ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಾನಿಕ್ ಸರಕುಗಳು ತುಟ್ಟಿ?

Last Updated 10 ಜೂನ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಸದ್ಯದಲ್ಲೇನಾದರೂ ಟಿವಿ, ಪ್ರಿಡ್ಜ್, ವಾಷಿಂಗ್ ಮಿಷನ್, ಏರ್ ಕಂಡೀಷನರ್ ಖರೀದಿಸುವ ಯೋಜನೆ ಇದೆಯಾ? ಹಾಗಾದರೆ ತಡಮಾಡದೆ ಖರೀದಿಸಿ. ಶೀಘ್ರದಲ್ಲಿಯೇ ಗೃಹ ಬಳಕೆಯ ಎಲೆಕ್ಟ್ರಾನಿಕ್ ಸರಕುಗಳ ಬೆಲೆ ಹೆಚ್ಚಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಡಾಲರ್ ಎದುರು ರೂಪಾಯಿಯ ವಿನಿಮಯ ಮೌಲ್ಯ ಕುಸಿದಿರುವುದು ಮತ್ತು ಉತ್ಪನ್ನಗಳ ತಯಾರಿಕೆಯ ಒಟ್ಟಾರೆ ವೆಚ್ಚವೂ ಹೆಚ್ಚಿರುವುದರಿಂದ ಕಂಪೆನಿಗಳು ಸರಕುಗಳ ಬೆಲೆಯನ್ನು ಏರಿಸಲು ಮುಂದಾಗಿವೆ. ಈ ಬಾರಿ ಶೇ 4ರಿಂದ ಶೇ 10ರಷ್ಟು ದರ ಏರಿಕೆಯಾಗಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.

`ಶೀಘ್ರದಲ್ಲಿಯೇ ರೆಫ್ರಿಜೇಟರ್‌ಗಳ ಬೆಲೆ ಹೆಚ್ಚಿಸಲಿದ್ದೇವೆ. ಆದರೆ, ಎಷ್ಟು ಪ್ರಮಾಣದಲ್ಲಿ ಹೆಚ್ಚಿಸಬೇಕು ಎನ್ನುವುದು ಇನ್ನೂ ನಿಗದಿಯಾಗಿಲ್ಲ~ ಎಂದು ಸ್ಯಾಮ್ಸಂಗ್ ಹೋಮ್ ಅಪ್ಲೈಯನ್ಸಸ್ ಉಪಾಧ್ಯಕ್ಷ ಮಹೇಶ್ ಕೃಷ್ಣನ್ ಸುದ್ದಿಸಂಸ್ಥೆಗೆ ಭಾನುವಾರ ಪ್ರತಿಕ್ರಿಯಿಸಿದ್ದಾರೆ.

ರೂಪಾಯಿ ಅಪಮೌಲ್ಯದಿಂದ ಎಲೆಕ್ಟ್ರಾನಿಕ್ ಬಿಡಿಭಾಗಗಳ ಆಮದು ದರ ಶೇ 30ರಿಂದ ಶೇ 70ರಷ್ಟು ಹೆಚ್ಚಾಗಿದೆ. ಸಾಮಾನ್ಯವಾಗಿ ಗರಿಷ್ಠ ಗುಣಮಟ್ಟದ ರೆಫ್ರಿಜರೇಟರ್, ಏರ್ ಕಂಡೀಷನರ್ ಮತ್ತು ವಾಷಿಂಗ್ ಮಿಷನ್‌ಗಳನ್ನು ಕಂಪೆನಿಗಳು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತವೆ.

ವಿಮಾನ ಪ್ರಯಾಣ ದರ ಹೆಚ್ಚಿರುವುದು, ಪೆಟ್ರೋಲಿಯಂ ಉತ್ಪನ್ನಗಳು ತುಟ್ಟಿಯಾಗಿರುವುದು ಸಹ ಒಟ್ಟಾರೆ ವೆಚ್ಚ ಹೆಚ್ಚುವಂತೆ ಮಾಡಿದೆ ಎಂದಿದ್ದಾರೆ ಕೃಷ್ಣನ್.

`ಹೇಯರ್~ ಎಲೆಕ್ಟ್ರಾನಿಕ್ಸ್ ದೇಶೀಯ ಮಾರುಕಟ್ಟೆಗೆ ಆರು ಬಾಗಿಲುಗಳುಳ್ಳ ಹೊಸ ರೆಫ್ರಿಜೇಟರ್ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ. ಇದೇ ವೇಳೆ ವಾಷಿಂಗ್ ಮಿಷನ್ ಮತ್ತು `ಎಲ್‌ಸಿಡಿ~ ಟಿವಿಗಳ ಬೆಲೆಯನ್ನೂ ಶೀಘ್ರದಲ್ಲಿಯೇ ಶೇ 5ರಷ್ಟು ಹೆಚ್ಚಿಸುವುದಾಗಿ ಕಂಪೆನಿ ಅಧ್ಯಕ್ಷ ಎರಿಕ್ ಬ್ರಗಂಜ ಹೇಳಿದ್ದಾರೆ.

ಗೊದ್ರೇಜ್, ಎಲ್.ಜಿ ಮತ್ತು ವರ್ಲ್‌ಪೂಲ್ ಕಂಪೆನಿಗಳೂ ಬೆಲೆ ಏರಿಕೆಯ ಲೆಕ್ಕಾಚಾರದಲ್ಲಿ ತೊಡಗಿವೆ. ಶೀಘ್ರದಲ್ಲಿಯೇ ಇವು ಪರಿಷ್ಕತ ದರ ಪ್ರಕಟಿಸುವ ಸಾಧ್ಯತೆಗಳಿವೆ.

ಆಹಾರ ಹಣದುಬ್ಬರ ಮತ್ತು ರೂಪಾಯಿ ಅಪಮೌಲ್ಯವೇ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ವರ್ಲ್‌ಪೂಲ್ ಇಂಡಿಯದ ಕಂಪೆನಿ ವ್ಯವಹಾರಗಳ ಅಧ್ಯಕ್ಷ ಶಾಂತನು ದಾಸ್‌ಗುಪ್ತಾ ಹೇಳಿದ್ದಾರೆ.

ಗ್ರಾಹಕ ಎಲೆಕ್ಟ್ರಾನಿಕ್ ಸರಕುಗಳನ್ನು ತಯಾರಿಸುವ ಪೆನಾಸೋನಿಕ್ ಇಂಡಿಯ ಸರಕುಗಳ ದರ ಹೆಚ್ಚಿಸುವ ಸೂಚನೆ ನೀಡಿದೆ. ರೂಪಾಯಿ ಅಪಮೌಲ್ಯದಿಂದ ಈ ವರ್ಷ ಮೂರನೆಯ ಬಾರಿ ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ವರ್ಗಾಯಿಸುತ್ತಿದ್ದೇವೆ ಎಂದು ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಶರ್ಮಾ ಹೇಳಿದ್ದಾರೆ.

ಜುಲೈ ಮೊದಲ ವಾರದಲ್ಲಿ ಬೆಲೆ ಏರಿಕೆ ಮಾಡುವುದಾಗಿ ಪೆನಾಸೋನಿಕ್ ಹೇಳಿದೆ.

`ಹಣದುಬ್ಬರ ಒತ್ತಡ ಇರುವುದರಿಂದ ಗ್ರಾಹಕರು ಖರೀದಿಗಿಂತ ಉಳಿತಾಯದ ಕಡೆಗೇ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪೆನಿಗಳು ದರ ಏರಿಕೆ ಮಾಡಿದರೆ ಅದು ಒಟ್ಟು ಮಾರಾಟದ ಮೇಲೆಯೇ ಪ್ರತಿಕೂಲ ಪರಿಣಾಮ ಬೀರಲಿದೆ~ ಎಂದು ಗಾರ್ಟ್‌ನರ್ ಸಂಶೋಧನಾ ಸಂಸ್ಥೆ ನಿರ್ದೇಶಕ ಗಣೇಶ್ ರಾಮಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT