ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರೆ ಬೂದಿಹಾಳು: ಬಾಲ್ಯ ವಿವಾಹಕ್ಕೆ ತಡೆ

Last Updated 16 ಜುಲೈ 2013, 10:23 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಎರೆ ಬೂದಿಹಾಳು ಗ್ರಾಮದಲ್ಲಿ ನಿಗದಿಯಾಗಿದ್ದ ಬಾಲ್ಯವಿವಾಹಕ್ಕೆ ಪೊಲೀಸರು ಹಾಗೂ ಮಕ್ಕಳ ಸಹಾಯವಾಣಿ (ಚೈಲ್ಡ್ ಲೈನ್) ಜಂಟಿ ಕಾರ್ಯಾಚರಣೆ ನಡೆಸಿ, ತಡೆಯೊಡ್ಡಿದ ಘಟನೆ ಭಾನುವಾರ ನಡೆದಿದೆ.

ಎರೆಬೂದಿಹಾಳು ಗ್ರಾಮದ 18 ವರ್ಷದ ಬಾಲಕ ಹಾಗೂ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಬೂದನೂರು ಗ್ರಾಮದ 17 ವರ್ಷದ ಬಾಲಕಿಗೆ ವರನ ಸ್ವಗೃಹದಲ್ಲಿ ಮದುವೆ ನಿಗದಿಯಾಗಿತ್ತು. ಈ ವಿಷಯವನ್ನು ವ್ಯಕ್ತಿಯೊಬ್ಬರು ಮಲೇಬೆನ್ನೂರು ಪೊಲೀಸರಿಗೆ ತಿಳಿಸಿದ್ದರು. ದೂರವಾಣಿಯಲ್ಲಿ ದೊರೆತ ಮಾಹಿತಿ ಖಚಿತಪಡಿಸಿಕೊಂಡ ಅಧಿಕಾರಿಗಳು, ಮಕ್ಕಳ ಸಹಾಯವಾಣಿ ಸಂಯೋಜಕರ ಗಮನಕ್ಕೆ ತಂದಿದ್ದರು.

`ಡಾನ್ ಬಾಸ್ಕೊ ಮಕ್ಕಳ ಸಹಾಯವಾಣಿ'ಯ ಸಂಯೋಜಕ ಟಿ.ಎಂ.ಕೊಟ್ರೇಶ್, ಸಬ್ ಇನ್‌ಸ್ಪೆಕ್ಟರ್ ಜಿ.ಬಾಬು, ಎಎಸ್‌ಐ ಕೆ.ಎಲ್.ರಾಮನಾಯ್ಕ, ಸಿಬ್ಬಂದಿ ವೆಂಕಟೇಶ್, ಫೈರಾಜ್, ರಾಜು ದೊಡ್ಡಮನಿ, ಎಂ.ಸುನೀತಾ ಅವರೊಂದಿಗೆ ಮದುವೆ ಮನೆಗೆ ಭೇಟಿ ನೀಡಿದ್ದಾರೆ. ವಧುವಿನ ಜನ್ಮದಿನಾಂಕದ ದೃಢೀಕರಣ ಪತ್ರ ಒದಗಿಸುವಲ್ಲಿ ಪೋಷಕರು ವಿಫಲರಾಗಿದ್ದಾರೆ. ಬಾಲಕನ ಶಾಲೆಯ ದಾಖಲಾತಿ ಪುಸ್ತಕವನ್ನು ಮುಖ್ಯಶಿಕ್ಷಕರ ನೆರವಿನಿಂದ ಪರಿಶೀಲಿಸಲಾಯಿತು. ಈ ವೇಳೆ, ಆತನೂ ಅಪ್ರಾಪ್ತ ಎಂಬ ಅಂಶ ವಿಚಾರಣೆ ವೇಳೆ ಗಮನಕ್ಕೆ ಬಂದಿದೆ.

ಈ ಮಕ್ಕಳ ಸಂಬಂಧಿಕರು ಮದುವೆ ನಿಲ್ಲಿಸಲು ವಿರೋಧಿಸಿದರು. ಆಗ, ಬಾಲ್ಯವಿವಾಹದ ದುಷ್ಪರಿಣಾಮದ ಬಗ್ಗೆ ಪೋಷಕರಿಗೆ ತಿಳಿಸಿಕೊಡಲಾಯಿತು. `ಇಬ್ಬರೂ ವಯಸ್ಸಿಗೆ ಬರುವವರೆಗೂ ಮದುವೆ ಮಾಡುವುದಿಲ್ಲ' ಎಂದು ಪೋಷಕರಿಂದ ಮುಚ್ಚಳಿಕೆ ಪತ್ರ ಪಡೆಯಲಾಯಿತು. ಮಕ್ಕಳನ್ನು ವಿವಾಹದಿಂದ ರಕ್ಷಿಸಲಾಯಿತು.

ಬೂದನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ವೀರನಗೌಡ, ದೇವರ ಬೆಳಕೆರೆ ಪಂಚಾಯ್ತಿಯ ಮಾಜಿ ಸದಸ್ಯ ಟಿ.ಕೆಂಚಪ್ಪ, ಗ್ರಾಮದ ಪಕ್ಕೀರಪ್ಪ, ಎನ್.ಬಸವರಾಜ, ಬಿ.ಹೊನ್ನಪ್ಪ, ಎಚ್.ಕೋಟೆಪ್ಪ ಉಪಸ್ಥಿತರಿದ್ದರು ಎಂದು ಮಕ್ಕಳ ಸಹಾಯವಾಣಿಯ ಸಂಯೋಜಕ ಕೊಟ್ರೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT