ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಾನಿಕ್‌ ಕ್ಷೇತ್ರದಲ್ಲಿ ‘ಕೂಕಿ’ ಕುಹೂ ಕುಹೂ

Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಏನೋ ಟೆನ್ಷನ್‌, ಮತ್ತೇನೋ ಗಡಿಬಿಡಿ, ಕಾರು ಲಾಕ್‌ ಮಾಡುವುದೇ ಮರೆತು ಹೋಗಿರುತ್ತದೆ. ಕಾರಿನಲ್ಲಿದ್ದ ಬೆಲೆ ಬಾಳುವ ವಸ್ತುಗಳು ಕಳ್ಳನ ಪಾಲಾಗಿರುತ್ತವೆ. ನಾವು ಲಾಕ್‌ ಮಾಡುವುದನ್ನು ಮರೆತರೂ ಆ ಕಾರು ತನ್ನಷ್ಟಕ್ಕೆ ತಾನೇ ಲಾಕ್‌ ಆಗುವಂತಿದ್ದರೆ ಎಷ್ಟು ಅನುಕೂಲ ಅಲ್ಲವೆ ಎಂದು ಮನಸು ಹೇಳಿಕೊಳ್ಳುತ್ತದೆ.

ಮನೆಯಲ್ಲಿ ಇರುವುದು ಮೂವರು. ಎಲ್ಲರೂ ಉದ್ಯೋಗದಲ್ಲಿದ್ದಾರೆ. ಒಬ್ಬೊಬ್ಬರು ಒಂದೊಂದು ಕೀ ಹಿಡಿದುಕೊಂಡು ಓಡಾಡಬೇಕು ಅಥವಾ ಒಂದು ನಿರ್ದಿಷ್ಟ ಜಾಗದಲ್ಲಿ ಕೀ ಇಟ್ಟು ಹೋಗಬೇಕು. ಹೀಗೆ ಕೀ ಇಡುವುದು ಮರೆತುಹೋದರೆ ಉಳಿದಿಬ್ಬರಿಗೆ ಕಾಯುವ ಕೆಲಸ. ಈ ಕೀ ಗೊಡವೆಯೇ ಬೇಡ, ಎಟಿಎಂ ಕಾರ್ಡ್‌ಗೆ ಪಾಸ್‌ವರ್ಡ್‌ ಇದ್ದಂತೆ ಮನೆಯ ಬಾಗಿಲು ಸಹ ಪಾಸ್‌ವರ್ಡ್‌ ಇದ್ದರೆ ಮಾತ್ರ ತೆರೆದುಕೊಳ್ಳುವಂತಿದ್ದರೆ ಹೇಗಿರುತ್ತೆ? ಎಂದೆನಿಸತೊಡಗುತ್ತದೆ.

ಇಂತಹುದೇ ಆಲೋಚನೆಗಳು ಈ ಯುವಕನ ತಲೆಯಲ್ಲೂ ಮೂಡಿವೆ. ಅವನ್ನು ಕಾರ್ಯರೂಪಕ್ಕೆ ತಂದಿದ್ದಾನೆ ಹುಬ್ಬಳ್ಳಿಯ ಯುವಕ. ಆ ಯುವಕನಿಗೆ ಪದವಿಯಲ್ಲಿ ಉತ್ತಮ ಅಂಕಗಳು ಲಭಿಸಿದ್ದವು. ಉನ್ನತ ವ್ಯಾಸಂಗಕ್ಕೆ ಅಮೆರಿಕಕ್ಕೆ ತೆರಳುವ ಅವಕಾಶ ಅರಸಿ ಬಂದಿತ್ತು. ಆದರೆ, ಮನದ ಮೂಲೆಯಲ್ಲಿ, ‘ನನ್ನದೇ ಆದ ಒಂದು ಕಂಪೆನಿ ಸ್ಥಾಪಿಸಬೇಕು, ನೌಕರನಾಗುವುದಕ್ಕಿಂತ ಮಾಲೀಕನಾಗಬೇಕು’ ಎಂಬ ಆಸೆ ಇತ್ತು. ಆ ಆಸೆ ಕಾರ್ಯರೂಪಕ್ಕೆ ತಂದ ಆ ಯುವಕ ಈಗ ಒಂದು ಕಂಪೆನಿಯ ಮಾಲೀಕ.

ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ ಪದವಿ ಪಡೆದಿರುವ ಶಶಾಂಕ್‌ ರೇವಣಕರ್‌, ಕೂಕಿ ಕನ್ಸೂಮರ್‌ ಎಲೆಕ್ಟ್ರಾನಿಕ್ಸ್‌ ಪ್ರೈ.ಲಿ. ಎಂಬ ಕಂಪೆನಿ ಸ್ಥಾಪಿಸಿದ್ದಾರೆ. ಕೂಕಿ! ಅದು ಶಶಾಂಕ್‌ ಸಾಕಿರುವ ಮುದ್ದಿನ ನಾಯಿ ಮರಿಯ ಹೆಸರು!
2013ರ ಜ. 3ರಂದು ರೂ.4 ಲಕ್ಷ  ಬಂಡವಾಳದೊಂದಿಗೆ ಶಶಾಂಕ್‌ ಕಂಪೆನಿ ಆರಂಭಿಸಿದರು. ಬಿವಿಬಿ ಕಾಲೇಜು ಆವರಣದಲ್ಲಿಯೇ ‘ಕೂಕಿ’ ತಲೆ ಎತ್ತಿ ನಿಂತಿರುವುದು ವಿಶೇಷ.

ಬ್ಲ್ಯೂಟೂತ್‌ ಸೆಕ್ಯುರಿಟಿ ಡಿವೈಸ್
ಕೂಕಿ ಕಂಪೆನಿ ಈಗ ಬ್ಲೂಟೂತ್‌ ಆಧಾರಿತ ಭದ್ರತಾ ಸಾಧನಗಳನ್ನು ತಯಾರಿಸುತ್ತಿದೆ. ಕಾರುಗಳ ಸುರಕ್ಷತೆಗಾಗಿ ಬ್ಲೂಟೂತ್‌ ಆಧಾರಿತ ಸೇವೆಯನ್ನು ಈ ಸಾಧನ ಒದಗಿಸುತ್ತದೆ. ಕಾರುಗಳಲ್ಲಿ ಈ ಸಾಧನ ಅಳವಡಿಸಿ, ಅದಕ್ಕೆ ಮೊಬೈಲ್‌ ಸಂಪರ್ಕ ನೀಡಲಾಗಿರುತ್ತದೆ. ಆ ಮೊಬೈಲ್‌ ನಿಮ್ಮ ಬಳಿ ಇದ್ದಾಗ, ನೀವು ಕಾರಿನಿಂದ ನಿರ್ದಿಷ್ಟ ದೂರ ಸಾಗಿದರೆ ಕಾರು ಲಾಕ್‌ ಆಗುತ್ತದೆ. ಅದೇ ರೀತಿ ನಿರ್ದಿಷ್ಟ ಸಮೀಪಕ್ಕೆ ಬಂದ ಕೂಡಲೇ ಕಾರಿನ ಲಾಕ್‌ ತೆರೆದುಕೊಳ್ಳುತ್ತದೆ. ಗಡಿಬಿಡಿಯಲ್ಲಿ ನೀವು ಕಾರನ್ನು ಲಾಕ್‌ ಮಾಡಲು ಮರೆತಿದ್ದರೂ, ಈ ಸಾಧನ ಇದ್ದಾಗ, ಅದು ತನ್ನಷ್ಟಕ್ಕೇ ತಾನೇ ಲಾಕ್‌ ಆಗಿರುತ್ತದೆ.

‘ಈ ಸೆಕ್ಯುರಿಟಿ ಡಿವೈಸ್‌ ರೂ.8 ಸಾವಿರದಿಂದ ರೂ.10 ಸಾವಿರಕ್ಕೆ ಲಭ್ಯವಿದೆ. ಈಗಾಗಲೇ ಮಾರುತಿ ಕಂಪೆನಿ ಸೇರಿದಂತೆ ಹಲವು ಕಾರು ತಯಾರಿಕಾ ಕಂಪೆನಿಗಳ ಜತೆ ಮಾತುಕತೆ ನಡೆಸಿದ್ದೇನೆ. ಈ ಸಾಧನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕಂಪೆನಿಗಳು ನಮ್ಮ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿವೆ. 2014ರ ಮಾರ್ಚ್‌ ವೇಳೆಗೆ ಈ ಉತ್ಪನ್ನ ಮಾರುಕಟ್ಟೆಯಲ್ಲಿ ಲಭ್ಯ’ ಎನ್ನುತ್ತಾರೆ ಶಶಾಂಕ್‌.

ಮನೆಗೂ ಭದ್ರತೆ ಗುರಿ
ಕಾರಿನ ಸುರಕ್ಷತೆ ಅಲ್ಲದೆ, ಮನೆಗೂ ಭದ್ರತೆ ಒದಗಿಸುವ ಉತ್ಪನ್ನಗಳ ವಿನ್ಯಾಸದಲ್ಲಿ ಶಶಾಂಕ್‌ ತೊಡಗಿಸಿಕೊಂಡಿದ್ದಾರೆ. ಪಾಸ್‌ವರ್ಡ್‌ ಆಧಾರಿತ ಸಾಧನ ಇದಾಗಿರುತ್ತದೆ. ನಿರ್ದಿಷ್ಟ ಪಾಸ್‌ವರ್ಡ್‌ ನಮೂದಿಸಿದರೆ ಮನೆ ಬಾಗಿಲು ಮುಚ್ಚುವ ಅಥವಾ ತೆರೆದುಕೊಳ್ಳುವ ವ್ಯವಸ್ಥೆ ರೂಪಿಸಲಾಗುತ್ತದೆ. ಕಳ್ಳರು ಮನೆಗೆ ನುಗ್ಗಲು ಯತ್ನಿಸಿದರೆ ಮನೆ ಮಾಲೀಕರಿಗೆ ತಕ್ಷಣವೇ ಸಂದೇಶ ರವಾನಿಸುವಂತಹ ಸಾಧನವನ್ನು ಶಶಾಂಕ್‌ ಅಭಿವೃದ್ಧಿಪಡಿಸುತ್ತಿದ್ದಾರೆ.

ಎಲೆಕ್ಟ್ರಾನಿಕ್‌ ಕ್ಷೇತ್ರ
‘ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಉತ್ಪಾದಿಸುವ ವಿಶ್ವಶ್ರೇಷ್ಠ ಭಾರತೀಯ ಕಂಪೆನಿಯಾಗಿ ನನ್ನ ಕಂಪೆನಿ ಹೊರ ಹೊಮ್ಮಬೇಕು ಎಂಬ ಗುರಿ  ಹೊಂದಿದ್ದೇನೆ. ಜನಜೀವನಕ್ಕೆ ಹತ್ತಿರವಾಗುವ, ಅವರಿಗೆ ನೆರವಾಗುವ, ದೀರ್ಘಾವಧಿ ಬಾಳಿಕೆ ಬರುವ, ಮಾರುಕಟ್ಟೆಯಲ್ಲಿ ಈವರೆಗೆ ಲಭ್ಯವಿರದ ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ತಯಾರಿಸುವ ಉದ್ದೇಶವಿದೆ’ ಎನ್ನುತ್ತಾರೆ ಶಶಾಂಕ್‌.

‘ಮುಂದಿನ ಐದು ವರ್ಷಗಳಲ್ಲಿ ಎಲೆಕ್ಟ್ರಾನಿಕ್‌ ಉದ್ಯಮದಲ್ಲಿ ಭಾರತದ ದೊಡ್ಡ ಕಂಪೆನಿ ಎನಿಸಿಕೊಳ್ಳಬೇಕು ಹಾಗೂ ವಿದೇಶಗಳಲ್ಲೂ ನಮ್ಮ ವ್ಯಾಪ್ತಿ ವಿಸ್ತರಿಸಿಕೊಳ್ಳಬೇಕು. ಅಲ್ಲದೆ, ಕನಿಷ್ಠ 200 ಜನರಿಗೆ ಕಂಪೆನಿಯಲ್ಲಿ ಉದ್ಯೋಗ ಕಲ್ಪಿಸಬೇಕು ಎನ್ನುವ ಗುರಿ ಹೊಂದಿದ್ದೇನೆ. ಈ ಗುರಿ ಸಾಧನೆಗೆ ದೊಡ್ಡ ಮಟ್ಟದ ಬಂಡವಾಳದ ಅಗತ್ಯ ಇದೆ. ಬಂಡವಾಳ ಹೂಡುವವರಿಗಾಗಿ ಎದುರು ನೋಡುತ್ತಿದ್ದೇನೆ’ ಎಂದು ಕಣ್ಣರಳಿಸುತ್ತಾರೆ ಅವರು.

ಅದರೊಂದಿಗೆ, ತಮ್ಮ ಈ ಏಳಿಗೆಗೆ ಕಾರಣರಾಗಿರುವ ತಂದೆ ಬಿ.ಕೆ.ರೇವಣಕರ್‌, ತಾಯಿ ಪ್ರಭಾ ರೇವಣಕರ್‌ ಹಾಗೂ ಬಿವಿಬಿ ಕಾಲೇಜಿನಲ್ಲಿಯೇ ಕಂಪೆನಿ ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿರುವ ಪ್ರಾಚಾರ್ಯ ಅಶೋಕ ಶೆಟ್ಟರ್‌ ಹಾಗೂ ಮಾರ್ಗದರ್ಶಕರಾಗಿರುವ ನಿತಿನ್‌ ಕುಲಕರ್ಣಿ ಅವರನ್ನು ನೆನೆಯುವುದನ್ನು ಅವರು ಮರೆಯಲಿಲ್ಲ.

ನೋಡಲು ಇನ್ನೂ ಹುಡುಗಾಟದ ಸ್ವಭಾವದವ­ರಂತೆ ಕಾಣುವ ಶಶಾಂಕ್‌, ಎಲೆಕ್ಟ್ರಾನಿಕ್‌ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವ ಗುರಿ ಹೊಂದಿದ್ದಾರೆ.

ಕಂಪೆನಿ ಹೆಜ್ಜೆ ಗುರುತು

–ಕಲಿತ ಕಾಲೇಜು ಆವರಣದಲ್ಲಿಯೇ ಕಂಪೆನಿ ಸ್ಥಾಪನೆ
–2013 ಜನವರಿ 3ರಂದು ಕಂಪೆನಿ ಆರಂಭ
–ಆರಂಭಿಕ ಬಂಡವಾಳ ಕೇವಲ ರೂ.4 ಲಕ್ಷ
–ಸದ್ಯ ಐವರು ಉದ್ಯೋಗಿಗಳು
–ಮುಂದಿನ ಐದು ವರ್ಷಕ್ಕೆ ದೊಡ್ಡ ಕಂಪೆನಿ; 200 ಮಂದಿಗೆ ಉದ್ಯೋಗ ನೀಡುವ ಗುರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT