ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಬಾರಿ ಸತತ ಗೆಲುವು ಕಂಡವರಿಲ್ಲ

ಕೆಂಪು ಮೆಣಸಿನಕಾಯಿ ನಾಡಲ್ಲಿ ಖಾರವಿಲ್ಲದ ರಾಜಕೀಯ
Last Updated 6 ಏಪ್ರಿಲ್ 2013, 6:05 IST
ಅಕ್ಷರ ಗಾತ್ರ

ಹಾವೇರಿ: ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವಪ್ಪ ಅವರಿಗೆ ಜನ್ಮ ನೀಡುವ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿ ವಹಿಸಿಕೊಂಡ ಹಾಗೂ ಜಗತ್ಪ್ರಸಿದ್ಧ ಕಡಕ್ ಕೆಂಪು ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ತಾಲ್ಲೂಕು, ರಾಜಕೀಯ ದಲ್ಲಿ ಮಾತ್ರ ಎಂದೂ ಖಡಕ್ ಆಗದೇ ಸೌಮ್ಯ ವಾಗಿಯೇ ಜಿಲ್ಲೆಯ ರಾಜಕಾರಣದಲ್ಲಿ ಹೆಸರು ಮಾಡಿದೆ.

ಬ್ಯಾಡಗಿ ವಿಧಾನಸಭಾ ಕ್ಷೇತ್ರವು ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಮೈಲಾರ ಮಹಾ ದೇವ ಅವರ ಪತ್ನಿ ಸಿದ್ಧಮ್ಮ ಮೈಲಾರ, ಇನ್ನೊಬ್ಬ ಸ್ವಾತಂತ್ರ್ಯ ಹೋರಾಟಗಾರ ಕೆ.ಎಫ್.ಪಾಟೀಲ, ಆಧುನಿಕ ವಚನಕಾರ ಮಹಾದೇವ ಬಣಕಾರ ಅವರಿಗೆ ರಾಜಕೀಯ ಹುಟ್ಟು ನೀಡಿದೆ, ಆದರೆ, ಇಲ್ಲಿ ಸ್ಥಳೀಯರಿಗಿಂತ ಹೊರಗಡೆಯಿಂದ ಬಂದವರಿಗೆ ಹೆಚ್ಚಿನ ಮಾನ್ಯತೆ ನೀಡಲಾಗಿದೆ.

1952 ಹಾಗೂ 1957 ರ ಚುನಾವಣೆಯಲ್ಲಿ ಬ್ಯಾಡಗಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನು ಹೊಂದಿರಲಿಲ್ಲ. ಈ ಕ್ಷೇತ್ರವು ರಾಣೆಬೆನ್ನೂರಿನ ದ್ವಿಸದಸ್ಯ ಕ್ಷೇತ್ರಕ್ಕೆ ಸೇರಿಕೊಂಡಿತ್ತು. ಆದರೆ, ಈ ಕ್ಷೇತ್ರದ ಜನರು ಸಹ ರಾಣೆಬೆನ್ನೂರ ಕ್ಷೇತ್ರಕ್ಕೆ ಸ್ಪರ್ಧಿಸಿದ ಇಬ್ಬರು ಅಭ್ಯರ್ಥಿಗಳಿಗೆ ಮತ ನೀಡುವ ಅಧಿಕಾರ ಪಡೆದಿದ್ದರು.

ಬ್ಯಾಡಗಿ ಕ್ಷೇತ್ರವು 1962 ರಲ್ಲಿ ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗಿ ಹೊರ ಹೊಮ್ಮಿತು. 1962 ರಿಂದ 1972 ರವರೆಗೆ ಸಾಮಾನ್ಯ ಕ್ಷೇತ್ರ ವಾದ ಬ್ಯಾಡಗಿ, 1978ರಿಂದ 2004 ರವರೆಗೆ ಪರಿಶಿಷ್ಟ ಜಾತಿ ಮೀಸಲಾಯಿತು. 2008 ರಲ್ಲಿ ಕ್ಷೇತ್ರಗಳ ಪುನರ್‌ವಿಂಗಡಣೆಯಲ್ಲಿ ಮತ್ತೆ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಗೊಂಡಿತು.

ಒಟ್ಟು ಇಲ್ಲಿವರೆಗೆ 11 ಚುನಾವಣೆಗಳಲ್ಲಿ ಆರು ಬಾರಿ ಕಾಂಗ್ರೆಸ್‌ಗೆ ಬೆಂಬಲಿಸಿದ್ದರೆ, ಉಳಿದ ಐದು ಚುನಾವಣೆಯಲ್ಲಿ ಜನತಾ ಪಕ್ಷ, ಪ್ರಜಾ ಸೋಷಲಿಸ್ಟ್ ಪಕ್ಷ, ಜನತಾದಳಕ್ಕೆ ತಲಾ ಒಂದು ಬಾರಿ ಹಾಗೂ ಬಿಜೆಪಿಗೆ ಎರಡು ಬಾರಿ ಬೆಂಬಲಿಸಿ ದ್ದಾರೆ. ಆದರೆ, ಹನ್ನೊಂದು ಚುನಾವಣೆಗಳಲ್ಲಿ ಕಾಂಗ್ರೆಸ್ ಒಂದೇ ಪಕ್ಷಕ್ಕೆ ಹೆಚ್ಚು ಸಲ ಬೆಂಬಲಿಸಿದ್ದರೂ, ಸ್ಥಳೀಯ ಅಭ್ಯರ್ಥಿಗಳಿಗಿಂತ ಹೊರಗಿನಿಂದ ಬಂದು ಕ್ಷೇತ್ರದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಹೆಚ್ಚಿನ ಮನ್ನಣೆ ನೀಡಿರುವುದು ಈ ಕ್ಷೇತ್ರದ ವಿಶೇಷ.

ಈ ಕ್ಷೇತ್ರದಲ್ಲಿ ಸತತವಾಗಿ ಎರಡು ಬಾರಿ ಯಾರೊಬ್ಬರು ಆಯ್ಕೆಯಾಗಿಲ್ಲ. ಡಾ.ಎಚ್.ಡಿ. ಲಮಾಣಿ (1983, 1989) ಹಾಗೂ ಕೆ.ಎಸ್.ಬೀಳಗಿ (1985, 1994) ಒಂದು ಚುನಾವಣೆ ಬಿಟ್ಟು ಮತ್ತೊಂದು ಚುನಾ ವಣೆಯಲ್ಲಿ ಗೆಲವು ಸಾಧಿಸಿದ್ದಾರೆ. 1962ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಸಿದ್ಧಮ್ಮ ಮೈಲಾರ ಆಯ್ಕೆಯಾಗಿದ್ದು ಬಿಟ್ಟರೇ, ಕ್ಷೇತ್ರದಲ್ಲಿ ಮತ್ತೆ ಮಹಿಳೆಯರಿಗೆ ಆದ್ಯತೆ ದೊರೆತಿಲ್ಲ.

ಕ್ಷೇತ್ರದವರೇ ಆದ ಸಿದ್ಧಮ್ಮ ಮೈಲಾರ, ಕೆ.ಎಫ್.ಪಾಟೀಲ, ಮಹಾದೇವ ಬಣಕಾರ, ಎಂ.ಎಂ. ಮಾಳಗಿ, ನೆಹರೂ ಓಲೇಕಾರ, ಸುರೇಶ ಗೌಡ ಪಾಟೀಲ ಅವರನ್ನು ಒಂದು ಬಾರಿ ಗೆಲ್ಲಿಸಿ ದರೆ, ಹೊರಗಿನವರಾದ ಕೆ.ಎಸ್.ಬೀಳಗಿ, ಡಾ.ಎಚ್. ಡಿ.ಲಮಾಣಿ ತಲಾ ಎರಡು ಬಾರಿ ಆಯ್ಕೆಯಾಗಿದ್ದಾರೆ, ಒಂದು ಬಾರಿ ಆಯ್ಕೆಯಾದ ರುದ್ರಪ್ಪ ಲಮಾಣಿ ಸಹ ಹೊರಗಿನವರಾಗಿದ್ದಾರೆ. ಇಲ್ಲಿವರೆಗೆ ಈ ಕ್ಷೇತ್ರದಿಂದ ಆಯ್ಕೆಯಾದ ಇಬ್ಬರು ಮಾತ್ರ ಸಚಿವರಾಗಿ ಕಾರ್ಯ ನಿರ್ವಹಿ ಸಿದ್ದರೆ, ಒಬ್ಬರು ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಬೋಧನೆಯಿಂದ ಚುನಾವಣೆಗೆ:  ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ ಡಾ.ಎಚ್.ಡಿ.ಲಮಾಣಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಜಕಾರಣಕ್ಕೆ ದುಮುಕಿ 1983 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕ ರಾಗಿ ಆಯ್ಕೆಯಾದರು. 1985 ಚುನಾವಣೆ ಯಲ್ಲಿ ಸೋತರು. 1989 ರಲ್ಲಿ ಮತ್ತೆ ಶಾಸಕ ರಾದರೆ, 1999 ರಲ್ಲಿ ನೆಹರೂ ಓಲೇಕಾರ ಅವರು ಕಾಲೇಜು ಪ್ರಾಧ್ಯಾಪಕ ಸ್ಥಾನಕ್ಕೆ ರಾಜೀ ನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಿದರೂ ಆಯ್ಕೆಯಾಗಲಿಲ್ಲ. 2004 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿದರು.

ಕಲ್ಲೇಟಿನಿಂದ ಸಚಿವ ಸ್ಥಾನ: ಡಾ, ಎಚ್.ಡಿ. ಲಮಾಣಿ ಅವರು ಸಚಿವರಾಗಲು ಒಂದು ಹಿನ್ನೆಲೆ ಯಿದೆ. 1989 ರ ಚುನಾವಣೆಯಲ್ಲಿ ಪ್ರಚಾರ ಸಂದರ್ಭದಲ್ಲಿ ಜನರು ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಲಮಾಣಿ ಅವರತ್ತ ಕಲ್ಲೆಸರು. ಆದರೆ, ಅದು ಅವರಿಗೆ ಬೀಳದೇ ಪ್ರಚಾರಕ್ಕಾಗಿ ಬಂದ ವೀರಪ್ಪ ಮೊಯಿಲಿ ಅವರಿಗೆ ಬಿದ್ದಿತು. ಆಗ, ಮೊಯಿಲಿ ಅವರು,ಜನರ ಆಕ್ರೋಶವನ್ನು ಅರಿತು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಬ್ಯಾಡಗಿ ಕ್ಷೇತ್ರವನ್ನು ದತ್ತು ತೆಗೆದು ಕೊಳ್ಳುವುದಾಗಿ ತಿಳಿಸಿದ್ದರು.

ಅವರ ನಿರೀಕ್ಷೆಯಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು, ಬ್ಯಾಡಗಿ ಕ್ಷೇತ್ರವನ್ನು ದತ್ತಕ್ಕೆ ತೆಗೆದುಕೊಳ್ಳುವುದರ ಜತೆಗೆ ಲಮಾಣಿಯವರಿಗೆ ಶಿಕ್ಷಣ ಸಚಿವ ಸ್ಥಾನ ನೀಡಿದರು. ಅದರಂತೆ ಈ ಕ್ಷೇತ್ರ ಇನ್ನೊಬ್ಬ ಶಾಸಕ ಕೆ.ಎಸ್.ಬೀಳಗಿ ಅವರು ಜನತಾದಳ ಸರ್ಕಾರದಲ್ಲಿ ಸಾರಿಗೆ ಮಂತಿಗಳಾಗಿದ್ದರು. ಬಿಜೆಪಿ ಶಾಸಕ ನೆಹರೂ ಓಲೇಕಾರ ಅವರು ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಆಯೋಗದ ಅಧ್ಯಕ್ಷರಾಗಿದ್ದರು.

ಚುನಾವಣಾ ಇತಿಹಾಸ: 1962ರಿಂದ 2008 ರವರೆಗೆ ನಡೆದ ಬ್ಯಾಡಗಿ ಕ್ಷೇತ್ರದ 11 ಚುನಾವಣೆಗಳಲ್ಲಿ ಮೊದಲು ಮೂರು ಚುನಾ ವಣೆಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಸಿದ್ದಮ್ಮ ಮೈಲಾರ. ಕೆ.ಎಫ್.ಪಾಟೀಲ ಹಾಗೂ ಸಾಹಿತಿ ಮಹದೇವ ಬಣಕಾರ ಅವರನ್ನು ಗೆಲ್ಲಿಸಿದೆ.

ಬ್ಯಾಡಗಿ ಕ್ಷೇತ್ರದ ಚುನಾವಣಾ ಫಲಿತಾಂಶದ ಸಂಕ್ಷಿಪ್ತ ವಿವರ ಇಲ್ಲಿದೆ.
1962ರ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ಧಮ್ಮ ಮಹಾದೇವಪ್ಪ ಮೈಲಾರ 21,092 ಮತಗಳಿಸಿ ಆಯ್ಕೆ ಯಾದರೆ, ಪ್ರಜಾ ಸೋಷಲಿಸ್ಟ್ ಪಾರ್ಟಿ ಅಭ್ಯರ್ಥಿ ಎಂ.ಜಿ. ಬಣಕಾರ 13,958 ಮತ ಪಡೆದು ಸೋಲು ಅನುಭವಿಸಿದರು. 1967 ರ ಚುನಾವಣೆಯಲ್ಲಿ ಪ್ರಜಾಸೋಷಲಿಸ್ಟ್ ಪಾರ್ಟಿ ಅಭ್ಯರ್ಥಿ ಎಂ.ಜಿ. ಬಣಕಾರ 23,055 ಮತಗಳಿ ಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸಿದ್ಧಮ್ಮ ಮೈಲಾರ ಸೋಲಿಸಿ ಸೇಡು ತೀರಿಸಿಕೊಂಡರು.

1972 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಫ್. ಪಾಟೀಲ 19,792 ಮತಗಳಿಸಿ ಆಯ್ಕೆಯಾದರೆ, 1978 ರಲ್ಲಿ ಮೀಸಲು ಕ್ಷೇತ್ರವಾದ ನಂತರ ಇಂದಿರಾ ಕಾಂಗ್ರೆಸ್‌ನ ಅಭ್ಯರ್ಥಿ ಎಂ.ಎಂ. ಮಾಳಗಿ  27,640 ಮತ ಪಡೆದು ಜಯಶಾಲಿಯಾದರು.

1983 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ. ಲಮಾಣಿ ಅವರು 20,377 ಮತಗಳಿಸಿ ಜಯಗಳಿಸಿದರು. 1985 ರ ಚುನಾವಣೆಯಲ್ಲಿ ಜನತಾಪಕ್ಷದ ಅಭ್ಯರ್ಥಿ ಕೆ.ಎಸ್. ಬೀಳಗಿ 36,694 ಮತಗಳಿಸಿ ಗೆಲುವು ಸಾಧಿಸಿದರು. 1989 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಡಾ. ಎಚ್.ಡಿ. ಲಮಾಣಿ 36,694 ಮತ ಪಡೆದು ಎರಡನೇ ಬಾರಿ ಆಯ್ಕೆಯಾದರು.

1994 ರ ಚುನಾ ವಣೆಯಲ್ಲಿ ಜನತಾದಳದಿಂದ ಸ್ಪರ್ಧೆಸಿದ ಅಭ್ಯರ್ಥಿ ಕೆ.ಎಸ್. ಬೀಳಗಿ 29,905 ಮತಗಳಿಸಿ ಎರಡನೇ ಬಾರಿಗೆ ಆಯ್ಕೆಯಾದರು.

1999 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ, 37,712 ಮತಗಳಿಸಿ ಆಯ್ಕೆಯಾದರು. 

2004ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನೆಹರೂ ಓಲೇಕಾರ 52,686 ಮತಗಳಿಸಿ ಆಯ್ಕೆಯಾದರೆ, 2008 ರ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಈ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆಗಿಳಿದ ಸುರೇಶಗೌಡ ಪಾಟೀಲ 59,642 ಮತ ಪಡೆದು ಜಯಗಳಿಸಿದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಬಸವರಾಜ ಶಿವಣ್ಣನವರ 48,238 ಮತ ಪಡೆದು ಸೋತರು.

ರಾಜಕೀಯ ರಂಗು: ಪ್ರಸ್ತುತ 2013 ರ ವಿಧಾನಸಭೆ ಚುನಾವಣೆ ರಾಜಕೀಯ ರಂಗು ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ. 2008 ರಲ್ಲಿ ಬಿಜೆಪಿ ಶಾಸಕರಾಗಿದ್ದ ಸುರೇಶಗೌಡ ಪಾಟೀಲರು ಬಿಜೆಪಿ ಬಿಟ್ಟು ಕೆಜೆಪಿ ಸೇರಿ ಆ ಪಕ್ಷದ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದರು.

ಆದರೆ, ಅವರು ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದ್ದಾರಲ್ಲದೇ, ಯಾವುದೇ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಹೇಳಿದ್ದಾರೆ. ಸುರೇಶಗೌಡರ ನಿರ್ಧಾರದಿಂದ ಇನ್ನೊಬ್ಬ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಅವರಿಗೆ ಕೆಜೆಪಿ ಅಭ್ಯರ್ಥಿಯಾಗುವ ಅವಕಾಶ ದೊರೆತಿದೆ.

ಕಾಂಗ್ರೆಸ್‌ನಿಂದ ಮಾಜಿ ಸಚಿವ ಬಸವರಾಜ ಶಿವಣ್ಣನವರ, ಬಿಜೆಪಿಯಿಂದ ಜಿ.ಪಂ.ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಚುನಾವಣೆಯಲ್ಲಿ ತೀವ್ರ ಹಣಾಹಣಿ ಏರ್ಪಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT