ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಜಿಲ್ಲೆಗಳಿಗೆ ಸಿಯುಜಿ

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ಕೊಪ್ಪಳ: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಶನ್‌ನ ಎಂಸಿಟಿಎಸ್ (ಮದರ್ ಆ್ಯಂಡ್ ಚೈಲ್ಡ್ ಟ್ರ್ಯಾಕಿಂಗ್ ಸಿಸ್ಟಂ) ಕಾರ್ಯಕ್ರಮ ಅನುಷ್ಠಾನಕ್ಕಾಗಿ ಬರುವ ಫೆಬ್ರುವರಿಯಿಂದ ರಾಜ್ಯದ ಎಲ್ಲ ಜಿಲ್ಲೆಗಳನ್ನು ಸಿಯುಜಿ (ಕಾಮನ್ ಯೂಸರ್ ಗ್ರೂಪ್) ವ್ಯವಸ್ಥೆಗೆ ಪರಿವರ್ತಿಸಲು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಧರಿಸಿದೆ.

ಎಂಸಿಟಿಎಸ್ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿ ಅಳವಡಿಸಿರುವ ಸಿಯುಜಿ ವ್ಯವಸ್ಥೆಯು ಯಶಸ್ವಿಯಾಗಿರುವುದೇ  ಸದರಿ ವ್ಯವಸ್ಥೆಯನ್ನು ರಾಜ್ಯದ ಇತರ ಜಿಲ್ಲೆಗಳಲ್ಲೂ ಜಾರಿಗೆ ತರಲು ಪ್ರೇರಣೆಯಾಗಿದೆ.

ಈ ಸಂಬಂಧ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಶನ್‌ನ (ಎನ್‌ಆರ್‌ಎಚ್‌ಎಂ) ನಿರ್ದೇಶಕ ಸೆಲ್ವಕುಮಾರ್ ಅವರು ಎಲ್ಲ ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿದ್ದಾರೆ.

`ಎಂಸಿಟಿಎಸ್ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಕೊಪ್ಪಳ ಜಿಲ್ಲೆಯಲ್ಲಿ ಎಲ್ಲ ಕಿರಿಯ ಆರೋಗ್ಯ ಸಹಾಯಕಿಯರು (ಎಎನ್‌ಎಂ) ಹಾಗೂ ವೈದ್ಯರಿಗೆ ಬಿಎಸ್‌ಎನ್‌ಎಲ್‌ನ ಕಾಮನ್ ಯೂಸರ್ ಗ್ರೂಪ್ (ಸಿಯುಜಿ) ಸಿಮ್ ಕಾರ್ಡ್ ವಿತರಣೆ ಮಾಡಿರುವುದು ಯಶಸ್ವಿಯಾಗಿದೆ.
 
ಇದೇ ರೀತಿ ಪ್ರತಿ ಜಿಲ್ಲೆಯಲ್ಲಿಯೂ ಸಿಯುಜಿ ಸಿಮ್ ಕಾರ್ಡ್‌ಗಳನ್ನು ನೀಡುವ ಪ್ರಕ್ರಿಯೆ ಆರಂಭಿಸಬೇಕು. ಈ ವ್ಯವಸ್ಥೆಯಿಂದ ಎಂಸಿಟಿಎಸ್ ಕಾರ್ಯಕ್ರಮವನ್ನು ರಾಜ್ಯದಲ್ಲಿ ಇನ್ನೂ ಉತ್ತಮವಾಗಿ ಅನುಷ್ಠಾನಗೊಳಿಸಬಹುದಾಗಿದೆ~ ಎಂದು ಅವರು ಸುತ್ತೋಲೆಯಲ್ಲಿ ವಿವರಿಸಿದ್ದಾರೆ.

ಸಿಯುಜಿ ಸಿಮ್ ಕಾರ್ಡ್ ವಿತರಣೆಯಾದರೆ, ಯಾವುದೇ ಜಿಲ್ಲೆಯ ವೈದ್ಯರು ಇಲ್ಲವೇ ಎಎನ್‌ಎಂ ಮತ್ತೊಂದು ಜಿಲ್ಲೆಯ ಸಿಬ್ಬಂದಿಯೊಂದಿಗೆ ಉಚಿತವಾಗಿ ಮಾತನಾಡಲು ಸಾಧ್ಯವಾಗಲಿದೆ ಎಂದು ಬೆಂಗಳೂರಿನಿಂದ ದೂರವಾಣಿ ಮೂಲಕ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಮಿಶನ್‌ನ ಜಂಟಿ ನಿರ್ದೇಶಕ ಕೆ.ಕೆ. ಶಂಕರ್ ಹೇಳಿದರು.

ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆಗೊಳಿಸುವುದೇ ಈ ಎಂಸಿಟಿಎಸ್ ಕಾರ್ಯಕ್ರಮದ ಮುಖ್ಯ ಉದ್ದೇಶ. ಹೀಗಾಗಿ ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಾಗೂ ಮಗುವಿಗೆ ಕಾಲಕಾಲಕ್ಕೆ ನೀಡಬೇಕಾದ ಚಿಕಿತ್ಸೆ, ಚುಚ್ಚುಮದ್ದು ಕುರಿತ ಮಾಹಿತಿಯನ್ನು ಕರಾರುವಾಕ್ಕಾಗಿ ಎಲ್ಲ ಎಎನ್‌ಎಂಗಳ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ತಿಳಿಸಲು ಸಾಧ್ಯವಾಗಲಿದೆ.

ಯಾವ ದಿನಾಂಕಗಳಂದು ಈ ಎಸ್‌ಎಂಎಸ್ ರವಾನೆಯಾಗಬೇಕು ಎಂಬುದನ್ನು ಸಹ ಮೊದಲೇ ಕಂಪ್ಯೂಟರ್‌ನಲ್ಲಿ ಅಳವಡಿಸಲು ಅವಕಾಶ ಇರುವುದರಿಂದ ಆಯಾ ಗರ್ಭಿಣಿಯರ-ತಾಯಂದಿರ ಹಾಗೂ ಮಗುವಿನ ಅವಶ್ಯಕತೆ ಹಾಗೂ ಸರದಿಯಂತೆ ಚಿಕಿತ್ಸೆ ನೀಡಲು ಸುಲಭವಾಗಲಿದೆ ಎಂದರು.

ಮುಖ್ಯವಾಗಿ, ಗರ್ಭಿಣಿಯರು ಹೆರಿಗೆಗೆ ಹಾಗೂ ಹೆರಿಗೆ ನಂತರ ಬೇರೆ ಜಿಲ್ಲೆಗಳಿಗೆ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಬೇರೆ ಬೇರೆ ಜಿಲ್ಲೆಗಳ ಎಎನ್‌ಎಂಗಳು ಇಂತಹ ಮಹಿಳೆಯರ ಆರೋಗ್ಯ, ಅವರಿಗೆ ನೀಡಬೇಕಾದ ಚಿಕಿತ್ಸೆ ಕುರಿತಂತೆ ಸಹ ಯಾವುದೇ ಖರ್ಚು ಇಲ್ಲದೇ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT