ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಾನಿಕ್ ಉದ್ಯಮ ಉತ್ತೇಜನಕ್ಕೆ ನೆರವು

Last Updated 14 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎಲೆಕ್ಟ್ರಾನಿಕ್ ಪರಿಕರ ಮತ್ತು ಬಿಡಿಭಾಗ ತಯಾರಿಸುವ ಉದ್ಯಮ ಕ್ಷೇತ್ರವನ್ನು ಉತ್ತೇಜಿಸುವ ಸಲುವಾಗಿ ರೂಪಿಸಿರುವ `ವಿಶೇಷ ಪ್ರೋತ್ಸಾಹಧನ ನೆರವಿನ ಪರಿಷ್ಕರಿಸಿದ ಯೋಜನೆ~(ಎಂಎಸ್‌ಐಪಿಎಸ್)ಗೆ ಕೇಂದ್ರ ಸಚಿವ ಸಂಪುಟ ಗುರುವಾರ ಹಸಿರು ನಿಶಾನೆ ತೋರಿದೆ.

ಈ ಮಹತ್ವದ ಉದ್ಯಮ ಕ್ಷೇತ್ರದಲ್ಲಿ 2012-17ರ ಅವಧಿಯಲ್ಲಿ 12ನೇ ಪಂಚವಾರ್ಷಿಕ ಯೋಜನೆಯಡಿ ವಿನಿಯೋಜಿಸಲು ರೂ. 10 ಸಾವಿರ ಕೋಟಿ ಮೊತ್ತ ನೀಡಲೂ ಸಂಪುಟ ಒಪ್ಪಿಗೆ ಸೂಚಿಸಿದೆ.

ಈ ಹೊಸ ಯೋಜನೆಯಿಂದಾಗಿ ದೇಶದ ಉದ್ಯಮದಲ್ಲಿ `ಎಲೆಕ್ಟ್ರಾನಿಕ್ ಉತ್ಪನ್ನ ತಯಾರಿಕೆಯ ದೇಶೀಯ ಮಾದರಿ ವ್ಯವಸ್ಥೆ~ಯೊಂದು ರೂಪುಗೊಳ್ಳುವ ನಿರೀಕ್ಷೆ ಇದೆ. ಇದರಿಂದ ದೇಶದ ಮಾರುಕಟ್ಟೆಗೆ ಅಗತ್ಯವಾದ ಎಲೆಕ್ಟ್ರಾನಿಕ್ ಚಿಪ್‌ಗಳನ್ನು ದೇಶೀಯವಾಗಿಯೇ ವಿನ್ಯಾಸಗೊಳಿಸಿ- ತಯಾರಿಸುವ ವ್ಯವಸ್ಥೆಗೆ ಶಕ್ತಿ ಬರಲಿದೆ.

ಪರಿಣಾಮವಾಗಿ ದೇಶದಲ್ಲಿ ಬಹಳ ಸುರಕ್ಷಿತವಾದ `ಸೈಬರ್ ಸೆಕ್ಯುರ್ ಎಕೊ ಸಿಸ್ಟೆಂ~ಗೂ ಅವಕಾಶವಾಗಲಿದೆ. ಜತೆಗೆ 50 ಸಾವಿರ ಹೊಸ ಉದ್ಯೋಗ ಸೃಷ್ಟಿಯ ನಿರೀಕ್ಷೆಯೂ ಇದೆ~  ಎಂದು  ಅಧಿಕೃತ ಹೇಳಿಕೆ ತಿಳಿಸಿದೆ.ಕೇಂದ್ರ ಸರ್ಕಾರ ಮೀಸಲಿಡಲಿರುವ ರೂ. 10 ಸಾವಿರ ಕೋಟಿ ಹಣವನ್ನು ಎಲೆಕ್ಟ್ರಾನಿಕ್ ಸಲಕರಣೆಗಳ ಉದ್ಯಮ ಆರಂಭಿಸುವವರಿಗೆ ಸಹಾಯಧನವಾಗಿ ವಿತರಿಸಲು ಯೋಜಿಸಲಾಗಿದೆ.

ಮುಖ್ಯವಾಗಿ `ವಿಶೇಷ ಆರ್ಥಿಕ ವಲಯ~(ಎಸ್‌ಇಜೆಡ್)ದಲ್ಲಿ ಉದ್ಯಮ ನೆಲೆಗೊಳಿಸಿದರೆ ಅದರ ಮುಖ್ಯ ವೆಚ್ಚದ ಶೇ 20ರಷ್ಟು, ಎಸ್‌ಇಜೆಡ್‌ನಲ್ಲಿ ಅಲ್ಲದೆ ಬೇರೆಡೆ ಕಂಪೆನಿ ಸ್ಥಾಪಿಸುವವರಿಗೆ ಶೇ 25ರಷ್ಟು ಸಹಾಯಧನ ದೊರೆಯಲಿದೆ.

`ಎಂಎಸ್‌ಐಪಿಎಸ್~ನ ಇನ್ನೊಂದು ಅನುಕೂಲವೆಂದರೆ `ಎಸ್‌ಇಜೆಡ್~ ಹೊರಗೆ ಇರುವ ಘಟಕಗಳಲ್ಲಿ ತಯಾರಿಸಿದ ಮೂಲ ಎಲೆಕ್ಟ್ರಾನಿಕ್ ಪರಿಕರಗಳಿಗೆ ಅಬಕಾರಿ ಸುಂಕ ಪಾವತಿಸಿದ್ದರೆ ಅದನ್ನು `ಮರುಪಾವತಿ~ ವ್ಯವಸ್ಥೆ ಮೂಲಕ ಕಂಪೆನಿ ವಾಪಸ್ ಪಡೆಯಬಹುದಾಗಿದೆ. ಅಲ್ಲದೇ ಎಲೆಕ್ಟ್ರಾನಿಕ್ ಚಿಪ್ಸ್ ತಯಾರಿ ಮತ್ತು ಅತ್ಯುತ್ಕೃಷ್ಟ ತಂತ್ರಜ್ಞಾನದ ಘಟಕಗಳೂ ಸಹ ಕೇಂದ್ರ ಮಾರಾಟ ತೆರಿಗೆ ಮತ್ತು ಸುಂಕವನ್ನು ವಾಪಸ್ ಪಡೆಯಬಹುದಾಗಿದೆ.

`ಎಂಎಸ್‌ಐಪಿಎಸ್~ನ ಈ ಎಲ್ಲ ಅನುಕೂಲ ಪಡೆಯಲು ಅರ್ಹವಾಗಿರುವ `ಎಲೆಕ್ಟ್ರಾನಿಕ್ ಸಿಸ್ಟೆಂ ಡಿಸೈನ್ ಅಂಡ್ ಮ್ಯಾನುಫ್ಯಾಕ್ಚರಿಂಗ್~(ಇಎಸ್‌ಡಿಎಂ) ವಲಯಕ್ಕೆ ದೂರಸಂಪರ್ಕ, ಐಟಿ ಹಾರ್ಡ್‌ವೇರ್, ವೈದ್ಯಕೀಯ ಎಲೆಕ್ಟ್ರಾನಿಕ್ ಸಲಕರಣೆ, ಎಲ್‌ಇಡಿ-ಎಲ್‌ಸಿಡಿ, ನ್ಯಾನೊ ಎಲೆಕ್ಟ್ರಾನಿಕ್ ಉತ್ಪನ್ನಗಳೂ ಸೇರಿದಂತೆ ಇತರೆ 29ಬಗೆಯ ಎಲೆಕ್ಟ್ರಾನಿಕ್ ಪರಿಕರ ತಯಾರಿಸುವ ಘಟಕಗಳನ್ನೂ ಸೇರ್ಪಡೆಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT