ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಎಲ್ಲ ಇಂಧನ ಮೂಲಗಳ ಅಭಿವೃದ್ಧಿ ಅಗತ್ಯ'

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಘಟಿಕೋತ್ಸವ
Last Updated 6 ಏಪ್ರಿಲ್ 2013, 6:25 IST
ಅಕ್ಷರ ಗಾತ್ರ

ಬೆಳಗಾವಿ: `ಲಭ್ಯವಿರುವ ಎಲ್ಲ ಇಂಧನ ಮೂಲಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ. ಇಲ್ಲವಾದರೆ, ನಮ್ಮ ಆರ್ಥಿಕತೆ ಹಾಗೂ ಜೀವನಶೈಲಿಯಲ್ಲಿ ಸುಧಾರಣೆ ಆಗುವುದಿಲ್ಲ' ಎಂದು ಭಾರತೀಯ ಆಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಡಾ. ಎಂ.ಆರ್.ಶ್ರೀನಿವಾಸನ್ ಅಭಿಪ್ರಾಯಪಟ್ಟರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಗೃಹದಲ್ಲಿ ಶುಕ್ರವಾರ 12ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, `ಇಂಧನ ಮೂಲಗಳ ಕೊರತೆ ನಮ್ಮ ದೇಶದ ಅತಿ ದೊಡ್ಡ ಸಮಸ್ಯೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದಕ್ಕಾಗಿ ನಮ್ಮ ದೇಶದ ಬಜೆಟ್‌ನಲ್ಲಿ ಅತ್ಯಂತ ದೊಡ್ದ ಪಾಲು ನೀಡಬೇಕಾಗಿದೆ' ಎಂದರು.

ಸೌರಶಕ್ತಿ ಹಾಗೂ ಪವನ ವಿದ್ಯುತ್ ಜೊತೆಗೆ ಅಣು ವಿದ್ಯುತ್ ಮತ್ತು ಜಲ ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡುವ ಅಗತ್ಯವಿದೆ. ಕಳೆದ 2011ರ ಮಾರ್ಚ ತಿಂಗಳಿನಲ್ಲಿ ಜಪಾನ್ ದೇಶದಲ್ಲಿ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ ದೇಶದಲ್ಲಿ ಅಣುಶಕ್ತಿ ಘಟಕಗಳನ್ನು ಸ್ಥಗಿತಗೊಳಿಸಬೇಕು ಎಂದು ಹೇಳುವುದು ಸರಿಯಲ್ಲ ಎಂದ ಅವರು, ಇಂಧನದ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಸಂವರ್ಧನೆಗೊಳಿಸುವುದು ಅವಶ್ಯವಿದೆ ಎಂದು ಹೇಳಿದರು.

`ದೇಶವನ್ನು ಕಾಡುತ್ತಿರುವ ದೊಡ್ಡ ಸವಾಲು ಆಹಾರ ಭದ್ರತೆ. ಆಹಾರದ ಪೂರೈಕೆಯು ನೀರು ಹಾಗೂ ವಿದ್ಯುತ್ ಪೂರೈಕೆಯನ್ನು ಅವಲಂಬಿಸಿದೆ. ನಾವು ಸಮರ್ಪಕವಾಗಿ ಜಲಸಂಪನ್ಮೂಲಗಳ ನಿರ್ವಹಣೆ ಮಾಡದೇ ಹೊದರೆ, ದೇಶದ ಒಟ್ಟಾರೆ ಆರ್ಥಿಕಾಭಿವೃದ್ಧಿ ಕುಂಠಿತಗೊಳ್ಳುತ್ತದೆ' ಎಂದು ಕಳವಳ ವ್ಯಕ್ತಪಡಿಸಿದರು.

ಭಾರತದ ಆರ್ಥಿಕಾಭಿವೃದ್ಧಿ 2000-2010ರ ದಶಕದಲ್ಲಿ ಶೇ. 8ರ ದರದಲ್ಲಿ ಆಗಿದೆ. ಆದರೂ, ಜಗತ್ತಿನಲ್ಲಿ ಎರಡನೆಯ ಸ್ಥಾನದಲ್ಲಿದೆ. ಅಭಿವೃದ್ಧಿಯ ಲಾಭಗಳು ಸಮಾಜದ ಕೆಲವೇ ವರ್ಗದ ಜನರಿಗೆ ತಲುಪಿರುವುದು ಹಾಗೂ ಅಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಯಾಗದಿರುವುದು ವಿಪರ್ಯಾಸ ಎಂದರು.

ಸ್ವಾತಂತ್ರ್ಯದ ನಂತರ ಕೆಲವು ದಶಕಗಳಲ್ಲಿ ಬೃಹತ್ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡಿದ್ದರೂ ಸಹ, ರಪ್ತು ವಹಿವಾಟಿನಲ್ಲಿ ಚೈನಾ ದೇಶಕ್ಕಿಂತ ನಾವು ಹಿಂದಿದ್ದೇವೆ ಹಾಗೂ ಆಮದು ವಹಿವಾಟಿನಲ್ಲಿ ಮುಂದೆ ಇದ್ದೇವೆ. 

ಭಾರತದಲ್ಲಿ ಕೈಗಾರಿಕೆಗಳು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಂಬಂಧದ ಕೊರತೆ ಇದೆ. ಬೆರಳೆಣಿಕೆಯಷ್ಟು ರಾಷ್ಟ್ರ ಮಟ್ಟದ ತಾಂತ್ರಿಕ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿವೆ. ಆದರೆ ಮುಂದುವರೆದ ದೇಶಗಳಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ರಾಷ್ಟ್ರದ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಇದರ ಪರಿಣಾಮವಾಗಿ ಆ ದೇಶಗಳಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಉತ್ತಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಿವೆ. ಈ ನಿಟ್ಟಿನಲ್ಲಿ ವಿಟಿಯು ಇತರ ವಿಶ್ವವಿದ್ಯಾಲಯಗಳಿಗೆ ಮಾದರಿಯಾಗಬೇಕಿದೆ ಎಂದರು.

ಭಾರತದ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ತಂತ್ರಜ್ಞಾನದಲ್ಲಿ ಅನ್ವೇಷಣಾ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದು ಅವಶ್ಯವಿದೆ ಎಂದ ಅವರು, ಕರ್ನಾಟಕ ರಾಜ್ಯದಲ್ಲಿ ವಿದ್ಯಾರ್ಥಿಗಳ ಆಕಾಂಕ್ಷೆಯಂತೆ, ಎಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದು ಸಂತಸದ ವಿಚಾರ.

ಆದರೆ ತಾಂತ್ರಿಕ ಶಿಕ್ಷಣದ ಗುಣಮಟ್ಟ ತೃಪ್ತಿಕರವಾಗಿಲ್ಲ. ಪ್ರಯೋಗಾಲಯ ಸೌಕರ್ಯಗಳನ್ನು ಕಲ್ಪಿಸಬೇಕಾದ ಅವಶ್ಯಕತೆ ಇದೆ. ಇದಕ್ಕಾಗಿ ಆರ್ಥಿಕ ಅನುದಾನ ಹಾಗೂ ಮುಂದುವರಿದ ತಂತ್ರಜ್ಞಾನದಲ್ಲಿ ನೈಪುಣ್ಯತೆ ಹೊಂದಿದ ಅಧ್ಯಾಪಕರ ಅವಶ್ಯಕತೆ ಇದೆ. ಎಂಜಿನಿಯರಿಂಗ್ ಪದವಿ ಪಡೆದ ಅನೇಕ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಕೈಗಾರಿಕೆಗಳ ಸಹಯೋಗದೊಂದಿಗೆ ವಿಶ್ವವಿದ್ಯಾಲಯಗಳು ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಡಾ. ಶ್ರೀನಿವಾಸನ್ ಹೇಳಿದರು.

ರಾಜಕೀಯದತ್ತ ಆಸಕ್ತಿ
ಭ್ರಷ್ಟಾಚಾರ ರಹಿತ ದೇಶ ನಿರ್ಮಾಣ ಮಾಡುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಇದಕ್ಕಾಗಿ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿದ್ಯಾವಂತ ಯುವಕರು ರಾಜಕೀಯ ರಂಗಕ್ಕೆ ಬರಬೇಕು. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಭ್ರಷ್ಟಾಚಾರ ರಹಿತ ಬಲಿಷ್ಠ ಭಾರತ ನಿರ್ಮಾಣ ಯುವಕರಿಂದ ಮಾತ್ರ ಸಾಧ್ಯ ಎಂದ ಅವರು, ಇತ್ತೀಚಿಗೆ ಭದ್ರತಾ ಹೆಲಿಕಾಪ್ಟರ್ ಖರೀದಿ ವ್ಯವಹಾರದ ಬಗ್ಗೆ ಮಾಧ್ಯಮಗಳಿಂದ ತಿಳಿದು ಬಂದಿದೆ. ಇಂತಹ ಕ್ಷೇತ್ರಗಳಲ್ಲಿ ಆಮದು ನೀತಿ ಬದಲಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಸುಮಾರು 60 ವರ್ಷಗಳಿಂದ ಪ್ರಜಾಪ್ರಭುತ್ವವನ್ನು ಪಾಲಿಸಿಕೊಂಡು ಬಂದಿರುವ ನಮ್ಮ ರಾಷ್ಟ್ರದ ಪ್ರಜಾಪ್ರತಿನಿಧಿಗಳು ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಶ್ರಮಿಸುವ ಅಗತ್ಯವಿದೆ ಎಂದ ಅವರು, ದೇಶದ ಕಾರ್ಪೊರೇಟ್ ರಂಗವು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಅಗತ್ಯವಿದೆ ಎಂದರು.

ರಾಜ್ಯಪಾಲ ಡಾ. ಎಚ್.ಆರ್.ಭಾರದ್ವಾಜ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಪದವಿ ಪ್ರದಾನ ಮಾಡಿದರು. ರಾಜ್ಯ ಸಭಾ ಸದಸ್ಯ ಡಾ. ರಾಜೀವ್ ಚಂದ್ರಶೇಖರ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ಕುಲಪತಿ ಡಾ. ಎಚ್.ಮಹೇಶಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT