರುವ ಪಡು ಪಣಂಬೂರು ಬಳಿ ಮಂಗಳವಾರ ಬೆಳಿಗ್ಗೆ ನಡೆದ ಅಪಘಾತದಲ್ಲಿ ಸಾವಿಗೀಡಾದರು. ಚೊಕ್ಕಬೆಟ್ಟು ನಿವಾಸಿ ಇಮ್ರಾನ್ (23), ಅಶ್ರಫ್ (26), ವಾಹನ ಚಾಲಕ ಆಸಿಫ್(24) ಸ್ಥಳದಲ್ಲಿಯೆ ಮೃತಪಟ್ಟರೆ, ವಾಹನದಲ್ಲಿದ್ದ ಇತರೆ 9 ಮಂದಿ ತೀವ್ರವಾಗಿ ಗಾಯಗೊಂಡಿಡರು.

ಗಾಯಾಳು ಅಜರುದ್ದೀನ್, ಮಹಮ್ಮದ್ ಶಮಿರ್, ಮಹಮ್ಮದ್ ಜಾವೆದ್, ಮಹಮ್ಮದ್ ಅಶ್ರಫ್, ಮಹಮ್ಮದ್ ಫೈಜಲ್, ಅಶ್ರಫ್, ನದೀಮ್, ಶಮಿರ್, ಇಮ್ರಾನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ 10 ವರ್ಷದ ಬಾಲಕನೂ ಇದ್ದಾನೆ.

ಪಡು ಪಣಂಬೂರು ಬಳಿ ವಾಹನವೊಂದು ಹಿಂದಿಕ್ಕುವ ಭರದಲ್ಲಿ ಗುದ್ದಿದ ಪರಿಣಾಮ ಟಾಟಾ ಸಿಯೇರಾ ರಸ್ತೆ ಬದಿಯ ಕಂದಕಕ್ಕೆ ಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT