ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಲೆ ಗ್ರಾಮೀಣ ರಸ್ತೆ; ಏನಿದು ನಿನ್ನ ಅವಸ್ಥೆ!

Last Updated 7 ಸೆಪ್ಟೆಂಬರ್ 2011, 11:15 IST
ಅಕ್ಷರ ಗಾತ್ರ

ಚಿಕ್ಕಮಗಳೂರು: `ಆಡು ಮುಟ್ಟದ ಸೊಪ್ಪಿಲ್ಲ; ಹದಗೆಡದ ರಸ್ತೆ ಇಲ್ಲ~ ಎನ್ನುವಂತಿದೆ ಜಿಲ್ಲೆಯಲ್ಲಿ ರಸ್ತೆಗಳ ಪರಿಸ್ಥಿತಿ. ನಗರದಲ್ಲೂ ಅಷ್ಟೇ ಒಂದೇ ಒಂದು ಮಾದರಿ ರಸ್ತೆಯನ್ನು ಹುಡುಕಿ ತೋರಿಸುವ ಸ್ಥಿತಿ ಇಲ್ಲ. ಎಲೆಲೆ ರಸ್ತೆ ಏನಿದು ನಿನ್ನ ಅವಸ್ಥೆ ಎಂದು ರತ್ನನ ಪದವನ್ನು ಮರುಕದಿಂದ ಗುನುಗುವಂತಾಗಿದೆ.

ನಗರದ ಮಲ್ಲಂದೂರು ವೃತ್ತದಿಂದ ಬಸವನಹಳ್ಳಿ ವೃತ್ತದವರೆಗಿನ ಅರ್ಧ ಕಿ.ಮೀ. ದೂರದ ಕೆಂ.ಎಂ.ರಸ್ತೆಯನ್ನು ಕ್ರಮಿಸಲು ಯಾರಿಗಾದರೂ `ಎಂಟೆದೆ~ ಬೇಕು ಎನ್ನುವಂತಾಗಿದೆ. ಅದರಲ್ಲೂ ಮಳೆ ಬಂತೆಂದರೆ ಸಾಕ್ಷಾತ್ ಕೆಸರುಗದ್ದೆಯೇ! ಇನ್ನೂ ನಗರದಿಂದ ಆರಂಭವಾಗುವ ಕಡೂರು ಮಾರ್ಗದ ರಸ್ತೆಯೂ ಕೂಡ ಆ ರಸ್ತೆಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರಿಗೂ ರೇಜಿಗೆ ಹುಟ್ಟಿಸುತ್ತದೆ. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಮೂರುವರೆ ತಿಂಗಳ ಹಿಂದೆಯಷ್ಟೇ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದವರು `ಕಡೂರಿನಿಂದ ಚಿಕ್ಕಮಗಳೂರಿಗೆ ಬರುವ ರಸ್ತೆ ನೋಡಿದರೆ ಯಾವೊಬ್ಬ ನಾಗರಿಕ ಕೂಡ ಎಂಪಿ, ಎಂಎಲ್‌ಎ ಯಾರ‌್ರಿ? ಅಂಥ ಶಪಿಸದೆ ಬಿಡುವುದಿಲ್ಲ. ಮೊದಲು ಈ ರಸ್ತೆಗಳಿಗೆ ಕಾಯಕಲ್ಪ ಕೊಡಬೇಕು~ ಅಂದಿದ್ದರು.

ಕಡೂರು ರಸ್ತೆ ಇತ್ತೀಚೆಗಷ್ಟೆ ಹಾಳಾಗಿರುವುದಲ್ಲ. ದಶಕದಿಂದಲೂ ಹದಗೆಟ್ಟು ಪ್ರಯಾಣಿಕರ ಜೀವ ಹಿಂಡುತ್ತಿದೆ. ಜನರು ಜನಪ್ರತಿನಿಧಿಗಳನ್ನು ಶಪಿಸುತ್ತಲೇ ಈ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾರೆ.

ಐ.ಜಿ.ರಸ್ತೆಯಷ್ಟೇ ಅಲ್ಲ, ನಗರದ ಪ್ರಮುಖ ವಾಣಿಜ್ಯ ವಹಿವಾಟು ನಡೆಯುವ ಎಂ.ಜಿ.ರಸ್ತೆ ಮತ್ತು ಮಾರ್ಕೆಟ್ ರಸ್ತೆ, ಮಲ್ಲಂದೂರು ರಸ್ತೆಗಳು ಕೂಡ ಹಾಳಾಗಿವೆ.

ನಗರದ ರಸ್ತೆಗಳದ್ದು ಈ ಪರಿಸ್ಥಿತಿಯಾದರೆ ಇನ್ನೂ ಗ್ರಾಮೀಣ ಭಾಗದ ರಸ್ತೆಗಳದು ಹೇಳತೀರದು. ತೇಗೂರು ಮಾರ್ಗವಾಗಿ ಮರಳೂರು ರಸ್ತೆ ಕೂಡುವ ರಸ್ತೆಯಂತೂ ಗುಂಡಿ-ಗೊಟರುಗಳ ಮಧ್ಯೆ ಕಳೆದುಹೋಗಿದೆ. ಮರಳೂರಿನಿಂದ, ಹಳುವಳ್ಳಿ, ಕೆ.ಆರ್.ಪೇಟೆ ಸಮೀಪದವರೆಗೂ ಇದೇ ಪರಿಸ್ಥಿತಿ ಇದೆ. ಪ್ರವಾಸಿ ತಾಣವಾದ ಇನಾಂ ದತ್ತಾತ್ರೇಯ ಬಾಬಾ ಬುಡನ್ ಗಿರಿಗೆ ಹೋಗುವ ರಸ್ತೆ ಹ್ಯಾಂಡ್ ಪೋಸ್ಟ್‌ನಿಂದ ಮುಂದಕ್ಕೆ ಎಂಟತ್ತು ಕಿ.ಮೀ. ದುರಸ್ತಿಯೇ ಆಗಿಲ್ಲ. 

ಚಿಕ್ಕಮಗಳೂರು ನಗರದಲ್ಲಷ್ಟೇ ಅಲ್ಲ; ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಇದೇ ಪರಿಸ್ಥಿತಿ ಇದೆ. ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ತರೀಕೆರೆ, ಕಡೂರು ತಾಲ್ಲೂಕುಗಳಲ್ಲಿ ಪಟ್ಟಣ ಪ್ರದೇಶದಲ್ಲಿ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ನಕ್ಸಲ್‌ಪೀಡಿತ ಶೃಂಗೇರಿ, ಕೊಪ್ಪ ತಾಲ್ಲೂಕುಗಳ ಕೆಲ ಹಳ್ಳಿಗಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹೋಗಿ ನೋಡಬೇಕು. ಜನರು ಎಂಥ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎನ್ನುವುದು ಕಣ್ಣಿಗೆ ರಾಚುತ್ತದೆ. ಹೊರಲೆ ಗ್ರಾಮಕ್ಕೆ ಇಂದಿಗೂ ಸರಿಯಾದ ರಸ್ತೆಯೇ ಆಗಿಲ್ಲ.

ಮಾಜಿ ನಕ್ಸಲ್ ಹೋರಾಟಗಾರ್ತಿ ಹೊರಲೆ ಜಯ ಶರಣಾಗತಿಗೂ ಮುನ್ನ ಇಟ್ಟಿದ್ದ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಸೇತುವೆ ನಿರ್ಮಾಣ ಭಾಗ್ಯ ಹೊರಲೆಗೆ ಒಲಿದೆ ಇಲ್ಲ. ಇನ್ನೂ ಹಾಗಲಗಂಚಿ ವೆಂಕಟೇಶ್ ಇಟ್ಟಿದ್ದ ಬೇಡಿಕೆಯೂ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಹಾಗಲಗಂಚಿಗೆ ಮಾಡಿರುವ ಮಣ್ಣಿನ ರಸ್ತೆಯಲ್ಲಿ ಮನುಷ್ಯರೇ ಹೋಗುವಂತಿಲ್ಲ.

ಇನ್ನೂ ಅಲ್ಲಿಗೆ ವಾಹನ ಹೋಗುವುದಾದರೂ ಹೇಗೆ? ಕಾಡಿನ ಕಾರ್ಯಾಚರಣೆ ನಡೆಸಲು ಹೋಗಿದ್ದ ನಕ್ಸಲ್ ನಿಗ್ರಹ ಪಡೆಯ ಬಸ್ ಸಹ ಹಾಗಲಗಂಚಿ ರಸ್ತೆಯಲ್ಲಿ ಮುಂದೆ ಹೋಗಲಾಗದೆ ವಾಪಸ್ ಬಂದಂತಹ ನಿದರ್ಶನವಿದೆ.

ಶಾಸಕ ಏನಂತಾರೆ....?
`ನಗರದ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಕಳಕಳಿ ಇದೆ. ಒಳಚರಂಡಿ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ರಸ್ತೆ ಡಾಂಬರೀಕರಣ ತಡವಾಗುತ್ತಿದೆ. ನಗರ ಮತ್ತು ನನ್ನ ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ದುರಸ್ತಿ ಮತ್ತು ಡಾಂಬರೀಕರಣಕ್ಕೆ ಸಾಕಷ್ಟು ಅನುದಾನ ತಂದಿದ್ದೇನೆ. ಎಸ್‌ಎಫ್‌ಸಿ, ಕೆಎಂಆರ್‌ಪಿ, ಸಿಎಂಎಸ್‌ಎಂಟಿಡಿಪಿ ನಿಧಿಯಿಂದ ಒಟ್ಟು 28 ಕೋಟಿ ಅನುದಾನ ಬಿಡುಗಡೆಯಾಗಿದೆ. ನಗರದಲ್ಲಿ ಒಟ್ಟು 160 ಕಿ.ಮೀ.ರಸ್ತೆಯನ್ನು ಡಾಂಬರೀಕರಣಗೊಳಿಸಲಾಗುವುದು. ಮಳೆಗಾಲ ಮುಗಿದ ತಕ್ಷಣ ಡಿಸೆಂಬರ್‌ನಿಂದ ಕಾಮಗಾರಿ ಆರಂಭವಾಗಲಿದೆ. ಹಾಗೆಯೇ ಜನರ ಬಹುವರ್ಷಗಳ ಬೇಡಿಕೆಯಾಗಿರುವ ಕಡೂರು-ಮಂಗಳೂರು ಹೆದ್ದಾರಿ ಅಭಿವೃದ್ಧಿಗೆ ರಾಜ್ಯ ಸರ್ಕಾರ 20 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಲೋಕೋಪಯೋಗಿ ಇಲಾಖೆ ಅಕ್ಟೋಬರ್‌ನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ಇನ್ನೊಂದೆರಡು ತಿಂಗಳಲ್ಲಿ ನಗರದ ರಸ್ತೆಗಳ ಹೊಸ ರೂಪ ಸಿಗಲಿದೆ~ ಎಂದು ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT