ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಪಕ್ಷಗಳಿಗೂ ಬಿಸಿ ತುಪ್ಪವಾಗಿರುವ ನೇತ್ರಾವತಿ

Last Updated 24 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಮಂಗಳೂರು: ಹಿಂದೆಲ್ಲಾ ಬೇಸಿಗೆಯ ದಿನ­ಗಳಲ್ಲಿ ದಕ್ಷಿಣ ಕನ್ನಡದಲ್ಲಿ ಯಾರಾ­ದರೂ ನೇತ್ರಾವತಿಯ ಬಗ್ಗೆ ಮಾತ­ನಾ­ಡುತ್ತಿ­ದ್ದರೆ ಅದಕ್ಕೆ ಎರಡು ಕಾರಣಗಳಿರು­ತ್ತಿ­ದ್ದವು. ಒಂದು ಹರಿವು ಕಡಿಮೆಯಾಗಿ ಮಂಗಳೂರು ನಗರಕ್ಕೆ ನೀರು ಪೂರೈಕೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿ ರೈತರು ನೀರು ಬಳಸದಂತೆ ನಿರ್ಬಂಧ ವಿಧಿಸಿರುವುದು. ಇಲ್ಲವಾದರೆ ನದಿಯ ಪಾತ್ರದಲ್ಲಿ ಮರಳೆತ್ತಿ ಹಾಳು ಮಾಡಲಾಗುತ್ತಿದೆ ಎಂಬ ಅಳಲು. ಆದರೆ, ಈ ಬಾರಿಯ ಬೇಸಿಗೆ ಸಂಪೂರ್ಣ ಭಿನ್ನ. ‘ನೇತ್ರಾವತಿ’ ಎಂದರೆ ಜನರು ರಾಜ­ಕಾರಣಿಗಳ ಮೇಲೆ ಹರಿಹಾಯು­ತ್ತಾರೆ. ರಾಜಕೀಯ ಪಕ್ಷಗಳ ನಾಯಕ­ರೆಲ್ಲರೂ ಉಗುಳಲೂ ಆಗದ ನುಂಗಲೂ ಆಗದ ಏನನ್ನೋ ಬಾಯಲ್ಲಿ ಹಾಕಿ­ಕೊಂಡ­ವರಂತೆ ಮಾತನಾಡುತ್ತಾರೆ.

ಪಶ್ಚಿಮಘಟ್ಟದಲ್ಲಿ ಹುಟ್ಟಿ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಮತ್ತು ಮಂಗಳೂರು ತಾಲ್ಲೂಕುಗಳಲ್ಲಿ ಹರಿದು  ಮಂಗಳೂರು ನಗರದ ಸಮೀಪವೇ ಸಮುದ್ರ ಸೇರುವ ನೇತ್ರಾವತಿ ದಕ್ಷಿಣ ಕನ್ನಡದ ಜನರ ಲೌಕಿಕ ಬದುಕಿನಿಂದ ಆರಂಭಿಸಿ ಆಧ್ಯಾತ್ಮಿಕ ಬದುಕಿನ ತನಕವೂ ಆವರಿಸಿಕೊಂಡಿದೆ. ಕುಡಿಯುವ ನೀರು, ಕೃಷಿ, ಮೀನುಗಾರಿಕೆ, ಕೈಗಾರಿಕೆಗಳೆಲ್ಲವೂ ಈ ನದಿಯನ್ನು ಅವಲಂಬಿಸಿವೆ. ಇದು ಹರಿಯುವ ದಾರಿಯಲ್ಲಿ ಸಿಗುವ ಎಲ್ಲಾ ಪಟ್ಟಣ ಪ್ರದೇಶಗಳಿಗೂ ಇದೇ ಕುಡಿ­ಯುವ ನೀರಿನ ಮೂಲ. ನಡುವಣ ಹಳ್ಳಿ­ಗಳಲ್ಲಿ ಕೃಷಿಗೆ ನೇತ್ರಾವತಿ ನೀರು ಹರಿಯು­ತ್ತದೆ.

ಮಾರ್ಚ್ 3ರಂದು ಮುಖ್ಯ­ಮಂತ್ರಿ­ಗ­ಳಿಂದ ಚಿಕ್ಕಬಳ್ಳಾಪುರದಲ್ಲಿ ನಡೆದ ಎತ್ತಿನ­ಹೊಳೆ ಯೋಜನೆಗೆ ಶಂಕುಸ್ಥಾಪನೆ ನಡೆ­ದಾಗ ಕರಾವಳಿ ಮೂಲದ ವೀರಪ್ಪ ಮೊಯಿಲಿ ‘ಪ್ರಾಣ ಕೊಟ್ಟಾದರೂ ಎತ್ತಿನ­ಹೊಳೆಯ ನೀರನ್ನು ಹರಿಸುತ್ತೇನೆ’ ಎನ್ನುತ್ತಿ­ದ್ದಾಗಲೇ ದಕ್ಷಿಣ ಕನ್ನಡ ಯಾರ ಒತ್ತಾಯವೂ ಇಲ್ಲದೆ ಸಂಪೂರ್ಣವಾಗಿ ಬಂದ್ ಆಗಿತ್ತು. ಬಂದ್ ಮಾಡಿಸು­ವವರಿಲ್ಲದೆಯೇ ದಕ್ಷಿಣ ಕನ್ನಡ ಬಂದ್ ಆದದ್ದು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇದೇ ಮೊದಲ ಬಾರಿ ಎಂಬುದು ಜನರ ಅಭಿಮತ.

ಬೋಳಾರದ ನಾರಾಯಣ ಸಾಲಿಯಾನ್ ರಾಜಕಾರಣದಲ್ಲಿ ಆಸಕ್ತಿ ಇರುವವರೇನೂ ಅಲ್ಲ. ಮೀನು­ಗಾರಿಕೆ­ಯನ್ನು ವೃತ್ತಿಯಾಗಿಸಿಕೊಂಡಿರುವ ಇವರು ಈ ಬಾರಿ ಅವರು ‘ನೋಟಾ’ ಬಳಸುತ್ತೇನೆ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ ಪ್ರಮುಖ ಸ್ಪರ್ಧಾಳುಗಳೆಲ್ಲರ ಪಕ್ಷವೂ ನೇತ್ರಾವತಿಯನ್ನು ತಿರುಗಿಸುವು­ದಕ್ಕೆ ಕಾರಣವಾಗಿರುವುದು. ಮೀನು, ಮೊಟ್ಟೆ ಇರುವುದು ಅಳಿವೆಯಲ್ಲಿ (ನದಿ ಸಮುದ್ರ ಸೇರುವ ಸ್ಥಳ). ನದಿಯೇ ಇಲ್ಲವಾದರೆ ಮೀನೆಲ್ಲಿಂದ ಬರಬೇಕು ಎಂಬುದು ಅವರ ಪ್ರಶ್ನೆ. ‘ನಮ್ಮೂರಿನ­ಇಬ್ಬರು ಮುಖ್ಯಮಂತ್ರಿ­ಯಾಗಿ­ದ್ದಾರೆಂದು ಹೇಳಿಕೊಳ್ಳಲು ಸಂತೋಷವಾಗುತ್ತಿತ್ತು. ಇವರಿಗೇ ನಮ್ಮ ಕಷ್ಟ ಅರ್ಥವಾಗಿಲ್ಲ ಎಂದಾದರೆ ಅವರ ಪಕ್ಷಗಳಿಗೆ ಹೇಗೆ ಅರ್ಥವಾಗುತ್ತದೆ. ಇವರೆಲ್ಲಾ ಕೊಡಲಿ ಕಾವಿನಂತಾಗಿಬಿಟ್ಟರಲ್ಲ..’ ಎಂದು ನಾರಾ­ಯಣ ಸಾಲಿಯಾನ್ ಆಕ್ರೋಶ ವ್ಯಕ್ತ­ಪಡಿಸು­ತ್ತಾರೆ. ದಕ್ಷಿಣ ಕನ್ನಡದ ಯಾವ ಊರಿನಲ್ಲಿ ಯಾರಲ್ಲಿ ಮಾತ­ನಾಡಿ­ದರೂ ಇಂಥ ಉತ್ತರಗಳಿಗೆ ಕೊರತೆಯಿಲ್ಲ.

ನೇತ್ರಾವತಿ ಬತ್ತುವ  ಆತಂಕ ದಕ್ಷಿಣ ಕನ್ನಡದ ಜನರಲ್ಲಿ ಮೂಡುವುದಕ್ಕೆ ಕಾರಣರಾದದ್ದೂ ಇಬ್ಬರು ದಕ್ಷಿಣ ಕನ್ನಡದ ರಾಜಕಾರಣಿಗಳು. ಬಿಜೆಪಿಯ ಸದಾನಂದಗೌಡರು ನೇತ್ರಾವತಿಯ ಪಾತ್ರದ ಜನರನ್ನು ಲೋಕಸಭೆಯಲ್ಲಿ, ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ಅಷ್ಟೇಕೆ ಮುಖ್ಯಮಂತ್ರಿಯಾಗಿಯೂ ಕಾರ್ಯರ್ನಿವಹಿದವರು. ಕಾಂಗ್ರೆಸ್‌ನ ಮೊಯಿಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಕ್ಷೇತ್ರವನ್ನು ಹಲವು ಅವಧಿಗೆ ಪ್ರತಿನಿಧಿಸಿ ಮುಖ್ಯಮಂತ್ರಿ­ಯಾಗಿ­ದ್ದವರು. ನಂತರ ಚಿಕ್ಕಬಳ್ಳಾಪುರದಿಂದ ಲೋಕಸಭೆಗೆ ಆಯ್ಕೆಯಾಗಿ ಕೇಂದ್ರ ಮಂತ್ರಿಯಾದವರು.

ಡಾ.ಜಿ.ಎಸ್. ಪರಮಶಿವಯ್ಯ ಅವರು ಪಶ್ಚಿಮಾಭಿಮುಖವಾಗಿ ಹರಿದು ಸಮುದ್ರ ಸೇರುವ ನೀರನ್ನು ಬಯಲು­ಸೀಮೆಯ ಕಡೆಗೆ ಹರಿಸುವ ಯೋಜನೆ­ಯನ್ನು ರೂಪಿಸಿ ಸರ್ಕಾರಕ್ಕೆ ಕೊಟ್ಟದ್ದು 2001ರಲ್ಲಿ. ಈ ಪ್ರಸ್ತಾಪವನ್ನು ದಕ್ಷಿಣ ಕನ್ನಡದ ರಾಜಕಾರಣಿಗಳೆಲ್ಲರೂ ವಿರೋಧಿಸು­ತ್ತಲೇ ಬಂದಿದ್ದರು. 2009ರ ಚುನಾವಣೆಯಲ್ಲಿ ವೀರಪ್ಪ ಮೊಯಿಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಗೆದ್ದಮೇಲೆ ಈ ಯೋಜನೆಗೆ ಮತ್ತೆ ಜೀವಬಂತು. ಆದರೆ ಅದು ಹೊಸರೂಪ ಪಡೆದಿತ್ತು. ಪರಮಶಿವಯ್ಯ ವರದಿಯ ಅಂತ್ಯದಲ್ಲಿ ಪ್ರಸ್ತಾಪವಾಗಿದ್ದ ಎತ್ತಿನಹೊಳೆಯ ನೀರನ್ನು ತರಬಹುದಾದ ಸಾಧ್ಯತೆ ಮೊಯಿಲಿ ಅವರ ಒತ್ತಾಸೆಯಿಂದ ಜೀವ ಪಡೆದುಕೊಂಡಿತು. ಇದರ ವಿಸ್ತೃತ ಯೋಜನಾ ವರದಿ ತಯಾರಿಸುವ ಕೆಲಸ ನಡೆದದ್ದು ಬಿಜೆಪಿ ಸರ್ಕಾರದ ಅವಧಿ­ಯಲ್ಲಿ. ಆಗ ದಕ್ಷಿಣ ಕನ್ನಡ ಮೂಲದ ಡಿ.ವಿ.ಸದಾನಂದಗೌಡ ಕರ್ನಾಟಕದ ಮುಖ್ಯಮಂತ್ರಿ­ಯಾಗಿದ್ದರು.

ಈ ಬಾರಿಯ ಲೋಕಸಭಾ ಚುನಾ­ವಣೆಯಲ್ಲಿ ಸ್ಪರ್ಧಾಕಣ­ದಲ್ಲಿರುವ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ­ಗ­ಳಿಬ್ಬರಿಗೂ ನೇತ್ರಾವತಿ ಒಂದು ನುಂಗ--­ಲಾರದ ತುತ್ತಾಗುವಂತೆ ಮಾಡಿರುವುದು ಅವರದೇ ಪಕ್ಷದ ಇಬ್ಬರು ಪ್ರಮುಖ ರಾಜಕಾರಣಿಗಳು. ಈ ಕ್ಷೇತ್ರದಿಂದ ಸಿಪಿಎಂನಿಂದ ಸ್ಪರ್ಧೆಗೆ ಇಳಿದಿರುವ ಯಾದವ ಶೆಟ್ಟಿ ಅವರಿಗೂ ನೇತ್ರಾವತಿಯ ವಿಚಾರ ಬಹಳ ಸೂಕ್ಷ್ಮ. ಏಕೆಂದರೆ ಅವರ ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಅವರು ಪರಮ­ಶಿವಯ್ಯ ವರದಿಯ ಪ್ರಮುಖ ಪ್ರತಿ­ಪಾದಕ­ರಲ್ಲಿ ಒಬ್ಬರು. ಸಿಪಿಐ–ಎಂ ತನ್ನ ಸಹೋದರ ಸಂಘಟನೆಗಳೊಂದಿಗೆ ಸೇರಿ ಮಧ್ಯ ಕರ್ನಾಟಕದಲ್ಲಿ ಇದಕ್ಕೆ ಸಂಬಂಧಿ­ಸಿದ ಆಂದೋಲನವೊಂದನ್ನು ರೂಪಿಸು­ತ್ತಿದೆ. ಚಿಕ್ಕಬಳ್ಳಾಪುರದಿಂದ ಸ್ಪರ್ಧೆಗೆ ಇಳಿಯುತ್ತಿರುವ ಶ್ರೀರಾಮರೆಡ್ಡಿಯವರ ಮಟ್ಟಿಗೆ ಇದೊಂದು ಚುನಾವಣಾ ವಿಷಯವೂ ಹೌದು.

ಇಷ್ಟೆಲ್ಲಾ ಆಗಿಯೂ ಅಧಿಕೃತವಾಗಿ ಎಲ್ಲಾ ರಾಜಕೀಯ ಪಕ್ಷಗಳವರು ‘ಎತ್ತಿನ ಹೊಳೆ’ ಯೋಜನೆಯನ್ನು ವಿರೋಧಿಸು­ತ್ತಾರೆ. ಕಾಂಗ್ರೆಸ್‌ ಪಕ್ಷದ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಯೋಜನೆ­ಯನ್ನು ವಿರೋಧಿಸುವ ಸಂಘಟನೆಯ ಪ್ರಮುಖ ನಾಯಕರಲ್ಲಿ ಒಬ್ಬರು. ‘ಮೊಯಿಲಿಯವರು ಇಲ್ಲಿನ ಪರಿಸ್ಥಿತಿ­ಯನ್ನು ಅರ್ಥ ಮಾಡಿಕೊಂಡು ಮಾತ­ನಾಡ­ಬೇಕಾಗಿತ್ತು. ಸದಾನಂದಗೌಡರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗ ಪರ್ಯಾಯ­ಗಳ ಬಗ್ಗೆ ಯೋಚಿಸ­ಬಹುದಿತ್ತು. ಹೇಗಾದರೂ ಮಾಡಿ ಈ ಯೋಜನೆಯನ್ನು ಜಾರಿಗೆ ತರಬೇಕೆಂದು ಇದಕ್ಕೆ ಕುಡಿಯುವ ನೀರಿನ ಯೋಜನೆಯ ರೂಪಕೊಟ್ಟು ಜಿಲ್ಲೆಯ ಜನತೆಯನ್ನು ವಂಚಿಸಿದರು’ ಎನ್ನುತ್ತಾರೆ.

ಕಾಂಗ್ರೆಸ್‌ನ ಜನಾರ್ದನ ಪೂಜಾರಿ ಕಳೆದ ಐದು ವರ್ಷಗಳಿಂದ ಚುನಾವಣೆಗೆ ಸಿದ್ಧರಾಗುತ್ತಿದ್ದರು. ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ಜಿಲ್ಲೆ ಬಿಟ್ಟು ಎಲ್ಲಿಯೂ ಹೋಗದೆ ಪಕ್ಷಕ್ಕೆ ಅತಿ ಹೆಚ್ಚು ಸ್ಥಾನ ಗಳಿಸುವುದನ್ನು ಖಾತರಿ ಪಡಿಸಿಕೊಂಡಿದ್ದರು. ಲೋಕಸಭಾ ಚುನಾ­ವಣೆಯಲ್ಲಿ ತಮಗೆ ಟಿಕೆಟ್ ತಪ್ಪಿಸುವ ಆಂತರಿಕ ಪ್ರಯತ್ನಗಳನ್ನು ನಿವಾರಿಸಿ­ಕೊಂಡಿದ್ದರು. ಆದರೆ ಮೊಯಿಲಿಯವರ ‘ಎತ್ತಿನಹೊಳೆ ಬಾಣ’ ಅವರನ್ನು ಕಾಡು­ತ್ತಿದೆ. ಆದ್ದರಿಂದ ಅವರು ನೇತ್ರಾವತಿಯ ವಿಚಾರ ಬಂದಾಕ್ಷಣ ‘ಈ ಯೋಜನೆ­ಯನ್ನು ನಾನು ಮೊದಲೂ ವಿರೋಧಿಸಿ­ದ್ದೇನೆ. ಈಗಲೂ ವಿರೋಧಿಸುತ್ತಿದ್ದೇನೆ. ಯಾವಾಗಲೂ ವಿರೋಧಿಸುತ್ತೇನೆ. ಇದನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡುವುದಿಲ್ಲ’ ಎಂದು ಖಡಾಖಂಡಿತವಾಗಿ ಹೇಳುತ್ತಾರೆ.

ನಿಮ್ಮ ಪಕ್ಷದ ಸರ್ಕಾರವೇ ರಾಜ್ಯ­ದಲ್ಲಿದೆ. ನಿಮ್ಮದೇ ಪಕ್ಷದ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿರುವವರೇ ಇದನ್ನು ಪ್ರಬಲವಾಗಿ ಪ್ರತಿಪಾದಿಸುತ­ದ್ದಾರೆ ಎಂಬ ಪ್ರಶ್ನೆ ಎತ್ತಿದರೆ ‘ನಮ್ಮ ಪಕ್ಷದವರ ಬಗ್ಗೆ ನಾನು ಮಾಧ್ಯಮಗಳ ಜೊತೆ ಮಾತನಾಡುವುದಿಲ್ಲ. ಸದಾನಂದ­ಗೌಡರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಯ ಅನುಷ್ಠಾನಕ್ಕೆ ಬೇಕಾದ ಕೆಲಸ ಆರಂಭವಾಯಿತು. ಇಲ್ಲಿನವರೇ ಆದ ಅವರಿಗೆ ಇಲ್ಲಿನ ಸಮಸ್ಯೆಗಳು ಗೊತ್ತಿರ­ಲಿಲ್ಲವೇ? ರಾಜ್ಯದಲ್ಲಿರುವ ನಮ್ಮ ಪಕ್ಷದ ಸರ್ಕಾರಕ್ಕೆ ಇಲ್ಲಿನ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟು ಯೋಜನೆ­ ತಡೆಯಲು ಎಲ್ಲಾ ವ್ಯವಸ್ಥೆ ಮಾಡುವ ಭರವಸೆ ನನಗಿದೆ’ ಎನ್ನುತ್ತಾರೆ.

ಬಿಜೆಪಿಯ ನಳಿನ್ ಕುಮಾರ್ ಕಟೀಲು ಅವರ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ವಿಧಾನಸಭಾ ಚುನಾವಣೆಗಳ ಸೋಲು ಬಿಜೆಪಿಯನ್ನು ಎಚ್ಚರಿಸಿತ್ತು. ಆದ್ದರಿಂದಲೇ ಹಿಂದೂ ಸಮಾಜೋತ್ಸವ­ಗಳ ಮೂಲಕ ಬಹುಸಂಖ್ಯಾತರ ವೋಟುಗಳ ಕ್ರೋಡೀ­ಕರಣ ಪ್ರಯತ್ನ ಬಹಳ ಹಿಂದೆಯೇ ಆರಂಭವಾಗಿತ್ತು. ಸಣ್ಣಪುಟ್ಟ ಗಲಭೆಗಳ ಲಾಭವನ್ನು ಪಡೆಯುವುದಕ್ಕೆ ಆರ್‌ಎಸ್ಎಸ್ ಮುಖಂಡರು ಸಾಕಷ್ಟು ಪ್ರಚೋದನಾತ್ಮಕ ಭಾಷಣಗಳನ್ನೂ ಮಾಡಿದ್ದರು. ಜೊತೆಗೆ ಮೋದಿ ಅಲೆಯೂ ಇಲ್ಲಿತ್ತು. ಆದರೆ ‘ಎತ್ತಿನ­ಹೊಳೆ ಯೋಜನೆ’ ಇವೆಲ್ಲಾ ಪ್ರಯತ್ನ­ಗಳನ್ನೂ ತಿರುಗು ಮುರುಗಾಗಿಸುವ ಸಾಧ್ಯತೆಯಿದೆಯೆಂಬ ಅವ್ಯಕ್ತ ಭಯ ಇವರಲ್ಲೂ ಇದೆ. ಇದನ್ನು ಮುಚ್ಚಿಟ್ಟು­ಕೊಂಡೇ ಪ್ರತಿಕ್ರಿಯಿಸುವ ಅವರು ‘ನಮ್ಮ ಪ್ರದೇಶದ ಜನತೆಗೆ ತೊಂದರೆಯಾಗುವ ಯೋಜನೆಗೆ ನಮ್ಮ ವಿರೋಧವಿದೆ. ಇದನ್ನು ಎಲ್ಲಾ ವೇದಿಕೆಗಳಲ್ಲಿಯೂ ನಾನು ಸ್ಪಷ್ಟಪಡಿಸಿದ್ದೇನೆ’ ಎನ್ನುತ್ತಾರೆ.

ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನದಿ ಜೋಡಣೆಯನ್ನು ಪ್ರತಿಪಾದಿಸುತ್ತಿರುವುದನ್ನು ನೆನಪಿಸಿದರೆ ‘ಅದು ನದಿ ಜೋಡಣೆಯೇ ಹೊರತು ನದಿ ತಿರುವಲ್ಲ. ಇದು ನದಿ ತಿರುಗಿಸುವ ಯೋಜನೆ ಇದಕ್ಕೆ ನಮ್ಮ ವಿರೋಧವಿದೆ.’ ಎಂದು ತಾಂತ್ರಿಕತೆಗಳಲ್ಲಿ ತಮ್ಮ ಗೊಂದಲಕ್ಕೆ ಪರಿಹಾರ ಕಾಣುತ್ತಾರೆ.
ಇಷ್ಟೆಲ್ಲಾ ಆಗಿಯೂ ದಕ್ಷಿಣ ಕನ್ನಡ­ದಲ್ಲಿ ‘ಎತ್ತಿನಹೊಳೆ’ ಒಂದು ಚುನಾವಣಾ ವಿಷಯವೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲು ಹೊರಟರೆ ನಿರಾಶೆಯಾಗುತ್ತದೆ.

ಜನಸಾಮಾನ್ಯರ ಮಟ್ಟದಲ್ಲಿ ಭಾರೀ ಪ್ರಮಾಣದಲ್ಲಿಯೇ ಇರುವ ವಿರೋಧವನ್ನು ಕ್ರೋಡೀಕರಿಸಿ ಪರ್ಯಾಯ ರಾಜಕಾರಣವೊಂದನ್ನು ಕಟ್ಟುವ ಪ್ರಯತ್ನ ಇಲ್ಲಿಲ್ಲ. ಕೊನೆಗೂ ದಕ್ಷಿಣ ಕನ್ನಡ ‘ಎತ್ತಿನಹೊಳೆ ಯೋಜನೆ’­ಯನ್ನು ಬೆಂಬಲಿಸುವ ಮೂರು ರಾಷ್ಟ್ರೀಯ ಪಕ್ಷಗಳಲ್ಲಿ ಕಡಿಮೆ ಅಪಾಯ­ಕಾರಿ­ಯಾದ ಒಂದನ್ನು ಆರಿಸಬೇಕು. ಇಲ್ಲವಾದರೆ ‘ನೋಟಾ’ದ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಬೇಕು. ಅರ್ಥಾತ್ ಕಳ್ಳನ ಕೈಗೆ ಕೀಲಿ ಕೈಕೊಟ್ಟು ಅದೃಷ್ಟ ಪರೀಕ್ಷಿಸಿಕೊಳ್ಳುವಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನೇತ್ರಾವತಿ­ಯನ್ನು ಬತ್ತಿಸುವ ಯೋಜನೆ ರೂಪಿಸಿದ ಪಕ್ಷಗಳ ಕೈಗೆ ಅದರ ರಕ್ಷಣೆಯ ಹೊಣೆಯನ್ನು ನೀಡಬೇಕು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT