ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವರ್ಷದ ಮಗುವಿನ ಅಪಹರಣ: ನಕಲಿ ವೈದ್ಯೆ, ಪತಿ ಬಂಧನ

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ವರ್ಷದ ಮಗುವನ್ನು ಅಪಹರಿಸಿದ್ದ ನಕಲಿ ವೈದ್ಯೆ ಹಾಗೂ ಆಕೆಯ ಪತಿಯನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸುಳ್ಯ ತಾಲ್ಲೂಕಿನ ಎಡಮಂಗಲ ಗ್ರಾಮದ ವಾಣಿ (30) ಮತ್ತು ಅವರ ಪತಿ ರಾಜೇಶ್ (36) ಬಂಧಿತರು.
ಕೊಡಿಗೇಹಳ್ಳಿಯ ಕೆನರಾ ಬ್ಯಾಂಕ್ ಲೇಔಟ್ ನಿವಾಸಿ ಚಿನ್ನಾಭರಣ ವ್ಯಾಪಾರಿ ಶ್ರೀಕಾಂತ್ ಮತ್ತು ರೂಪಾ ದಂಪತಿಯ ಮಗು ಸನೂಪ್‌ನನ್ನು ಆರೋಪಿಗಳು ಅಪಹರಿಸಿದ್ದರು. ಉಡುಪಿಯಲ್ಲಿ ಅವರು ಇರುವ ಬಗ್ಗೆ ಮಾಹಿತಿ ಪಡೆದು ಇಬ್ಬರನ್ನೂ ಬಂಧಿಸಿ ಮಗುವನ್ನು ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ವೈದ್ಯೆ: ಎಸ್ಸೆಸ್ಸೆಲ್ಸಿ ತರಗತಿಯಲ್ಲಿ ಅನುತ್ತೀರ್ಣ ಆಗಿರುವ ವಾಣಿ ಆಯುರ್ವೇದ ವೈದ್ಯೆ ಎಂದು ಹೇಳಿಕೊಂಡಿದ್ದರು. ಕೆನರಾ ಬ್ಯಾಂಕ್ ಲೇಔಟ್‌ನಲ್ಲಿ ಅವರು `ಗುರು ರಾಘವೇಂದ್ರ ಆಯುರ್ವೇದ ಕ್ಲಿನಿಕ್~ ನಡೆಸುತ್ತಿದ್ದರು. ಶ್ರೀಕಾಂತ್ ಅವರ ಮನೆಯನ್ನು ಬಾಡಿಗೆಗೆ ಪಡೆದು ವಾಸವಿದ್ದರು. ಸನೂಪ್‌ನನ್ನು ವಾಣಿ ಅವರು ಆಗಾಗ್ಗೆ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಸನೂಪ್ ಸಹ ದಂಪತಿಯನ್ನು ಹಚ್ಚಿಕೊಂಡಿದ್ದ ಎಂದು ಇನ್‌ಸ್ಪೆಕ್ಟರ್ ಪುನೀತ್ ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

ಸೆ.29ರಂದು ಆರೋಪಿಗಳು ಸನೂಪ್‌ನನ್ನು ಅಪಹರಿಸಿದ್ದರು. ಮಗು ಕಾಣೆಯಾದ ಬಗ್ಗೆ ಶ್ರೀಕಾಂತ್ ದೂರು ಕೊಟ್ಟಿದ್ದರು. ಉಡುಪಿ ಪೊಲೀಸರ ನೆರವಿನಿಂದ ಆರೋಪಿಗಳನ್ನು ಬಂಧಿಸಲಾಯಿತು.

ಹಣಕ್ಕಾಗಿ ಅವರು ಈ ಬೇಡಿಕೆಯನ್ನು ಇಟ್ಟಿರಲಿಲ್ಲ. ಅಪಹರಣಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಮಗುವನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋಗಿದ್ದೆವು ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ.

ವಾಣಿ ಮತ್ತು ರಾಜೇಶ್ ಅವರ ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು. ಈಶಾನ್ಯ ವಿಭಾಗದ ಡಿಸಿಪಿ ಬಿ.ಆರ್.ರವಿಕಾಂತೇಗೌಡ ಅವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT